Asianet Suvarna News Asianet Suvarna News

ಚೆನ್ನೈ ಸಾಗರದಲ್ಲಿ ಕಂಡ ನೀಲಿ ಅಲೆಗಳ ರಹಸ್ಯ!

ಭಾನುವಾರ ಸಂಜೆ ವಾರಾಂತ್ಯದ ವಿಹಾರಕ್ಕೆಂದು ಸಂಜೆ ಚೆನ್ನೈನ ಬೆಸೆಂಟ್‌ ನಗರ, ತಿರುವಣಂಮೈಲೂರು, ಇ.ಸಿ.ಅರ್‌ ಕಡಲ ತಡಿಗೆ ಬಂದ ಜನರಿಗೆ ಅಚ್ಚರಿ ಕಾದಿತ್ತು. ನಿಧಾನವಾಗಿ ಕತ್ತಲಾಗುತ್ತಿದ್ದಂತೆ ಬಂಗಾಳ ಕೊಲ್ಲಿಯ ಅಲೆಗಳು ಸಿಂಗರಿಸಿಕೊಂಡ ಲಲನೆಯರಂತೆ ಹೊಳೆವ ನೀಲಿ ಬಣ್ಣದೊಡನೆ ನರ್ತಿಸಲು ಪ್ರಾರಂಭಿಸಿದವು. ಇಂತಹ ವಿದ್ಯಮಾನವನ್ನು ಹಿಂದೆಂದೂ ಕಾಣದ ಚೆನ್ನೈ ನ ಜನರು ಒಂದು ಕ್ಷಣ ಸ್ತಂಭೀಭೂತರಾದರೂ ಸಹ, ನಂತರ ತಮ್ಮ ಮೊಬೈಲ್‌ ಗಳನ್ನು ತೆಗೆದು ಚಿತ್ರಿಸಲು ಪ್ರಾರಂಭಿಸಿದರು

what causes the blue glow on chennai beaches by  sumangala mummigatti
Author
Bangalore, First Published Aug 25, 2019, 11:04 AM IST

ಸುಮಂಗಲಾ ಮಮ್ಮಿಗಟ್ಟಿ

ಸುದ್ದಿ ಹರಡುತ್ತಿದ್ದಂತೆ ಜನರು ನಗರದ ಬೇರೆ ,ಬೇರೆ ಭಾಗಗಳಿಂದ ಚೆನ್ನೈನ ಪೂರ್ವ ತೀರದಲ್ಲಿ ಜಮಾವಣೆ ಗೊಂಡರು. ಆ ಭಾಗದ ರಸ್ತೆಯಲ್ಲಿ ಜನ ಸಂದಣಿಯೂ ಹೆಚ್ಚಾಯಿತು. ಬಂಗಾಳ ಕೊಲ್ಲಿಯ ಹೊಳೆವ ಮೋಹಕ ನೀಲಿ ಬಣ್ಣ$್ದ ತೆರೆಗಳು, ದಡಕ್ಕಪ್ಪಳಿಸಿದಾಗ ಇಲ್ಲವೇ ಆ ನೀರಿಗೆ ಏನನ್ನಾದರೂ ಎಸೆದಾಗ ಅದು ಸುತ್ತೆಲ್ಲಾ ಚಿಮ್ಮಿದಂತೆ ಗೋಚರಿಸುತ್ತಿತ್ತು. ಜನರು ಇದನ್ನು ಆನಂದಿಸಲು ಪ್ರಾರಂಭಿಸಿದರು. ಇದು ಇನ್ನೂ ಸಾಮಾಜಿಕ ಜಾಲ ತಾಣಗಳಲ್ಲಿ ಓಡಾಡುತ್ತಿದೆ, ಆದರೆ ಘಟಿಸಿದ ವಿದ್ಯಮಾನದ ಬಗೆಗಿನ ಕುತೂಹಲವಿನ್ನೂ ತಣಿದಿಲ್ಲ.

ಚೆನ್ನೈ ಹೋಟೆಲ್‌ಗಳಲ್ಲಿ ಈಗ ಬಾಳೆ ಎಲೆ ಊಟ!

ಏನು ಈ ಹೊಳೆವ ನೀಲಿ ತೆರೆಗಳು?

