Asianet Suvarna News Asianet Suvarna News

ಕನ್ನಡ ಮತ್ತು ಪುಸ್ತಕಲೋಕ: ಸವಾಲುಗಳು & ಪರಿಹಾರ

ಕನ್ನಡದಲ್ಲಿ ವರ್ಷಕ್ಕೆ ಸುಮಾರು 7ರಿಂದ 8 ಸಾವಿರ ಪುಸ್ತಕ ಪ್ರಕಟವಾಗುತ್ತವೆ. ಅದರಲ್ಲಿ ಬಹುತೇಕ ಪುಸ್ತಕಗಳು ಗ್ರಂಥಾಲಯ ಇಲಾಖೆ ಖರೀದಿ ಮಾಡುವುದರಿಂದ ಪ್ರಕಟವಾಗುತ್ತವೆ. 2000 ಸಾವಿರದಷ್ಟು ಪುಸ್ತಕಗಳಷ್ಟೇ ಪುಸ್ತಕ ಮಳಿಗೆಗಳಿಗೆ ಬರುತ್ತವೆ.

Karnataka Rajyotsava Kannada and The World of Books At Glance
Author
Bengaluru, First Published Nov 1, 2018, 10:41 AM IST

-ರಾಜೇಶ್ ಶೆಟ್ಟಿ

ಮೂವತ್ತಕ್ಕಿಂತ ಕಡಿಮೆ ವಯಸ್ಸಿನ ತರುಣ, ತರುಣಿಯರು ಕನ್ನಡ ಓದುವುದೇ ಇಲ್ಲ ಅನ್ನುವಂತಾಗಿದೆ. ಪುಸ್ತಕ ಮಳಿಗೆಗಳಿಗೆ ಬರುವುದಿಲ್ಲ. 
 

ಓದುವ ಆಸೆ ಇರುವ ಕೆಲವೇ ಕೆಲವರಿಗೆ ಯಾವ ಪುಸ್ತಕ ಓದಬೇಕು ಅನ್ನುವ ಮಾರ್ಗದರ್ಶನ ಇಲ್ಲ.
 

ಪುಟ್ಟ ಮಕ್ಕಳಿಗೆ ಕನ್ನಡ ಭಾಷೆ ಅಪರಿಚಿತವಾಗುತ್ತಿದೆ. ಮುಂದಿನ ದಿನಗಳಲ್ಲಿ ಕನ್ನಡ ಪುಸ್ತಕಗಳನ್ನು ಓದುವ ಪೀಳಿಗೆ ಇರುತ್ತದೆಯೋ ಅಂತ ಯೋಚಿಸಿದರೆ ಗಾಬರಿಯಾಗುತ್ತದೆ. 

ಕನ್ನಡದ ಯಾವುದೇ ಪುಸ್ತಕ ಪ್ರಕಾಶನ ಸಂಸ್ಥೆಯವರನ್ನು ಕೇಳಿದರೂ ಈ ಮಾತುಗಳು ಬಂದೇ ಬರುತ್ತದೆ. ಅದಕ್ಕೆ ಕಾರಣ ಶಿಕ್ಷಣದಲ್ಲಿ ಕನ್ನಡ ಕಡಿಮೆಯಾಗಿರುವುದು. ಬಹುತೇಕ ಪೋಷಕರು ಇಂಗ್ಲಿಷ್ ಮಾಧ್ಯಮಕ್ಕೆ ಮೊರೆ ಹೋಗಿರುವುದು. ಕನ್ನಡವನ್ನು ಒಂದು ಭಾಷೆಯಾಗಿಯೂ ಕಲಿಸದೇ ಇರುವುದು.

