ರಸ್ತೆ ಅಷ್ಟೇನೂ ನುಣುಪಲ್ಲ! ತೀರಾ ಹದಗೆಟ್ಟೆಯೂ ಇಲ್ಲ. ಶಿವಮೊಗ್ಗದಿಂದ ಶುರುವಾಗಿ ಮಣಿಪಾಲು ಮುಟ್ಟಿಸುಸ್ತಾಗುವವರೆಗೂ ರಸ್ತೆ ಥೇಟ್‌ ಹಾವು. ಆಗುಂಬೆ ಬೆಟ್ಟವನ್ನು ಹತ್ತಿಳಿಯಬೇಕು! ತೀರ್ಥಹಳ್ಳಿಯ ಹಸಿರುಣ್ಣಬೇಕು. ಅಂಥದೊಂದು ರಸ್ತೆಯ ಪಕ್ಕದಲ್ಲಿ ವಿನಮ್ರವಾಗಿ ನಿಂತಿದೆ ನನ್ನ ಮನೆ, ತಪ್ಪು ಮಾಡಿದೆ ಶಾಲಾ ಬಾಲಕ ನಿಲ್ಲುವಂತೆ. ಊರು ಕೈಮರ.

ದುಃಖಿಸಲು ನೂರು ಕಾರಣ, ನಗು ವಿನಾಕಾರಣ; ಮನಸಾರೆ ನಕ್ಕುಬಿಡಿ!

ಹೆಸರಷ್ಟೇ ಕೈಮರ, ದಾರಿ ತೋರಿಸಲು ರಸ್ತೆಗೆ ಕವಲುಗಳಿಲ್ಲ. ಮಗು ಗೀಚಿದ ಗೆರೆಯಂತೆ ವಕ್ರರೇಖೆ ನನ್ನ ಮನೆಯ ಮುಂದಿನ ರಸ್ತೆ. ಡಾಂಬರು ಬಳಿಯಲಾಗಿದೆ. ಹಸಿರು ಕಣ್ಣಿನ ಹುಡುಗಿಗೆ ರಸ್ತೆಯೊಂದು ಕಾಡಿಗೆ. ನಡುಮನೆಯಲ್ಲಿ ನೆಲಕ್ಕೆ ಮೈ ಚಾಚಿ ಮಲಗಿಕೊಂಡರೆ ರಸ್ತೆಯಲ್ಲಿ ಹರಿದು ಹೋಗುತ್ತಿರುವ ವಾಹನ ಯಾವುದೆಂದು ನಿಖರವಾಗಿ ಹೇಳಬಲ್ಲೆ. ರಸ್ತೆ ಆ ಮಟ್ಟಿಗೆ ನಮ್ಮ ಮನೆಗೆ ಅರ್ಥವಾಗಿ ಬಿಟ್ಟಿದೆ.

ನನಗೆ ಕಾಡುತ್ತಲೇ ಇರುವುದು ರಸ್ತೆಯ ಮೇಲಿನ ನಿತ್ಯದ ಅರಚಾಟ, ಕಣ್ಣೀರು, ಆರ್ತನಾದ, ಸಾವಿನ ಕೊನೆಯ ಉಸಿರು, ಬರೀ ಮೌನ, ಅಂಗೈಯಲ್ಲಿ ಪ್ರಾಣ ಹಿಡಿದುಕೊಂಡವನ ಮೊರೆತ, ದಿಗಿಲು, ಸಂಕಟ, ನೋವು, ಬೇಸರಗಳ ಸಂತೆ.

ರಸ್ತೆವೊಡ್ಡುವ ನಿತ್ಯದ ಆ ಪಾಠಗಳಿಗೆ ಒಂದು ಸಣ್ಣ ವೈರಾಗ್ಯ ಮನದ ಬಾಗಿಲು ತಟ್ಟುತ್ತದೆ. ಮತ್ತೇನು ಪಾಠವಾದಂತಾಗಿ ಮನಸ್ಸು ಎದ್ದು ಕೂತು ಜಿಗಿಯುತ್ತದೆ. ನಾಳೆ ನನ್ನ ಸರದಿಯೂ ಹೀಗೆನಾ? ಅಂತ ಚಡಪಡಿಸುತ್ತದೆ. ನನ್ನದಷ್ಟೇ ಅಲ್ಲ ಜಗತ್ತಿನಲ್ಲಿರುವ ಎಲ್ಲರ ಸರದಿಯೂ ಹೀಗೆಯೇ! ಇಲ್ಲಿ ಅಲ್ಲದಿದ್ದರೂ ಮತ್ತೇಲ್ಲೋ ಮತ್ತು ಮತ್ಹೇಗೊ!!

