Asianet Suvarna News Asianet Suvarna News

ರಾಜಸ್ಥಾನದ ರಾಷ್ಟ್ರಕವಿ-ಪದ್ಮಶ್ರೀ ಕನ್ಹಯ್ಯಲಾಲ್‌ ಸೇಠಿಯಾ!

ಹಿಂದಿನ ಬಿಕಾನೇರ್‌ ಸಂಸ್ಥಾನದ ಸುಜಾನ್‌ಘರ್‌ಗೆ ಸೇರಿದ ಶ್ರೀ ಕನ್ಹಯ್ಯಲಾಲ್‌ ಸೇಠಿಯಾ ಪ್ರತಿಭಾವಂತ ಕವಿ, ಅಪ್ಪಟ ದೇಶಪ್ರೇಮಿ ಹಾಗೂ ಮಾನವೀಯ ದೃಷ್ಟಿಕೋನದ ವ್ಯಕ್ತಿ. ರಾಜಸ್ಥಾನೀ ಭಾಷೆಯ ಬನಿಯನ್ನು ಗುರುದೇವ ಟಾಗೋರರಿಂದ ಹಿಡಿದು ಸ್ವತಂತ್ರ ಭಾರತದ ಕೇಂದ್ರ ಸರಕಾರದವರೆಗೆ ಹಲವರಿಗೆ ಮನವರಿಕೆ ಮಾಡಿಕೊಟ್ಟು ಆ ಭಾಷೆಗೆ ಸಾಂವಿಧಾನಿಕ ಮಾನ್ಯತೆ ದೊರೆಯುವಂತೆ ಮಾಡುವಲ್ಲಿ ಈ ಕವಿಯ ಪಾತ್ರದೊಡ್ಡದು

Unknown facts about Rajasthani poet Padma Shri Kanhaiyalal sethia
Author
Bangalore, First Published Sep 15, 2019, 9:25 AM IST

ಡಾ. ಎಸ್‌.ಪಿ. ಪದ್ಮಪ್ರಸಾದ್‌

ಕವಿತೆ​-

ಭಾಷೆಯ ತಾಕತ್ತನ್ನು ತೂಗುವ ತಕ್ಕಡಿ

ಭಾಷೆಯ ಕಟ್ಟಿಗೆ ಹೇರಿನ ನಡುವೆ

ಅದೊಂದು ಗಂಧದ ಕಟ್ಟಿಗೆ

ಪೂರ್ಣ ಸತ್ಯವೆಂದರೆ

ಕವಿತೆ

ಅದು-ಹೊಸತೂಅಲ್ಲ

ಹಳತೂ ಅಲ್ಲ.

ಅದು ಮಾನವನೆದೆಯಲಿ ಉರಿವ

ಕೆಂಡದ ಸಂಕೇತ

ಅದು? ವಿವರಣೆಗೆ ಸಿಗದ

ಅನುಭವ

ಕವಿತೆ- ಕುಸ್ತಿಯಾಟದ ಕಣವಲ್ಲ

ಅದುಆತ್ಮಕ್ಕೊಂದು ಪರಿಹಾರವೇ ವಿನಾ

ಮಣ್ಣ ಕಾಯಕ್ಕೆ ಕೊಡುವ ಬಾಡಿಗೆಯಲ್ಲ

(ಲೀಲ್‌ಟಾನ್ಸ್‌ - ಸಂಗ್ರಹದಿಂದ. ಅನು- ಪದ್ಮಪ್ರಸಾದ್‌)

- ಇಂಥ ನೂರಾರು ಕವಿತೆಗಳನ್ನು ಬರೆದು ರಾಜಸ್ಥಾನಿ ಭಾಷೆಯ ಮಹಾಕವಿ ಎನ್ನಿಸಿಕೊಂಡ ಪದ್ಮಶ್ರೀ ಕನ್ಹಯ್ಯಲಾಲ್‌ ಸೇಠಿಯಾ ಅವರಜನ್ಮ ಶತಾಬ್ದಿ ವರ್ಷವಿದು. ಸಪ್ಟೆಂಬರ್‌ 11 ರಿಂದ ಒಂದು ವರ್ಷಕಾಲ ಅವರ ಜನ್ಮ ಶತಾಬ್ದಿಯನ್ನು ಹಲವು ಸಾಹಿತ್ಯ ಸಂಸ್ಥೆಗಳು ಸೇರಿಆಚರಿಸುತ್ತಿವೆ. (ಜನನ 11-7-1919)

 

