Asianet Suvarna News Asianet Suvarna News

ಪೂರ್ವ-ಪಶ್ಚಿಮಗಳ ಸಂಗಮ ಗೋಕರ್ಣ; ಇಲ್ಲಿನ ಕಡಲ ತೀರದ ನೋಟ ವಿಹಂಗಮ!

ಗೋಕರ್ಣದ ಸಮುದ್ರ ತೀರಗಳಲ್ಲಿ, ಪಕ್ಕದ ಕಾಡುಗಳಲ್ಲಿ ಎರಡು ದಿನ ಬಿಡದೇ ಅಲೆಯಬೇಕು ಅನ್ನುವುದು ನಾವು ಎರಡೂವರೆ ಜನ ( ಒಂದು ಹಾಫ್‌ ಟಿಕೇಟು) ಮಾಡಿಕೊಂಡಿದ್ದ ಟಠಾವು. ಆದರೆ ಗೋಕರ್ಣ ಎಂಬ ಕನಸಿನಲ್ಲಿ ಕಂಡಂಥಾ ಊರು ಈ ಎರಡು ದಿನದಲ್ಲಿ ಅರ್ಧ ದಿನವನ್ನು ಕಸಿದುಕೊಂಡಿತು. ಕಿರಿದಾದ ಬೀದಿಗಳಲ್ಲಿ ರಸ್ತೆಗೆ ಅಂಟಿಕೊಂಡ ಪುರಾತನ ದೊಡ್ಡ ಕಂಬಗಳ ಮನೆಗಳು. ಅಲ್ಲೆಲ್ಲ ಓಡಾಡುವ ಬಣ್ಣದ ಬಣ್ಣದ ದೇಶೀ ವಿದೇಶಿ ಜನ. ಈಸ್ಟ್‌ ವೆಸ್ಟ್‌ಗಳ ಅಪೂರ್ವ ಮುಖಾಮುಖಿ. ಇವರ ಹಿಂದಿನ ಕತೆಗಳನ್ನು ಮನಸ್ಸೊಂದು ಬಗೆಯಲ್ಲಿ ಊಹಿಸುತ್ತಿತ್ತು, ನಿಜ ಬೇರೇನೋ ಇತ್ತು.

Interesting facts to know about gokarna
Author
Bangalore, First Published Feb 2, 2020, 2:21 PM IST

ಪ್ರಿಯಾ ಕೆರ್ವಾಶೆ

ಹಳೇ ಕಾಲದ ಮನೆ ಹಿಂದೆಲ್ಲ ಇಲ್ಲಿ ನಿರಂತರ ಅಪರಕ್ರಿಯೆಗಳು ನಡೆಯುತ್ತಿದ್ದವಂತೆ. ಈಗ ಈ ಮನೆಗಳ ಒಳಗಿನ ಕತ್ತಲೆಯಲ್ಲಿ ಬೆಳ್ಳಗೆ ಟಿವಿಯ ಬೆಳಕು ಮಾತ್ರ ಕಾಣುತ್ತದೆ. ಮುಖ್ಯ ದೇವಸ್ಥಾನದ ಹಿಂದೆ ಗಣಪತಿ ಗುಡಿಯ ಪಕ್ಕ ಚೆಂದದ ಹಸೆಚಿತ್ರವಿದ್ದ ದೊಡ್ಡ ಮನೆಯ ಪಕ್ಕದಲ್ಲಿ ‘ಗೌರೀಶ ಕಾಯ್ಕಿಣಿ’ ಓಣಿ ಎಂಬ ನಾಮಫಲಕವಿತ್ತು. ಕುತೂಹಲದಿಂದ ಆ ಓಣಿಯಲ್ಲಿ ನಡೆದವು. ಆ್ಯಕ್ಟಿವಾ ಓಡಿಸುತ್ತಾ ಬಂದ ಹುಡುಗನೊಬ್ಬನನ್ನು ನಿಲ್ಲಿಸಿ, ಗೌರೀಶ ಕಾಯ್ಕಿಣಿ ಮನೆ ಎಲ್ಲಿ? ಅಂತ ವಿಚಾರಿಸಿದರೆ,‘ಈ ಓಣಿಯಲ್ಲೇ ಹೋಗಿ, ಕೊನೇ ಮನೆ ಅವ್ರದ್ದು’ ಅಂದು ನಕ್ಕ. ಹಳೆ ಹೊಸ ಮನೆಗಳ ಕೊಲಾಜ್‌ನಂಥಾ ಓಣಿಯದು. ಒಂದು ಹಳೆ ಮನೆ ಗೋಡೆಯಲ್ಲಿ ‘.. ಭಟ್ಟ, ಇಲ್ಲಿ ಶ್ರಾದ್ಧ, ಅಪರ ಕ್ರಿಯೆ ಮಾಡಲಾಗುತ್ತದೆ..’ ಎಂಬ ಕೆಂಪಕ್ಷರದ ಕೈ ಬರಹ. ಜೊತೆಗೆ ಆ ಭಟ್ಟರ ಫೋನ್‌ ನಂಬರ್‌. ಮನೆಯ ಬಾಗಿಲು ಮುಚ್ಚಿತ್ತು, ಒಳಗೆ ಶ್ರಾದ್ಧ ನಡೆಯುತ್ತಿರಬಹುದಾ ಅಂತ ಕಿವಿಗೊಟ್ಟೆವು. ನಿಶ್ಶಬ್ದ.. ದೂರದಲ್ಲೆಲ್ಲೋ ಸಮುದ್ರದ ಮೊರೆತ. ಹುಡುಗ ಹೇಳಿದಂತೆ ಓಣಿಯ ಕೊನೆಯಲ್ಲಿ ಗೌರೀಶ ಕಾಯ್ಕಿಣಿ ಎಂಬ ಮರದ ಬೋರ್ಡ್‌ ಇದ್ದ ತಾರಸಿ ಮನೆ ಇತ್ತು. ಮನೆಗೆ ಬೀಗ, ಬಾಗಿಲಿಗೆ ಎಂದೋ ಸಿಕ್ಕಿಸಿಟ್ಟಪತ್ರಿಕೆ. ಹಾಗಿದ್ದರೂ ಮ್ಯಾಜಿಕ್‌ ಎಂಬಂತೆ ತುಳಸಿಕಟ್ಟೆಯಲ್ಲಿ ತುಳಸಿ ಗಿಡ ಚಿಗುರಿತ್ತು, ಮನೆಯ ಸುತ್ತಲ ಗಿಡಗಳು ಬಿಸಿಲಿಗೆ ಒಂಚೂರೂ ಬೇಜಾರು ಪಟ್ಟುಕೊಂಡಂತೆ ಕಾಣಲಿಲ್ಲ. ಜಯಂತ ಕಾಯ್ಕಿಣಿ ಕತೆಗಳಲ್ಲಿ ಬರುವ ಬೇಲೆ ಅರ್ಥಾತ್‌ ಗೋಕರ್ಣ ಕಡಲು ಮನೆಯಿಂದ ಕೆಲವೇ ಮೀಟರ್‌ ದೂರದಲ್ಲಿ ನಿಡುಸುಯ್ಯುತ್ತಿತ್ತು. ಅಲ್ಲಿ ಪಾರದರ್ಶಕ ಕಚ್ಚೆ ಪಂಚೆಯುಟ್ಟಗಂಡಸರು ಪಿಂಡ ಬಿಡುತ್ತಿದ್ದರು. ಭೋರ್ಗರೆಯುತ್ತಾ ಬರುವ ಅಲೆ ಪಿಂಡಗಳಿಗೆ, ಪಿತೃಗಳಿಗೆ ಮುಕ್ತಿ ಕರುಣಿಸುವ ಭರವಸೆ ಕೊಟ್ಟು ಹೊರಳುತ್ತಿತ್ತು, ಮರಳುತ್ತಿತ್ತು.

