ಸಂದರ್ಶನ: ಶ್ರೀಕಾಂತ್ ಎನ್. ಗೌಡಸಂದ್ರ

*ವಿಶ್ವ ಯೋಗ ದಿನ ಜೂ.21ರ ದಿನವೇ ಆಚರಣೆ ಮಾಡಲು ಕಾರಣವೇನು?

ಅದಕ್ಕೂ ಒಂದು ಮಹತ್ವದ ಕಾರಣವಿದೆ. ಸೂರ್ಯ ಅತಿ ಹೆಚ್ಚು ಹೊತ್ತು ಇರುವ ದಿನ ಇದು. ಸೂರ್ಯನ ರಶ್ಮಿಗಳು ಭೂಮಿ ಮೇಲೆ ಅತಿ ಹೆಚ್ಚು ಹೊತ್ತು ಬೀಳುವುದರಿಂದ 15 ವರ್ಷದ ಹಿಂದೆ ಪೋರ್ಚುಗಲ್‌ನ ಸ್ವಾಮೀಜಿಯೊಬ್ಬರು ಜೂ.21ರಂದು ಯೋಗ ದಿನ ಆಚರಿಸಲು ಶುರು ಮಾಡಿದ್ದರು. 2014ರಲ್ಲಿ ಬಿಎಂಎಸ್ ಕಾಲೇಜು ಮೈದಾನದಲ್ಲಿ ಶ್ವಾಸ ಪ್ರತಿಷ್ಠಾನ ಹಾಗೂ ಎಸ್-ವ್ಯಾಸ ಸಂಸ್ಥೆ ಸಹಯೋಗದಲ್ಲಿ ದಿವಂಗತ ಅನಂತಕುಮಾರ್ ನೇತೃತ್ವದಲ್ಲಿ ನಾವೇ ಮೊದಲ ವಿಶ್ವ ಯೋಗ ದಿನ ಆಚರಣೆ ಮಾಡಿದ್ದೆವು. ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಯತ್ನದ ಫಲವಾಗಿ ವಿಶ್ವಸಂಸ್ಥೆಯು ಅದೇ ದಿನವನ್ನು ಅಧಿಕೃತವಾಗಿ ವಿಶ್ವ ಯೋಗ ದಿನವಾಗಿ ಘೋಷಿಸಿತು. ಇದನ್ನು 172 ದೇಶಗಳು ಸ್ವೀಕರಿಸಿದವು.

*ಯೋಗಾಭ್ಯಾಸ ನಿರತರಿಗೆ ನೀವು ನೀಡುವ ಪ್ರಾಥಮಿಕ ಸಲಹೆಗಳೇನು?

ಮೊದಲು ಮಾಂಸಾಹಾರ ಸೇವನೆ ತ್ಯಜಿಸಬೇಕು. ಯೋಗಾ ಹಾಗೂ ಮಾಂಸಾಹಾರ ವೈರುಧ್ಯದ ವಸ್ತುಗಳು. ‘ಅಹಿಂಸಾ ಪ್ರತಿಷ್ಠಾಯಾಂ ತತಸನ್ನಿಧೌ ವ್ಯರ್ಥಗಃ’ ಎಂಬ ಪತಂಜಲಿ ಯೋಗ ಸೂತ್ರದ ಪ್ರಕಾರ ಅಹಿಂಸೆಯನ್ನು ಸಾಧಿಸಿದವನ ಎದುರಲ್ಲಿ ಯಾರಿಗೂ ಶತ್ರುತ್ವ ಭಾವನೆ ಉಂಟಾಗುವುದಿಲ್ಲ. ಬೇರೆಯವರಿಗೆ ಕಿಂಚಿತ್ತೂ ಹಾನಿ ಮಾಡದ ವ್ಯಕ್ತಿಯ ಎದುರಲ್ಲಿ ಕ್ರೂರ ಪ್ರಾಣಿಗಳೂ ವಿನೀತವಾಗುತ್ತವೆ. ಒಬ್ಬ ವ್ಯಕ್ತಿಗೆ ಜೀವ ಕೊಡುವ ಶಕ್ತಿ ಎಲ್ಲಿಯವರೆಗೂ ಇರುವುದಿಲ್ಲವೋ ಅಲ್ಲಿಯವರೆಗೆ ಜೀವ ತೆಗೆಯುವ ಹಕ್ಕೂ ಇರುವುದಿಲ್ಲ. ಹೀಗಾಗಿ ಮೊದಲು ಮಾಂಸಾಹಾರ ಸೇವನೆ ತ್ಯಜಿಸಬೇಕು. ಅಹಿಂಸಾ ತತ್ವದ ಅಡಿಯಲ್ಲೇ ಅಲ್ಲದೆ ಮಾಂಸಾಹಾರ ಸೇವನೆಯಿಂದ ಅಜೀರ್ಣ ಸಮಸ್ಯೆ ಉಂಟಾಗುತ್ತದೆ. ಜತೆಗೆ ಮಾಂಸಾಹಾರ ಸೇವನೆ ಮಾಡದಿದ್ದರೆ ದೇಹಸಿರಿ ಬೆಳೆಸಿಕೊಳ್ಳಲು ಸಾಧ್ಯವಿಲ್ಲ ಎಂಬುದೂ ಸಹ ತಪ್ಪು ಕಲ್ಪನೆ ಎಂಬುದು ಈಗಾಗಲೇ ಸಾಬೀತಾಗಿದೆ. ಉದಾ: ಅಮಿರ್‌ಖಾನ್, ದೀಪಿಕಾ ಪಡುಕೋಣೆ, ಶಿಲ್ಪಾಶೆಟ್ಟಿ ಇವರೆಲ್ಲರೂ ಯೋಗದಿಂದಾಗಿ ಮಾಂಸಾಹಾರ ತ್ಯಜಿಸಿದವರು.

