ಕನ್ನಡ ರೂಪ: ರಾಜೇಶ್‌ ಶೆಟ್ಟಿ

ಆ ದಿನವನ್ನು ನಾನು ಯಾವತ್ತೂ ಮರೆಯಲಾರೆ. ಸುದೀರ್ಘ ದಿನವನ್ನು ಮುಗಿಸಿ ಎಂದಿನಂತೆ ತಡರಾತ್ರಿಯ ಊಟಕ್ಕೆ ಕುಳಿತಿದ್ದೆ. ಆ ಹೊತ್ತಿಗೆ ಬಂತು ಎಮರ್ಜೆನ್ಸಿ ಫೋನ್‌ ಕಾಲ್‌. ನನಗೆ ಬರಬಾರದು ಅಂತ ಆಶಿಸುತ್ತಿದ್ದ ಫೋನ್‌ ಕಾಲ್‌.

ಅವತ್ತು ಸಂಜೆ ಹತ್ತನೇ ಕ್ಲಾಸು ಕಲಿಯುತ್ತಿದ್ದ ಡಯಾನ ಎಂಬ ಹುಡುಗಿ(ಹೆಸರು ಬದಲಿಸಲಾಗಿದೆ) ಅವಳ ಮನೆ ತಲುಪಿರಲಿಲ್ಲ. ಅರಣ್ಯ ಪ್ರದೇಶದಲ್ಲಿದ್ದ ಒಂದು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಳು. ಕಾಡುದಾರಿಯಲ್ಲಿ ಸಾಗಿ ಮನೆ ತಲುಪಬೇಕಿತ್ತು. ಸಾಮಾನ್ಯವಾಗಿ 6.30ಕ್ಕೆ ಮನೆಗೆ ಬರುತ್ತಿದ್ದ ಅವತ್ತು ಮಾತ್ರ ಹೋಗಿರಲಿಲ್ಲ. 7.45ಕ್ಕೆ ಅವಳ ಮನೆಯವರು ಪೊಲೀಸಿಗೆ ಮಾಹಿತಿ ನೀಡಿದರು. ಅಲ್ಲಿನ ಪೊಲೀಸ್‌ ಅಧಿಕಾರಿ ನನಗೆ ಕಾಲ್‌ ಮಾಡಿ ಆಕೆಯ ಫ್ರೆಂಡ್ಸ್‌ ಬಳಿ ವಿಚಾರಿಸುತ್ತಿರುವುದಾಗಿಯೂ ಹೆಚ್ಚಿನ ಮಾಹಿತಿ ಸಿಕ್ಕ ತಕ್ಷಣ ನನಗೆ ಹೇಳುವುದಾಗಿಯೂ ತಿಳಿಸಿದರು. ಡಯಾನ ಮನೆಯವರು, ಆ ಹಳ್ಳಿಯ ಮಂದಿ ಎಲ್ಲರೂ ಆಕೆಯನ್ನು ಹುಡುಕುತ್ತಿದ್ದರು.

ಒಂದೊಮ್ಮೆ ಫೋನ್‌ ಬಂತು. ಇನ್‌ಸ್ಪೆಕ್ಟರ್‌ ಆತಂಕಗೊಂಡ ದನಿಯಲ್ಲಿ, ‘ಸರ್‌, ಆ ಹುಡುಗಿಯ ಮೃತದೇಹ ಸಿಕ್ಕಿದೆ’ ಎಂದರು. ನಾನು ಸೋತ ದನಿಯಲ್ಲಿ ಎಲ್ಲಿ ಎಂದು ಕೇಳಿದೆ. ಅವರು, ‘ಶಾಲೆ ಮತ್ತು ಆಕೆಯ ಮನೆ ಮಧ್ಯದಲ್ಲಿ ಇರುವ ಕಾಡಿನಲ್ಲಿ. ಆಮೇಲೆ ಅವಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಅನುಮಾನ ಇದೆ ಸರ್‌’ ಎಂದರು.

