ಒಡಲೊಳಗೆ ಕುಡಿಯೊಡೆದ ಜೀವವನ್ನು ಅನಿವಾರ್ಯ ಕಾರಣಗಳಿಂದ ಚಿವುಟಿ ಹಾಕಬೇಕಾದಂತಹ ಪರಿಸ್ಥಿತಿ ಎದುರಾದಾಗ, ತಾಯಿ ಹೃದಯದಲ್ಲಿ ನಡೆಯುವ ಸಂಘರ್ಷ, ತುಮುಲಗಳನ್ನು ಪದಗಳಲ್ಲಿ ವಿವರಿಸುವುದು ಕಷ್ಟವೇ ಸರಿ. ಗರ್ಭಪಾತಕ್ಕೊಳಗಾಗುವ ಮಹಿಳೆ ದೈಹಿಕ ನೋವಿಗಿಂತ ಸಾವಿರ ಪಟ್ಟು ಹೆಚ್ಚು ಮಾನಸಿಕ ಯಾತನೆ ಅನುಭವಿಸುತ್ತಾಳೆ. ಗರ್ಭಪಾತದ ನಿರ್ಧಾರ ಕೈಗೊಳ್ಳುವಾಗ ಬಹುತೇಕ ಮಹಿಳೆಯರು ಮನಸ್ಸು ಗಟ್ಟಿ ಮಾಡಿಕೊಳ್ಳುತ್ತಾರೆ. ಜೊತೆಗೆ ತಮ್ಮ ನಿರ್ಧಾರ ಸರಿಯಾಗಿಯೇ ಇದೆ ಎಂಬ ವಿಶ್ವಾಸವನ್ನೂ ಹೊಂದಿರುತ್ತಾರೆ. ಆದರೆ, ಅದೆಷ್ಟೇ ಪ್ರಯತ್ನಿಸಿದರೂ ಆ ನೆನಪು ಹಲವು ದಿನಗಳ ಕಾಲ ಕಾಡುವ ಜೊತೆಗೆ ಒಮ್ಮೊಮ್ಮೆ ವಿಷಾದ ಭಾವನೆಯನ್ನು ಕೂಡ ಮೂಡಿಸುತ್ತದೆ. ಎಲ್ಲೋ ಒಂದು ಸಂದರ್ಭದಲ್ಲಿ ನನ್ನ ನಿರ್ಧಾರ ತಪ್ಪಾಗಿತ್ತು ಎಂಬ ಭಾವನೆ ಅವರಲ್ಲಿ ಮೂಡಬಹುದು.ಆದರೆ, ಇತ್ತೀಚೆಗೆ ನಡೆದ ಅಧ್ಯಯನವೊಂದರಲ್ಲಿ ಅಬಾರ್ಷನ್ ಮಾಡಿಸಿಕೊಂಡು 5 ವರ್ಷಗಳು ಕಳೆದ ಮೇಲೂ ಶೇ.95 ಮಹಿಳೆಯರು ತಮ್ಮ ನಿರ್ಧಾರ ಸರಿಯಾಗಿಯೇ ಇತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವುದು ಕಂಡುಬಂದಿದೆ. 

ತಪ್ಪು ಸಲಹೆಗಳಿಗೆ ಕಿವಿ ಕೊಡಬೇಡಿ; ಗರ್ಭಿಣಿ ಹೀಗಿದ್ರೆ ಚಂದ!

