ಇಂಗ್ಲಿಷ್ ಅನುವಾದದ ಮೂಲಕ ಅಂತಾರಾಷ್ಟ್ರೀಯ ಆಗಸಕ್ಕೆ ಜೈನ ಮಹಾಪುರಾಣ
‘ಎಂಟನೇ ಶತಮಾನದಲ್ಲಿ ರಾಜ್ಯವಾಳಿದ್ದ ರಾಷ್ಟ್ರಕೂಟರ ದೊರೆ ಕೃಷ್ಣ ನಿರ್ಮಿಸಿದ ಎಲ್ಲೋರಾದ ಕೈಲಾಸನಾಥ ದೇವಸ್ಥಾನ ಬೆಳಕಿಗೆ ಬಾರದಿರುತ್ತಿದ್ದರೆ ಮತ್ತು ಕನ್ನಡ ಲಿಪಿಯ ಮೂಲಕ ಸಂಸ್ಕತ ಭಾಷೆಯಲ್ಲಿ ಜಿನಸೇನಾಚಾರ್ಯರು ಮತ್ತು ಅವರ ಶಿಷ್ಯ ಗುಣಭದ್ರಾಚಾರ್ಯರು ರಚಿಸಿದ ಮಹಾಪುರಾಣ ಮತ್ತು ಕನ್ನಡದಲ್ಲಿ ಶ್ರೀವಿಜಯ ರಚಿಸಿದ ಕಾವ್ಯಗಳು ಪ್ರಕಾಶಮಾನಕ್ಕೆ ಬಾರದಿರುತ್ತಿದ್ದರೆ, ಭಾರತದ ಸಾಂಸ್ಕತಿಕ ಮತ್ತು ಸಾಹಿತ್ಯ ಚರಿತ್ರೆಯಲ್ಲಿ ರಾಷ್ಟ್ರಕೂಟರ ಆಳ್ವಿಕೆ ಮಹತ್ವ ಪಡೆಯುತ್ತಿರಲಿಲ್ಲ’’ ಎಂದು ಘನ ವಿದ್ವಾಂಸ ಪೊ›.ಷ, ಷೆಟ್ಟರ್ ಹೇಳುವುದು ‘ಜೈನ ಮಹಾಪುರಾಣ’ ಭಾರತದ, ವಿಶೇಷವಾಗಿ ಕರ್ನಾಟಕದ ಇತಿಹಾಸದಲ್ಲಿ ವಹಿಸಿದ ಪಾತ್ರಕ್ಕೆ ಒಂದು ಮುನ್ನುಡಿ.
ಪ್ರೋ ಕೆ.ಈ. ರಾಧಾಕೃಷ್ಣ
ಕವಿ ವೀರಸೇನರ ಶಿಷ್ಯರಾದ, ಕುಂದ ಕುಂದಾಚಾರ್ಯರ ಸಾಲಿನಲ್ಲಿ ಬಂದ ದಿಗಂಬರ ಜೈನ ಪಂಥಾನುಯಾಯಿ ಜಿನಸೇನಾಚಾರ್ಯರು 12,000 ಶ್ಲೋಕಗಳುಳ್ಳ 47 ಪರ್ವಗಳಲ್ಲಿ ಅಡಕವಾದ ‘ಪೂರ್ವಪುರಾಣ’ ವನ್ನು ರಚಿಸಿದರು. ರಿಶಭನಾಥ - ಆದಿತೀರ್ಥಂಕರ ಮತ್ತು ಅವರ ಮಕ್ಕಳಾದ ಭರತ ಚಕ್ರವರ್ತಿ ಮತ್ತು ಬಾಹುಬಲಿಗಳ ಮತ್ತು ಭರತನ ಸೇನಾಧಿಪತಿ ಜಯಕುಮಾರನ ಕಥೆಗಳು ಪೂರ್ವಪುರಾಣದ ಕಥಾದ್ರವ್ಯವಾದರೂ, ಜೈನ ಜೀವನ ಧರ್ಮ ಸಂಹಿತೆ, ಜೈನಧರ್ಮ ಕಾರ್ಯಾಚರಣೆಯ ಕ್ರಮಗಳು, ಜೈನ ಸಿದ್ಧಾಂತದ ಸ್ವರೂಪಗಳನ್ನು ಪೂರ್ವ ಪುರಾಣ ಚಿತ್ರಿಸುತ್ತದೆ.