ಪಕ್ಷ ಸೇರಿದ ನಾಲ್ಕೇ ದಿನದಲ್ಲಿ ಅಣ್ಣಾಮಲೈಗೆ ಬಿಜೆಪಿಯಿಂದ ಭರ್ಜರಿ ಗಿಫ್ಟ್...! 

ನನ್ನ ರಕ್ತದೊತ್ತಡ ಏರಿತು. ತಕ್ಷಣ ಊಟದ ಟೇಬಲ್ಲಿಂದ ಎದ್ದು ಕೈತೊಳೆಯುತ್ತಲೇ ಅವರಿಗೆ ಕೆಲವು ಸೂಚನೆಗಳನ್ನು ನೀಡಿದೆ. ಹೆಚ್ಚಿನ ಪೊಲೀಸರನ್ನು ಅಲ್ಲಿಗೆ ಕರೆಸುವಂತೆ ಹೇಳಿ ನಾನೂ ಹೊರಟೆ. ವೇಗವಾಗಿ ಸಾಗುತ್ತಿದ್ದ ಕಾರಿನಲ್ಲಿ ಕುಳಿತು ಘಟನೆ ಕುರಿತು ಯೋಚಿಸತೊಡಗಿದೆ.

ಅಲ್ಲಿ ತಲುಪಿದರೂ ತಕ್ಷಣ ಘಟನೆ ನಡೆದ ಸ್ಥಳಕ್ಕೆ ಹೋಗಲಾಗಲಿಲ್ಲ. ಜನ ವ್ಯಗ್ರಗೊಂಡಿದ್ದರು. ಹೇಗೋ ದಾರಿ ಮಾಡಿಕೊಂಡು ಘಟನೆ ನಡೆದ ಸ್ಥಳಕ್ಕೆ ಹೋಗಿ ನಿಂತೆ. ಉಕ್ಕಿ ಬರುತ್ತಿದ್ದ ಭಾವನೆಗಳನ್ನು ನಿಯಂತ್ರಿಸಲು ಯತ್ನಿಸುತ್ತಿದ್ದೆ. ಕೋಪ ಬರುತ್ತಿತ್ತು. ಬೇಜಾರಾಗುತ್ತಿತ್ತು. ಬೇಸರ ಪಟ್ಟುಕೊಳ್ಳುವುದಕ್ಕಿಂತ ಹೆಚ್ಚಾಗಿ ನಾನು ನನ್ನ ಕರ್ತವ್ಯ ನಿಭಾಯಿಸಬೇಕಿತ್ತು. ಜನರನ್ನು ನಿಯಂತ್ರಿಸಿ ದೇಹವನ್ನು ಅಲ್ಲಿಂದ ತೆಗೆದುಕೊಂಡು ಹೋಗಬೇಕಿತ್ತು. ಪರಿಸ್ಥಿತಿ ನಿಭಾಯಿಸಿ ಅಲ್ಲಿಂದ ಹೊರಟೆ.

ಆನಂತರದ ಕೆಲವು ದಿನಗಳು ನಿಜಕ್ಕೂ ನಮಗೆ ಕಠಿಣವಾಗಿದ್ದವು. ಪ್ರತಿಭಟನೆಗಳು ನಡೆದವು. ಜನ ಕೋಪಗೊಂಡಿದ್ದರು. ಆದಷ್ಟುಬೇಗ ತಪ್ಪಿತಸ್ಥರನ್ನು ಹಿಡಿಯಬೇಕಿತ್ತು. ಅನೇಕ ತಂಡಗಳು ಫೀಲ್ಡಿಗಿಳಿದವು. ತನಿಖೆ ವೇಗವಾಗಿ ನಡೆಯಿತು. ತನಿಖಾಧಿಕಾರಿಗಳ ಸಹಕಾರದಿಂದ ಕೊನೆಗೂ ಅಪರಾಧಿಗಳು ಸಿಕ್ಕಿಬಿದ್ದರು. ಆ ಇಬ್ಬರು ಕೂಡ ಬಾಲಾಪರಾಧಿಗಳು. ಅವರಿಬ್ಬರನ್ನು ವಿಚಾರಣೆ ಮಾಡಿದ ನಂತರ ಯೋಚಿಸತೊಡಗಿದೆ. ನಮ್ಮ ಸಮಾಜ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂಬುದರ ಬಗ್ಗೆ ಚಿಂತೆ ಶುರುವಾಯಿತು.