1939ರಲ್ಲಿ ಬ್ರಿಟಿಷ್‌ ಆಡಳಿತ ಹಾಗೂ ಸಂಸ್ಥಾನೀಕರ ಇಚ್ಛೆಗೆ ವಿರುದ್ಧವಾಗಿ ಭಾರತದ ಧ್ವಜವನ್ನು ಕಲ್ಕತ್ತೆಯಿಂದ ತಂದು ಮೆರವಣಿಗೆ ಮಾಡಿದಾಗ ಈ ಕವಿಗೆ ಇನ್ನೂ ಕೇವಲ ಇಪ್ಪತ್ತು ವರ್ಷ. ಸಂಸ್ಥಾನದ ಅಧಿಕಾರಿಗಳು ಇವರನ್ನುಕರೆದು ಎಚ್ಚರಿಕೆ ನೀಡಿದ್ದರೂಅದಕ್ಕೆ ಸೊಪ್ಪು ಹಾಕಿರಲಿಲ್ಲ ಈ ಹುಡುಗ. ಈ ಉಜ್ವಲ ದೇಶಾಭಿಮಾನ ಅವರಲ್ಲಿ ಕೊನೆಯವರೆಗೂ ಇತ್ತು. ಬಿಕಾನೇರ್‌ನ ರಾಜರ ಸಲಹಾ ಮಂಡಳಿಯಲ್ಲಿ ಇವರ ಕುಟುಂಬಕ್ಕೆ ಗಣ್ಯಸ್ಥಾನವಿತ್ತು.

ಶ್ರೀ ಕನ್ಹಯ್ಯಲಾಲ್‌ ತ್ರಿಭಾಷಾ ಕವಿ. ಬಿಕಾನೇರ್‌ ಪರಿಸರದಲ್ಲಿ ಬಳಸಲ್ಪಡುವ ರಾಜಸ್ಥಾನಿಯ ಆಡುಭಾಷೆ ಮಾರವಾಡಿಯಲ್ಲಿ 15, ಹಿಂದಿಯಲ್ಲಿ 18 ಹಾಗೂ ಉರ್ದುವಿನಲ್ಲಿ ಎರಡು ಕೃತಿಗಳನ್ನು ಅವರು ರಚಿಸಿದ್ದಾರೆ. ಹೆಚ್ಚಿನ ಪಾಲು ಕವಿತೆಗಳದ್ದು. ಸ್ವಾತಂತ್ರ್ಯಪೂರ್ವದಲ್ಲಿ ತಮ್ಮ ಕವಿತೆಗಳಿಂದಾಗಿ ಪ್ರಭುತ್ವದ ಕೆಂಗಣ್ಣಿಗೂ ಅವರು ಗುರಿಯಾದದ್ದುಂಟು. ಅವರ ಕವಿತೆಗಳು ಹಲವಾರು ಭಾಷೆಗಳಿಗೆ ಅನುವಾದಗೊಂಡಿವೆ. ಅವರ ‘ಲೀಲ್‌ಟಾನ್ಸ್‌’ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯಅಕಾಡೆಮಿ ಬಹುಮಾನ ದೊರೆತಿದೆ. ಅದು ಇಂಗ್ಲೀಷಿಗೂ ಅನುವಾದಗೊಂಡಿದೆ. (ಪ್ರಸ್ತುತದಲ್ಲಿ ನಾನು ಅದನ್ನು ಕೇಂದ್ರ ಸಾಹಿತ್ಯಅಕಾಡೆಮಿಗಾಗಿ ಕನ್ನಡಕ್ಕೆ ಅನುವಾದಿಸುತ್ತಿದ್ದೇನೆ.) ಇವರ ‘ಅಗ್ನಿವೀಣಾ’ ಮತ್ತು ‘ಮೀನ್‌ಝರ್‌’ ಸಂಕಲನಗಳ ಕವಿತೆಗಳು (1943) ಸ್ವಾತಂತ್ರ್ಯಕ್ಕಾಗಿ ಹೋರಾಡುವಂತೆ ಜನರನ್ನು ಪ್ರೇರಿಸುತ್ತಿದ್ದವೆಂಬ ಕಾರಣಕ್ಕಾಗಿ ಅವರ ಮೇಲೆ ಖಟ್ಲೆ ಹಾಕಲಾಗಿತ್ತು. ತಮ್ಮ ಹೋರಾಟದ ಮನೋಭಾವದಿಂದಾಗಿ ಈ ಕವಿ ಅದೆಷ್ಟೋ ಖಟ್ಲೆಗಳನ್ನು ಮೈಮೇಲೆ ಎಳೆದುಕೊಂಡಿದ್ದರು.