ನಮಗೆಲ್ಲ ಗೊತ್ತಿರುವಂತೆ ನೀರಿಗೆ ಬಣ್ಣವಿಲ್ಲ ಆದರೆ ನೀರು ಅದರಲ್ಲಿ ಕರಗಿರುವ ವಸ್ತುವಿನ ಬಣ್ಣವನ್ನು ಪಡೆಯುತ್ತದೆ. ಸಾಗರದ ನೀರು ತನ್ನ ಸುತ್ತಲಿನ ಬೆಳಕನ್ನು ಪ್ರತಿ ಫಲಿಸುವುದರಿಂದ ಒಮ್ಮೆ ನೀಲಿ, ಒಮ್ಮೊಮ್ಮೆ ಹಸಿರು, ಮುಂಜಾವು ಅಥವಾ ಸಂಜೆಯ ಹೊತ್ತಿನಲ್ಲಿ ಸೂರ್ಯನ ಕೆಂಪು ಬಣ್ಣವನ್ನು ತಳೆಯುವುದನ್ನು ನಾವೆಲ್ಲ ನೋಡಿದ್ದೇವೆ. ಆದರೆ ಈಗ ಕಂಡು ಬಂದ ಈ ಹೊಳೆವ ನೀಲಿಯ ಬಣ್ಣ, ಅದರಲ್ಲಿ ಕರಗಿದ, ಅಥವಾ ಪ್ರಥಿಫಲನ ಗೊಂಡ ಬೆಳಕಲ್ಲ, ಬದಲಾಗಿ ಆ ನೀರಿನಲ್ಲಿರುವ ಜೀವಿಗಳು ಉತ್ಪತ್ತಿ ಮಾಡಿದ ‘‘ಜೈವಿಕ ಬೆಳಕು’ ಇದನ್ನು ಬಯೋಲ್ಯುಮಿನಿಸೆನ್ಸ್‌ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಬೆಳಕಿನೊಡನೆ ಬಿಸಿಯೂ ಇರುತ್ತದೆ, ಆದರೆ ಇದು ‘ತಂಪು ಬೆಳಕು’. ಇದಕ್ಕೊಂದು ಸಾಮಾನ್ಯ ಉದಾಹರಣೆಯನ್ನು ಕೊಡಬೇಕು ಎನ್ನುವುದಾದರೆ, ನಾವೆಲ್ಲ ನೋಡಿರುವ ಮಿಣುಕು ಹುಳುಗಳು ಹೊರಡಿಸುವ ಬೆಳಕು. ಇಂಥ ಜೈವಿಕ ಬೆಳಕನ್ನು ಜೀವಿ ಪ್ರಪಂಚದ ಅನೇಕ ಪ್ರಾಣಿ ( ಮೀನುಗಳು, ಕೆಲ ವಲಯ ವಂತುಗಳು, ಕೀಟಗಳು, ಸೀಲೆಂಟ್ರೇಟಾಗಳು, ಮತ್ತು ಸಂಧಿ ಪದಿಗಳು) ಸಸ್ಯ( ಹಾವಸೆಗಳು, ಆಲ್ಗೆ, ಫಂಗಸ್‌ ಮತ್ತು ಅಣಬೆಗಳು, ಸೂಕ್ಷ್ಮ ಜೀವಿಗಳು, ಪ್ಲಾವಕಗಳು) ಉತ್ಪಾದಿಸುತ್ತವೆ. ಅವು ಇದನ್ನು ಉತ್ಪಾದಿಸುವುದು ತಮ್ಮ ರಕ್ಷಣೆಗಾಗಿ ಇಲ್ಲವೇ, ಸಂತಾನೋತ್ಪತ್ತಿಗಾಗಿ ಸಂಗಾತಿಯನ್ನು ಆಕರ್ಷಿಸಲು.

ಈಗ ಚೆನ್ನೈನ ದಡದಲ್ಲಿ ಕಂಡು ಬಂದ ಘಟನೆಯತ್ತ ಬರೋಣ ಅದೂ ಕೂಡಾ ಹೊಳೆವ ನೀಲಿಯ ಜೈವಿಕ ಬೆಳಕೇ ಅದು ನೀರಿನಲ್ಲಿರುವ ಸೂಕ್ಷ್ಮ ಜೀವಿಗಳು ಉತ್ಪಾದಿಸಿದ ಬೆಳಕು. ಸಾಗರದ ನೀರಿನಲ್ಲಿ ಅವು ಅಗಾಧ ಪ್ರಮಾಣದಲ್ಲಿ ಕಂಡು ಬಂದಾಗ ನೀರಿನ ತೆರೆಗಳು ಆ ಬಣ್ಣವನ್ನು ತಳೆದು, ರಾತ್ರಿಯ ಕತ್ತಲಿನಲ್ಲಿ ಮಿನುಗುತ್ತವೆ. ಡೈನೋಫ್ಲಾಜೆಲ್ಲೇಟ್‌ ಗಳು ಎಂದು ಕರೆಯುವ ಈ ಜೀವಿಗಳು ಸಾಮಾನ್ಯವಾಗಿ ಸಮುದ್ರದ ನೀರಿನಲ್ಲಿ ಕಂಡು ಬರುವ ಸೂಕ್ಷ್ಮ ಜೀವಿಗಳು. ಸಾಗರದಲ್ಲಿ ಇವು ಆಹಾರದ ಜಾಲದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ಪತ್ರ ಹರಿತ್ತು ಅಥವಾ ಕ್ಲೋರೋಫಾಮ್‌ರ್‍ ಹೊಂದಿರುವ ಇವು ತಮ್ಮ ಆಹಾರವನ್ನು ತಾವೇ ಉತ್ಪಾದಿಸುತ್ತವೆ. ಇದರಿಂದಾಗಿ ಹಲವಾರು ಸಣ್ಣ ಜೀವಿಗಳಿಗೆ ಅವು ಆಹಾರವಾಗುತ್ತವೆ. ಇವುಗಳ ದೇಹದಲ್ಲಿರುವ ರಾಸಾಯನಿಕ ವಸ್ತುಗಳಿಂದ ನೀಲಿ ಬಣ್ಣದ ಬೆಳಕು ಹೊರ ಸೂಸುತ್ತದೆ. ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಕೇರಳದ ಕರಾವಳಿಯಲ್ಲಿ ಮತ್ತು ಮುಂಬಯಿ ಯ ಕರಾವಳಿಯಲ್ಲೂ ಇಂತಹ ನೀಲಿ ತೆರೆಗಳು ಕಾಣಿಸಿಕೊಂಡಿವೆ. ನೋಡಲು ಸುಂದರವಾಗಿ ಕಾಣುವ ಇದು ಪರಿಸರದ ದೃಷ್ಟಿಯಿಂದ ಅಂತಹ ಸಂತಸದ ಸುದ್ದಿಯೇನೂ ಅಲ್ಲ. ಇವುಗಳ ಅಧಿಕ ಸಂಖ್ಯೆ ನೀರಿನಲ್ಲಿರುವ ಆಮ್ಲಜನಕವನ್ನು ಕಡಿಮೆ ಮಾಡುತ್ತದೆ.