ಅಣ್ಣಾಮಲೈ ಬಿಜೆಪಿಗೆಯೇ ಸೇರಿದ್ಯಾಕೆ? ಅವರ ಬಾಯಿಂದಲೇ ಕೇಳಿ 

ಶೀಘ್ರ ಅಪರಾಧಿಗಳನ್ನು ಹಿಡಿದಿದ್ದಕ್ಕೆ ಜನ ನಮ್ಮನ್ನೇನೋ ಪ್ರಶಂಸಿದರು. ಆದರೆ ಇದರಿಂದ ಉತ್ತಮ ಸಮಾಜ ನಿರ್ಮಿಸಲು, ಮಹಿಳೆಯರಿಗೆ ನಿರ್ಭೀತ ವಾತಾವರಣ ಒದಗಿಸಿಕೊಡಲು ನಮ್ಮಿಂದ ಸಾಧ್ಯವಾಗುತ್ತದೆಯೇ? ಖಂಡಿತಾ ಇಲ್ಲ.

ಮಹಿಳೆಯರು ಮತ್ತು ಪುರುಷರು ಸಮಾನರು ಎಂದು ಶಾಲೆಯಲ್ಲಿ ಬೋಧಿಸಲಾಗುತ್ತದೆ. ಆದರೆ ಅದೇ ಮಗು ಮನೆಗೆ ಬಂದು ನೋಡಿದರೆ ತಂದೆ ತಾಯಿಯ ಬಳಿ ಮನೆ ಕೆಲಸವನ್ನು ಮಾಡಿಸುವುದು ಕಾಣುತ್ತಾರೆ. ಮನೆಯಿಂದಲೇ ಅಸಮಾನತೆ ಕಾಣಿಸುತ್ತದೆ. ಮನೆಯಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆಯಲು ಕಠಿಣವಾದ ಕಾನೂನುಗಳಿಲ್ಲ. ಹಾಗಾಗಿಯೇ ಮಹಿಳೆಯರ ಮೇಲಿನ ದೌರ್ಜನ್ಯ, ಹಿಂಸೆ ಹೆಚ್ಚಾಗುತ್ತಿದೆ. ಕಾನೂನು ಮೂಲಕ ಪ್ರಶ್ನಿಸಿದರೆ ನ್ಯಾಯ ಸಿಗುವುದಕ್ಕೆ ವರ್ಷಗಟ್ಟಲೆ ಬೇಕು. ಅತ್ತ ಪೋಷಕರು ಮನೆಗೆ ಸೇರಿಸಿಕೊಳ್ಳುವುದು ಕಷ್ಟವಿದೆ. ಹೀಗಾಗಿ ಅನೇಕ ಮಹಿಳೆಯರು ಮೌನವಾಗಿ ಎಲ್ಲವನ್ನೂ ಸಹಿಸಿಕೊಂಡಿರುತ್ತಾರೆ.