*ವಿಶ್ವಾದ್ಯಂತ ಎಲ್ಲರ ಬಾಯಲ್ಲೂ ಗುನಗುವಂತಾಗಿರುವ ಯೋಗದ ಇತಿಹಾಸವೇನು?

ನಮ್ಮ ಭಾರತೀಯ ಸಂಸ್ಕೃತಿಗೆ 5 ಸಾವಿರಕ್ಕೂ ಮಿಗಿಲು ವರ್ಷಗಳ ಇತಿಹಾಸವಿದೆ.ಭಾರತದಲ್ಲಿ ಯೋಗಿಗಳು ಪ್ರಾಣಿ, ಪಕ್ಷಿಗಳನ್ನು ಗಮನಿಸುತ್ತಿದ್ದರು. ಜಗತ್ತಿನಲ್ಲಿ ಯಾವ ಪ್ರಾಣಿಗೂ ಬೆನ್ನು ನೋವು, ರಕ್ತದೊತ್ತಡ, ಕ್ಯಾನ್ಸರ್‌ನಂತಹ ಸಮಸ್ಯೆಗಳಿಲ್ಲ. ಏಕೆಂದರೆ ಸಹಜ ಆಹಾರ ಸೇವನೆ, ಸಹಜ ಜೀವನ ಇದಕ್ಕೆ ಕಾರಣ. ಉಸಿರಾಟದ ಮೇಲಿನ ನಿಯಂತ್ರಣದಿಂದ ಪ್ರಾಣಿಯ ಆಯಸ್ಸು ಹೆಚ್ಚಾಗುತ್ತದೆ. ಮೊಸಳೆ ನಿಮಿಷಕ್ಕೆ 4 ಬಾರಿ ಮಾತ್ರ ಉಸಿರಾಡುವುದರಿಂದ 300 ವರ್ಷ ಬದುಕುತ್ತದೆ. ಆಮೆ 1 ನಿಮಿಷಕ್ಕೆ 3 ಬಾರಿ ಉಸಿರಾಟ ಮಾಡುವುದರಿಂದ 400 ವರ್ಷ ಬದುಕುತ್ತದೆ. ನಾಯಿ ಬಾಯಿ ತೆರೆದುಕೊಂಡೇ ಇರುವುದರಿಂದ ಆಯಸ್ಸು ಕಡಿಮೆ. ಇದೇ ರೀತಿ ಅಧ್ಯಯನದಿಂದ ಉಸಿರಿನ ಮೇಲೆ ನಿಯಂತ್ರಣ ಸಾಧಿಸಲು ಪ್ರಾಣಾಯಾಮ ರೂಡಿಸಿಕೊಂಡು ಅದಕ್ಕೊಂದು ವಿನ್ಯಾಸ

*ನಿತ್ಯ ಜೀವನದಲ್ಲಿ ಯೋಗದ ಮಹತ್ವ ಏನು?