ಜಿನಸೇನಾಚಾರ್ಯರು ವಿಧಿವಶರಾದ ಕಾರಣ, ಅವರ ಶಿಷ್ಯ ಗುಣಭದ್ರಾಚಾರ್ಯರು 37 ಪರ್ವಗಳುಳ್ಳ 8,000 ಶ್ಲೋಕಗಳಲ್ಲಿ ಮಹಾವೀರಸ್ವಾಮಿಯವರೆಗಿನ ಉಳಿದ 23 ತೀರ್ಥಂಕರರ ಕಥಾನಕವನ್ನು ಚಿತ್ರಿಸಿದರು.
ಜಿನಸೇನಾಚಾರ್ಯರ ಈ ಕೃತಿ ಹತ್ತರಿಂದ ಹನ್ನೆರಡನೇ ಶತಮಾನದವರೆಗೆ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕವಿಗಳೆಲ್ಲರಿಗೆ, ಅಂದರೆ ಪಂಪನಿಂದ ಹಿಡಿದು, ಹಸ್ತಿಮಲ್ಲ, ಪೊನ್ನ, ರನ್ನ, ನಾಗಚಂದ್ರ, ಇಮ್ಮಡಿ ನಾಗವರ್ಮ, ಅಗ್ಗಳ, ಜನ್ನ, ಇಮ್ಮಡಿ ಗುಣವರ್ಮ, ಮುಮ್ಮಡಿ ಮಂಗರಸ ಇವರೆಲ್ಲರ ಮೇಲೆ ಅಲ್ಲದೆ ವಚನಕಾರರು ಮತ್ತು ಕುಮಾರವ್ಯಾಸನ ಕಾಲದವರೆಗಿನ ಕವಿಗಳವರೆಗೂ ಪ್ರಭಾವ ಬೀರಿತು.
ಜೈನ ಮಹಾಪುರಾಣ ಬರೇ 24 ತೀರ್ಥಂಕರರ ಮತ್ತು 64 ಶಲಾಕಾಪುರಷರ ಕಥೆಗಳಲ್ಲ. ಅದೊಂದು ಬೃಹತ್ ವಿಶ್ವಕೋಶ. ಸ್ವರ್ಗ-ನರಕ, ಮಂತ್ರ-ತಂತ್ರ, ಪೂಜೆ, ಸಂಪ್ರದಾಯ, ವ್ಯಾಕರಣ, ಛಂದಸ್ಸು, ತಪಸ್ಸು, ಧ್ಯಾನ, ಯೋಗ, ಕರ್ಮ ಸಿದ್ಧಾಂತ, ಪುನರ್ಜನ್ಮ, ಮೋಕ್ಷ ಹಿಂಸೆ-ಅಹಿಂಸೆ, ಕಾವ್ಯಲಕ್ಷಣ, ತರ್ಕ, ನ್ಯಾಯ, ನೀತಿ, ಜ್ಞಾನ ಮೀಮಾಂಸೆ, ರಾಜನೀತಿ, ಯುದ್ಧನೀತಿ, ಸಮತಾವಾದ, ವಿದೇಶನೀತಿ, ಆಯುರ್ವೇದ, ಕಲೆ, ಸಂಗೀತ, ನೃತ್ಯ, ಕೇಶ ವಿನ್ಯಾಸ, ಸ್ತ್ರೀವಸ್ತ್ರ ವಿನ್ಯಾಸ, ಶರೀರ ಲಕ್ಷಣ, ಕುಟುಂಬನೀತಿ, ಪರ್ಯಾವರಣ, ಸಮಾಜನೀತಿ, ಹೀಗೆ ಎಲ್ಲವೂ ಅಡಕವಾದ ಜೀವನಧರ್ಮಭಂಡಾರ.