ಇದಕ್ಕಿಂತ ಭಿನ್ನವಾದ ಉದಾಹರಣೆಗಳೂ ಇವೆ. ಕೆಲವು ಓದಿಕೊಂಡ ಹುಡುಗಿಯರು ಮದುವೆಯಾದ ಒಂದೇ ತಿಂಗಳಿಗೆ ಗಂಡ, ಗಂಡನ ಮನೆಯವರು ಹಿಂಸೆ ಕೊಡುತ್ತಿದ್ದಾರೆ ಅಂತ ಪೊಲೀಸ್‌ ಸ್ಟೇಷನ್ನಿಗೆ ಬಂದು ದೂರು ಕೊಡುತ್ತಾರೆ. ವಿಚಾರಿಸಿ ನೋಡಿದರೆ ಅವರು ಸಂಗಾತಿಯನ್ನು ತಪ್ಪಾಗಿ ಅರ್ಥೈಸಿಕೊಂಡಿರುವುದೋ ಅಥವಾ ಸಂಪ್ರದಾಯ ಬದಲಾವಣೆಯಿಂದ ತೊಂದರೆ ಅನುಭವಿಸುವುದೋ ನಡೆಯುತ್ತಿರುತ್ತದೆ. ಅದಕ್ಕಾಗಿ ದೂರು ದಾಖಲಿಸಿರುತ್ತಾರೆ. ನಮ್ಮ ಕೋರ್ಟುಗಳು ಇಂತಹ ವ್ಯರ್ಥ ಕೇಸುಗಳಿಂದಾಗಿಯೇ ಸಮಯ ಕಳೆದುಕೊಳ್ಳುತ್ತವೆ ಮತ್ತು ನಿಜವಾಗಿ ಗಮನಿಸಬೇಕಾದ ಕೇಸುಗಳು ಗಮನಕ್ಕೆ ಬರದೇ ಹೋಗುತ್ತವೆ.

