ಹೊಸ ತಲೆಮಾರಿಗೆ ಸ್ಫೂರ್ತಿಯಾಗಿರುವ ಜೈಪುರ ಲಿಟ್ ಫೆಸ್ಟ್‌ ಪ್ರತಿ ವರ್ಷ ಜನವರಿ ಮೂರನೇ ವಾರ ನಡೆಯುತ್ತದೆ. ಅದರಂತೆ ಈ ವರ್ಷದ ಜೈಪುರ ಲಿಟ್ ಫೆಸ್ಟ್ 13 ನೇ ಆವೃತ್ತಿ ಜನವರಿ 23 ರಿಂದ 27 ರವರೆಗೆ ನಡೆಯಲಿದೆ. ಅಲ್ಲಿನ ಕೆಲವು ಸ್ವಾರಸ್ಯಕರ ಸಂಗತಿಗಳು ಇಲ್ಲಿವೆ ನೋಡಿ.. 

ಶುಭಾ ಮುದ್ಗಲ್‌ ಸಂತೋಷವಾಗಿಲ್ಲ

ಗಾಯಕಿ ಶುಭಾ ಮುದ್ಗಲ್‌ ಸಣ್ಣಕತೆಗಳ ಸಂಕಲನ ಹೊರತಂದಿದ್ದಾರೆ. ಲುಕಿಂಗ್‌ ಫಾರ್‌ ಮಿಸ್‌ ಸರ್ಗಮ್‌- ಹೆಸರಿನ ಕಥಾ ಸಂಕಲನದ ಕುರಿತು ಒಂದಷ್ಟುಚರ್ಚೆ, ಮಾತುಕತೆ, ತಮಾಷೆಗಳೆಲ್ಲ ಮುಗಿದ ನಂತರ ಶುಭಾ ಗಂಭೀರವಾದರು. ಸಂಗೀತದ ಕಡೆಗೆ ಹೊರಳಿದರು. ಒಂದಷ್ಟುಆಲಾಪಗಳ ಮಧುರಾನುಭೂತಿಯನ್ನು ಒದಗಿಸಿದರು. ನಂತರ ಸಣ್ಣ ವಿಷಾದದೊಂದಿಗೆ ಹೇಳಿದರು:

1. ಇವತ್ತು ಸಂಗೀತ ಜಗತ್ತನ್ನು ಆಳುತ್ತಿರುವುದು ಸಂಗೀತಗಾರರಲ್ಲವೇ ಅಲ್ಲ, ಮಾರ್ಕೆಟಿಂಗ್‌ ಮಂದಿ. ಅವರು ಯಾರನ್ನು ಬೇಕಿದ್ದರೂ ಬದಲಾಯಿಸಬಲ್ಲರು. ಇವರಿಗೆ ಬಿಡುವಿಲ್ಲದೇ ಹೋದರೆ ಅವರನ್ನು ಕರೆಯಿರಿ, ಅವರು ಜಾಸ್ತಿ ಸಂಭಾವನೆ ಕೇಳಿದರೆ ಇನ್ನೊಬ್ಬರ ಬಳಿ ಹಾಡಿಸಿ. ಅದನ್ನು ಮಾರಾಟ ಮಾಡುವುದು ನಮಗೆ ಗೊತ್ತಿದೆ ಎಂದೇ ಮಾತಾಡುತ್ತಾರೆ.

2. ಒಂದು ಹಾಡು ಯಾರಿಗಾಗಿಯೂ ಕಾಯುವುದಿಲ್ಲ. ಹಿಂದೆಲ್ಲ ಈ ಹಾಡನ್ನು ಇದೇ ಗಾಯಕ ಹಾಡಬೇಕು ಅಂತ ನಿರ್ಮಾಪಕರೂ ನಿರ್ದೇಶಕರೂ ಸಂಗೀತ ನಿರ್ದೇಶಕರೂ ಬಯಸುತ್ತಿದ್ದರು. ಈಗ ಹಾಗೇನಿಲ್ಲ, ಇವರು ಸಿಗದಿದ್ದರೆ ಅವರು. ಸಮಯಕ್ಕೆ ಸರಿಯಾಗಿ ಕೆಲಸ ಆಗಬೇಕು ಅನ್ನುವ ಮನಸ್ಥಿತಿ ಇದೆ.