ಇಂತಹ ಮಹತ್ವ ಕೃತಿಯನ್ನು 1925 ರಲ್ಲಿ 42 ಪರ್ವಗಳನ್ನು, 1933 ರಲ್ಲಿ 5 ಪರ್ವಗಳನ್ನು, 1940 ರಲ್ಲಿ 30 ಪರ್ವಗಳನ್ನು ಪಂಡಿತರತ್ನ ಎರ್ಸೂರು ಶಾಂತಿರಾಜ ಶಾಸ್ತ್ರಿಗಳು ಕನ್ನಡಕ್ಕೆ ವಾಕ್ಯಾರ್ಥಗಳೊಂದಿಗೆ ಅನುವಾದಿಸಿದರು. ತಾವೇ ಸ್ವತಃ ಮೊಳೆ ಜೋಡಿಸಿ ಪ್ರಕಟಣೆ ಮಾಡಿದರು. ಬಹುಭಾಷಾ ವಿದ್ವಾಂಸ, ಮೈಸೂರು ಆಸ್ಥಾನದಿಂದ ‘ಪಂಡಿತರತ್ನ’ ಬಿರುದು ಪಡೆದ ಎರ್ತೂರು ಶಾಂತಿರಾಜ ಶಾಸ್ತ್ರಿಯವರ ‘ಜೈನ ಕನ್ನಡ ಮಹಾಪುರಾಣ’ ಅವರು ಕನ್ನಡ ಸಂಸ್ಕತಿಗೆ ನೀಡಿದ ಶಾಶ್ವತ ಕೊಡುಗೆ. ಈ ಮಹಾಗ್ರಂಥ ನಾಲ್ಕು ಕನ್ನಡ ಆವೃತ್ತಿಗಳನ್ನು ಕಂಡಿದೆ.
ದೇಶದಲ್ಲೇ ಪ್ರಥಮ ಬಾರಿಗೆ ಇದರ ಇಂಗ್ಲಿಷ್ ಅವತರಣಿಕೆ ಬಿಡುಗಡೆಗೆ ಸಿದ್ಧವಾಗಿದೆ. 6 ಸಂಪುಟದ ಜತೆಗೆ ಪದ-ಅರ್ಥ-ವ್ಯಾಖ್ಯಾನಗಳುಳ್ಳ 7ನೇ ಸಂಪುಟಗಳು ಒಟ್ಟಿಗೇ ಬಿಡುಗಡೆ ಯಾಗುತ್ತಿದೆ. 20,000 ಸಾವಿರ ಶ್ಲೋಕಗಳುಳ್ಳ ಈ ಅಸಾಮಾನ್ಯ ಗ್ರಂಥವನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದನ್ನು ವಿದ್ವತ್ ಲೋಕಕ್ಕೆ ಪರಿಚಯಿಸುವ ಜವಾಬ್ದಾರಿಯನ್ನು ನನಗೆ ಒಪ್ಪಿಸಿದವರು, ಶಾಂತಿರಾಜ ಶಾಸ್ತ್ರಿ ಟ್ರಸ್ಟಿನ ಅಧ್ಯಕ್ಷರೂ, ಹೆಸರಾಂತ ಭೂವಿಜ್ಞಾನಿಯೂ ಆದ ಶ್ರೀ ಜಿತೇಂದ್ರ ಕುಮಾರ್ ಅವರು. ಅವರಿಗೆ ‘ನಾನು ಈ ಕೆಲಸ ಮಾಡಬಲ್ಲೆ’ ಎಂದು ನನ್ನ ಬಗ್ಗೆ ಪ್ರಮಾಣ ಪತ್ರ ನೀಡಿದವರು, ಗ್ರಂಥಾಲಯ ಇಲಾಖೆಯ ನಿರ್ದೇಶಕರಾಗಿದ್ದ ಗೆಳೆಯ ಶ್ರೀ ರಾಜೇಂದ್ರ ಕುಮಾರ್. ಆದರೆ, ನನ್ನದೂ ಒಂದು ಭಂಡ ಧೈರ್ಯವುಳ್ಳ ಸ್ವಭಾವ.