ಬೆಂಗಳೂರಲ್ಲಿ ಬಜೆಟ್‌ ಫ್ರೆಂಡ್ಲಿ ವೀಕೆಂಡ್‌: ಇಷ್ಟೆಲ್ಲಾ ಮಾಡ್ಬಹುದಾ?

‘ನಮ್ಗೆ ಈಗಿನ ಬೀಚ್‌ ಹೆಸ್ರೆಲ್ಲ ಅರ್ಥ ಆಗೂದಿಲ್ಲ. ನಾವೆಲ್ಲ ಇದ್ಕೆ ಬೇಲೆ ಅಂತಿದ್ವಿ. ಈ ಫಾರಿನರ್ಸ್‌ ಬಂದು ಏನೇನೆಲ್ಲ ಹೆಸರಿಟ್ರಪ್ಪಾ..ಪ್ಯಾರಡೈಸ್‌ ಬೀಚ್‌ ಅಂತೀರಲ್ಲಾ ನಾವು ಕಟ್ಟಬೇಲೆ ಅಂತಿದ್ವಿ, ಗುಡ್ಡೆಗೆ ಮೇಯಲು ಬಿಟ್ಟದನಗಳು ಒಂದೆರಡು ದಿನ ಬರದಿದ್ರೆ ಅಲ್ಲಿಗೆ ಹುಡುಕಿಕೊಂಡು ಹೋಗ್ತಿದ್ವಿ. ಓಂ ಬೀಚ್‌ಗೆ ದೋಣಿ ಬೇಲೆ ದೋಣಿಯ ಶೇಪ್‌ನಲ್ಲಿ ಉಂಟಲ್ಲಾ ಅದಕ್ಕೆ... ಈ ಬಿಸ್ಲಲ್ಲಿ ಎಂತಕೆ ನಡೀತೀರಿ, ಪೊಲೀಸ್‌ ಸ್ಟೇಶನ್‌ ಹತ್ರ ಹೋದ್ರೆ ಅಟೋ ಸಿಗ್ತದೆ..’

ಗೋಕರ್ಣದ ಮುಖ್ಯ ಬೀದಿಯಲ್ಲೇ ಇರುವ ಮನೆಯ ಎದುರಿನ ಕಟ್ಟೆಯಲ್ಲಿ ಜಪಮಣಿ, ರುದ್ರಾಕ್ಷಿ ಇತ್ಯಾದಿ ಮಾರುತ್ತಾ ಕೂತ ಭಟ್ಟರಲ್ಲಿ, ಕುಡ್ಲೆ ಬೀಚ್‌ಗೆ ನಡೆದು ಹೋಗುವ ದಾರಿ ಕೇಳಿದರೆ ಹೀಗೆ ಉತ್ತರ ಬಂತು. ನಾವು ನಡೆದೇ ಹೋಗುವವರು ಅಂದಾಗ, ಗಣಪತಿ ಗುಡಿಯ ಪಕ್ಕದ ಕಾಲುದಾರಿ ತೋರಿಸಿದರು. ಊರ ಬಾಗಿಲಲ್ಲಿ ಎಂಥದ್ದೋ ಅರ್ಥವಾಗದ ಚಿತ್ರವಿತ್ತು. ಈ ಊರಿನ ರೂಪಕದ ಹಾಗೆ..

Interesting facts to know about gokarna

ಕಡಲೂರ ಹಾದಿಯಲಿ

‘ಮಸಾಜ್‌ ಅವೈಲೇಬಲ್‌, ಓನ್ಲೀ ಫಾರ್‌ ಫೀಮೇಲ್ಸ್‌’, ‘ವೆಜ್‌, ನಾನ್‌ ವೆಜ್‌ ಆ್ಯಂಡ್‌ ವೇಗನ್‌ ಫುಡ್‌ ಆ್ಯಂಡ್‌ ರೂಮ್ಸ್‌ ಅವೈಲೇಬಲ್‌’..ಇತ್ಯಾದಿ ಇಂಗ್ಲೀಷ್‌ ಬೋರ್ಡ್‌ಗಳು ಕುಡ್ಲೆ ಬೀಚ್‌ ಹಾದಿಯುದ್ದಕ್ಕೂ ಕಾಣ ಸಿಗುತ್ತವೆ. ಒಂದು ಕಡೆ ಕುರುಚಲು ಗುಡ್ಡ, ಮತ್ತೊಂದು ಕಡೆ ದೊಡ್ಡ ಗುಡ್ಡೆಯನ್ನೇ ಬಯಲು ಮಾಡಿ ಕೆಫೆ, ರೆಸಾರ್ಟ್‌ ಕಟ್ಟಿದ್ದಾರೆ. ಆ ಕೆಫೆಗಳಲ್ಲಿ ಕೂತರೆ ಕರಿಬಂಡೆಗಳ ಗುಡ್ಡೆಗಳಾಚೆ ಫ್ರೇಮು ಹಾಕಿಟ್ಟಚಿತ್ರದ ಹಾಗೆ ಗೋಕರ್ಣ ಸಮುದ್ರ ಕಾಣುತ್ತದೆ.