ಜೈಪುರ ಲಿಟ್‌ ಫೆಸ್ಟ್‌: ಸ್ವಾರಸ್ಯಕರ ಸಂಗತಿಗಳಿವು..!

3. ಈಗಿನ ಅನೇಕ ಗಾಯಕರಿಗೆ ಎತ್ತರದ ದನಿಯಲ್ಲಿ ಹಾಡುವುದೇ ಗಾಯನ ಅನ್ನುವ ವಿಚಿತ್ರ ನಂಬಿಕೆ ಇದ್ದಂತಿದೆ. ಅದಕ್ಕಾಗಿಯೇ ಅವರು ಸದಾ ಸೌಂಡ್‌ ಸಿಸ್ಟಮ್‌ ಮಂದಿಗೆ ಇನ್ನೂ ಜಾಸ್ತಿ ಮಾಡಿ ಅಂತ ಹೇಳುತ್ತಲೇ ಇರುತ್ತಾರೆ. ದೊಡ್ಡ ದನಿಯೇ ಇಂಪಾದ ದನಿ ಅಂತ ಅವರು ಭಾವಿಸಿರುವಂತಿದೆ. ಅಬ್ಬರವೇ ನಾದ ಎಂಬಂತಾಗಿದೆ. ಸೂಕ್ಷ್ಮತೆ ಮಾಯವಾಗಿದೆ.

4. ವಿದೇಶಕ್ಕೆ ಹೋಗಿ ಹಾಡದೇ ಹೋದರೆ ತಾವು ಗಾಯಕರೇ ಅಲ್ಲ ಅಂತ ಭಾವಿಸುವುದು ತಪ್ಪು. ವಿದೇಶ ಪ್ರಯಾಣದ ವ್ಯಸನದಿಂದ ಯಾವ ಲಾಭವೂ ಇಲ್ಲ. ಅಲ್ಲಿಗೆ ನಮ್ಮನ್ನು ಕರೆಸುವುದು ಒಂದು ಷೋಕಿ ಅಷ್ಟೇ. ಹಾಗೆ ಕರೆಸುವವರು ಸರಿಯಾದ ವ್ಯವಸ್ಥೆ ಕೂಡ ಮಾಡಿರುವುದಿಲ್ಲ. ಎಷ್ಟೋ ಗಾಯಕರು ಅಲ್ಲಿಗೆ ಹೋಗಿದ್ದಾಗ ಕಾಯಿಲೆ ಬಿದ್ದು ಪ್ರಾಣ ಕಳಕೊಂಡದ್ದೂ ಇದೆ. ಅವರಿಗೆ ವಿಮೆ ಕೂಡ ಮಾಡಿಸಿರುವುದಿಲ್ಲ.

5. ರಿಯಾಲಿಟಿ ಷೋಗಳಿಂದ ಹೊಸಬರು ಬರುತ್ತಾರೆ ನಿಜ. ಆದರೆ ಮೂರು ತಿಂಗಳ ನಂತರ ಅವರೆಲ್ಲಿಗೆ ಹೋಗುತ್ತಾರೆ, ಮೂರು ವರ್ಷಗಳ ನಂತರ ಯಾಕೆ ಮಾಯವಾಗುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಮಾರ್ಕೆಟಿಂಗ್‌ ಮಾಡುವವರು ರಿಯಾಲಿಟಿ ಷೋಗಳಿಂದ ಬಂದ ಗಾಯಕರನ್ನು ಎರಡೋ ಮೂರೋ ವರ್ಷ ಕಾಂಟ್ರಾಕ್ಟ್ ಮಾಡಿಕೊಂಡು ಬಳಸಿಕೊಳ್ಳುತ್ತಾರೆ. ನಂತರ ಮೂಲೆಗುಂಪು ಮಾಡುತ್ತಾರೆ. ಅವರಿಗೆ ಹೆಚ್ಚಿನ ಸಂಗೀತಾಭ್ಯಾಸ ಮಾಡುವುದಕ್ಕೂ ಅವಕಾಶ ಕೊಡುವುದಿಲ್ಲ.