‘ಮಾಡಲು ಸಾಧ್ಯವಾದೀತೋ’ ಎನ್ನುವ ಮುಂದಾಲೋಚನೆ ಇಲ್ಲದ ಉತ್ಸಾಹ ! ‘ಹದಿನೈದು’ ಜನರುಳ್ಳ ಒಂದು ಸ್ನೇಹಿತರ ತಂಡ ನನ್ನ ಜತೆ ಕೈಜೋಡಿಸಿದರು. ಅನೇಕ ಬಾರಿ ಮಧ್ಯದಲ್ಲೇ ಈ ಕೆಲಸದಿಂದ ಜಾರಿ ಕೊಳ್ಳೋಣ ಎಂದು ನಿರ್ಧರಿಸಿದ್ದುಂಟು. ಆದರೆ, ಹಿಡಿದ ಕೆಲಸ ಮಧ್ಯದಲ್ಲಿ ಬಿಡಬಾರದು ಎನ್ನುವ ಛಲ. ಒಂದು ವರ್ಷಗಳ ಕಾಲ ಸ್ನೇಹಿತರ ತಂಡದ ಜತೆ ಕೆಲಸ. ಎರಡನೆಯ ವರ್ಷ ರಾತ್ರಿ ಸುಮಾರು 8 ರಿಂದ 12 ರವರೆಗೆ, ಬೆಳಗಿನ ಜಾವ 5 ರಿಂದ 8 ರವರೆಗೆ ನನ್ನ ಕೆಲಸ. 20,000 ಶ್ಲೋಕಗಳನ್ನು ಒಂದೇ ಮನೋಧರ್ಮದ ಸೂತ್ರದೊಳಗಡೆ ಪೋಣಿಸುವ ಅನುವಾದದ ಕೈಂಕರ್ಯ. ಮತ್ತೆ ಎರಡು ವರ್ಷಗಳ ಕಾಲ ಕರಡು ತಿದ್ದುವ, ಗ್ಲಾಸರಿಯನ್ನು ತಯಾರಿಸುವ ಕೆಲಸ. ಈ ಕೆಲಸದಲ್ಲಿ ನನ್ನ ಜತೆ ಕೊನೆಯವರೆಗೆ ಇದ್ದವರು ದೂರವಾಣಿ ಕಾರ್ಖಾನೆಯ, ನಿವೃತ್ತ ಹಿರಿಯ ಇಂಜಿನಿಯರ್ ಕೆ.ಆರ್. ಶಾಂತರಾಮ ಮತ್ತು ಗ್ಲಾಸರಿಯನ್ನು ಪೇರಿಸಲು ಸಹಾಯ ಮಾಡಿದವರು ನನ್ನ ಬಾಲ್ಯ ಕಾಲದ ಸ್ನೇಹಿತರಾದ ಪೊ›. ವಿಜಯಲಕ್ಷ್ಮಿಯವರು.
ಭಾರತೀಯ ಭಾಷೆಗಳೆಲ್ಲವೂ ಸಂಸ್ಕತ ಶಬ್ಧ ಶ್ರೀಮಂತವಾದ್ದರಿಂದ, ಸಂಸ್ಕತದಿಂದ ಭಾರತೀಯ ಭಾಷೆಗಳಿಗೆ ಅನುವಾದಿಸುವುದು ಕಬ್ಬಿಣದ ಕಡಲೆಯಲ್ಲ. ಆದರೆ ಬೇರೆಯೇ ಭಾಷಾ ಮನೋಧರ್ಮವುಳ್ಳ ಆಂಗ್ಲೋಸಾಕ್ಸನ್ ಕುಟುಂಬದ ಇಂಗ್ಲಿಷ್‌ಗೆ ಜೈನ ಮಹಾಪುರಾಣವನ್ನು ಸೂಕ್ತವಾಗಿ ಅನುವಾದಿಸುವುದು ಹೇಗೆ ? ಈ ಸಂದರ್ಭದಲ್ಲಿ ನನಗೆ ಮಾರ್ಗದರ್ಶನವಿತ್ತವರು, ಈಗ ತಾನೇ ನಮ್ಮನ್ನು ಅಗಲಿದ ಶ್ರೇಷ್ಠ ವಿದ್ವಾಂಸ ಪೊ›. ಷ. ಷೆಟ್ಟರ್ ಅವರು. ಸಮೀಕರಣ ಮಾಡಲು ಸಾಧ್ಯವಾಗದ ಕೆಲವು ಪದಗಳನ್ನು, ಉದಾಹರಣೆಗೆ, ಕೈವಲ್ಯಜ್ಞಾನ, ಲೇಶ್ಯ ಕಾರ್ಮಣ ಶರೀರ, ಸಮ್ಯಕ್‌ದೃಷ್ಟಿ, ನಿರ್ವಾಣ, ಮುಂತಾದ ಪದಗಳನ್ನು ಸಂಸ್ಕತ ಮೂಲದಲ್ಲೇ ಉಳಿಸಿಕೊಂಡು, ಹೊಸದಾಗಿ ಸೇರಿಸಿದ 7ನೇ ಸಂಪುಟದಲ್ಲಿ ಇಂತಹ ಎಲ್ಲಾ ತಾಂತ್ರಿಕ ಪದಗಳನ್ನು ವ್ಯಾಖ್ಯಾನಿಸಿದ ಗ್ಲಾಸರಿ/ಕೈಪಿಡಿಯನ್ನು ಹೊರತಂದೆವು.