ಗೋವಾಕ್ಕೆ ಹೋದ್ರೆ ಈ ಜಾಗಗಳನ್ನು ನೋಡೋದು ಮರೀಬೇಡಿ

ಅದಕ್ಕಿಂತ ಇಂಟೆರೆಸ್ಟಿಂಗ್‌ ಆಗಿ ಕಂಡದ್ದು ವಾಕಿಂಗ್‌ ಸ್ಟಿಕ್‌ ಹಿಡಿದು ಪಟ ಪಟ ನಡೆಯುತ್ತಾ ನಮ್ಮನ್ನು ದಾಟಿ ಹೋದ ಆ ಫಾರಿನ್‌ ಲೇಡಿ. ವಯಸ್ಸು ಸುಮಾರು 70 ರ ಆಸುಪಾಸು. ನೆರಿಗೆಗಟ್ಟಿದ ಚರ್ಮ ಜೋತು ಬಿದ್ದರೂ ಆಕೆಯ ಹೆಜ್ಜೆಗಳಲ್ಲಿ ದೃಢತೆ ಇತ್ತು. ಒಂಟಿಯಾಗಿ ಸಲೀಸಾಗಿ ಆ ಗುಡ್ಡವನ್ನು ಹತ್ತಿಳಿಯುತ್ತಾ ಮುಂದುವರಿದಳು. ಬೇಡ ಬೇಡವೆಂದರೂ ಮನಸ್ಸು ಆಕೆಯನ್ನು ನಮ್ಮ ಹಿರಿಯರಿಗೆ ಹೋಲಿಸಿ ವಿನಾಕಾರಣ ಕಸಿವಿಸಿಗೊಳ್ಳುತ್ತಿತ್ತು.

ಯಾವೂರಿಗೆ ಬಂದ್ವಿ ನಾವು?

ಕುಡ್ಲೆ ಎಂಬ ಬೀಚ್‌, ಅಲ್ಲಿನ ವಾತಾವರಣ ಮೊದಲ ನೋಟಕ್ಕೆ ದಕ್ಕುವುದು ಸಣ್ಣ ಚಕಿತತೆಯೊಂದಿಗೆ. ಸ್ವಚ್ಛ ಸಮುದ್ರ, ಕ್ರಿಸ್ಟಲ್‌ ಕ್ಲಿಯರ್‌ ಅಂತೀವಲ್ಲಾ, ಹಾಗೆ. ಬೇರೆ ಸಮುದ್ರಕ್ಕಿಂತ ಹೆಚ್ಚು ವಿಸ್ತಾರ ಮರಳ ಹಾಸು. ಚೆಂದದ ಬಣ್ಣ ಬಣ್ಣದ ಬಂಡೆಗಳು. ಇದು ಪ್ರಾಕೃತಿಕ ವಿಸ್ಮಯ. ಮತ್ತೊಂದು ಅಚ್ಚರಿ, ಮರಳ ದಂಡೆಯಲ್ಲಿ ನಿಸೂರಾಗಿ ಬಿದ್ದ ಬಿಳಿ ಮೈಯ ಜೀವಗಳದು. ಮೊದಲ ಬಾರಿ ಸಾರ್ವಜನಿಕವಾಗಿ ಕಂಡ ಇಂಥಾ ಬೆತ್ತಲನ್ನು ಹೇಗೆ ಸ್ವೀಕರಿಸಬೇಕು ಅಂತ ಗೊತ್ತಾಗದೇ ಮನಸ್ಸು ತಬ್ಬಿಬ್ಬಾಗುತ್ತದೆ. ಓರೆನೋಟಕ್ಕಷ್ಟೇ ಸಿಗುವ ಆ ಮೈಗಳಲ್ಲಿ ಬೊಜ್ಜಿನ ಲವಲೇಶವೂ ಇಲ್ಲ. ಈಗಷ್ಟೇ ಕೆತ್ತಿಟ್ಟು ಪ್ರದರ್ಶನಕ್ಕಿಟ್ಟಐಡಿಯಲ್‌ ಸೈಸ್‌ ಕಲಾಕೃತಿಗಳ ಹಾಗೆ. (ಅವರ ಮುಂದೆ ಸೊಂಟ, ಹೊಟ್ಟೆಯಲ್ಲಿ ಟಯರ್‌ ಹೊತ್ತ ನಮ್ಮ ಮೈ ದಯನೀಯವಾಗಿ ಕಂಡಿದ್ದೂ ಸತ್ಯ) ಹುಲು ಮಿಡ್ಲ್‌ ಕ್ಲಾಸ್‌ ಮಾನವರಾದ ನಮ್ಮನ್ನು ಕಾಡುವ ಕೆಲಸ, ಮನೆ, ಮಕ್ಕಳ ಎಜುಕೇಶನ್‌ನಂಥಾ ಟೆನ್ಶನ್ನುಗಳೆಲ್ಲವನ್ನೂ ಮೀರಿದಂಥಾ ನಿರುಮ್ಮಳತೆ. ಯಾಕೋ ನಮ್ಮ ದೇಹವೂ ಭಾರ, ಮನಸ್ಸೂ ಭಾರ. ಈ ಭಾರ ಹೊತ್ತು ಮುಳುಗಲೂ ಆಗದ ತೇಲಲೂ ಆಗದ ವ್ಯರ್ಥ ಬದುಕು ನಮ್ಮದು ಅಂತನಿಸಿ ಅಂಥಾ ಹೊತ್ತಲ್ಲೂ ಒಂದು ವಿಷಾದ ಹಾದು ಹೋಯಿತು.

