ಸೈಕಲಲ್ಲಿ ನೀರು ತಂದು ಗಿಡ ಬೆಳೆಸಿದ ಪುಣ್ಯಾತ್ಮ

First Published 27, Mar 2018, 6:05 PM IST
This man growing roadside tree by bringing water by bicycle
Highlights

ಕಾಡು ಮಲ್ಲೇಶ್ವರ ಬೆಟ್ಟ ನಗರದಿಂದ ಸುಮಾರು 3 ಕಿಲೋ ಮೀಟರ್ ದೂರದಲ್ಲಿದೆ. ಬ್ರಹ್ಮಚೈತನ್ಯ ಅವರು ಉರಿ ಬಿಸಿಲನ್ನೂ ಲೆಕ್ಕಿಸದೇ ಹತ್ತು ಕ್ಯಾನ್‌ಗಳಲ್ಲಿ ನೀರು ತುಂಬಿಕೊಂಡು ಸೈಕಲ್‌ಗೆ ಹಾಕಿಕೊಂಡು ದುರ್ಗಮ ಹಾದಿಯಲ್ಲಿ ಸಾಗಿ ಗಿಡಗಳಿಗೆ ನೀರು ಹಾಕಿ ಪೋಷಿಸುತ್ತಿರುವುದು ಇತರರಿಗೆ ಸ್ಫೂರ್ತಿಯಾಗಿದೆ.

- ಜಿ.ಎಲ್. ಶಂಕರ್
ವೃತ್ತಿಯಾದ ಯಾವುದೇ ಸರ್ಕಾರಿ ನೌಕರ ಅಥವಾ ಅಧಿಕಾರಿ ಸಂಪಾದನೆ ಬರುವ ಮತ್ತೊಂದು ಕೆಲಸದಲ್ಲಿ ತೊಡಗುವುದು ಸಹಜ, ಆದರೆ ಇಲ್ಲೊಬ್ಬ ನಿವೃತ್ತ ಸರ್ಕಾರಿ ನೌಕರ ಪ್ರಕೃತಿ ಪ್ರೀತಿ ಬೆಳೆಸಿಕೊಂಡು ಪರಿಸರ ಅಭಿವೃದ್ಧಿಯಲ್ಲಿ ತೊಡಗಿರುವುದು ಸಾರ್ವಜನಿಕರಿಗೆ ಮಾದರಿಯಾಗಿದೆ. 

ಚಿಂತಾಮಣಿ ನಗರಕ್ಕೆ ಹೊಂದಿಕೊಂಡಿರುವ ಕಾಡು ಮಲ್ಲೇಶ್ವರ ಬೆಟ್ಟಕ್ಕೆ ಎಂದಾದರೂ ನೀವು ತೆರಳಿದರೆ ಅಲ್ಲಿ 75 ವರ್ಷ ದಾಟಿದ ವೃದ್ಧರೊಬ್ಬರು ಸೈಕಲ್‌ಗೆ ನೀರಿನ ಕ್ಯಾನ್ ಗಳನ್ನು ನೇತುಹಾಕಿಕೊಂಡು ಬೆಟ್ಟ ಹತ್ತಿ ಬಂದು ಅಲ್ಲಿ ನೆಟ್ಟಿರುವ ನಾನಾ ಬಗೆಯ ಗಿಡಗಳಿಗೆ ನೀರುಣಿಸುವ ಕೆಲಸ ಮಾಡುವುದು ಕಾಣಿಸುತ್ತದೆ. ಇಷ್ಟಕ್ಕೂ ಈ ಬೆಟ್ಟ ಇವರದಲ್ಲ, ಇವರು ವೇತನ ಪಡೆದು ಈ ಕೆಲಸ ಮಾಡುತ್ತಿಲ್ಲ, ಬದಲಿಗೆ ಪರಿಸರದ ಮೇಲಿರುವ ಪ್ರೀತಿಯಿಂದ ಇಂತಹ ಕೆಲಸಕ್ಕೆ ಮುಂದಾಗಿದ್ದಾರೆ ಎಂಬುದು ಅವರನ್ನು ಮಾತನಾಡಿಸಿದಾಗಲೇ ಅರಿವಿಗೆ ಬರಲಿದೆ. 