ಈ ಅಂಶಗಳನ್ನು ಹೊರತು ಪಡಿಸಿದರೆ ಕನ್ನಡ ಪುಸ್ತಕ ಪ್ರಕಾಶನ ಮತ್ತು ಮಾರಾಟ ಸದ್ಯದಲ್ಲಿ ಅಂಥಾ ದೊಡ್ಡ ತೊಂದರೆಯನ್ನು ಎದುರಿಸುತ್ತಿಲ್ಲ. ಮೂವತ್ತಕ್ಕಿಂತ ಜಾಸ್ತಿ ವಯಸ್ಸಿನವರು ಕನ್ನಡ ಪುಸ್ತಕಗಳ ಮೇಲಿನ ಪ್ರೀತಿಯನ್ನು ಉಳಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಕನ್ನಡ ಮೇಷ್ಟ್ರುಗಳು ಮಾತ್ರ ಓದುತ್ತಾರೆ ಅನ್ನುವ ಪರಿಸ್ಥಿತಿ ಇತ್ತು. ಆದರೆ ಈಗ ಡಾಕ್ಟ್ರು, ಇಂಜಿನಿಯರು, ಸಾಫ್ಟ್‌ವೇರ್ ಮಂದಿ ಎಲ್ಲರೂ ಪುಸ್ತಕ ಪ್ರಿಯರೇ.

ಪ್ರಕಟವಾಗುವ ಪುಸ್ತಕಗಳ ವಿಷಯಗಳನ್ನು ನೋಡಿದರೂ ಭಾರಿ ವೈವಿಧ್ಯತೆ ಇದೆ. ಅದಕ್ಕೆ ತಕ್ಕಂತೆ ಕತೆ, ಕಾದಂಬರಿಗಳಿಗಿಂತ ಜಾಸ್ತಿಯಾಗಿ ಬೇರೆ ರೀತಿಯ ಸಾಹಿತ್ಯ ಪುಸ್ತಕ ಬರುತ್ತಿವೆ. ಬೇರೆ ಬೇರೆ ಕ್ಷೇತ್ರಗಳ, ಬೇರೆ ಬೇರೆ ವಿಷಯಗಳ ಕೃತಿ ರಚನೆಯಾಗುತ್ತಿದೆ. ಆದರೆ ಕಥೆ ಕಾದಂಬರಿಗಳಿಗೆ ಮೊದಲಿದ್ದ ಮನ್ನಣೆ ಈಗಿಲ್ಲ. ಕ್ಲಾಸಿಕ್ ಓದು ಪ್ರೀತಿ ಕಡಿಮೆಯಾಗಿದೆ ಅನ್ನುತ್ತಾರೆ ಕೆಲವರು. ಫೇಸ್ಬುಕ್ನಲ್ಲಿ ಬರೆ ಯುವ ಮಂದಿಯ ಪುಸ್ತಕ ಬಿಡುಗಡೆಗೆ ಸಿಕ್ಕಾಪಟ್ಟೆ ಜನ ಬರುತ್ತಾರೆ. ಆದರೆ ಚಂದ್ರಶೇಖರ ಕಂಬಾರರಂತಹ ಬರಹಗಾರರ ಪುಸ್ತಕ ಬಿಡುಗಡೆಗಳಿಗೆ ಬೆರಳೆಣಿಕೆ ಜನರಷ್ಟೇ.

ಮಾರಾಟದ ವಿಚಾರ ನೋಡಿದರೆ ತುಂಬಾ ಆತಂಕ ಏನೂ ಇದ್ದಂತಿಲ್ಲ. ಸಪ್ನ ಪುಸ್ತಕ ಮಳಿಗೆಯಲ್ಲೇ ಪುಸ್ತಕ ಕೊಳ್ಳುವ ಕಾರ್ಡ್ ಹೊಂದಿರುವ ಒಂದು ಲಕ್ಷ ಸದಸ್ಯರಿದ್ದಾರೆ. ಅವರು ಮರು ಮುದ್ರಣ ಸೇರಿ 300 ರಿಂದ 400 ಪುಸ್ತಕ ವರ್ಷಕ್ಕೆ ಪ್ರಕಟ ಮಾಡುತ್ತಾರೆ. ನವಕರ್ನಾಟಕದವರು ನೂರು ಹೊಸ ಪುಸ್ತಕ ಪ್ರಕಟಿಸಿದರೆ, ಸುಮಾರು 300 ಪುಸ್ತಕ ಮರುಮುದ್ರಣ ಕಾಣುತ್ತವೆ. ವರ್ಷಕ್ಕೆ ಸುಮಾರು 8ರಿಂದ 10 ಲಕ್ಷ ಕನ್ನಡ ಪುಸ್ತಕ ಮಾರಾಟ ಮಾಡುತ್ತೇವೆ ಎನ್ನುತ್ತಾರವರು.