ನಮ್ಮೆದುರೇ ಮರಳಿಂದ ಎದ್ದು ಜೋಡಿಯೊಂದು ಸಮುದ್ರದತ್ತ ನಡೆಯಿತು. ಮಧ್ಯ ವಯಸ್ಸಿನ ಕಟ್ಟುಮಸ್ತು ದೇಹದ ಗಂಡಸಿನ ಪಕ್ಕ ಹೂವಿನ ಮೈಯ ಎಳೆಯ ಹುಡುಗಿಯಿದ್ದಳು. ನೀರಿಗಿಳಿಯುವ ಮುನ್ನ ತಬ್ಬಿ ಪರಸ್ಪರ ಚುಂಬಿಸಿಕೊಂಡರು. ಮನೆಯ ಪಕ್ಕದ ಕೊಳಕ್ಕಿಳಿಯುವಷ್ಟೇ ನಿರ್ಭೀತಿಯಿಂದ ಸಮುದ್ರಕ್ಕಿಳಿದರು. ನಾವೆಲ್ಲ ಸೊಂಟಮಟ್ಟನೀರಲ್ಲಿ ಮುಳುಗೇಳುತ್ತಿದ್ದರೆ ಅವರು ಕತ್ತಿನವರೆಗೆ ಬರುತ್ತಿದ್ದ ನೀರಲ್ಲಿ ಮುಳುಗಿ ಈಜುತ್ತಾ ಮುದ್ದಿಸುತ್ತಾ ಇಹದ ಪರಿವೆ ಮರೆತವರ ಹಾಗಿದ್ದರು.

ರೊಮ್ಯಾನ್ಸ್‌ ಮಾಡೋಕೆ ಸ್ವಿಟ್ಜರ್‌ಲ್ಯಾಂಡೇ ಬೇಕಿಲ್ಲ ಭಾರತದ ಈ ಸ್ಥಳಕ್ಕೆ ಹೋದ್ರೂ ಸಾಕು!

ಆ ಸಂಜೆ ..

ದಂಡೆಯಲ್ಲಿ ಕಂಡ ಅವರಾರ‍ಯರ ಹತ್ತಿರವೂ ಮೊಬೈಲ್‌ ಇದ್ದಂತಿರಲಿಲ್ಲ. ಸಂಜೆಗಳಲ್ಲಿ ಗಂಟೆಗಟ್ಟಲೆ ಸಮುದ್ರ ದಂಡೆಯಲ್ಲಿ ಪೆಡಲ್‌ ಬಾಲ್‌ ಆಡುತ್ತಾ ಕಳೆಯುತ್ತಾರೆ ಗಂಡಸರು. ಅತ್ತಿತ್ತ ತಿರುಗಿ ನೀರಲ್ಲಿ ಆಡಿ ಬಂದಾಗಲೂ ಅದೇ ಟಕ್‌ ಟಕ್‌ ಸದ್ದಿನೊಂದಿಗೆ ಆ ಗಂಡಸರು ಮಟ್‌ಕೋಟ್‌ನಲ್ಲಿ ಮುಳುಗಿಹೋಗಿದ್ದರು. ಇನ್ನೊಬ್ಬ ಕಣ್ಮುಚ್ಚಿ ಗಿಟಾರ್‌ ನುಡಿಸುತ್ತಾ ಮೈಮರೆತಿದ್ದರೆ ಭಾರತೀಯನೊಬ್ಬ ಅವನ ಹಿಂಭಾಗದಲ್ಲಿ ನಿಂತು ಅವನ ತನ್ಮಯತೆಯನ್ನು ಸೂರ್ಯ ಮುಳುಗುತ್ತಿರುವ ಕಡಲಿನ ಜೊತೆಗೆ ಕ್ಲಿಕ್ಕಿಸಲು ಹೆಣಗುತ್ತಿದ್ದ. ಎಷ್ಟೋ ಹೊತ್ತಿಂದ ಮೈಮೇಲೆ ಬಟ್ಟೆಯೇ ಇಲ್ಲದೇ ಓಡಾಡುತ್ತಿದ್ದ ಬಿಳಿ ಮೈಯ ಮಗು ಈಗಲೂ ಅದೇ ಸ್ಥಿತಿಯಲ್ಲಿತ್ತು. ಇನ್ನೊಂದು ಹಸುಗೂಸನ್ನು ಹೆಗಲಿಗೇರಿಸಿ, ಆ ಮಗುವಿಗೆ ಚಡ್ಡಿ ತೊಡಿಸಿದ ಅಪ್ಪ. ಆತ ಅತ್ತ ತಿರುಗುವಷ್ಟರಲ್ಲಿ ಚಡ್ಡಿ ಕಿತ್ತೆಸೆದು ಮರಳಾಟ ಆಡುವುದರಲ್ಲಿ ಮಗ್ನವಾಯ್ತು ಮಗು. ಮತ್ತೊಂದು ಕಡೆ ಚೆಂದದ ಹುಡುಗಿಯೊಬ್ಬಳು ಪಟ ಪಟನೆ ಹುಡುಗನ ಜೊತೆಗೆ ಮಾತನಾಡುತ್ತಿದ್ದಳು. ಪದ್ಮಾಸನ ಹಾಕಿ ಕೂತಿದ್ದ ಆತ ಘನ ಗಾಂಭೀರ‍್ಯದ ಪೋಸು ಕೊಡುತ್ತಾ ಅವಳ ಕಣ್ಣುಗಳನ್ನೇ ದಿಟ್ಟಿಸುತ್ತಿದ್ದ. ಬಾಟಲಿಯನ್ನು ಉಜ್ಜಿ ಅದರಿಂದ ವಿಚಿತ್ರ ಸದ್ದು ಮಾಡುತ್ತ ಅದರ ಜೊತೆಗೆ ಗಿಟಾರ್‌ ಮೀಟುತ್ತಾ ಆ ಸಂಜೆಯಲ್ಲೊಂದು ಸಂಗೀತ ಕಚೇರಿ ಶುರುವಾಯ್ತು. ವಿದೇಶಿಯರ ಜೊತೆಗೆ ಭಾರತೀಯರೂ ಸೇರಿಕೊಂಡು ಕಡಲಲ್ಲಿ ಇಳಿಯುತ್ತಿದ್ದ ಸೂರ್ಯನನ್ನು ನೋಡುತ್ತಾ ಬಾಯ್‌ ಮಾಡುತ್ತಿದ್ದರು.