6. ಒಬ್ಬ ಹೊಸ ಗಾಯಕ ಹಳೆಯ ಶಾಸ್ತ್ರೀಯ ಶೈಲಿಯ ಹಾಡುಗಳನ್ನು ಹಾಡಲಿಕ್ಕೆ ಈಗ ಅವಕಾಶ ಇಲ್ಲ. ತನ್ನ ತಂದೆಯ ಘರಾನಾ ಮುಂದುವರಿಸುತ್ತೇನೆ ಅಂದರೆ ಸಾಧ್ಯವಿಲ್ಲ. ಸಮಕಾಲೀನ ಸಂಗೀತವನ್ನೇ ಅವನು ಹಾಡಬೇಕು. ಇದರಿಂದಾಗಿ ಸಂಗೀತದಲ್ಲಿ ವೈವಿಧ್ಯವೇ ಇಲ್ಲದಂತಾಗಿದೆ.

ಮತ್ತೆ ಮತ್ತೆ ಎ.ಕೆ. ರಾಮಾನುಜನ್‌

ಶಿಕಾಗೋ ವಿಶ್ವವಿದ್ಯಾಲಯದಲ್ಲಿರುವ ಗಿಲೆರ್ಮೋ ರೋಡ್ರಿಗಸ್‌ ಯಾವುದೋ ಸಂಶೋಧನೆಯಲ್ಲಿ ತೊಡಗಿದ್ದಾಗ ಅವರಿಗೆ ನೂರಾರು ಪುಟಗಳ ನೋಟ್ಸ್‌ ಸಿಗುತ್ತದೆ. ಅದು ಎಕೆ ರಾಮಾನುಜನ್‌ ಅವರದ್ದೆಂದು ಗೊತ್ತಾಗುತ್ತದೆ. ತಕ್ಷಣ ಅವರು ರಾಮಾನುಜನ್‌ ಮಗ ಕೃಷ್ಣ ರಾಮಾನುಜನ್‌ಗೆ ಫೋನ್‌ ಮಾಡುತ್ತಾರೆ.

ಹಾಳೆಗಳಲ್ಲಿ ಗೀಚಿದ, ಎಂದೋ ಬರೆದ, ಸುಮ್ಮನೆ ಟಿಪ್ಪಣಿ ಮಾಡಿಟ್ಟಬರಹಗಳನ್ನೆಲ್ಲ ಕೃಷ್ಣ ರಾಮಾನುಜನ್‌ ಮತ್ತು ಗಿಲೆರ್ಮೋ ರೋಡ್ರಿಗಸ್‌ ಸಂಪಾದಿಸುತ್ತಾರೆ. ಆ ಪುಸ್ತಕದ ಹೆಸರೇ ಜರ್ನೀಸ್‌- ಎ ಪೊಯೆಟ್ಸ್‌ ಡೈರಿ. ಅದಕ್ಕೆ ಗಿರೀಶ್‌ ಕಾರ್ನಾಡ್‌ ಮುನ್ನುಡಿ ಬರೆಯುತ್ತಾರೆ. ಅದನ್ನು ಪೆಂಗ್ವಿನ್‌ ಪ್ರಕಟಿಸುತ್ತದೆ.

ಕನ್ನಡದಲ್ಲೇ ಬರೆದ, ಭಾರತೀಯ ಜನಪದ ಕತೆಗಳನ್ನು ಸಂಗ್ರಹಿಸಿದ ಎಕೆ ರಾಮಾನುಜನ್‌ ಕುರಿತು ಚರ್ಚೆ ನಡೆದಾಗ ನೂರಾರು ಮಂದಿ ರಾಮಾನುಜನ್‌ ಬಗ್ಗೆ ಮಾತಾಡುತ್ತಾರೆ, ಪ್ರಶ್ನೆ ಕೇಳುತ್ತಾರೆ. ಮಿಸ್ಟಿಸಿಸಮ್‌ ಬಗ್ಗೆ ಬರೆದ ರಾಮಾನುಜನ್‌ ವಿಚಾರವಾದಿಗಳೆಂದು ಹೇಗೆ ಹೇಳುತ್ತೀರಿ ಎಂದು ಪ್ರಶ್ನಿಸುತ್ತಾರೆ.