ಹಾಡಿನ ಮೂಲಕ ಅಣ್ಣಾಮಲೈಗೆ ಬಹುಪರಾಕ್ ಎಂದ ಅಭಿಮಾನಿ 

ಇನ್ನೊಂದು ಬಗೆಯಲ್ಲಿ ಯೋಚಿಸಿದರೆ ಇತ್ತೀಚೆಗೆ ಬಾಲಾಪರಾಧಿಗಳ ಸಂಖ್ಯೆ ಹೆಚ್ಚುತ್ತಲೇ ಇರುವುದು ಗಮನಕ್ಕೆ ಬರುತ್ತದೆ. ದೆಹಲಿಯ ಜ್ಯೋತಿ ಸಿಂಗ್‌ ಕೇಸ್‌, ಹೈದರಾಬಾದ್‌ನ ದಿಶಾ ಕೇಸ್‌ ಎಲ್ಲದರಲ್ಲೂ ಬಾಲಾಪರಾಧಿಗಳೇ ಇದ್ದರು. ನಾನು ನನ್ನ ಸವೀರ್‍ಸ್‌ನಲ್ಲಿ ಅನೇಕ ಬಾಲಾಪರಾಧಿಗಳನ್ನು ನೋಡಿದ್ದೇನೆ. ವಿಚಾರಿಸಿದ್ದೇನೆ. ನಾನು ಕೆಲಸ ಮಾಡುತ್ತಿದ್ದ ಕಡೆ ಒಮ್ಮೆ ಸಹಕಾರಿ ಸಂಘವೊಂದು ದರೋಡೆಯಾಯಿತು. ಆ ಕೇಸು ಬೆನ್ನತ್ತಿದ ಪೊಲೀಸರಿಗೆ ಸಿಕ್ಕಿದ್ದು ಬಾಲಾಪರಾಧಿಗಳೇ. ಅವರು ಮತ್ತೆ ಮತ್ತೆ ತಪ್ಪುಗಳನ್ನು ಮಾಡುತ್ತಲೇ ಇದ್ದಾಗ ನಾನು ಆ ಗ್ಯಾಂಗಿನ ಪ್ರತಿಯೊಬ್ಬರ ಮನೆಗಳಿಗೆ ಹೋದೆ. ಅವರ ಮನೆ ವಾತಾವರಣ, ಅವರಿಗೆ ಪ್ರಭಾವ ಬೀರುವ ಸಂಗತಿಗಳು, ಪೋಷಕರ ಬಗ್ಗೆ ತಿಳಿಯಬೇಕಿತ್ತು. ಆಗ ಗೊತ್ತಾಗಿದ್ದು ಅವರಲ್ಲಿ ಪ್ರತಿಯೊಬ್ಬರು ಅವರಲ್ಲಿ ಬಹುತೇಕರು ಮುರಿದ ಕುಟುಂಬಗಳಿಂದ ಬಂದವರು. ತಂದೆ ಬಿಟ್ಟು ಹೋದವರು ಅಥವಾ ತಾಯಿ ಇಲ್ಲದವರು. ಗುಡಿಸಲಲ್ಲಿ ಬದುಕುತ್ತಿದ್ದವರು. ಯಾರದೇ ಮಾರ್ಗದರ್ಶನವಿಲ್ಲದೆ ಜೀವನ ಸಾಗಿಸುತ್ತಿದ್ದರು. ಹೀಗೆ ಬದುಕುವವರಿಗೆ ತಪ್ಪು, ಸರಿ ಯಾವುದು ಅನ್ನುವುದನ್ನು ನಿರ್ಧರಿಸುವ ಮನಸ್ಥಿತಿ ಸಹಜವಾಗಿರುವವರಿಗೆ ಇರುವವರಿಗಿಂತ ಭಿನ್ನವಾಗಿರುತ್ತದೆ. ಇನ್ನು ಬಾಲಾಪರಾಧಿಗಳ ಜೈಲಿನಲ್ಲಿ ಅವರು ಬದಲಾಗುವುದಕ್ಕಿಂತ ಅವರ ಸಮಾನ ಮನಸ್ಕರನ್ನು ಭೇಟಿ ಮಾಡಿ ಮತ್ತಷ್ಟುಮಾರಕವಾಗುತ್ತಾರೆ. ಸಣ್ಣ ತಪ್ಪಿನಿಂದ ದೊಡ್ಡ ಅಪರಾಧ ಮಾಡುವವರೆಗೆ ಅವರು ಬೆಳೆಯುತ್ತಾರೆ. ನಮ್ಮ ಸಮಾಜ ಹೇಗಿದೆ ಎಂದರೆ ಬಾಲಾಪರಾಧಿಗಳು ಮೊದಲ ಹಂತದಲ್ಲಿಯೇ ತಾವು ಕ್ರಿಮಿನಲ್‌ ಆಗುವುದರಿಂದ ತಪ್ಪಿಸಿಕೊಳ್ಳಲು ಅವಕಾಶವೇ ನೀಡುವುದಿಲ್ಲ.

ಇದರ ಜೊತೆಗೆ ನಮ್ಮ ದೇಶದ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ವಿದ್ಯಾಭ್ಯಾಸವೇ ಸಿಗುವುದಿಲ್ಲ. ಪದವಿ ಪಡೆದು ಆಚೆ ಬರುವ ಅನೇಕರಲ್ಲಿ ಕೌಶಲ್ಯವೇ ಇರುವುದಿಲ್ಲ. ಅವರಿಗೆ ಕೆಲಸ ಕೂಡ ಸಿಗುವುದಿಲ್ಲ. ನಗರದಲ್ಲಿರುವವರಿಗೆ ಸರಿಯಾದ ವಿದ್ಯೆ ಸಿಗದೇ ಇದ್ದಾಗ ಇನ್ನು ಶಾಲೆಯಿಂದ ಸ್ವಲ್ಪ ದೂರವೇ ಇರುವವರಿಗೆ ವಿದ್ಯೆ ಸಿಗುವುದಾದರೂ ಹೇಗೆ. ಅಲ್ಲದೇ ಎಲ್ಲರಿಗೂ ಈಗ ನಗರಗಳು ಬೇಕು. ಮಹಾವಲಸೆ ನಡೆದುಬಿಟ್ಟಿದೆ. ನಗರಗಳು ಜನರಿಂದ ಕಿಕ್ಕಿರಿದಿವೆ. ಸರಗಳ್ಳತನ, ಮೊಬೈಲ್‌ ಕಳ್ಳತನ, 50 ರೂಪಾಯಿಗೆ ಚೂರಿ ಹಾಕುವುದು ಇತ್ಯಾದಿ ಅಪರಾಧಗಳೂ ಜಾಸ್ತಿಯಾಗಿವೆ. ಇವುಗಳಲ್ಲಿ ತೊಡಗಿಸಿಕೊಂಡಿರುವವರರಲ್ಲಿ ಬಹುತೇಕರು ಬಾಲಾಪರಾಧಿಗಳೇ.