ಅಭಿನವ ಪ್ರಕಾಶನದವರು ತಮಗೆ ವರ್ಷಕ್ಕೆ 45ರಿಂದ 50 ಲಕ್ಷ ವಹಿವಾಟು ನಡೆಯುತ್ತದೆ ಎನ್ನುತ್ತಾರೆ. ದೇವನೂರು ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ಸುಮಾರು 19000 ಪ್ರತಿಗಳು ಮಾರಾಟವಾಗಿವೆ. ಛಂದ ಪ್ರಕಾಶನದ ಪುಸ್ತಕ ಮಾರಾಟವೂ ಕಡಿಮೆ ಏನಿಲ್ಲ. ವರ್ಷಕ್ಕೆ 12ರಿಂದ 13 ಲಕ್ಷ ವಹಿವಾಟು ನಡೆಸುತ್ತೇನೆ ಎಂದು ಅವರು ಹೇಳುತ್ತಾರೆ. ಸಾವಣ್ಣ ಪ್ರಕಾಶನದವರು ಈ ವಿಚಾರದಲ್ಲಿ ಸಂತೋಷವಾಗಿದ್ದಾರೆ.

ಕನ್ನಡದಲ್ಲಿ ವರ್ಷಕ್ಕೆ ಸುಮಾರು 7ರಿಂದ 8 ಸಾವಿರ ಪುಸ್ತಕ ಪ್ರಕಟವಾಗುತ್ತವೆ. ಅದರಲ್ಲಿ ಬಹುತೇಕ ಪುಸ್ತಕಗಳು ಗ್ರಂಥಾಲಯ ಇಲಾಖೆ ಖರೀದಿ ಮಾಡುವುದರಿಂದ ಪ್ರಕಟವಾಗುತ್ತವೆ. 2000 ಸಾವಿರದಷ್ಟು ಪುಸ್ತಕಗಳಷ್ಟೇ ಪುಸ್ತಕ ಮಳಿಗೆಗಳಿಗೆ ಬರುತ್ತವೆ. ಪುಸ್ತಕ ಪ್ರಕಾಶನ- ಮಾರಾಟದ ಸದ್ಯ ಸ್ಥಿತಿಯಲ್ಲಿ ನಾವು ತೆಲುಗು, ಮರಾಠಿಗರಿಗಿಂತ ಸ್ವಲ್ಪ ಮುಂದೆಯೇ ಇದ್ದೇವೆ ಅನ್ನುತ್ತದೆ ಒಂದು ಸರ್ವೇ. ಆದರೆ ಮಲಯಾಳಂನವರಿಗಿಂತ ಹಿಂದೆಯೇ ಇದ್ದೇವೆ. 

ಪುಸ್ತಕ ಪ್ರೀತಿ ಉಳಿಯಲು ಸರ್ಕಾರ ಮಾಡಬೇಕಾದ್ದು:
1. ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಡ್ಡಾಯವಾಗಿ ಕಲಿಸಬೇಕು.
2 .ಗ್ರಂಥಾಲಯಗಳಿಗೆ ಒಳ್ಳೆಯ ಪುಸ್ತಕ ತಲುಪಿಸುವಂತೆ ಮಾಡಬೇಕು. ಪುಸ್ತಕಗಳ ಆಯ್ಕೆಗೆ ಆಯ್ಕೆ ಸಮಿತಿ ರಚಿಸಬೇಕು.
3. ಪ್ರತೀ ವರ್ಷ ಪ್ರಕಟವಾಗುವ ಪುಸ್ತಕಗಳ ಮಾಹಿತಿ ಪುಸ್ತಕ ಪ್ರಾಧಿಕಾರದ ಬಳಿ ಇರಬೇಕು.