ವಿಷಾದವೇಕೆ?: ಗರ್ಭಪಾತಕ್ಕೊಳಗಾದ ಮಹಿಳೆ ವರ್ಷಗಳು ಉರುಳಿದಂತೆ ತನ್ನ ನಿರ್ಧಾರದ ಬಗ್ಗೆ ಪಶ್ಚತ್ತಾಪ ಪಡುತ್ತಾಳೆ ಎಂಬುದಕ್ಕೆ ಯಾವುದೇ ಪುರಾವೆಗಳು ಸಿಕ್ಕಿಲ್ಲ ಎಂದು ಸೋಷಿಯಲ್ ಸೈನ್ಸ್ ಹಾಗೂ ಮೆಡಿಸಿನ್ ಎಂಬ ಜರ್ನಲ್‍ನಲ್ಲಿ ಪ್ರಕಟಗೊಂಡಿರುವ ಅಧ್ಯಯನದ ವರದಿ ಹೇಳಿದೆ. ಅಷ್ಟೇ ಅಲ್ಲ, ಕಾಲ ಕಳೆದಂತೆ ಗರ್ಭಪಾತಕ್ಕೆ ಸಂಬಂಧಿಸಿ ಅವರ ಮನಸ್ಸಿನಲ್ಲಿ ಮನೆ ಮಾಡಿರುವ ನಕಾರಾತ್ಮಕ ಹಾಗೂ ಸಕಾರಾತ್ಮಕ ಭಾವನೆಗಳು ಮರೆಯಾಗುತ್ತ ಬಂದಿರುವುದಾಗಿ ಅಧ್ಯಯನಕ್ಕೊಳಪಟ್ಟ ಮಹಿಳೆಯರು ತಿಳಿಸಿದ್ದಾರೆ. ಗರ್ಭಪಾತಕ್ಕೊಳಗಾಗಿ ಐದು ವರ್ಷ ಕಳೆಯುವಾಗ ಶೇ.84ರಷ್ಟು ಮಹಿಳೆಯರಲ್ಲಿ ಈ ಕುರಿತು ಸಕಾರಾತ್ಮಕ ಭಾವನೆಗಳು ಅಥವಾ ಯಾವುದೇ ಬೇಸರವಿಲ್ಲದಿರುವುದು ಕಂಡುಬಂದಿದೆ. ‘ಗರ್ಭಪಾತ ನಿರ್ಧಾರ ಕೈಗೊಳ್ಳುವಾಗ ಸಾಕಷ್ಟು ಮಾನಸಿಕ ಯಾತನೆಗೊಳಗಾದ ಅಥವಾ ಸಮುದಾಯ ತಮ್ಮ ನಿರ್ಧಾರವನ್ನು ಒಪ್ಪುವುದಿಲ್ಲ ಎಂಬ ಅಭಿಪ್ರಾಯ ಹೊಂದಿದ್ದ ಬಹುತೇಕ ಮಹಿಳೆಯರು ಕಾಲಕ್ರಮೇಣ ತಮ್ಮ ನಿರ್ಧಾರ ಸರಿಯಾಗಿಯೇ ಇದೆ ಎಂಬ ಅಭಿಪ್ರಾಯ ಹೊಂದಿದ್ದಾರೆ’ ಎಂದು ಅಧ್ಯಯನ ತಂಡದಲ್ಲಿದ್ದ ಅಮೆರಿಕದ ಕ್ಯಾಲಿಫೋರ್ನಿಯಾ ಯುನಿವರ್ಸಿಟಿಯ ಸಹಾಯಕ ಪ್ರಾಧ್ಯಾಪಕಿ ಕೊರಿನ್ನೆ ರೊಕ್ಕ ತಿಳಿಸಿದ್ದಾರೆ. ಗರ್ಭಪಾತಕ್ಕೊಳಗಾದ ಮಹಿಳೆ ದೀರ್ಘಕಾಲದ ತನಕ ಮಾನಸಿಕ ಯಾತನೆಗೊಳಗಾಗುತ್ತಾಳೆ ಎಂಬ ನಂಬಿಕೆಯನ್ನು ಈ ಅಧ್ಯಯನ ಸುಳ್ಳು ಮಾಡಿರುವುದಾಗಿಯೂ ರೊಕ್ಕ ಹೇಳಿದ್ದಾರೆ.

ಉದ್ಯೋಗಸ್ಥ ಮಹಿಳೆಯರಿಗೂ ಮುಂದೆ ಒಳ್ಳೇ ಕಾಲವೈತೆ

5 ವರ್ಷ ನಡೆದ ಅಧ್ಯಯನ:  ಐದು ವರ್ಷಗಳ ಸುದೀರ್ಘ ಅವಧಿ ತನಕ ನಡೆದ ಈ ಅಧ್ಯಯನದಲ್ಲಿ ಅಮೆರಿಕದ 21 ರಾಜ್ಯಗಳಲ್ಲಿ ಗರ್ಭಪಾತಕ್ಕೊಳಗಾದ ಸುಮಾರು ಒಂದು ಸಾವಿರ ಮಹಿಳೆಯರ ಆರೋಗ್ಯ ಹಾಗೂ ಸಾಮಾಜಿಕ-ಆರ್ಥಿಕ ಪರಿಣಾಮಗಳ ಬಗ್ಗೆ ಐದು ವರ್ಷಗಳ ಕಾಲ ಅಧ್ಯಯನ ನಡೆಸಿ, ಮಾಹಿತಿಗಳನ್ನು ಕಲೆ ಹಾಕಲಾಯಿತು.ಅಧ್ಯಯನದ ಪ್ರಾರಂಭದಲ್ಲಿ ಗರ್ಭಪಾತಕ್ಕೊಳಗಾದ 667 ಮಹಿಳೆಯರಿಗೆ ಸಂಬಂಧಿಸಿದ ಮಾಹಿತಿಗಳನ್ನು ವಿಶ್ಲೇಷಣೆಗೊಳ ಪಡಿಸಲಾಗಿತ್ತು. ಗರ್ಭಪಾತಕ್ಕೊಳಗಾಗಿ ಒಂದು ವಾರಗಳ ಬಳಿಕ ಹಾಗೂ ಆ ನಂತರ ಐದು ವರ್ಷಗಳ ತನಕ ಪ್ರತಿ 6 ತಿಂಗಳಿಗೊಮ್ಮೆ ಅಂದರೆ ಒಟ್ಟು 11 ಬಾರಿ ಈ ಮಹಿಳೆಯರನ್ನು ಸಮೀಕ್ಷೆಗೊಳಪಡಿಸಲಾಗಿತ್ತು.