ಹಗಲೆಂದರೆ ಹಗಲು, ರಾತ್ರಿಯೆಂದರೆ ರಾತ್ರಿ, ಯಾವಾಗೆಂದರೆ ಅವಾಗ ಪ್ರಾಣ ಹಿಂಡುವಂತಹ ಆ್ಯಂಬುಲೆಸ್ಸ್‌ ಧ್ವನಿ ಮೊಳಗುತ್ತದೆ. ಪ್ರತಿ ಬಾರಿ ಆ ಧ್ವನಿ ಕಿವಿಗೆ ಬಿದ್ದಾಗ ತಾಯಿಯೊಬ್ಬಳು ತನ್ನ ಮಗನ ಉಳಿವಿಗಾಗಿ ಅರಚುತ್ತಿರುವಂತೆ ಕೇಳುತ್ತದೆ. ಹೃದಯ ನಿಂತು ನಿಂತು ಬಡಿಯುತ್ತದೆ.

ವೆಹಿಕಲ್ ಬಿಟ್ಟು ವಾಕಿಂಗ್ ಮಾಡಿ; ಈ ಆ್ಯಪ್‌ಗಳೇ ನಿಮ್ಮಗೆ ದುಡ್ಡು ಕೊಡುತ್ವೆ!

ವಾಹನದೊಳಗಿನ ಎಲ್ಲಾ ಸಂಕಟ ಆ್ಯಂಬುಲೆಸ್ಸ್‌ ಧ್ವನಿಯಾಗಿಯೆ ಆಚೆ ನುಗ್ಗಿ ಬಂದಿರುಬೇಕು ಅನಿಸುತ್ತದೆ. ಎಲ್ಲವೂ ಶಿವಮೊಗ್ಗದ ಕಡೆಯಿಂದ ಬಂದು ಮಣಿಪಾಲ… ಕಡೆ ಓಡುತ್ತವೆ. ವಾಹನದೊಳಗಿನ ಕೊಲ್ಲುವಂಥ ಮೌನ, ಆಕ್ರಂದನ, ಅಳು, ಚೀರಾಟ, ರೋಗಿಯ ಆರ್ತನಾದ ಅಬ್ಬಬ್ಬಾ.. ಬೆವೆತು ಹೋಗುತ್ತೇನೆ. ಘಟ್ಟದ ಮೇಲಿನ ಊರು, ನಗರಗಳ ಜನರಿಗೆ ಮಣಿಪಾಲ ಆಸ್ಪತ್ರೆ ಆರೋಗ್ಯದ ವಿಚಾರದಲ್ಲಿ ಒಂದು ಸುಪ್ರೀಂ ನಂಬಿಕೆ.

ಆ ಆಸ್ಪತ್ರೆಗೆ ದಕ್ಕದೇ ಇರುವ ಕಾಯಿಲೆಯೆ ಇಲ್ಲ ಅನ್ನುವ ಮಾತು ಒಂದು ವಿಶೇಷ. ಘಟ್ಟದ ಮೇಲಿನ ಡಾಕ್ಟರ್‌ ಕೆಲವೊಮ್ಮೆ ಕೈಚೆಲ್ಲಿ ಅಂತಿಮವಾಗಿ ಮಣಿಪಾಲಿಗೆ ಹೊಯ್ದುಬಿಡಿ ಅಂದು ಬಿಡುತ್ತಾರೆ. ಜನಸಾಮಾನ್ಯರಲ್ಲೂ ಇಲ್ಲೇನು ಪದೇ ಪದೇ ತೋರಿಸ್ತೀಯ, ಒಂದ್ಸಾರಿ ಮಣಿಪಾಲಿಗೆ ಹೋಗಿ ಬಂದು ಬಿಡು ಎನ್ನುವ ಮಾತುಗಳಿವೆ. ತೀರ ಗಂಭೀರವಾದ ಆರೋಗ್ಯದ ಸ್ಥಿತಿಯನ್ನು ನೋಡಿದ ಡಾಕ್ಟರ್‌ಗಳು ಸಹ ಕೈ ಹಾಕುವ ಮುನ್ನವೇ ಮಣಿಪಾಲ… ಕಡೆ ಕೈ ತೋರಿಸುತ್ತಾರೆ.