ಯೋಗ ಇಂದಿನ ಅವಶ್ಯಕತೆ ಹಾಗೂ ನಾಳಿನ ಅನಿವಾರ್ಯತೆ. ಅಲೋಪತಿ, ಹೋಮಿ ಯೋಪತಿ ಚಿಕಿತ್ಸೆಗಳು ಕೆಳಹಂತದ ನ್ಯಾಯಾಲ ಯವಿದ್ದಂತೆ. ಆಯುರ್ವೇದ-ಯುನಾನಿ ಹೈಕೋರ್ಟ್‌ನಂತೆ. ಯೋಗ ಸುಪ್ರೀಂಕೋರ್ಟ್ ಇದ್ದಂತೆ. ಹಸಿಯದಿರೆ ಉಣಬೇಡ, ಹಸಿದು ಮತ್ತಿರಬೇಡ. ಬಿಸಿ ಬೇಡ, ತಂಗಳೂಟವೂ ಬೇಡ. ವೈದ್ಯರಾ ಬೆಸನವೇ ಬೇಡ ಸರ್ವಜ್ಞ ಎಂದು ಹೇಳುತ್ತಾರೆ. ಹೀಗಾಗಿ ನಿಗದಿತ ಊಟ ಹಾಗೂ ವ್ಯಾಯಾಮದಿಂದ ವೈದ್ಯರಿಂದ ಅಂತರ ಕಾಯ್ದುಕೊಳ್ಳಬಹುದು. ದೇಹವನ್ನು ಚಟುವಟಿಕೆಗೆ ಒಗ್ಗಿಸ ಬೇಕು.ಇಲ್ಲದಿದ್ದರೆ ಅದು ನಿರುಪಯುಕ್ತವಾಗುತ್ತದೆ.

*ಜೀವನದ ಜಂಜಾಟದಲ್ಲಿ ದೇಹದ ಆರೋಗ್ಯ ವನ್ನು ಯೋಗ ಕಾಪಾಡುವುದು ಹೇಗೆ?

ಬದಲಾದ ಜೀವನ ಶೈಲಿ ಹಾಗೂ ಯಾಂತ್ರಿಕ ಬದುಕಿನಿಂದ ಇದೊಂದು ಸಮಸ್ಯೆ ಇದೆ. ಆದರೆ, ಇದಕ್ಕೆ ಪರಿಹಾರವಿಲ್ಲ ಎಂದೇನಿಲ್ಲ. ಕಚೇರಿಯಲ್ಲಿ ದೀರ್ಘಾವಧಿ ಕುಳಿತು ಕೆಲಸ ಮಾಡುವವರು ಈ ಅವಧಿಯಲ್ಲೇ ಸಣ್ಣ ಪುಟ್ಟ ವ್ಯಾಯಾಮ ದಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಆಗಾಗ್ಗೆ ಮೈ ಮುರಿಯಬೇಕು. ಕುತ್ತಿಗೆ ಹಾಗೂ ಭುಜದ ವ್ಯಾಯಾಮ ಮಾಡಬೇಕು. ಹೆಚ್ಚು ನೀರು ಸೇವಿಸಬೇಕು. ಇದರಿಂದ ಬೊಜ್ಜು ದೇಹ ನಿಯಂತ್ರಿಸಬಹುದು.

*ವಿಶ್ವಮಟ್ಟದಲ್ಲಿ ಗುಣಮಟ್ಟದ ಯೋಗ ಹಾಗೂ ಭಾರತೀಯ ಸಂಸ್ಕೃತಿಯ ಪ್ರಚಾರಕ್ಕೆ ನಿಮ್ಮ ಯೋಜನೆಗಳೇನು?