ಈ ಬಿಳಿಯರ ನಡುವೆ ಅಲ್ಲೊಬ್ಬರು ಇಲ್ಲೊಬ್ಬರು ಭಾರತೀಯರು. ಸಮುದ್ರ ದಂಡೆಯಲ್ಲಿ ಆಡುತ್ತ ಕಚ್ಚಾಡುತ್ತ ಇದ್ದ ನಾಯಿಗಳಿಗೆ ಒಬ್ಬ ಯುವಕ ಪಾಠ ಕಲಿಸುವ ವಿಫಲ ಯತ್ನ ಮಾಡುತ್ತಿದ್ದ. ಎಷ್ಟೋ ಹೊತ್ತಿನ ಅವನ ಪ್ರಯತ್ನಕ್ಕೆ ನಾಯಿಗಳು ಸೊಪ್ಪು ಹಾಕದೇ ತಮ್ಮ ಪಾಡಿಗೆ ಆಟದಲ್ಲಿ ಮುಳುಗಿದ್ದವು.

ಲಿಮಿಟೆಡ್ ಬಜೆಟ್‌ನಲ್ಲಿ ವಿಶ್ವ ಪರ್ಯಟನೆ ಮಾಡುವುದು ಹೇಗೆ?

ಬೀಚ್‌ ಟ್ರೆಕ್ಕಿಂಗ್‌

ಗೋಕರ್ಣ ಬೀಚ್‌ನಿಂದ ಬೇಲೆಕಾನು ಬೀಚ್‌ಗೆ, ಅಲ್ಲಿಂದ ನಿರ್ವಾಣ ಸಮುದ್ರ ತೀರದವರೆಗೆ ನಮ್ಮ ಟ್ರೆಕ್ಕಿಂಗ್‌. ಬೀಚ್‌ ಟ್ರೆಕ್‌ ಅಂದ ಕೂಡಲೇ ಸಮುದ್ರ ದಂಡೆಯುದ್ದಕ್ಕೂ ನಡೆದು ಹೋಗೋದು ಅನ್ನೋ ಕಲ್ಪನೆ ಕೆಲವರಿಗಿದೆ. ಆದರೆ ಈ ಹಾದಿ ಹಾಗಿಲ್ಲ. ಗೋಕರ್ಣ ಬೀಚ್‌ನಿಂದ ಮಹಾಬಲೇಶ್ವರ ದೇವಾಲಯ, ಗಣಪತಿ ದೇವಸ್ಥಾನದ ಪಕ್ಕದ ಗಲ್ಲಿಯಾಗಿ ಹೋಗಿ ಗುಡ್ಡ ಏರಿ ಇಳಿದರೆ ಸಿಗೋದು ಕುಡ್ಲೆ ಬೀಚ್‌. 3 ಕಿಮೀ ದೂರದ ದಾರಿ. ಈ ಬೀಚ್‌ ತುದಿಯಲ್ಲಿ ಮತ್ತೊಂದು ಬೆಟ್ಟ. ಗುಡ್ಡೆ ಹತ್ತಿದರೆ ಕರಿ ಪಾದೆಗಳು, ಅವುಗಳ ಮೇಲೆ ಮುಳಿ ಹುಲ್ಲು ಬಿಸಿಲಿಗೆ ಗಾಢ ಕಂದುಬಣ್ಣದಲ್ಲಿ ಮಿರುಗುತ್ತಿರುತ್ತವೆ. ನಡುವೆ ಕಾಲುದಾರಿ. ಇದು ಇಳಿಯೋದು ಓಂ ಬೀಚ್‌ ಕಡೆಗೆ. ಕುಡ್ಲೆ ಬೀಚ್‌ನಿಂದ ಓಂ ಬೀಚ್‌ಗೆ 3 ಕಿಮೀ ದೂರವಿದೆ. ಓಂ ಆಕಾರದಲ್ಲಿರುವ ಕಲ್ಲು ಬಂಡೆಗಳ ಓಂ ಬೀಚ್‌ ಸಿಗುತ್ತದೆ. ಇಲ್ಲಿಂದ ಬೇರೆ ಬೇರೆ ಬೀಚ್‌ಗೆ ಬೋಟ್‌ ಸಿಗುತ್ತೆ. ಆದರೆ ಟ್ರೆಕ್ಕಿಂಗ್‌ ಮಾಡುವವರು ಇಲ್ಲಿಂದಲೂ 3 ಕಿಮೀ ಕ್ರಮಿಸಿ ಹಾಫ್‌ಮೂನ್‌ ಬೀಚ್‌ ಟ್ರೆಕ್‌ ಮಾಡುತ್ತಾರೆ.