ಹಾಗೆ ಹೊರಡುವ ಎಲ್ಲಾ ಸವಾರಿಗಳು ಕೂಡ ನಮ್ಮ ಮನೆಯ ಮುಂದಿನ ರಸ್ತೆಯಲ್ಲಿಯೇ ಹಾದು ಹೋಗಬೇಕು. ಕೈ ಮರವನ್ನು ನೋಡಿ ಹೋಗಬೇಕು. ಅಪಘಾತದಲ್ಲಿ ಕಾಲು ಕತ್ತರಿಸಿಕೊಂಡವರು, ಎದೆಯ ಬಡಿತ ಕೊನೆಯ ಹಂತದಲ್ಲಿರುವವರು, ಹೊರಗೆ ನುಣ್ಣಗೆ ಹೊಳೆಯುತ್ತಿದ್ದರೂ ಒಳಗೆ ಯಾವುದೋ ಗೊತ್ತಿಲ್ಲದ ಕಾಯಿಲೆ ಅಡಗಿಸಿಕೊಂಡವರು, ಮಕ್ಕಳು, ಹೆಂಗಸರು ಯಾರದೊ ಅಪ್ಪ, ಯಾರದೊ ಅಮ್ಮ, ತಂಗಿಯೊ, ಹೆಂಡತಿಯೊ, ಅಣ್ಣನೊ ಹೀಗೆ ಎಲ್ಲರಿಗೂ ಈ ರಸ್ತೆ ಬೆನ್ನು ನೀಡಿ ಸಾಂತ್ವನಕ್ಕೆ ಇಳಿಯುತ್ತದೆ. ಹಸಿರು ಗಲಿಬಿಲಿ, ಬೆಟ್ಟದ ದಿಗಿಲು ಒಟ್ಟಾರೆ ಒಂದು ಪೂರ್ಣ ನೋವಿನ ಕ್ಷಣಗಳು.

ಎಲ್ಲ ತರಹದ ನಿಟ್ಟುಸಿರುಗಳನ್ನೂ ಕೇಳಿಸಿಕೊಂಡಿದ್ದೇನೆ. ಮಧ್ಯರಾತ್ರಿಯಲ್ಲಿ ಝಲ್ಲನೆ ಬಂದು ಅಪ್ಪಳಿಸುವ ಆ್ಯಂಬುಲೆಸ್ಸ್‌ನ ಶಬ್ದ, ಅದರೊಂದಿಗೆ ಬರುವ ನೋವಿನ ಕೂಗುಗಳಿಗೆ ದಿಕ್ಕೆಟ್ಟು ಎದ್ದು ಕೂತು ಬಿಡುತ್ತೇನೆ. ಜೀವ ಆಸ್ಪತ್ರೆ ಮುಟ್ಟಿತೊ, ಮಧ್ಯೆ ದಾರಿಯಲ್ಲಿಯೆ ವಾಹನವನ್ನು ಬಿಟ್ಟು ಹೋಯಿತೊ ಎಂದು ಹಲುಬುತ್ತೇನೆ.

ಯಾರ ಸಾವಿನಿಂದ ಯಾರು ಅನಾಥರಾದರೊ, ಮತ್ಯಾರು ಒಂಟಿಯಾದರೊ, ಇನ್ಯಾರು ವಿಕೃತ ಖುಷಿಪಟ್ಟರೊ ಯೋಚಿಸತೊಡಗಿದಂತೆ ‘ಇನ್ನೇನು ಇಲ್ಲ, ಇಲ್ಲೇನು ಇಲ್ಲ ಎಲ್ಲವೂ ಕ್ಷಣಿಕ’ ಎಂಬ ವಿಷಾದ ನನ್ನನ್ನು ಮೆತ್ತಿಕೊಳ್ಳುತ್ತದೆ.

ಅಂದಿನ ರಾತ್ರಿಯ ನಿದ್ರೆಯನ್ನು ಅದಕ್ಕೆ ಬಲಿ ಕೊಟ್ಟು ಬಿಡುತ್ತೇನೆ. ಹೋದ ದಾರಿಯಲ್ಲಿ ವಾಪಸ್‌ ಬಂದ ವಾಹನವನ್ನು ನೋಡಿದಾಗ ಹೆಣವೊಂದು ತನ್ನ ಹುಟ್ಟೂರಿನ ಕಡೆ ಹೊರಟಿರಬೇಕು ಅನಿಸುತ್ತದೆ. ಹಸಿರಿಗೂ ಭರಿಸಲಾಗದ ದುಃಖ, ಸೂತಕ!