ಅದಲ್ಲದೆ, ಮಹಾಪುರಾಣದಲ್ಲಿ ಬರುವ ಪದನಾಮ, ವಸ್ತುನಾಮ, ಸ್ಥಳನಾಮ, ಪ್ರಾಣಿಪಕ್ಷಿನಾಮ ಸಸ್ಯನಾಮಗಳನ್ನು ಇಂಗ್ಲಿಷ್‌ನಲ್ಲಿ ಪರಿಚಯಿಸಿ, ಅಂತಾರಾಷ್ಟ್ರೀಯ ವಿದ್ವಾಂಸರಿಗೆ ಅನುಕೂಲ ವಾಗುವಂತೆ ಜೈನ ಮಹಾಪುರಾಣಕ್ಕೆ ಪೂರಕವಾದ ಕೈಪಿಡಿ ರಚಿಸಿದ್ದೇನೆ. ಇದಕ್ಕೆ ನನ್ನ ಮೇಲೆ ವಿದ್ವಾಂಸರಾದ ಪೊ›. ಜಯಚಂದ್ರ ಮತ್ತು ಡಾ. ಸರಸ್ವತಿ ವಿಜಯಕುಮಾರ್ ಅವರ ಮತ್ತು ರಾಜಸ್ಥಾನದ ಲಾಡ್ಲು ವಿಶ್ವವಿದ್ಯಾಲಯದ ಗ್ರಂಥ ಋುಣವಿದೆ.
ಈ ಅನುವಾದ ನನಗೆ ಬರೇ ಒಂದು ಭಾಷಾಂತರವಾಗಿ ಉಳಿಯಲಿಲ್ಲ. ಬದಲಿಗೆ ಅದು ಒಂದು ಭಾಷಾಂತರ ನವಸೃಷ್ಟಿಆಯಿತು. ಅಲ್ಲದೆ ಒಂದು ರೀತಿಯಲ್ಲಿ ಇದರ ಜತೆಗೆ ಒಂದು ಸಾಂಸ್ಕತಿಕ, ಸಾಹಿತ್ಯಾತ್ಮಕ, ಐತಿಹಾಸಿಕ ಯಾತ್ರೆಯೂ ಆಯಿತು. ಸಂಸ್ಕತ, ಕನ್ನಡ, ಇಂಗ್ಲಿಷ್ ಲೋಕಗಳಲ್ಲಿ ಹರಿಯುವ ವಿಹಾರವೂ ಆಯಿತು. ಇತ್ತೀಚಿನ ದಿನಗಳಲ್ಲಿ ಇಂತಹ ಬೃಹತ್ ಗ್ರಂಥದ ಸುಮಾರು 5000 ಕ್ಕಿಂತಲೂ ಹೆಚ್ಚು ಪುಟಗಳುಳ್ಳ, 7 ಸಂಪುಟಗಳಲ್ಲಿ ಅಡಕವಾದ ಬೃಹತ್ ಸಾಹಿತ್ಯ ಗ್ರಂಥಸಾಹಸ ನಡೆದಿಲ್ಲ ಎಂದು ನನ್ನ ವಿನಮ್ರ ಅಭಿಪ್ರಾಯ. ಇದನ್ನು ನಾನು ಸಾರ್ಥಕ ಹೆಮ್ಮೆಯಿಂದ ಹೇಳುತ್ತೇನೆಯೇ ವಿನಃ ಗರ್ವದಿಂದಲ್ಲ ! ‘‘ ಒಂದು ವಿಶ್ವವಿದ್ಯಾಲಯ, ಅಥವಾ ಒಂದು ಸಂಸ್ಥಾನ ಮಾಡುವ ಕೆಲಸವನ್ನು ಸಾಧಿಸಿದ್ದೀರಿ’’ ಎಂದು ಪೊ›. ಷ. ಷೆಟ್ಟರ್ ಅಂತಹ ಹಿರಿಯರು ಮೆಚ್ಚಿದಾಗ ನನ್ನ ಯಾತ್ರೆಯ ಗುರಿಯನ್ನು ತಲುಪಿದ್ದೇನೆ ಎನ್ನುವ ಸಮಾಧಾನಕರ ಭಾವ.