Interesting facts to know about gokarna

ಈ ದಾರಿಯಲ್ಲಿ ಕಡಲಿನ ಅದ್ಭುತ ನೋಟಗಳು ಕಾಣಸಿಗುತ್ತವೆ. ಕಡಿದಾದ ಹಾದಿ, ಸ್ವಲ್ಪ ಎಚ್ಚರ ತಪ್ಪಿದರೂ ಸಮುದ್ರಪಾಲಾಗಬಹುದು. ಬಹಳ ಸುಂದರವಾದ ನಮ್ಮ ದೇಶದ ಬೇರೆಲ್ಲೂ ಕಾಣ ಸಿಗದಂಥಾ ವಿನ್ಯಾಸದ ಸಮುದ್ರ ಕಿನಾರೆ ಹಾಫ್‌ ಮೂನ್‌ ಬೀಚ್‌. ಅರ್ಧ ಚಂದ್ರಾಕಾರದ ಈ ಬೀಚ್‌ನಲ್ಲಿ ನೀರು ಪರಿಶುದ್ಧ. ಎಷ್ಟುಹೊತ್ತು ಆಡಿದರೂ ಕೇಳೋರಿಲ್ಲ. ಒಂದಿಷ್ಟುಜನ ವಿದೇಶಿಯರು ಸದ್ದುಗದ್ದಲವಿಲ್ಲದೇ ಓದುತ್ತಾ, ಬಿಸಿಲಿಗೆ ಒಣಗುತ್ತಾ ಇರುತ್ತಾರೆ. ಇಲ್ಲಿಂದ ಒಂದೂವರೆ ಕಿಮೀಗಳಷ್ಟುದೂರದಲ್ಲಿ ಪಾರಡೈಸ್‌ ಬೀಚ್‌ ಇದೆ. ಕಡಿದಾದ ಬಂಡೆಗಳ ಹಾದಿ. ಚಾರಣ ಅಭ್ಯಾಸ ಇಲ್ಲದವರಿಗೆ ಕಷ್ಟ. ಪ್ಯಾರಡೈಸ್‌ ಬೀಚ್‌ನಲ್ಲಿ ಜನ ಜಂಗುಳಿ ಹೆಚ್ಚು. ಈಜಾಟಕ್ಕೆ ಅನುಕೂಲವಿದೆ. ಹೆಚ್ಚಿನವರು ಈ ಬೀಚ್‌ಗೇ ಚಾರಣ ಮುಗಿಸುತ್ತಾರೆ. ಆದರೆ ನಾವು ಸುಸ್ತಾದರೂ ಬಿಡದೇ ಇನ್ನಷ್ಟುಮುಂದುವರಿದು ಬೇಲೆಕಾನು ಬೀಚ್‌ ದಾರಿಯತ್ತ ನಡೆದೆವು. ಇಲ್ಲಿಂದ ಆ ಸಮುದ್ರ ತೀರಕ್ಕೆ ಕೆಲವು ಕಿಲೋ ಮೀಟರ್‌ಗಳ ಅಂತರ. ಹೊತ್ತಿ ಉರಿವ ಬಿಸಿಲು, ಕಾಲು ಸುಡುವ ಮರಳಿಗೆ ಜೀವ ಚೈತನ್ಯ ಕರಗಿ ಹೋಗಿತ್ತು. ಹಸಿವು ಬಾಯಿ ಬಿಡುತ್ತಿತ್ತು. ನಡಿಗೆ ಮುಂದುವರಿದಿತ್ತು. ದಾರಿಯ ಅಂತ್ಯಕ್ಕೆ ಬಂದರೆ ಸಮುದ್ರದ ಮೊರೆತದ ಸದ್ದೇ ಇಲ್ಲ. ಈವರೆಗಿನ ದಾರಿಯಲ್ಲೆಲ್ಲೂ ಕಾರಣ ಹಸಿರು ಗದ್ದೆ ಎದುರಿಗಿತ್ತು ದೂರದಲ್ಲಿ ಹೂಬಿಟ್ಟಂತೆ ನೂರಾರು ಕೊಕ್ಕರೆಗಳು ಕೂತಿದ್ದವು.

ಭಾರತೀಯರ ನೆಚ್ಚಿನ ಪ್ರವಾಸಿ ತಾಣ ಪಟ್ಟಿ: ಮೈಸೂರಿಗೆ 5ನೇ ಸ್ಥಾನ

ಸಣ್ಣ ಹಳ್ಳಿ ಎದುರಿತ್ತು. ಎದುರು ಸಮುದ್ರ. ಅದುವೇ ಬೇಲೆಕಾನು. ಮೂಲೆಯಲ್ಲೇ ಒಂದು ದಾಬಾ. ಆ ಹೊತ್ತಿಗೆ ನಮಗದು ಓಯಸಿಸ್ಸೇ. ಹಸಿದು ಕಂಗಾಲಾದ ಜೀವಗಳಿಗೆ ನಾಲ್ಕು ತುತ್ತು ಊಟ ಸಿಕ್ಕರೆ ಆಗುವ ಖುಷಿಯನ್ನು ಹೇಗಂತ ವಿವರಿಸೋದು..ದೂರದಲ್ಲಿ ನಮ್ಮ ಎಂಡ್‌ ಪಾಯಿಂಟ್‌ ತದಡಿ ಬಂದರು. ಅಲ್ಲಿಗೆ ಇಲ್ಲಿಂದ ಎರಡು ಕಿಮೀ ಹಾದಿ. ಆ ಚಿಕ್ಕ ಬಂದರಿಗೆ ಬಂದರೆ ಮೀನುಗಾರರು ನೆರಳಲ್ಲಿ ತೂಕಡಿಸುತ್ತಾ ಕೂತಿದ್ದರು. ಅಘನಾಶಿನಿ ಎಂಬ ಚೆಂದದ ಊರಿಗೆ ಇಲ್ಲಿಂದ ಫೆರ್ರಿ ಸಿಗುತ್ತೆ. ಮುಕ್ಕಾಲು ಗಂಟೆಗೆ ಕಾಯಿಸಿ ಬಂದ ಫೆರ್ರಿ ಅಘನಾಶಿನಿ ಹಳ್ಳಿಗೆ ನಮ್ಮನ್ನು ಬಿಟ್ಟು ವಾಪಾಸಾಯ್ತು. ಇಲ್ಲಿಂದ ಕುಮಟಾ ಬಸ್‌ ಹಾದಿಯಾಗಿ ಹೋಗಿ ಒಂದು ಪಾಯಿಂಟ್‌ನಲ್ಲಿ ಇಳಿದರೆ ಅಲ್ಲಿಂದ ಕೆಲವು ಕಿಮೀ ದೂರದಲ್ಲಿ ನಿರ್ವಾಣ ಬೀಚ್‌ ಇದೆ. ಜನ ಸಂಚಾರ ಕಡಿಮೆ ಇರುವ ಹೆಚ್ಚಿನ ಕರಾವಳಿ ತೀರದಂಥಾ ಲ್ಯಾಂಡ್‌ ಸ್ಕೇಪ್‌. ಇಲ್ಲಿಗೆ ನಮ್ಮ ಪಯಣ ಮುಕ್ತಾಯ. ಆ ದಿನದ ಒಟ್ಟು ನಡಿಗೆ 13 ಕಿಮೀ ದಾಟಿತ್ತು ಎಂಬಲ್ಲಿಗೆ ಅದ್ಭುತ ಟ್ರೆಕ್ಕಿಂಗ್‌ ಮುಗಿಸಿದ ದಣಿವು, ಖುಷಿ ಎರಡೂ ನಮ್ಮದಾಯಿತು.

‘ವಾಟರ್‌ ಮೆಲನ್‌ ಸೆವೆಂಟೀ ರುಪೀಸ್‌’

ಯಾರು ಅಂತ ಹಿಂದೆ ತಿರುಗಿದರೆ ಹಣ್ಣು ಹಣ್ಣು ಮುದುಕಿ. ಅಷ್ಟಗಲ ಬಾಯಿ ತೆರೆದು ನಗುತ್ತಾ ಹಿಂದೆ ನಿಂತಿತ್ತು. ಕೊರಳ ತುಂಬ ಮಣಿಹಾರ, ತೋಳು ಬಿಟ್ಟು ರವಿಕೆಯಿಲ್ಲದೇ ಸುತ್ತಿದ ಸೀರೆ. ಆಕೆ ಹಾಲಕ್ಕಿ ಅಂತ ಥಟ್ಟನೆ ಗುರುತಿಸುವ ಹಾಗಿತ್ತು.

ನಾವಾಗ ಸುಡು ಬಿಸಿಲಲ್ಲಿ ಆರೇಳು ಕಿಮೀ ನಡೆದು ಹಾಫ್‌ ಮೂನ್‌ ಅನ್ನುವ ಅರ್ಧಚಂದ್ರಾಕೃತಿಯ ಕಡಲ ದಂಡೆಯಲ್ಲಿದ್ದೆವು. ಒಂದಿಬ್ಬರು ಫಾರಿನರ್ಸ್‌ ಮರಳಲ್ಲಿ ಅರೆ ಬೆತ್ತಲಾಗಿ ಬಿದ್ದುಕೊಂಡು ಶೂನ್ಯ ದಿಟ್ಟಿಸುತ್ತಿದ್ದರು. ಬಿಸಿಲಿಗೆ ಬಸವಳಿದು ನೀರಲ್ಲಿ ಮುಳುಗು ಹಾಕುವ ಯೋಚನೆಯಲ್ಲಿದ್ದ ಟೈಮ್‌ಗೆ ಕರೆಕ್ಟಾಗಿ ಈ ಅಜ್ಜಿಯ ಎಂಟ್ರಿ. ಹೆಸರು ಮಾಂಕಾಳಿ. ವಯಸ್ಸು ಅವಳಿಗೇ ನೆಂಪಿಲ್ಲ. ಹಾಫ್‌ಮೂನ್‌ ಬೀಚ್‌ ಹಿಂದಿರುವ ತೆಂಗಿನ ಗರಿ ತಡಿಕೆ ಅವಳದ್ದೇ, ಆಚೆ ಕಾಣುವ ಮನೆ, ಜಾಗ ಎಲ್ಲ ಅವಳದ್ದೇ ಅಂದ್ಲು. ಕನ್ನಡ ಅರೆಬರೆ ಗೊತ್ತು. ಆದರೆ ಇಂಗ್ಲೀಷ್‌ ನಂಬರ್‌, ತರಕಾರಿ ಹಣ್ಣುಗಳ ಹೆಸರು ಗೊತ್ತು. ಅದ್ರಲ್ಲೇನೂ ಅಚ್ಚರಿ ಇಲ್ಲ. ಆ ಜಾಗಕ್ಕೆ ಸ್ಥಳೀಯರಾರ‍ಯರೂ ಬರೋದಿಲ್ಲ. ವಿದೇಶಿಯರೇ ಹೆಚ್ಚು. ಆಕೆ ಕೊಟ್ಟವಾಟರ್‌ ಮೆಲನ್‌ಗೆ ಅಂಥಾ ರುಚಿ ಇರಲಿಲ್ಲ. ಅವಳು ಮಾತ್ರ ಕತ್ತರಿಸುವಾಗ ಸೀಂ ಇದೆ ಅಂತ ಒಂದು ಪೀಸ್‌ ಬಾಯಿಗೆ ಹಾಕ್ಕೊಂಡು ಕಣ್ಣರಳಿಸಿದಳು.

* ಗೋಕರ್ಣ ಬೀಚ್‌ ಟ್ರೆಕ್‌ ಮಾಡುವಾಗ ದಾರಿಯುದ್ದಕ್ಕೂ ಸಿಗೋದು ಫಾರಿನರ್ಸ್‌. ಕೈಯಲ್ಲಿ ಕೋಲು ಹಿಡಿದು ಒಂಟಿಯಾಗಿ ಅಥವಾ ಜಂಟಿಯಾಗಿ ವೇಗವಾಗಿ ನಡೆಯುತ್ತಾ ನಮ್ಮನ್ನು ಹಿಂದೆ ಹಾಕುತ್ತಾರೆ. ಅವರ ಮನೆಯ ದಾರಿಯಲ್ಲಿ ನಡೆಯುತ್ತಿದ್ದಾರೇನೋ ಅನ್ನುವಷ್ಟುಸರಾಗ ನಡಿಗೆ. ಎದುರಾದಾಗ ‘ಹೆಲೋ’ ಅಂತ ಸ್ಮೈಲು. ಒಂದೂವರೆ ದಿನಗಳ ಟ್ರೆಕ್ಕಿಂಗ್‌ನಲ್ಲಿ ನಮಗೆ ಒಂದು ಇಂಡಿಯನ್‌ ಟ್ರೆಕ್ಕ​ರ್‍ಸ್ ಗ್ರೂಪ್‌ ಬಿಟ್ಟರೆ ಸಿಕ್ಕವರೆಲ್ಲಾ ಬಿಸಿಲಿಗೆ ಬಿಳಿ ಮೈಯನ್ನು ಕಡುಗೆಂಪಾಗಿಸಿ ನಡೆವ ವಿದೇಶಿಯರು. ಅವರಾರ‍ಯರೂ ಇಲ್ಲಿ ಅಟೋ, ಟ್ಯಾಕ್ಸಿಗಳಲ್ಲಿ ಓಡಾಡಿದ್ದು ಕಂಡಿಲ್ಲ. ಮೈಲುಗಟ್ಟಲೆ ಕಾಲ್ನಡಿಗೆಯಲ್ಲೇ ಪ್ರಯಾಣ. ಅವರ ನಡುವೆ ಒಬ್ಬ ಹ್ಯೂಯಾನ್‌ತ್ಸಾಂಗ್‌ನಂಥಾ ವಿದೇಶಿಯ ಕಂಡ. ಹೆಗಲಲ್ಲಿ ಅವನಿಗಿಂತ ಭಾರದ ಬ್ಯಾಗ್‌, ಟೆಂಟ್‌ಅನ್ನೂ ಹೊತ್ತು ನಡೆಯುತ್ತಿದ್ದ. ಅಲ್ಲಲ್ಲಿ ಪೊಲೀಸರು ತಡೆದು ನಿಲ್ಲಿಸಿ ಬ್ಯಾಗ್‌ ಚೆಕ್‌ ಮಾಡಿ ಕಳಿಸುತ್ತಿದ್ದರು. ಒಂಟಿಯಾಗಿ ಕಠೋರವಾಗಿ ನಡೆಯುತ್ತಿದ್ದ ಆತನನ್ನು ಕಂಡಾಗ ಮನಸ್ಸು ಒದ್ದೆ ಒದ್ದೆ.

ಸಿಂಹಳೀಯರ ನಾಡಲ್ಲಿ ಭಾರತೀಯ ಪತ್ರಕರ್ತರು!

* ಈ ಟ್ರೆಕ್ಕಿಂಗ್‌ಗೂ ಮೊದಲು ದಾರಿಯ ಬಗ್ಗೆ ಗೊಂದಲವಿತ್ತು. ಬೈಕ್‌ನಲ್ಲಿ ಅದೇ ದಾರಿಯಾಗಿ ಬಂದ ಸ್ಥಳೀಯರನ್ನು ನಿಲ್ಲಿಸಿ ದಾರಿ ಕೇಳಿದೆವು. ‘ಇಂಥಾ ಬಿಸಿಲಲ್ಲಿ ಈ ಮಗುನೂ ಕರ್ಕೊಂಡು ನಡೀತೀರಾ, ಬೋಟ್‌ನಲ್ಲಿ ಹೋಗಿ’ ಅಂತ ಸಲಹೆ ಕೊಟ್ಟರು. ನಾವು ನಡೆದೇ ಹೋಗುವವರು ಅಂದಾಗ, ‘ಬೇಡ, ಸುಮ್ನೆ ಡೇಂಜರ್‌, ಕೆಲವು ಕಡೆ ದಾರಿಯೇ ಇಲ್ಲ ಅಂತಾರೆ, ಒಂಚೂರು ಜಾರಿದ್ರೂ ಸಮುದ್ರಕ್ಕೇ ಬೀಳ್ತೀರಿ..’ ಅಂತ ಹೆದರಿಸಿ ಮುಂದೆ ಹೋದರು. ಆದದ್ದಾಗಲಿ ಅಂತ ಅಂದಾಜಿನ ಮೇಲೆ ನಡೆಯುತ್ತಾ ಹೋದೆವು. ಪುಣ್ಯಕ್ಕೆ ನಮ್ಮ ಹಾದಿ ಕೊಂಚ ದೀರ್ಘವಾದರೂ ನಾವು ದಾರಿ ತಪ್ಪಿದ ಮಕ್ಕಳಾಗಲಿಲ್ಲ. ಅನುಮಾನ ಬಂದ ಕಡೆ ಸ್ವಲ್ಪ ನಿಲ್ಲುತ್ತಿದ್ದೆವು. ಕೆಲವೇ ನಿಮಿಷಗಳಲ್ಲಿ ಒಬ್ಬರಲ್ಲಾ ಒಬ್ಬರು ವಿದೇಶಿಯರು ಎದುರಾಗ್ತಿದ್ರು. ನಮ್ಮ ಚಾರಣದ ಕೊನೆಯಲ್ಲಂತೂ ಒಬ್ಬ ಎಪ್ಪತ್ತರ ಹರೆಯದ ವಿದೇಶಿ ತಾತ, ಯಾವ ಕಡೆ ಹೋದ್ರೆ ಸಮುದ್ರ ಸಿಗುತ್ತೆ, ಬಲಕ್ಕೆ ತಿರುಗಿದ್ರೆ ಊರೆಲ್ಲ ಸುತ್ತಾಡ್ಬೇಕಾಗುತ್ತೆ ಅಂತೆಲ್ಲ ವಿವರಿಸಿ ಬಂದಷ್ಟೇ ವೇಗವಾಗಿ ಮುನ್ನಡೆದ.

* ಮೊದಲ ದಿನ ಗೋಕರ್ಣದ ಬೀದಿಯಲ್ಲಿ ಮಹಾಬಲೇಶ್ವರ ದೇವಾಲಯದ ಪಕ್ಕದಲ್ಲೇ ನಡೆಯುವಾಗ ‘ಹರೇ ರಾಮ ಹರೇ ರಾಮ..’ ಹೇಳೋದು ಕೇಳಿಸಿತು. ಆ ಕಡೆ ಹೋದರೆ ದೊಡ್ಡ ಹಳೇ ಕಟ್ಟಡದ ಮುಂದೆ ಒಬ್ಬ ಹುಡುಗ ಮತ್ತೊಂದಿಷ್ಟುಜನ ವಿದೇಶಿಯರು ಹರೇ ರಾಮ ಹಾಡುತ್ತಾ ಬೀದಿಯಲ್ಲೇ ಕುಣಿಯುತ್ತಿದ್ದರು. ಪಕ್ಕದಲ್ಲೇ ನಿಂತು ಕೆಲವು ಬ್ರಾಹ್ಮಣ ಹೆಂಗಸರು ಹರೇ ರಾಮ ಗುನುಗುತ್ತಿದ್ದರು. ಎಲ್ಲಿಂದಲೋ ಬಂದ ಜನ ಗುಂಪುಗಟ್ಟಿಬೆರಗಿನಿಂದ ಇದನ್ನು ನೋಡುತ್ತಿದ್ದರು. ಅದೇ ದಾರಿಯಾಗಿ ಬಂದ ಅಟೋದವ ಒಂಚೂರೂ ಬೈಯದೇ ಜನರ ನಡುವೆ ದಾರಿ ಮಾಡಿಕೊಂಡು ಹೋದ. ಆ ಕ್ಷಣಕ್ಕೆ ಅನಿಸಿದ್ದು, ಎಲ್ಲಿಯ ಶಿವ, ಎಲ್ಲಿಯ ರಾಮ, ಎಲ್ಲೆಲ್ಲಿಯ ಜನರು, ಇದಪ್ಪಾ ಗೋಕರ್ಣ ಅಂದ್ರೆ!

Follow Us:
Download App:
  • android
  • ios