ತುಳುನಾಡ ಋುತು ವೈಭವ!
ಬೇಸಿಗೆ ಬಂದರೆ ತುಳುನಾಡು ರಂಗೇರುತ್ತದೆ. ನಿತ್ಯವೂ ಉತ್ಸವ, ಜಾತ್ರೆಗಳ ಸುಗ್ಗಿ. ದ್ರಾವಿಡ ಹಾಗೂ ವೈದಿಕ ಆಚರಣೆಗಳು ಸಮನ್ವಯದಿಂದ ನಡೆಯುವುದು ಮತ್ತೊಂದು ವಿಶೇಷ.
ಕೃಷ್ಣಮೋಹನ ತಲೆಂಗಳ
ಭೂತ ಫೋಟೋ: ಹರ್ಷಿತ್ ಬಲ್ಲಾಳ್
ದಕ್ಷಿಣ ಕನ್ನಡ, ಉಡುಪಿ, ಕೇರಳದ ಕಾಸರಗೋಡು ಜಿಲ್ಲೆ ಸೇರಿದ ಕರಾವಳಿಯ ತುಳು ನಾಡಿನಲ್ಲಿ ಬೇಸಿಗೆಯಲ್ಲಿ ಜಾತ್ರೆ, ನೇಮ, ಯಕ್ಷಗಾನದ ಭರ್ಜರಿ ಋುತು. ಮಳೆಗಾಲ ಮುಗಿದ ತಕ್ಷಣ ಶುರುವಾಗುವ ಸಾಲು ಸಾಲು ಪರ್ವಗಳು ಬೇಸಿಗೆ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿರುತ್ತದೆ. ದೇವಸ್ಥಾನದ ವಾರ್ಷಿಕ ಜಾತ್ರೆಗಳು, ಬ್ರಹ್ಮಕಲಶೋತ್ಸವಗಳು, ನೇಮೋತ್ಸವ, ನಾಗಮಂಡಲೋತ್ಸವಗಳು, ಯಕ್ಷಗಾನ ತಿರುಗಾಟಗಳು ಊರಿನ ಬಯಲುಗಳಲ್ಲಿ, ಗುಡಿಗಳಲ್ಲಿ ಹಬ್ಬದ ವಾತಾವರಣಗಳನ್ನು ಸೃಷ್ಟಿಸಿರುತ್ತವೆ.
ಉಡುಪಿಯ ಅಂಬಲ್ಪಾಡಿ ಮಹಾಕಾಳಿ ಶಕ್ತಿ ಅಪಾರ!
ಚೆಂಡೆ ಸದ್ದು, ದೃಶ್ಯವೈಭವ
ಯಕ್ಷಗಾನ ಬಯಲಾಟ, ತಾಳಮದ್ದಳೆ, ಗಾನವೈಭವಗಳು, ರಥೋತ್ಸವಗಳು, ಭೂತಕೋಲ, ಜಾತ್ರೆ, ಅನ್ನದಾನÜ, ಗಿವಿಗಡಚಿಕ್ಕುವ ಮೈಕು, ದೊಡ್ಡ ದೊಡ್ಡ ಪೆಂಡಾಲು, ಶಾಲು ಹಾಕಿದ ಕಾರ್ಯಕರ್ತರು, ಇವೆಲ್ಲಕ್ಕೂ ಪೂರಕವಾಗಿ ಹೊರೆಕಾಣಿಕೆ ಮೆರವಣಿಗೆಗಳು, ಉತ್ಸವದ ಚಪ್ಪರ ಮುಹೂರ್ತಗಳು, ದೇಣಿಗೆ ಸಂಗ್ರಹಗಳು ಕರಾವಳಿಯ ಊರೂರುಗಳಲ್ಲೂ ಕಾಣಸಿಗುವ ದೃಶ್ಯಗಳು. ‘ಎರ್ಮಾಳು ಜಪ್ಪು, ಖಂಡೇವು ಅಡೆಪು’ ಎಂಬ ನುಡಿಗಟ್ಟಿದೆ. ಉಡುಪಿ ಜಿಲ್ಲೆಯ ಎರ್ಮಾಳು ದೇವಸ್ಥಾನದಲ್ಲಿ ಮಳೆಗಾಲ ಮುಗಿದ ತಕ್ಷಣ ಕರಾವಳಿಯ ಮೊದಲ ಜಾತ್ರೆ ಆರಂಭವಾಗುತ್ತದೆ. ಮಂಗಳೂರು ಸಮೀಪದ ಚೇಳಾಯರು ಖಂಡಿಗೆಯಲ್ಲಿ ನಡೆಯುವುದು ತುಳುನಾಡಿನ ಬೇಸಿಗೆಯ ಕೊನೆಯ ಜಾತ್ರೆ ಎಂದು ಪ್ರಸಿದ್ಧಿ ಪಡೆದಿದೆ.