ಶ್ರೀ ಕನ್ಹಯ್ಯಲಾಲ್‌ ಸೇಠಿಯಾ ತಾವು ಪಡೆಯದ ಮಾನ - ಸನ್ಮಾನಗಳೇ ಇಲ್ಲವೆನ್ನುವಷ್ಟುಗೌರವಗಳನ್ನು ಪಡೆದುಕೊಂಡಿದ್ದಾರೆ. ರಾಜಸ್ಥಾನ, ಬಿಹಾರ, ಬಂಗಾಳದ ಸರ್ಕಾರಗಳು, ಸಾಹಿತ್ಯ ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ. ತಮಗೆ ಬಂದ ಸನ್ಮಾನ / ಬಹುಮಾನದಯಾವ ಹಣವನ್ನೂಅವರು ಮನೆಗೆ ತರದೆ ದಾನ ಮಾಡಿದ್ದಾರೆ. ಅವರಕವಿತೆ ‘ಧರ್‌ತೀ ಧೋರಾಹಿ’ ರಾಜಸ್ಥಾನದ ನಾಡಗೀತೆ ಎಂಬಷ್ಟುಪ್ರಸಿದ್ಧವಾಗಿದೆ. ಅದನ್ನು ಆಧರಿಸಿ ಗೌತಮ್‌ಘೋಷ್‌ ತಯಾರಿಸಿದ ಸಾಕ್ಷ್ಯಚಿತ್ರ ಸ್ವರ್ಣಕಮಲ ಪ್ರಶಸ್ತಿ ಪಡೆದಿದೆ.

ಭಾರತ ವಿಭಜನೆಯ ನಂತರ ರಾಜಸ್ಥಾನದ ಕಡೆ ಓಡಿಬಂದ ನಿರಾಶ್ರಿತರಿಗಾಗಿ ಈ ಕವಿ ಶಾಲೆಗಳನ್ನು ನಡೆಸಿದರು.ಚೀನಾಯುದ್ಧದ ಸಮಯದಲ್ಲಿ ಇವರ ಕೆಲವು ಕವಿತೆಗಳ ಸಂಕಲನವನ್ನೂ ಭಾರತ ಸರ್ಕಾರ ಯೋಧರಲ್ಲಿ ಸ್ಫೂರ್ತಿತುಂಬಲು ಅವರಿಗೆ ಹಂಚಿತ್ತು. ಆಬೂ ಪ್ರದೇಶವನ್ನು ಗುಜರಾತ್‌ಗೆ ಸೇರಿಸಬೇಕೆಂಬ ಹಂಚಿಕೆ ಇದ್ದಾಗ ಜನರನ್ನು ಸಂಘಟಿಸಿ ಹೋರಾಡಿ ಅದು ರಾಜಸ್ಥಾನದಲ್ಲಿ ಉಳಿಯುವಂತೆ ಮಾಡಿದವರು ಈ ಕವಿ ಸೇಠಿಯಾ. ಇಂಥ ಅನೇಕ ಜನಪರ ಹೋರಾಟಗಳನ್ನು ಕನ್ಹಯ್ಯಲಾಲ್‌ಜೀ ನಡೆಸಿ ಪೂಜ್ಯರಾಗಿದ್ದಾರೆ.

ಇವರು 1971ರಿಂದ ಕೋಲ್ಕೋತ್ತಾದಲ್ಲಿತಮ್ಮ ಮಗ ಜೈಪ್ರಕಾಶ್‌ಅವರ ಮನೆಯಲ್ಲಿಇದ್ದುತಮ್ಮ 91ನೇ ವಯಸ್ಸಿನಲ್ಲಿ ಅಲ್ಲಿಯೇತೀರಿಕೊಂಡರು (11-11-2008).

ಇಂಥ ಮಹಾಕವಿಯಜನ್ಮಶತಾಬ್ದಿ ವರ್ಷವಿದು. ಕೇಂದ್ರ ಸಾಹಿತ್ಯಅಕಾಡೆಮಿ ಹಾಗೂ ಇತರ ಕೆಲವು ಸಂಸ್ಥೆಗಳು ಸೇರಿ ಈ ಸಂದರ್ಭದಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಜೈಪುರ ಸಾಹಿತ್ಯ ಸಮಾವೇಶದಲ್ಲಿ ‘ಕನ್ಹಯ್ಯಲಾಲ್‌ ಸೇಠಿಯಾಕಾವ್ಯ ಪುರಸ್ಕಾರ’ ವೆಂದುಒಂದು ಲಕ್ಷ ರೂಪಾಯಿಗಳನ್ನು ಈಗ ಮೂರ್ನಾಲ್ಕು ವರ್ಷಗಳಿಂದ ನೀಡಲಾಗುತ್ತಿದೆ. ಶ್ರೀ ಜೈಪ್ರಕಾಶ್‌ ಸೇಠಿಯಾ ‘ಕೆ.ಎಲ್‌. ಸೇಠಿಯಾ ಫೌಂಡೇಷನ್‌’ ಎಂಬ ಟ್ರಸ್ಟ್‌ ಸ್ಥಾಪಿಸಿ ತಂದೆಯ ಸಾಹಿತ್ಯ ಪ್ರಸಾರ ಮಾಡುತ್ತಿದ್ದಾರೆ. ಇವರು ನನ್ನ ಮಿತ್ರರೆಂಬ ಹೆಮ್ಮೆ ನನ್ನದು. ಈ ಕುಟುಂಬದ ಕೆಲವರು ಬೆಂಗಳೂರು, ಚೆನ್ನೈಗಳಲ್ಲೂ ಇದ್ದಾರೆ.

Follow Us:
Download App:
  • android
  • ios