 

ಹಾಗಂತ ಭವಿಷ್ಯದಲ್ಲಿ ಇದೇ ಪರಿಸ್ಥಿತಿ ಉಳಿಯಲಿದೆ ಅಂತ ಹೇಳುವುದಕ್ಕಾಗುವುದಿಲ್ಲ. ಒಮ್ಮೆ ಬೆಂಗಳೂರಿನ ಪರಿಸ್ಥಿತಿಯೇ ನೋಡಿದರೆ ಭಾರಿ ಹಳೆಯ ಪುಸ್ತಕದಂಗಡಿ ಗೀತಾ ಏಜೆನ್ಸೀಸ್ ಮುಚ್ಚಿದೆ. ನುಡಿ ಪುಸ್ತಕವೂ ಮುಚ್ಚಲಾಯಿತು. ಗಾಂಧಿ ಬಜಾರಿನಲ್ಲಿದ್ದ ಬಿಬಿಸಿ ಮುಚ್ಚಿದೆ. ಗಾಂಧಿನಗರದಲ್ಲಿದ್ದ ನವಕರ್ನಾಟಕ ಕೂಡ ತಾಂತ್ರಿಕ ಕಾರಣಕ್ಕೆ ಮುಚ್ಚಿದೆ. ಇನ್ನು ರಾಜ್ಯದ ಬಹುತೇಕ ಭಾಗಗಳಲ್ಲಿ ಪುಸ್ತಕದ ಅಂಗಡಿಗಳೇ ಇಲ್ಲ.

ಈ ಪರಿಸ್ಥಿತಿ ಸರಿಹೋಗಬೇಕಾದರೆ ಮಕ್ಕಳಲ್ಲಿ ಪುಸ್ತಕ ಪ್ರೀತಿ ಬೆಳೆಸಬೇಕು. ಪುಸ್ತಕ ಮೇಳಗಳಿಗೆ ಪುಟಾಣಿಗಳನ್ನು ಕರೆದುತರಬೇಕು. ಅವರು ಪುಸ್ತಕ ನೋಡಿ ಖುಷಿ ಪಡಬೇಕು. ಪುಸ್ತಕ ಓದುವ ಮತ್ತು ಮಕ್ಕಳಿಗೆ ಪುಸ್ತಕ ಓದಿಸುವ ಶಿಕ್ಷಕರ ಸಂಖ್ಯೆ ಜಾಸ್ತಿಯಾಗಬೇಕು. ತರುಣ, ತರುಣಿಯರಿಗೆ ಯಾವ ಪುಸ್ತಕ ಓದಬೇಕು ಎಂಬ ಮಾರ್ಗದರ್ಶನ ಸಿಗಬೇಕು. ಯುವ ಸಮೂಹಕ್ಕೆ ಪುಸ್ತಕಗಳನ್ನು ತಲುಪಿಸುವ ವ್ಯವಸ್ಥೆಯಾಗಬೇಕು. ಅಂತಿಮವಾಗಿ ಶಿಕ್ಷಣದಲ್ಲಿ ಕನ್ನಡ ಭಾಷೆ ಇರದೇ ಇದ್ದರೆ ಎಲ್ಲವೂ ವ್ಯರ್ಥ. ಸರ್ಕಾರ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಬೇಕು.

(ಮಾಹಿತಿಗೆ ಧನ್ಯವಾದ: ನವಕರ್ನಾಟಕದ ಎಆರ್ ಉಡುಪ, ಸಪ್ನ ಪುಸ್ತಕ ಮಳಿಗೆಯ ದೊಡ್ಡೇಗೌಡ, ಅಂಕಿತ ಪುಸ್ತಕದ ಪ್ರಕಾಶ್ ಕಂಭತ್ತಳ್ಳಿ, ಛಂದ ವಸುಧೇಂದ್ರ, ಸಾವಣ್ಣ ಜಮೀಲ್, ಅಭಿನವ ರವಿಕುಮಾರ್)

Follow Us:
Download App:
  • android
  • ios