ತುಳುನಾಡಿನಲ್ಲಿ ಸಾವಿರಾರು ದೇವಸ್ಥಾನ, ದೈವಸ್ಥಾನಗಳ ಜೊತೆಯಲ್ಲಿ 242 ಕೋಟಿ ಚೆನ್ನಯರ ಗರಡಿಗಳಿವೆ. ಕಾಂತಾಬೂರೆ ಬೂದಬಾರೆ ಅವಳಿ ವೀರರ ಗರಡಿ ಕೂಡಾ ಇದೆ. ದೈವಸ್ಥಾನಗಳಲ್ಲಿ ಹಿಂದೆ ದ್ರಾವಿಡ ಮೂಲದ ಆಚರಣೆಗಳು ನಡೆಯುತ್ತಿದ್ದರೆ ಈಗೀಗ ವೈದಿಕ ಕ್ರಮಗಳಲ್ಲೂ ನೇಮಗಳು ನಡೆಯುತ್ತಿವೆ ಎನ್ನುತ್ತಾರೆ ವಿದ್ವಾಂಸರು. ಕರಾವಳಿಯ ಎಲ್ಲಾ ಆರಾಧನೆಗಳು ಪ್ರಕೃತಿ ಪೂಜೆ ಹಾಗೂ ಕೃಷಿ ಮೂಲದಿಂದ ಹುಟ್ಟಿಕೊಂಡಂಥವು. ಆದರೆ ಕೃಷಿ ನಾಶವಾಗುತ್ತಾ ಬಂದ ಹಾಗೆ ಆರಾಧನಾ ಪದ್ಧತಿಯೂ ಬದಲಾಗುತ್ತಿದೆ ಎನ್ನುತ್ತಾರೆ ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್. ಕಳೆದ ಐದು ದಶಕಗಳಿಂದೀಚೆಗೆ ಕರಾವಳಿ ಭಾಗದಲ್ಲಿ ನಾಗಮಂಡಲೋತ್ಸವವೂ ವಿಜೃಂಭಣೆಯಿಂದ ನಡೆಯುತ್ತಿವೆ.
ಸಹಬಾಳ್ವೆಯೇ ಮುಖ್ಯವಾದ ತುಳುನಾಡಿನ ಜಾತ್ರೆಗಳಲ್ಲಿ ಹೂ ಮಾರುವವರು ಒಂದು ಸಮುದಾಯದವರು, ವೀಳ್ಯ, ಮಲ್ಲಿಗೆ ಬೆಳೆದು ನೇಯ್ದು ಕೊಡುವವರು ಇನ್ನೊಂದು ಸಮುದಾಯದವರು, ದೇವರ ರಥ ಕಟ್ಟುವವರು ಇನ್ನೊಂದು ವರ್ಗದವರು, ಬೆಡಿ ಸಿಡಿಸುವವರು ಇನ್ನೊಬ್ಬರು. ದೇವರಿಗೆ ಡೋಲು ವಾದ್ಯ ಬಾರಿಸುವವರು ಮತ್ತೊಬ್ಬರು. ಸಾಮರಸ್ಯಕ್ಕೆ ನಿದರ್ಶನದಂತಿರುತ್ತವೆ ಈ ಜಾತ್ರೆಗಳು. ಆದರೆ ಈಗೀಗ ವೈಭವೀಕರಣ, ವಾಣಿಜ್ಯೀಕರಣದಿಂದ ಮೂಲ ಆಚರಣೆಗಳಿಗೆ ಧಕ್ಕೆಯಾಗುತ್ತಿರುವುದು ಮಾತ್ರ ವಿಷಾದನೀಯ. -ಡಾ.ಗಣೇಶ್ ಅಮೀನ್ ಸಂಕಮಾರ್, ಜಾನಪದ ವಿದ್ವಾಂಸ, ಮಂಗಳೂರು