ಜೈಪುರ ಲಿಟರರಿ ಫೆಸ್ಟಿವಲ್‌ನಲ್ಲಿ ರಾಮಾನುಜನ್‌ ಬರೆದ ಆರೇಳು ಪದ್ಯಗಳನ್ನು ಓದಲಾಗುತ್ತದೆ. ಅವು ಕನ್ನಡದಿಂದ ಅನುವಾದಗೊಂಡ ಪದ್ಯಗಳು.

ರಾಮಾನುಜನ್‌ ಅವರದು ವಿಶಿಷ್ಟಮನಸ್ಸು. ಅವರನ್ನು ರೂಪಿಸುವಲ್ಲಿ ಅವರ ತಾಯಿಯ ಪಾತ್ರ ಬಹುದೊಡ್ಡದು. ಅವರು ಕಡಿಮೆ ಮಾತು, ಹೆಚ್ಚು ಕೆಲಸ ಎಂದು ನಂಬಿದ್ದ ಮೌನ ಸಾಧಕ- ಅನ್ನುವುದೆಲ್ಲ ಚರ್ಚೆಯಲ್ಲಿ ಕೇಳಿಬಂದ ಮಾತಿನ ತುಣುಕು.

ಕಳ್ಳ ಬಂದ ಕಳ್ಳ

ಜೈಪುರ ಲಿಟ್‌ ಫೆಸ್ಟಿನ ನಿರ್ದೇಶಕಿ ನಮಿತಾ ಗೋಖಲೆ ಬರೆದ ಜೈಪುರ ಜರ್ನಲ್ಸ್‌ ಕಾದಂಬರಿಯನ್ನು ಶಶಿ ತರೂರ್‌ ಬಿಡುಗಡೆ ಮಾಡಿದರು. ತುಂಟತನ, ತರಲೆ ಮತ್ತು ವಿವಾದಾಸ್ಪದ ಹೇಳಿಕೆಗಳನ್ನು ಕೊಡಲು ತುದಿಗಾಲಲ್ಲಿ ಕಾಯುತ್ತಿರುವ ಶಶಿ ತರೂರ್‌ ಈ ಗೋಷ್ಠಿಯಲ್ಲಿ ಮೂಕ ವಿಸ್ಮಿತರಾಗಷ್ಟೇ ಕೂತಿದ್ದರು.

ನಮಿತಾ ಗೋಖಲೆ ಕತೆಯಲ್ಲಿ ಬೇತಾಬ್‌ ಎಂಬ ಪಾತ್ರವಿದೆ. ಆ ಪಾತ್ರ ಹೇಗೆ ಹುಟ್ಟಿತು ಅನ್ನುವುದನ್ನು ನಮಿತಾ ಹೇಳಿದ್ದು ಹೀಗೆ:

ಒಂದು ದಿನ ನಮ್ಮ ಮನೆಯ ನನ್ನ ಬರೆಯುವ ಕೋಣೆಯಲ್ಲಿ ಏನೋ ಸದ್ದಾಯಿತು. ಹೋಗಿ ನೋಡಿದರೆ ಅಲ್ಲೊಬ್ಬ ಕಳ್ಳ ನನ್ನ ಪುಸ್ತಕಗಳನ್ನು ತಿರುವಿ ಹಾಕುತ್ತಿದ್ದ. ನೀನಿಲ್ಲಿ ಏನು ಮಾಡ್ತಿದ್ದೀಯಾ ಅಂತ ಕೇಳಿದೆ. ಎಂಥಾ ದಡ್ಡ ಪ್ರಶ್ನೆ ಕೇಳ್ತಿದ್ದಾಳೆ ಈಕೆ, ಕಳ್ಳ ಇನ್ನೇನು ತಾನೇ ಮಾಡ್ತಿರ್ತಾನೆ ಅಂತ ಆಶ್ಚರ್ಯ ಪಡುತ್ತಾ ಅವನು ಹಿಂಬಾಗಿನಿಂದ ತೇಲಿಹೋದ. ಅವನು ಹೋದ ರೀತಿ ಒಬ್ಬ ಬ್ಯಾಲೆ ನೃತ್ಯಪಟುವಿನ ಹಾಗಿತ್ತು.