ವಿದೇಶದಲ್ಲಿ ಯೋಗ ತರಬೇತಿ ನೀಡುವವರಿಗೆ 28 ದಿನಗಳ ಯೋಗ ಶಿಕ್ಷಕ ತರಬೇತಿ ಕಾರ್ಯಕ್ರಮವನ್ನು ಹರಿಹರದ ಪಂಚಮಸಾಲಿ ಮಠದಲ್ಲಿ ಮಠ ಹಾಗೂ ಶ್ವಾಸ ಯೋಗ ಪೀಠದ ಸಹಯೋಗದಲ್ಲಿ ಮಾಡುತ್ತಿದ್ದೇವೆ. ಮೊದಲ ದಿನ ಶಿಬಿರಾರ್ಥಿಗಳಿಂದ ಸಸಿ ನೆಡೆಸಿ 28 ದಿನವೂ ಅವರಿಂದಲೇ ಉಪಚಾರ ಮಾಡಿಸಲಾಗುವುದು. ಈ ಮೂಲಕ ಪ್ರಕೃತಿ ಯೇ ದೇವರು ಎಂದು ಪೂಜಿಸುವ ಭಾರತೀಯ ಮೂಲತತ್ವ ತಿಳಿಸುವ ಜತೆಗೆ, ಜಾಗತಿಕ ತಾಪಮಾನ ನಿಯಂತ್ರಣದ ಹಸಿರು ಮಹತ್ವದ ಅರಿವು ಮೂಡಿಸಲಾಗುವುದು.

*ಭಾರತ ‘ವಿಶ್ವ ಗುರು’ ಆಗುವುದರಲ್ಲಿ ಯೋಗದ ಪಾತ್ರ ಇದೆಯೇ?

ಭಾರತೀಯರು ಶತಮಾನಗಳ ಕಾಲ ಬ್ರಿಟಿಷರ ಆಡಳಿತದಲ್ಲಿದ್ದರು. ಇದೀಗ ಭಾರತದ ಸಂಸ್ಕೃತಿ ಹಾಗೂ ಯೋಗದ ಮಹತ್ವಕ್ಕೆ ವಿಶ್ವವೇ ಮರುಳಾಗುವ ಸಮಯ ಬಂದಿದೆ. ಅಮೆರಿಕಾದಂತಹ ದೇಶಗಳು ಪೆಪ್ಸಿ, ಕೋಕಾಕೋಲದಂತಹ ಉತ್ಪನ್ನಗಳನ್ನು ನೀಡಿದರೆ, ಭಾರತ ವಚನ ಸಾಹಿತ್ಯ, ಉಪನಿಷತ್ ಹಾಗೂ ಯೋಗವನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡಿದೆ. ಯೋಗದ ಮಹತ್ವ ದಿನದಿಂದ ದಿನಕ್ಕೆ ವಿಶ್ವದೆಲ್ಲೆಡೆ ವ್ಯಾಪಿಸುತ್ತಿದೆ. ಅಮೆರಿಕಾದಲ್ಲಿ ಪ್ರತಿ 10 ಕಿ.ಮೀ.ಗೆ ಒಂದು ಆಯುರ್ವೇದಿಕ್ ಸ್ಪಾ ಹಾಗೂ ಯೋಗ ಕೇಂದ್ರಗಳಿವೆ. ಚೀನಾದಲ್ಲಿ ಭಾರತದ 10 ಸಾವಿರ ಯೋಗ ಶಿಕ್ಷಕರಿದ್ದಾರೆ. ಪ್ರಸ್ತುತ ವಿಶ್ವದಾದ್ಯಂತ ಯೋಗ ಪ್ಯಾಷನ್ ಆಗಿಬಿಟ್ಟಿದೆ. ಜೂ.21ರ ದಿನವನ್ನು ವಿಶ್ವ ಯೋಗ ದಿನಾಚರಣೆಯಾಗಿ ಯುನೆಸ್ಕೊ ಘೋಷಿಸಿದ್ದು, 172 ದೇಶಗಳು ಇದನ್ನು ಸ್ವೀಕರಿಸಿವೆ. ಇದು ಭಾರತದ ಮೂಲ ಎಂಬುದು ದೃಢಪಟ್ಟಿರುವುದರಿಂದ ಭಾರತ ‘ವಿಶ್ವ ಗುರು’ ಆಗುವುದರಲ್ಲಿ ಯೋಗ ಮಹತ್ವದ ಸ್ಥಾನ ಪೋಷಿಸುತ್ತಿದೆ.

*ಸಿಲಿಕಾನ್ ಸಿಟಿ ಬೆಂಗಳೂರು ಬಿಟ್ಟು ಹರಿಹರದಲ್ಲಿ ತರಬೇತಿ ಕಾರ್ಯಕ್ರಮ ಏಕೆ?

