ಐಫೋನೊಂದನ್ನು ಬಹಳ ವರ್ಷಗಳಿಂದ ಕನಸು ಕಂಡು ಅದಕ್ಕಾಗಿ ಹಣ ಉಳಿಸಿ ಕೊಂಡಿರುತ್ತೀರಿ. ಮನೆಯಲ್ಲಿ ಎಲ್ಲೋ ಇಟ್ಟ ಫೋನು ರಿಂಗಾದಾಗ ತಲೆಗೆ ಎಣ್ಣೆ ಹಾಕಿಕೊಳ್ಳುತ್ತಿದ್ದ ಪತ್ನಿಯು ನಿಮಗದನ್ನು ತಂದುಕೊಡುತ್ತಾಳೆ. ಫೋನಿನ ಮೇಲೆಲ್ಲ ಎಣ್ಣೆಯ ಜಿಡ್ಡು, ಅದೂ ನಿಮ್ಮ ಅತಿ ಪ್ರೀತಿಯ ಫೋನ್ ಮೇಲೆ. ಈಗ ನಿಮಗೆ ಕರೆ ಯಾರಿಂದ ಬಂತು ಎಂದು ನೋಡುವುದಕ್ಕಿಂತ ಎಣ್ಣೆಯ ಜಿಡ್ಡಾಯಿತು ಎಂಬುದೇ ಮೊದಲು ಗಮನ ಸೆಳೆಯುತ್ತಲ್ಲವೇ? ಹೆಂಡತಿಯ ಮೇಲೆ ವಿಪರೀತ ಕೋಪವೂ ಉಕ್ಕುತ್ತದೆ. ಕರೆ ರಿಸೀವ್ ಮಾಡುವ ಬದಲು ಫೋನಿನ ಮೇಲಿನ ಜಿಡ್ಡು ಹೋಗಿಸುವತ್ತ ಗಮನ ಹರಿಸುತ್ತೀರಿ.

ಹೌದು- ನಾವು ಇರುವುದೇ ಹಾಗೆ- ಯಾವುದನ್ನು ಅತಿಯಾಗಿ ಪ್ರೀತಿಸುತ್ತಿರುತ್ತೇವೋ ಅದನ್ನು ಬಹಳ ಜತನದಿಂದ ಕಾಪಾಡಿಕೊಳ್ಳುತ್ತೇವೆ. 

ಬ್ರೇಕ್‌ಫೇಲ್‌ ಆದರೂ ಗಾಡಿ ಮುಂದೆ ಹೋಗಲೇಬೇಕು?

ತಾಯಿ ತನ್ನ ಮಗುವನ್ನು ಕ್ಷಣಕ್ಷಣವೂ ಧೂಳು, ರೋಗರುಜಿನ, ಪೆಟ್ಟು ಮಾಡಿಕೊಳ್ಳುವ ಸಂಭವಗಳಿಂದ, ಕೆಟ್ಟ ಜನರಿಂದ ಕಾಪಾಡುತ್ತಲೇ ಇರುತ್ತಾಳೆ. ಇನ್ನು ಚೆಂದದ ತ್ವಚೆ ಹೊಂದಿದ ಯುವತಿಗೆ ಎಲ್ಲಕ್ಕಿಂತ ತನ್ನ ತ್ವಚೆಯನ್ನು ರಕ್ಷಿಸಿಕೊಳ್ಳುವುದೇ ಮುಖ್ಯವೆನಿಸಬಹುದು. ಫಿಟ್ನೆಸ್ ಬಗ್ಗೆ ಅತಿಯಾದ ಗಮನ ಹೊಂದಿದವರು ಜೀವನದುದ್ದಕ್ಕೂ ಫಿಟ್ನೆಸ್ ಕಾಪಾಡಿಕೊಳ್ಳಲು ದಿನೇ ದಿನೆ ಹರಸಾಹಸ ಮಾಡುತ್ತಿರುತ್ತಾರೆ. ಹೀಗೆ ಒಬ್ಬೊಬ್ಬರು ಒಂದೊಂದನ್ನು ಜೀವನದುದ್ದಕ್ಕೂ ರಕ್ಷಿಸಿಕೊಳ್ಳಲು, ಕಾಪಾಡಿಕೊಳ್ಳಲು ಬಯಸುತ್ತಾರೆ. ಹಾಗೆ ನೀವೇನನ್ನು ರಕ್ಷಿಸಿಕೊಳ್ಳುವಿರಿ ಎಂದು ಪರಿಚಯಸ್ಥರಲ್ಲಿ ಕೇಳಿದಾಗ ಅವರ ಉತ್ತರಗಳು ಒಬ್ಬರಿಗಿಂತ ಒಬ್ಬರದು ಎಷ್ಟೊಂದು ವಿಭಿನ್ನವಾಗಿವೆ ಎಂಬುದು ಅಚ್ಚರಿ ತರುತ್ತದೆ. ಒಬ್ಬೊಬ್ಬರಿಗೆ ಒಂದೊಂದು ಪ್ರಮುಖ ಎನಿಸುತ್ತದೆ. ಹಾಗೆಯೇ ಇದನ್ನು ಓದಿದ ಬಳಿಕ ನಿಮ್ಮ ಪ್ರಾಮುಖ್ಯತೆ ಯಾವುದಕ್ಕೆ ಎಂಬುದನ್ನು ಯೋಚಿಸಿ. 