ನಾನು ಚಿಕ್ಕವನಿದ್ದಾಗ ಎಂದೊ ಒಮ್ಮೆ ಮಾತ್ರ ಇಂಥಹ ದೃಶ್ಯಗಳು. ನಾನು ಬೆಳೆದಂತೆ ಅವುಗಳ ಸಂಖ್ಯೆಯೂ ನನ್ನೊಂದಿಗೆ ಬೆಳೆದಿವೆ. ಹಾಗಂತ ನಾನು ಸತ್ತಮೇಲೆ ಬೆಳವಣಿಗೆ ನಿಲ್ಲುತ್ತದಾ? ಖಂಡಿತ ಇಲ್ಲ. ಅದರ ವೇಗ ದಿನದಿಂದ ದಿನಕ್ಕೆ ಏರುಗತಿ.

ನಿಜಕ್ಕೂ ನಮ್ಮ ಕಾಲ ಮೇಲೆ ಬಿದ್ದಿರುವ ಕಲ್ಲಿಗೆ ನಾವೇ ಹೊಣೆ. ನಾವು ಬಹಳ ಆಸ್ಥೆಯಿಂದ ರೂಢಿಸಿಕೊಳ್ಳುತ್ತಿರುವ ಆಧುನಿಕ ಬದುಕು, ಅದರೊಂದಿಗೆ ಬೋನಸ್‌ ಎಂಬಂತೆ ಪಡೆಯುತ್ತಿರುವ ಬಗೆ ಬಗೆಯ ಕಾಯಿಲೆಗಳು ಮನುಷ್ಯನ ಕ್ವಾಲಿಟಿ ಬದುಕನ್ನು ನುಂಗಿಹಾಕಿವೆ. ಇದಕ್ಕೆ ನಾನೂ ಕೂಡ ಹೊರತಲ್ಲ.

ನಿತ್ಯ ಇವೆಲ್ಲಾ ನೋಡುತ್ತಾ ನೋಡುತ್ತಾ ಬದುಕು ನಾಟಕವೇನೊ ಅನಿಸಿಬಿಡುತ್ತದೆ. ನಾಟಕವಲ್ಲದೆ ಮತ್ತೇನು? ಎಂಥದ್ದೆ ನಾಟಕವೆನಿಸಿದರೂ ನೋವು, ಕಣ್ಣೀರು ಮಾತ್ರ ನಾಟಕದ ಪ್ರತಿ ದೃಶ್ಯದಲ್ಲೂ ಇಣುಕುತ್ತಿವೆ. ನಿತ್ಯದ ಈ ಎಲ್ಲಾ ಸವಾರಿಗಳನ್ನು ನೋಡುತ್ತಾ ನನ್ನ ಸರದಿಯೂ ಬರಬಹುದಾ ಅಂತ ಯೋಚಿಸಿದಾಗ ಬೆವೆತು ಹೋಗುತ್ತೇನೆ.

ನೂರರ ವೇಗದಲ್ಲಿ ನುಗ್ಗಿ ಬರುವ ಆ್ಯಂಬುಲೆಸ್ಸ್‌ ಅಥವಾ ಇನ್ಯಾವುದೊ ವಾಹನವು ನನ್ನನ್ನು ಈಗ ಹೊತ್ತೊಯ್ಯುತ್ತಿರುವ ವಾಹನಗಳಂತೆ ಹೊತ್ತುಕೊಂಡು ಹೋಗಬಹುದು, ನನಗೆ ಅಂಟಿಕೊಂಡ ಸಂಬಂಧಗಳು ಅಳಬಹುದು. ದಾರಿಯ ಹಸಿರಿಗೆ, ಬೆಟ್ಟಕ್ಕೆ, ರಸ್ತೆಗೆ ಅದೇ ದಿಗಿಲು.

ನಾನು ವಾಪಸ್‌ ಹೇಗೆ ಬರ್ತೀನಿ ಅನ್ನುವುದು ಡಾಕ್ಟರಿಗೂ ಸಹ ಗೊತ್ತಿರುವುದಿಲ್ಲ. ನನ್ನ ನಂತರ ನನ್ನ ಹಿಂದಿನವರು, ನಿಮ್ಮ ನಂತರ ನಿಮ್ಮ ಹಿಂದಿನವರು... ಹೀಗೆ ಸಾಗಬೇಕು!. ನೋವುಗಳನ್ನು, ಸಾವುಗಳನ್ನು, ಹೊರುವ ಹಾದಿ ಮಾತ್ರ ನಿತ್ಯ ಸಂಕಟವನ್ನು ಉಣ್ಣುತ್ತದೆ.