ಬಾಲಾಪರಾಧಿಗಳನ್ನು ಸಮಾಜ ಸರಿಯಾಗಿ ಗಮನಿಸುವುದಿಲ್ಲ. ಕಾನೂನುಗಳು ಬಿಗಿಯಾಗಿಲ್ಲ. ಉಳ್ಳವರ ಅನ್ಯಾಯಕ್ಕೆ ಇಲ್ಲದಿರುವವರು ಬಲಿಯಾಗುತ್ತಲೇ ಇದ್ದಾರೆ. ಕೆಲವೊಮ್ಮೆ ಅನ್ಯಾಯ ನಡೆದಾಗ ಅಧಿಕಾರಿಗಳ ವರ್ತನೆ ಕೂಡ ಅಸಹನೀಯವಾಗಿರುತ್ತದೆ. ಇದೆಲ್ಲದರಿಂದಾಗಿ ಅಪರಾಧಗಳು ಮತ್ತೆ ಮತ್ತೆ ಜರುಗುತ್ತಲೇ ಇರುತ್ತವೆ.

ಅವತ್ತು ಡಯಾನ ತಪ್ಪು ಸಮಯದಲ್ಲಿ ತಪ್ಪು ಜಾಗದಲ್ಲಿ ಇದ್ದಳು. ಅವಳ ಸಾವಿಗೆ ಅವತ್ತು ಕಾರಣವಾಗಿದ್ದು ಕೆಲವು ಸಾಮಾಜಿಕ ಮತ್ತು ಆರ್ಥಿಕ ನೀತಿಗಳೇ ಅನ್ನುವುದು ನನಗೆ ಆಮೇಲೆ ತಿಳಿಯಿತು.