- 'ನನಗೆ ನನ್ನ ಕುಟುಂಬ ಎಲ್ಲಕ್ಕಿಂತ ಪ್ರಮುಖ ಎನಿಸುತ್ತದೆ. ನಾನವರನ್ನು ಪ್ರೀತಿಸುತ್ತೇನೆ, ಗೌರವಿಸುತ್ತೇನೆ ಎಂಬ ಕಾರಣಗಳಿಗಾಗಿ ಮಾತ್ರವಲ್ಲ, ನನ್ನ ಕುಟುಂಬದ ತಲೆಮಾರುಗಳಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಿದ್ದಾರೆ, ಕವಿಗಳಿದ್ದಾರೆ, ಕಲಾವಿದರಿದ್ದಾರೆ. ಈ ಎಲ್ಲ ಪರಂಪರೆಯನ್ನು ರಕ್ಷಿಸಿಕೊಂಡು ಹೋಗುವುದು ನನಗೆ ಎಲ್ಲಕ್ಕಿಂತ ಮುಖ್ಯವೆನಿಸುತ್ತದೆ. '

- 'ನನ್ನ ನಾಯಿ! ಈ ಬಗ್ಗೆ ಯಾವ ಗೊಂದಲವೂ ಇಲ್ಲ. ಐದು ವರ್ಷಗಳಿಂದ ನನ್ನ ಪ್ರೀತಿಯ ಟಾಮಿ ನನ್ನನ್ನು ರಕ್ಷಿಸುತ್ತಿರುವಂತೆಯೇ ನಾನು ಕೂಡಾ ಟಾಮಿಯನ್ನು ರಕ್ಷಿಸುತ್ತಿರುವೆ. ಆತನಿಲ್ಲದ ಜೀವನವನ್ನು ಊಹಿಸಿಕೊಳ್ಳಲೂ ನನಗೆ ಸಾಧ್ಯವಿಲ್ಲ.'

- 'ನನ್ನ ಮನೆ. ಇದುವರೆಗಿನ ಜೀವನವನ್ನೆಲ್ಲ ಬಾಡಿಗೆ ಮನೆಗಳಲ್ಲಿ ಕಳೆದಿರುವೆ. ಯಾವುದು ಕೂಡಾ ನನ್ನ ಸ್ವಂತದ್ದು ಎಂಬ ಭಾವ ತಂದುಕೊಟ್ಟಿಲ್ಲ. ಆದರೆ, ಇತ್ತೀಚೆಗೆ ಕೊಂಡ ಹೊಸ ಮನೆ ಸಂಪೂರ್ಣ ನನ್ನದೇ ಎಂಬ ಖುಷಿಯೊಂದಿಗೆ ಇದುವರೆಗೂ ಅನುಭವಿಸಿರದ ವಿಚಿತ್ರ ಸ್ವಾತಂತ್ರ್ಯವೊಂದನ್ನು ಇಲ್ಲಿ ಕಂಡುಕೊಂಡಿರುವೆ. ಹಾಗಾಗಿ, ಈ ಮನೆಯನ್ನು ನಾನು ಕಡೆವರೆಗೂ ಚೆನ್ನಾಗಿ ಕಾಪಾಡಿಕೊಳ್ಳುವೆ.'