ಸೈಕಲ್‌ನಲ್ಲಿ ಹೊತ್ತು ತರುತ್ತಾರೆ ನೀರು
ಹೀಗೆ ಸೈಕಲ್ ಮೇಲೆ ನೀರು ಹೊತ್ತು ತಂದು ಗಿಡಿಗಳನ್ನು ಪೋಷಿಸುತ್ತಿರುವ ವ್ಯಕ್ತಿಯ ಹೆಸರು ಬ್ರಹ್ಮಚೈತನ್ಯ, ಇವರು ಮೂಲತಃ ಗೌರಿಬಿದನೂರು ತಾಲೂಕಿನವರು. ಇವರಿಗೆ 3 ಹೆಣ್ಣು ಹಾಗೂ ಒಬ್ಬ ಗಂಡು ಮಗನಿದ್ದು, ಎಲ್ಲರೂ ಸರ್ಕಾರಿ ನೌಕರಿಯಲ್ಲಿದ್ದಾರೆ. ಇವರಿಗೂ ನಿವೃತ್ತಿ ವೇತನ ಬರುವುದರಿಂದ ವಿಶ್ರಾಂತಿ ಜೀವನ ನಡೆಸಬಹುದಾಗಿತ್ತು. ಆದರೆ ಕಳೆದ 10 ವರ್ಷಗಳಿಂದ ಪರಿಸರ ಪ್ರೀತಿ ಹತ್ತಿದೆ. ಕಾಡು ಮಲ್ಲೇಶ್ವರ ಬೆಟ್ಟ ನಗರದಿಂದ ಸುಮಾರು 3 ಕಿಲೋ ಮೀಟರ್ ದೂರದಲ್ಲಿದೆ. ಬ್ರಹ್ಮಚೈತನ್ಯ ಅವರು ಉರಿ ಬಿಸಿಲನ್ನೂ ಲೆಕ್ಕಿಸದೇ ಹತ್ತು ಕ್ಯಾನ್‌ಗಳಲ್ಲಿ ನೀರು ತುಂಬಿಕೊಂಡು ಸೈಕಲ್‌ಗೆ ಹಾಕಿಕೊಂಡು ದುರ್ಗಮ ಹಾದಿಯಲ್ಲಿ ಸಾಗಿ ಗಿಡಗಳಿಗೆ ನೀರು ಹಾಕಿ ಪೋಷಿಸುತ್ತಿರುವುದು ಇತರರಿಗೆ ಸ್ಫೂರ್ತಿಯಾಗಿದೆ. 

ತೇವಾಂಶ ತಡೆಯಲು ನೂತನ ವಿಧಾನ
ಚಿಂತಾಮಣಿ ಇರುವುದು ಬಯಲು ಸೀಮೆಯಲ್ಲಿ, ಇಲ್ಲಿ ಬಿಸಿಲು ಹೆಚ್ಚು. ಹಾಗಾಗಿಯೇ ಬಿಸಿಲಿನ ಬೇಗೆಯಿಂದ ಗಿಡಗಳನ್ನು ರಕ್ಷಿಸುವ ಜೊತೆಗೆ ತೇವಾಂಶ ಹಿಡಿದಿರಲು ನೂತನ ತಾಂತ್ರಿಕತೆಯನ್ನು ಬ್ರಹ್ಮ ಚೈತನ್ಯ ಅವರು ಬಳಸಿದ್ದಾರೆ. ಗಿಡದ ಬುಡದಿಂದ ಆರ್ಧ ಅಡಿ ದೂರದಲ್ಲಿ ಒಂದು ಪ್ಲಾಸ್ಟಿಕ್ ಡಬ್ಬ ಹೂತಿಟ್ಟು, ಅದಕ್ಕೆ ಸಣ್ಣ ರಂಧ್ರಗಳನ್ನು ಕೊರೆದು ಡಬ್ಬದಲ್ಲಿ ನೀರು ತುಂಬುತ್ತಾರೆ. ಈ ಡಬ್ಬದಿಂದ ಒಂದೊಂದು ಹನಿ ನೀರು ಸೋರುವುದರಿಂದ ಪ್ರತಿ ದಿನ ಗಿಡದ ಬೇರುಗಳಿಗೆ ತೇವಾಂಶ ಸಿಕ್ಕಿ ಗಿಡದ ಬೆಳವಣಿಗೆ ಉತ್ತಮವಾಗಿರುತ್ತದೆ ಎನ್ನುತ್ತಾರೆ ಅವರು.