ಜಾತ್ರೆ ನೆನಪಿಟ್ಟುಕೊಳ್ಳಲು ಕ್ಯಾಲೆಂಡರೇ ಬೇಡ
ಕುಂಬಳೆ ಬೆಡಿ, ಪುತ್ತೂರು ಬೆಡಿ, ಉಳ್ಳಾಲ್ತಿ ಮೆಚ್ಚಿ, ಪೊಳಲಿ ಚೆಂಡು, ಬಪ್ಪನಾಡು ಜಾತ್ರೆ, ಧರ್ಮಸ್ಥಳ ಲಕ್ಷದೀಪೋತ್ಸವ, ಕುಕ್ಕೆ ಸುಬ್ರಹ್ಮಣ್ಯದ ಚಂಪಾಷಷ್ಠಿ, ಕಂಕನಾಡಿ ಗರೋಡಿ ಜಾತ್ರೆ.... ಹೀಗೆ ಕಾಲ ಕಾಲಕ್ಕೆ ಆಗುವಂಥಹ ಜಾತ್ರೋತ್ಸವಗಳಿಗೆ ತೆರಳಲು ಜನರಿಗೆ ಕ್ಯಾಲೆಂಡರೇ ಬೇಡ. ಅಷ್ಟರ ಮಟ್ಟಿಗೆ ಊರು ಪರವೂರುಗಳಲ್ಲಿ ಪ್ರಸಿದ್ಧಿ ಪಡೆದ ಜಾತ್ರೆಗಳಿವು. ಜಾತ್ರೆಯಲ್ಲಿ ದೇವರ ನೋಡುವುದಕ್ಕಿಂತಲೂ ಸಂತೆ ಸುತ್ತುವುದು, ಮಂಡಕ್ಕಿ ತಿನ್ನುವುದು, ಆರ್ಕೆಸ್ಟ್ರಾಕ್ಕೆ ಹೆಜ್ಜೆ ಹಾಕುವುದು, ಈಗೀಗ ಹೋದಲ್ಲಿ, ಬಂದಲ್ಲಿ ಸೆಲ್ಫೀ ತೆಗೆಯುವುದೂ ಜಾತ್ರೆಯ ಖುಷಿಯಲ್ಲಿ ಸೇರಿದೆ.
ಬೇಸಿಗೆಯಲ್ಲೇ ಉತ್ಸವ ಹೆಚ್ಚುವುದೇಕೆ?
ಹಿಂದೆ ಜನತೆಗೆ ಮಳೆಗಾಲದಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ಹೆಚ್ಚಿನ ವ್ಯವಸ್ಥೆ ಇರಲಿಲ್ಲ. ಹಾಗಾಗಿ ಬೇಸಿಗೆಗೇ ಜಾತ್ರೆಗಳು ನಿಗದಿಯಾಗುತ್ತಿದ್ದವು. ಮಾತ್ರವಲ್ಲ ತುಳು ನಾಡಿನಲ್ಲಿ ಆಟಿ ತಿಂಗಳಲ್ಲಿ ‘ಭೂತಗಳು ಘಟ್ಟಕ್ಕೆ ಹೋಗುತ್ತವೆ’ ಎಂಬ ನಂಬಿಕೆಯೂ ಇದೆ. ಈ ಎಲ್ಲಾ ಕಾರಣದಿಂದ ಮಳೆಗಾಲ ಮುಗಿದು ಬೇಸಿಗೆ ಕಾಯುವಾಗಲೇ ನೇಮ, ಜಾತ್ರೆಗಳು ರಂಗೇರುತ್ತವೆ. ಕೆಲವು ನಂಬಿಕೆ, ವೈಜ್ಞಾನಿಕತೆ, ವ್ಯಾವಹಾರಿಕತೆ ಎಲ್ಲ ಸೇರಿ ಆಚರಣೆಗಳು ನಡೆಯುತ್ತವೆ.