ಅವನನ್ನು ಪೊಲೀಸರು ಹಿಡಿದರು. ಮೀನಾ ಎಂಬ ಪೊಲೀಸ್‌ ಅಧಿಕಾರಿ ಓಡಿ ಹೋಗಿ ಅವನನ್ನು ಹಿಡಿದು ಅವನು ತಪ್ಪಿಸಿಕೊಳ್ಳದಂತೆ ಅವನ ಸೊಂಟದ ಸುತ್ತ ಕೈ ಹಾಕಿ ಹಿಡಿದುಕೊಂಡಿದ್ದರೆ, ಆ ಕಿಲಾಡಿ ಥಟ್ಟನೆ ತನ್ನ ಪ್ಯಾಂಟ್‌ ಬಿಚ್ಚಿಬಿಟ್ಟ. ಪೊಲೀಸ್‌ ತೆಕ್ಕೆಯಲ್ಲಿ ಬೆತ್ತಲೆ ಕಳ್ಳ!

ಅವನ ಮೇಲೆ ನನಗೆ ಆಸಕ್ತಿ ಹುಟ್ಟಿತು. ಪೊಲೀಸ್‌ ಸ್ಟೇಷನ್ನಿಗೆ ದೂರು ಕೊಡಲು ಹೋದಾಗಲೂ ಪಾಪ, ಎಂಥಾ ಒಳ್ಳೆ ಕಳ್ಳ ಅಂತ ಮಾತಾಡುತ್ತಿದ್ದೆ. ಪೊಲೀಸರು ನನ್ನನ್ನು ಗದರಿಸಿ, ಪಾಪ ಅವನಲ್ಲ, ನೀವು, ನೀವೆಲ್ಲ ಕಳ್ಳರಿಗೆ ದಾಕ್ಷಿಣ್ಯ ತೋರುತ್ತೀರಿ, ನಮ್ಮನ್ನು ಹಾಳು ಮಾಡುತ್ತೀರಿ. ಈ ದೇಶ ಹಾಳು ಮಾಡಿದ್ದೇ ನಿಮ್ಮಂಥ ಎನ್‌ಜಿಓಗಳು ಅಂತ ಕಿರುಚಾಡಿದರು.

ಪೊಲೀಸ್‌ ಸ್ಟೇಷನ್ನಿನಿಂದ ತಪ್ಪಿಸಿಕೊಂಡ ಕಳ್ಳ, ನನ್ನ ಕತೆಯೊಳಗೆ ಬಂದ.

ಲಿಸಾ ರೇ ಜೀವನ್ಮರಣದ ಕತೆ

ಕನ್ನಡದ ಪ್ರೇಕ್ಷಕರು ಲಿಸಾ ರೇಯನ್ನು ಮರೆತಿರಬಹುದು. ಗ್ಲಾಡ್‌ ರಾಗ್ಸ್‌ ಮುಖಪುಟದಲ್ಲಿ ಮಿಂಚಿದ, ಬಾಂಬೇ ಡೈಯಿಂಗ್‌ ರೂಪದರ್ಶಿಯಾಗಿದ್ದ ಲಿಸಾ, ಶಿವರಾಜ್‌ ಕುಮಾರ್‌ ಅಭಿನಯದ ಯುವರಾಜ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಒಂದು ಕಾಲದ ಜನಪ್ರಿಯ ಗ್ಲಾಮರ್‌ ಕನ್ನಿಕೆ ಲಿಸಾ ಇದೀಗ ಲೇಖಕಿಯಾಗಿದ್ದಾರೆ. ಕ್ಲೋಸ್‌ ಟು ದಿ ಬೋನ್‌ ಅವರ ನೆನಪುಗಳ ಸಂಗ್ರಹದ ಹೆಸರು.