ದುಬೈ ನಿವಾಸಿಯ ಖಾಸ್‌ಬಾತ್‌!

ಕೆಂಪಿಗೆ ಮುನ್ನ ನೀಲಿಯ ಎಚ್ಚರಿಕೆಯ ಘಂಟೆ

ಡೈನೋ ಫ್ಲಾಜಲ್ಲೇಟುಗಳು ಸಮೃದ್ದಿಯಾಗಿ ಬೆಳೆದಾಗ ಇಂತಹ ನೀಲಿಯ ತೆರೆಗಳು ದಡಕ್ಕೆ ಬರುತ್ತವೆ. ಅವು ಸಮೃದ್ಧಿಯಾಗಿವೆ ಎಂದರೆ ನೀರಿನಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿದೆ ಎಂದರ್ಥ. ಆಮ್ಲಜನಕ ಕಡಿಮೆಯಾದರೆ ಸಾಗರದ ನೀರಿನಲ್ಲಿರುವ ಇತರ ಜೀವಿಗಳು ಅಪಾಯಕ್ಕೀಡಾಗುತ್ತವೆ. ಇದರಿಂದ ಇಡಿಯ ಆಹಾರದ ಜಾಲ ತೊಂದರೆಗೆ ಈಡಾಗುತ್ತದೆ. ‘ಅಲ್ಗಲ್‌ ಬ್ಲೂಮ್‌’ ಎಂದು ಕರೆಯುವ, ವಿದ್ಯಮಾನದಲ್ಲಿ ಇವು ಅಧಿಕ ಸಂಖ್ಯೆಯಲ್ಲಿ ಉತ್ಪತ್ತಿಯಾಗಿ ಸ್ಪೋಟಗೊಂಡು ರೆಡ್‌ ಟೈಡ್‌ ಅಥವಾ ಕೆಂಪು ಅಲೆಯನ್ನು ಉಂಟು ಮಾಡುತ್ತದೆ. ಫ್ಲಾರಿಡಾದಲ್ಲಿ ಸಂಭವಿಸಿದ ‘ಕೆಂಪು ತೆರೆಯ’ ನಂತರ ಸತ್ತ ಮೀನುಗಳು ದಡಕ್ಕೆ ತೇಲಿ ಬಂದವು.

ಇದು ಮಾನವನಿಗೆ ಹಾನಿಕಾರಕವೇ?

ಡೈನೋಫ್ಲಾಜಲ್ಲೇಟುಗಳು ಅಧಿಕ ಸಂಖ್ಯೆಯಲ್ಲಿ ಉತ್ಪತ್ತಿಯಾದಾಗ ಅವು ಹೊರ ಸೂಸುವ ವಿಷಕಾರೀ ವಸ್ತುಗಳು ಮೀನುಗಳು ಮತ್ತು ಇತರ ಪ್ರಾಣಿಗಳ ದೇಹವನ್ನು ಸೇರಿ ಅವುಗಳನ್ನು ಸೇವಿಸುವ ಮಾನವ ದೇಹವನ್ನು ಸೇರಿ ಅಪಾಯವನ್ನುಂಟು ಮಾಡುತ್ತವೆ. ಸಾಗರದ ನೀರಿನಲ್ಲಿ ಅಪಾಯಕಾರೀ ರಾಸಾಯನಿಕಗಳ ಸಂಗ್ರಹ ಮತ್ತು ಆಮ್ಲಜನಕದ ಕೊರತೆ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ‘ಕೆಂಪು ತೆರೆಯ’ ಮುನ್ಸೂಚನೆಯಾಗಿವೆ. ಒಟ್ಟಿನಲ್ಲಿ ಇದು ಸಮುದ್ರದಲ್ಲಿ ಎಲ್ಲವೂ ಆರೋಗ್ಯಕರವಾಗಿಲ್ಲ ಎನ್ನುವುದರ ಎಚ್ಚರಿಕೆಯ ಘಂಟೆ.

Follow Us:
Download App:
  • android
  • ios