ಈ ಮಹಾನ್ ಕೆಲಸಕ್ಕೆ ಕಾರಣರು ಯಾರು ? ನನ್ನ ಜೀವನದ ಪಥದಲ್ಲಿ ಮೂಡಿ ಬಂದ ಅಪರೂಪದ ಸಜ್ಜನ ಶಾಂತಿರಾಜ ಶಾಸ್ತ್ರಿಗಳ ಮಗ ಶ್ರೀ ಜಿತೇಂದ್ರ ಕುಮಾರ್ ಅವರು. ಶರೀರಕ್ಕೆ 80 ರ ಹರಯವಾದರೂ, ನಿರಂತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಶಾಂತಚಿತ್ತದ ಲವಲವಿಕೆಯ ವ್ಯಕ್ತಿ, ಮತ್ತು ‘ಪೊ›. ರಾಧಾಕೃಷ್ಣ ಈ ಸಾಹಿತ್ಯ ಸಾಹಸವನ್ನು ಸಾಧಿಸಿಯಾರು’ ಎಂದು ವಿಶ್ವಾಸ ತುಂಬಿದ ಶ್ರೀ ರಾಜೇಂದ್ರ ಕುಮಾರ್.
ಇನ್ನೊಬ್ಬರು ಅಪರೂಪದವರು. ಎಷ್ಟೇ ಸಲ ತಿದ್ದಿದರೂ, ಬೇಸರಿಸದೆ 25,000 ಹಾಳೆಗಳಷ್ಟುಮುದ್ರಿತ ಪ್ರತಿ ಕೊಟ್ಟಧೃತಿ ಪ್ರಿಂಟರ್ಸ್ನ ಅದಮ್ಯ ಶಕ್ತಿ ನಾಗರಾಜು ಅವರು. ಆಶೀರ್ವದಿಸಿ, ಬೆನ್ನುತಟ್ಟಿದವರು ಶ್ರವಣ ಬೆಳಗೊಳದ ಸಂತಚೇತನ ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳು. 1925 ರಲ್ಲೇ ಇದನ್ನು ಕನ್ನಡಕ್ಕೆ ತಂದ, ಪ್ರಾತಃಸ್ಮರಣೀಯ ದೈವೀ ಪ್ರತಿಭೆಯ ಎರ್ತೂರು ಶಾಂತಿರಾಜ ಶಾಸ್ತ್ರಿಗಳೇ ಮಹಾಪ್ರೇರಣೆ. ಇವರೆಲ್ಲರ ಆಶಯ ಮತ್ತು ಒತ್ತಾಸೆಗಳ ಫಲವೇ 7 ಸಂಪುಟಗಳ 5000 ಕ್ಕಿಂತಲೂ ಹೆಚ್ಚು ಪುಟಗಳುಳ್ಳ, ನನ್ನಿಂದ 80,000 ಹಾಳೆಗಳಷ್ಟುಕೈಯಲ್ಲೇ ಬರೆಯಿಸಿಕೊಂಡ ಜೈನ ಮಹಾಪುರಾಣದ ಇಂಗ್ಲಿಷ್ ಅವತರಣಿಕೆ.
ಇದರ ಲೋಕಾರ್ಪಣೆ, ಮಾಚ್‌ರ್ 6 ರಂದು ಬೆಂಗಳೂರಿನ ಕುವೆಂಪು ಕಲಾಕ್ಷೇತ್ರದಲ್ಲಿ, ಶ್ರೀ. ಶ್ರೀ. ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳ ಸಾನ್ನಿಧ್ಯದಲ್ಲಿ, ಧರ್ಮಸ್ಥಳದ ರಾಜಶ್ರೀ ವೀರೇಂದ್ರ ಹೆಗ್ಗಡೆಯವರ ಸಮ್ಮುಖದಲ್ಲಿ, ಮುಖ್ಯಮಂತ್ರಿಗಳಾದ ಶ್ರೀ. ಬಿ. ಎಸ್. ಯಡಿಯೂರಪ್ಪನವರು, ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕತ ಡಾ. ಚಂದ್ರಶೇಖರ ಕಂಬಾರ ಇವರುಗಳು ಬಿಡುಗಡೆ ಮಾಡುತ್ತಿರುವುದು ನನ್ನ ಸಾಹಿತ್ಯ ಯಾತ್ರೆಯಲ್ಲಿ ಒಂದು ಮಹತ್ತರ ಘಟನೆ.