ಹಣ್ಣಿನ ಗಿಡಗಳೇ ಹೆಚ್ಚು
ಪ್ರಸಿದ್ಧ ಕಾಡು ಮಲ್ಲೇಶ್ವರ ಬೆಟ್ಟದ ತಪ್ಪಲಿನ ರಸ್ತೆಯ ಇಕ್ಕೆಲಗಳಲ್ಲಿ ಬ್ರಹ್ಮ ಚೈತನ್ಯ ಅವರು ಪೋಷಿಸುತ್ತಿರುವ ಎಲ್ಲ ಗಿಡಗಳೂ ಹಣ್ಣಿನ ಗಿಡಗಳೇ ಆಗಿವೆ. ಇವು ಬೆಳೆದು ಪಸಲು ಬಿಟ್ಟರೆ ಪ್ರಾಣಿ ಪಕ್ಷಿಗಳು ಮತ್ತು ಜನರು ಹಣ್ಣು ತಿಂದರೆ ತಾವು ಈಗ ಪಡುತ್ತಿರುವ ಶ್ರಮಕ್ಕೆ ಪರಿಪೂರ್ಣತೆ ಸಿಗಲಿದೆ ಎನ್ನುತ್ತಾರೆ ಅವರು.  

ಥ್ಯಾಂಕ್ಸ್ ಹೇಳಿ
ಕೃಷಿ ಇಲಾಖೆ ನೌಕರರಾಗಿದ್ದ ಬ್ರಹ್ಮ ಚೈತನ್ಯ ಅವರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಯ ಮಧುಗಿರಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಇವರು ಕರ್ತವ್ಯ ನಿರ್ವಹಿಸಿದ ಪ್ರದೇಶಗಳೆಲ್ಲಾ ಗಿಡ ನೆಡುವುದು, ಪೋಷಿಸುವ ಕಾಯಕದಲ್ಲಿ ನಿರತರಾಗಿದ್ದ ಇವರು ನಿವೃತ್ತಿಯ ನಂತರ ಇದೇ ಕೆಲಸವನ್ನು ಪೂರ್ಣ ಪ್ರಮಾಣದಲ್ಲಿ ಮಾಡುತ್ತಿದ್ದು, ಇವರ ಕೆಲಸಕ್ಕೆ ಪತ್ನಿ ಮತ್ತು ಮಕ್ಕಳೂ ಸಾಥ್ ನೀಡುತ್ತಾರೆ ಎನ್ನುತ್ತಾರೆ ಬ್ರಹ್ಮ ಚೈತನ್ಯ. ನಿವೃತ್ತಿ ನಂತರದ ೧೫ ವರ್ಷಗಳಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಿರುವ ಬ್ರಹ್ಮ ಚೈತನ್ಯ ಅವರು ಈಗಾಗಲೇ ನೂರಾರು ಗಿಡಗಳನ್ನು ಬೆಳೆಸಿದ್ದಾರೆ. ಆದರೆ ಕಾಡುಮಲ್ಲೇಶ್ವರ ಬೆಟ್ಟದಲ್ಲಿ ನೆಟ್ಟಿರುವ ಗಿಡಗಳು ಬೆಳೆದು ಹಣ್ಣು ನೀಡುವುದಕ್ಕಾಗಿ ಅವರು ಆಸೆಗಣ್ಣಿನಿಂದ ಕಾಯುತ್ತಿದ್ದಾರೆ. ಅವರ ಆಸೆ ಆದಷ್ಟು ಬೇಗ ಈಡೇರಲಿ ಎಂದು ಹಾರೈಸೋಣ. ಅಂದ ಹಾಗೆ ಪರಿಸರ ಪ್ರೇಮಿ ಬ್ರಹ್ಮ ಚೈತನ್ಯ ಅವರನ್ನು ಸಂಪರ್ಕಿಸಿ ಒಂದು ಅಭಿನಂದನೆ ಸಲ್ಲಿಸಿದರೆ ಅವರ ಉತ್ಸಾಹ ಜಾಸ್ತಿಯಾಗಬಹುದು. ಬ್ರಹ್ಮಚೈತನ್ಯ ಅವರ ಮೊಬೈಲ್- 9980897114 
 

loader