ಅಂದು ಡಯಾನ ಜೊತೆ ಯಾವತ್ತೂ ಬರುತ್ತಿದ್ದ ಫ್ರೆಂಡ್ಸು ಬೇಗ ಮನೆಗೆ ಹೋಗಿದ್ದರು. ಅದಕ್ಕೆ ಕಾರಣ ಕಂಪ್ಯೂಟರ್‌ ಕ್ಲಾಸ್‌. ಡಯಾನಗೆ 6 ಗಂಟೆಗೆ ಕಂಪ್ಯೂಟರ್‌ ಕ್ಲಾಸ್‌ ಇತ್ತು. ಆ ಇಡೀ ಶಾಲೆಯಲ್ಲಿ ಇದ್ದಿದ್ದು ಒಂದೇ ಒಂದು ಕಂಪ್ಯೂಟರ್‌. ಹಾಗಾಗಿ ಡಯಾನಗೆ ಕಂಪ್ಯೂಟರ್‌ ಸಿಕ್ಕಾಗ ಗಂಟೆ ಆರಾಗಿತ್ತು. ಅಷ್ಟುಹೊತ್ತಿಗೆ ಅವಳ ಫ್ರೆಂಡ್ಸು ಹೊರಟುಬಿಟ್ಟರು. ಅವಳ ಅಸೈನ್‌ಮೆಂಟ್‌ ಮುಗಿದಾಗ 6.30 ಆಯಿತು. ಅನಂತರ ಅವಳು ಅಲ್ಲಿಂದ 5.3 ಕಿಮೀ ದೂರ ಇದ್ದ ಮನೆಗೆ ನಡೆದುಕೊಂಡು ಹೊರಟಳು. ಅದರಲ್ಲಿ 3 ಕಿಮೀ ಕಾಡು ದಾರಿ. ಆ ದಾರಿಯಲ್ಲಿ ಆ ಇಬ್ಬರು ಅಪರಾಧಿಗಳು ಯಾರಾದರೂ ಹುಡುಗಿ ಬರುತ್ತಾಳಾ ಎಂದು ಕಾದು ಕೂತಿದ್ದರು. ಅವರು ಇಬ್ಬರಿದ್ದರು. ಆ ಜಾಗದಲ್ಲಿ ತಪ್ಪಿಸಿಕೊಳ್ಳುವ ಅವಕಾಶವೇ ಆ ಹುಡುಗಿಗೆ ಸಿಗಲಿಲ್ಲ. ಡಯಾನ ಪ್ರತಿರೋಧ ತೋರುವುದಿಲ್ಲ ಎಂಬು ಭಾವಿಸಿದ್ದರು. ಯಾವಾಗ ಡಯಾನ ಉಗ್ರವಾಗಿ ವಿರೋಧಿಸಿದಳೋ ಅವರು ಅವಳನ್ನು ಸಾಯಿಸಿದರು.

ಅವತ್ತು ಮತ್ತು ಇವತ್ತು ನನಗೆ ಕೆಲವು ಪ್ರಶ್ನೆಗಳು ಕಾಡುತ್ತಲೇ ಇವೆ. ಒಂದು ವೇಳೆ ಸರ್ಕಾರ ಆ ಶಾಲೆಗೆ ಬೇಕಾಗುವಷ್ಟುಕಂಪ್ಯೂಟರ್‌ಗಳನ್ನು ಒದಗಿಸಿದ್ದಿದ್ದರೆ? ಒಂದು ವೇಳೆ ಅವಳ ಮನೆಯ ದಾರಿಗೆ ಲಾಭವಿಲ್ಲದಿದ್ದರೂ ಸರ್ಕಾರ ಬಸ್ಸಿನ ವ್ಯವಸ್ಥೆ ಕಲ್ಪಿಸಿದ್ದಿದ್ದರೆ? ಒಂದು ವೇಳೆ ಆ ಬಾಲಾಪರಾಧಿಗಳ ಚಟುವಟಿಕೆಗಳನ್ನು ಮನೆಯಲ್ಲಿ ಗಮನಿಸಿದ್ದಿದ್ದರೆ?

2015ರ ಜೂನ್‌ರಂದು ತೀರಿಕೊಂಡ ಡಯಾನ ಎನ್ನುವ ಹುಡುಗಿ ಶಾಲೆಯಲ್ಲಿ ಟಾಪರ್‌ ಆಗಿದ್ದಳು. ಡಾಕ್ಟರ್‌ ಆಗುವ ಕನಸು ಕಂಡಿದ್ದಳು. ಅವತ್ತು ಅವಳ ತಪ್ಪಿಲ್ಲದೆಯೇ ಸತ್ತು ಹೋದಳು. ಸಮಾಜ ಅವತ್ತು ಅವಳನ್ನು ಘೋರವಾಗಿ ಸೋಲಿಸಿತ್ತು.

(ಮಾಜಿ ಪೊಲೀಸ್‌ ಅಧಿಕಾರಿ ಕೆ. ಅಣ್ಣಾಮಲೈ ಬರೆದ ಸ್ಟೆಪ್ಪಿಂಗ್‌ ಬಿಯಾಂಡ್‌ ಖಾಕಿ ಎಂಬ ಪುಸ್ತಕದ ಆಯ್ದ ಭಾಗದ ಭಾವಾನುವಾದ)