ನಾನು ಅತ್ಯಂತ ಸುಖಿಯಾಗಿದ್ದೆ. ಎಲ್ಲವನ್ನೂ ನನಗೆ ದೇವರು ಕೊಟ್ಟಿದ್ದರು. ಸೌಂದರ್ಯ, ಶಕ್ತಿ, ಅವಕಾಶ, ಖ್ಯಾತಿ- ಎಲ್ಲವೂ ನನ್ನ ಬಳಿ ಇತ್ತು. ಆದರೂ ನಾನು ಸಂತೋಷವಾಗಿರಲಿಲ್ಲ. ಏಕಾಂಗಿಯಾಗಿದ್ದಾಗ ಆತ್ಮಹತ್ಯೆಯ ಆಲೋಚನೆ ಬರುತ್ತಿತ್ತು. ಇದೆಲ್ಲ ಸಾಕು ಅನ್ನಿಸುತ್ತಿತ್ತು. ಈ ಮಧ್ಯೆ ನನ್ನ ಅಪ್ಪ ಅಪಘಾತದಲ್ಲಿ ಕತ್ತು ಮುರಿದುಕೊಂಡು ಹಾಸಿಗೆ ಹಿಡಿದಳು. ನನಗೆ ಕ್ಯಾನ್ಸರ್‌ ಬಂತು.

ಹೀಗೆ ತನ್ನ ಸಂತೋಷವನ್ನು ಹಾಳು ಮಾಡಿದ ಘಟನೆ ಮತ್ತು ಕಾಯಿಲೆಯನ್ನು ಲಿಸಾ ರೇ ಹೇಗೆ ಮೆಟ್ಟಿನಿಂತರು ಅನ್ನುವ ಕತೆಯನ್ನು ಅವರೇ ಬರೆದಿದ್ದಾರೆ. ಈ ಸಲದ ಜೈಪುರ್‌ ಲಿಟ್‌ ಫೆಸ್ಟಿನಲ್ಲಿ ಕ್ಯಾನ್ಸರ್‌ ಗೆದ್ದು ಬಂದು ಪುಸ್ತಕ ಬರೆದ ಮಹಿಳೆಯರ ಪೈಕಿ ಈಕೆ ಎರಡನೆಯವರು. ಕಳೆದ ವರುಷ ಮೊನಿಷಾ ಕೊಯಿರಾಲಾ ಕ್ಯಾನ್ಸರ್‌ ಗೆದ್ದ ಕತೆ ಹೇಳಿದ್ದರು. ಈ ಸಲ ಸೋನಾಲಿ ಬೇಂದ್ರೆ ಮತ್ತು ಲಿಸಾ ರೇ ತಮ್ಮ ಕತೆ ಮುಂದಿಟ್ಟಿದ್ದಾರೆ. ಅಂದ ಹಾಗೆ ಇವರಿಬ್ಬರೂ ಶಿವರಾಜ್‌ ಕುಮಾರ್‌ ನಾಯಕಿಯರಾಗಿದ್ದರು.

ಬಿಟ್ಸ್‌ ಮತ್ತು ಪಾಯಿಂಟ್ಸ್‌:

ಅಲ್ಲಿ ಇಲ್ಲಿ ಕೇಳಿದ್ದು:

1. ಒಂದು ಪುಸ್ತಕ ನಮ್ಮನ್ನು ತಟ್ಟಿದರೆ ಅದು ಒಳ್ಳೆಯ ಪುಸ್ತಕ ಅನ್ನಬಹುದು. ಈಗ ಒಂದು ಪುಸ್ತಕವನ್ನು ಮುಟ್ಟಿಯೇ ಒಳ್ಳೇ ಪುಸ್ತಕ ಅನ್ನುವ ಜಾಣರು ಇದ್ದಾರೆ.

2. ನೆನಪುಗಳನ್ನು (Memoir ) ಬರೆದರೆ ಅದಕ್ಕೆ ಸಾಕ್ಷಿ ಬೇಕಾಗಿಲ್ಲ. ಆತ್ಮಚರಿತ್ರೆ (autobiography\) ಬರೆಯುವಾಗ ನಿಖರತೆ ಬೇಕಾಗುತ್ತದೆ.

3. ನೆನಪುಗಳನ್ನು ಬರೆಯುವ ಹೊತ್ತಿಗೆ ಇಪ್ಪತ್ತು ವರ್ಷಗಳ ಹಿಂದೆ ಪ್ರಯಾಣಿಸಿದ ಕಾರಿನಲ್ಲಿ ಯಾರಿದ್ದರು ಅನ್ನುವಷ್ಟೇ, ಆ ಕಾರಿನ ಬಣ್ಣ ಏನಾಗಿತ್ತು ಅನ್ನುವುದೂ ಮುಖ್ಯ.

- ಜೋಗಿ