- 'ನನ್ನ ಪತ್ನಿ. ಆಕೆಯ ಜೊತೆಗಿರಲು ಈಗಾಗಲೇ ನೂರಾರು ಸಮಸ್ಯೆಗಳನ್ನು ದೈರ್ಯವಾಗಿ ಎದುರಿಸಿದ್ದೇನೆ. ಲಾಂಗ್ ಡಿಸ್ಟೆನ್ಸ್, ಧಾರ್ಮಿಕ ಬೇಧ, ಕುಟುಂಬಗಳ ವಿರೋಧ ಎಲ್ಲದರ ಬಳಿಕ- ಎಳು ವರ್ಷಗಳ ಹೋರಾಟದ ನಂತರ ಅವಳೊಂದಿಗಿರುವ ಅವಕಾಶ ಸಿಕ್ಕಿದೆ. ಆಕೆ ನನಗೆ ಸಿಕ್ಕಿರುವ ಅನರ್ಘ್ಯ ರತ್ನ. ನಾನವಳನ್ನು ಜೀವನದುದ್ದಕ್ಕೂ ಯಾವುದೇ ನೋವಾಗದಂತೆ, ಖುಷಿಯಾಗಿರುವಂತೆ ಕಾಪಾಡಿಕೊಳ್ಳುತ್ತೇನೆ.'

ನೀವು ಅವರಿಗಿಂತ ಬೆಟರ್ ಆಗಬೇಕಾ? ಇದು ಮೈಂಡ್ ಗೇಮ್!

- 'ನಾನು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಾ 10 ವರ್ಷಗಳಾಗಿವೆ. ಬಹಳಷ್ಟು ಭಯಾನಕ ಸನ್ನಿವೇಶಗಳನ್ನು ಎದುರಿಸಿದ್ದೇನೆ. ಯಾವಾಗಲೂ ನನ್ನನ್ನು ಹಿಡಿದು ನಿಲ್ಲಿಸಿದ ಶಕ್ತಿ ಎಂದರೆ ನನ್ನೊಳಗಿನ ದನಿ- ಅದು ನಿನ್ನ ಜನರನ್ನು ನೀನು ಕಾಪಾಡಿಕೋ- ದೇಶವನ್ನು ರಕ್ಷಿಸು ಎಂದು ಪದೇ ಪದೆ ಹೇಳುತ್ತದೆ. ಈ ದನಿಯನ್ನು ನಾನು ಸದಾ ಫಾಲೋ ಮಾಡುತ್ತೇನೆ.'

- 'ನನ್ನ ಅವಳಿ ಮಕ್ಕಳು. ನಾನು ತಂದೆಯಾಗಲು ವಿವಾಹವಾದ ಬಳಿಕ 7 ವರ್ಷ ಕಾದಿದ್ದೇನೆ. ತಂದೆಯೇ ಆಗುವುದಿಲ್ಲವೇನೋ ಎಂಬ ಆತಂಕವನ್ನು ಬಹಳಷ್ಟು ಬಾರಿ ಅನುಭವಿಸಿದ್ದೇನೆ. ನಿರಾಶೆಯ ಕಪ್ಪು ಕಾರ್ಮೋಡ ಕವಿದಿದ್ದ ಮನೆಗೆ ಬೆಳಕಾಗಿ ಬಂದಿದ್ದಾರೆ ನನ್ನಿಬ್ಬರು ಅವಳಿ ಸುಪುತ್ರಿಯರು. ಅವರನ್ನು ಜತನದಿಂದ ನೋಡಿಕೊಳ್ಳುವುದರಲ್ಲೇ ನನ್ನ ಖುಷಿಯಿದೆ.'