ನಿರ್ಧಾರ ಕೈಗೊಳ್ಳಲು ಕಷ್ಟವಾಗಲಿಲ್ಲ: ಅಧ್ಯಯನದ ಸಂದರ್ಭದಲ್ಲಿ ಶೇ.46ರಷ್ಟು ಮಹಿಳೆಯರು ಗರ್ಭಪಾತದ ನಿರ್ಧಾರ ಕೈಗೊಳ್ಳುವುದು ತಮಗೆ ಕಷ್ಟಕರವಾಗಿರಲಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ.27 ಮಹಿಳೆಯರು ನಿರ್ಧಾರ ಕೈಗೊಳ್ಳುವುದು ಕಷ್ಟವಾಗಿತ್ತು ಎಂದರೆ, ಶೇ.27ರಷ್ಟು ಮಂದಿ ಸ್ವಲ್ಪ ಮಟ್ಟಿಗೆ ಕಷ್ಟಕರವೆನಿಸಿತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಸೆಲೆಬ್ರಿಟಿಗಳು ಗರ್ಭಪಾತವಾದಾಗ ಏನ್ ಮಾಡಿದ್ರು?

ಕಳಂಕದ ಭೀತಿ: ಗರ್ಭಪಾತ ಮಾಡಿಸಿಕೊಂಡಿರುವುದು sಸಮುದಾಯದ ಜನರಿಗೆ ತಿಳಿದರೆ ಅವಮಾನಿಸಬಹುದು, ಕಳಂಕ ಹೊರೆಸಬಹುದು ಎಂಬ ಭಾವನೆಯಿತ್ತು ಎಂದು ಶೇ.70ರಷ್ಟು ಮಹಿಳೆಯರು ತಿಳಿಸಿದ್ದಾರೆ. ಶೇ.29 ಮಹಿಳೆಯರಲ್ಲಿ ಈ ಭಾವನೆ ಕಡಿಮೆ ಮಟ್ಟದಲ್ಲಿದ್ದರೆ,ಶೇ.31ರಷ್ಟು ಮಂದಿಯಲ್ಲಿ ಅತ್ಯಧಿಕ ಮಟ್ಟದಲ್ಲಿತ್ತು. ಈ ರೀತಿ ಕಳಂಕದ ಭೀತಿಯಿಂದ ಗರ್ಭಪಾತದ ನಿರ್ಧಾರ ಕೈಗೊಳ್ಳಲು ಹೆಣಗಾಡಿದ ಮಹಿಳೆಯರಲ್ಲಿ ಗರ್ಭಪಾತಕ್ಕೊಳಗಾದ ಕೆಲವೇ ದಿನಗಳಲ್ಲಿ ಹತಾಶೆ, ಪಶ್ಚತ್ತಾಪ ಹಾಗೂ ಕೋಪದ ಭಾವನೆಗಳು ಕಾಣಿಸಿಕೊಂಡಿವೆ.

ನೋವು ಮರೆಸುವ ಕಾಲ: ಗರ್ಭಪಾತದ ಬಳಿಕ ಮಹಿಳೆಯರಲ್ಲಿ ಕಾಣಿಸಿಕೊಂಡ ನಕಾರಾತ್ಮಕ ಭಾವನೆಗಳು ಸಮಯ ಸರಿದಂತೆ ತೀವ್ರತೆ ಕಳೆದುಕೊಳ್ಳುವುದು ಕಂಡುಬಂದಿದೆ. ಅದರಲ್ಲೂ ಗರ್ಭಪಾತಕ್ಕೊಳಗಾಗಿ ಒಂದು ವರ್ಷವಾಗುವಾಗ ಮಹಿಳೆ ಆ ನೋವಿನಿಂದ ಸಂಪೂರ್ಣವಾಗಿ ಹೊರಬಂದಿರುವುದು ಕಂಡುಬಂದಿದೆ.