ಬೆಂಗಳೂರಿನಲ್ಲಿ ಕಾರ್ಬನ್ ಡೈಆ್ಯಕ್ಸೈಡ್ ಪ್ರಮಾಣ ಹೆಚ್ಚಿರುತ್ತದೆ. ಶುದ್ಧ ಗಾಳಿ ಇಲ್ಲದ ಕಡೆ ಯೋಗ ಮಾಡುವುದು ಮತ್ತೊಂದು ರೀತಿಯ ಸಮಸ್ಯೆ. ಹೀಗಾಗಿಯೇ ನಮ್ಮ ಮಠದಲ್ಲಿ ಇಂಗಾಲ ಡೈ ಆ್ಯಕ್ಸೈಡ್ ಪ್ರಮಾಣವನ್ನು ಶೂನ್ಯಕ್ಕೆ ತರಲು ಯೋಜನೆ ರೂಪಿಸಲಾಗಿದೆ. ಮಠದ ಆವರಣದಲ್ಲಿ 100 ವಿಧದ ಆಯುರ್ವೇದ ಗಿಡಗಳನ್ನು ನೆಡಲಾಗಿದೆ. ಇದರಿಂದ ಪಕ್ಷಿಗಳ ನಿನಾದ ಹೆಚ್ಚಾಗಿದ್ದು, ಧೂಳಿನ ಪ್ರಮಾಣ ಶೇ.೩೦ರಷ್ಟು ಕಡಿಮೆಯಾಗಿದೆ.

*ಮಠದ ಇತರೆ ವಿನೂತನ ಕಾರ್ಯಕ್ರಮಗಳು ಹೇಗೆ ಸಾಗುತ್ತಿವೆ?

ಮಠದಲ್ಲಿ ಸಾವಯವ ಕೃಷಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಸ್ವತಃ ನಾವೇ 3 ಎಕರೆಯಲ್ಲಿ ಸೇವಂತಿಗೆ, ೧ ಎಕರೆಯಲ್ಲಿ ಗುಲಾಬಿ ಹೂವು ಬೆಳೆಸುತ್ತಿದ್ದೇವೆ. ಈ ಮೂಲಕ ಶೇ.80ರಷ್ಟು ಕೃಷಿಯನ್ನೇ ನೆಚ್ಚಿಕೊಂಡಿರುವ ಪಂಚಮಸಾಲಿ ಸಮುದಾಯದವರಿಗೆ ಸಾವಯವ ಕೃಷಿ ತರಬೇತಿ ನೀಡಲಾಗುತ್ತಿದೆ. ನಮ್ಮ ಮಠ ‘ಪಂಚ ದಾಸೋಹಿ ಮಠ’ ಎಂದು ಹೆಸರು ಪಡೆದಿದೆ. ಸಾಮಾನ್ಯವಾಗಿ ಮಠಗಳು ತ್ರಿವಿಧ ದಾಸೋಹಿ ಎಂದು ಹೆಸರು ಪಡೆಯುತ್ತವೆ. ನಮ್ಮ ಮಠದಲ್ಲಿ ಅನ್ನ, ಅಕ್ಷರ, ಆಶ್ರಯ, ಆಧ್ಯಾತ್ಮ ಹಾಗೂ ಆರೋಗ್ಯ ದಾಸೋಹದ ಮೂಲಕ ಪೀಠವನ್ನು ಆರೋಗ್ಯ ಪೀಠ ಹಾಗೂ ಹಸಿರು ಪೀಠವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಪಂಚಮಸಾಲಿ ಯುವಕರಿಗೆ ಜೂ.29 ಹಾಗೂ 30ರಂದು ವ್ಯಕ್ತಿತ್ವ ವಿಕಸನ ಶಿಬಿರ ಹಮ್ಮಿಕೊಂಡಿದ್ದೇವೆ. ಇದರಲ್ಲಿ ವಾಯುಮಾಲಿನ್ಯದ ಪರಿಣಾಮಗಳು, ಯೋಗ, ಧ್ಯಾನ, ಸ್ವಾವಲಂಬನೆ, ಸಹಕಾರ ಮನೋಭಾವನೆ, ಸಂಘಟನಾ ಕೌಶಲ್ಯ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುವುದು.