Asianet Suvarna News Asianet Suvarna News

ಕಾಮಾಲೆ ಬಂದ ಮೇಲೆ ಯಾವ ರೀತಿಯ ಪಥ್ಯಕ್ರಮ ಅನುಸರಿಸಬೇಕು

ಕಾಮಾಲೆ ಬಂದ ಮೇಲೆ ಯಾವ ರೀತಿಯ ಪಥ್ಯಕ್ರಮ ಅನುಸರಿಸಬೇಕು

Precautions of jaundice

1) ನಾನು 22 ವರ್ಷದ ಹುಡುಗ. ನನಗೆ ಅರಿಶಿನ ಕಾಮಾಲೆ ಆಗಿ ನಾಲ್ಕೈದು ದಿನವಾಯಿತು. ಅಲೋಪಥಿ ಮಾಡುತ್ತಿದ್ದೇನೆ. ಆದರೆ, ಹೊಟ್ಟೆಯಲ್ಲಿನ ಸಂಕಟ ಕಡಿಮೆ ಆಗಿಲ್ಲ. ಕೆಲವು ಆಹಾರ ಸೇವಿಸಿದರೆ ತೀವ್ರ ಹೊಟ್ಟೆನೋವು ಬರುತ್ತೆ. ನಾನು ಯಾವ ರೀತಿಯ ಪಥ್ಯಕ್ರಮ ಅನುಸರಿಸಬೇಕು? ಏನನ್ನು ತಿನ್ನಬಾರದು?
-ನವೀನ್‌ ಡಿ ಕೆ, ಬೆಂಗಳೂರು


ಉ: ಲಿವರ್‌ನಲ್ಲಿ ಉತ್ಪತ್ತಿಯಾಗುವ ಬಿಲುರುಬಿನ್‌ ಅಥವಾ ಪಿತ್ತದಾಂಶದ ಪ್ರಮಾಣವು ರಕ್ತದಲ್ಲಿ ಹೆಚ್ಚಾದ ಅವಸ್ಥೆಯನ್ನು ಜಾಂಡೀಸ್‌ ಅಥವಾ ಕಾಮಾಲೆ ಎನ್ನಲಾಗುವುದು. ಆಹಾರ ಪಚನದ ಕ್ರಿಯೆಗೆ ಅವಶ್ಯವಿರುವ ಈ ಅಂಶವು ಲಿವರ್‌ನ ಸೋಂಕು ಅಥವಾ ಇತರೆ ಕಾರಣಗಳಿಂದಾಗಿ ಕರುಳಿಗೆ ಸೇರದೆ ರಕ್ತದಲ್ಲೇ ಉಳಿಯುತ್ತದೆ. ಆದ್ದರಿಂದ ಜೀರ್ಣಶಕ್ತಿ ಬಹಳಷ್ಟುಕಡಿಮೆ ಆಗುವುದರೊಂದಿಗೆ ದೇಹದ ಬಲ ಕುಂದುತ್ತದೆ. ಸುಲಭಸಾಧ್ಯವಲ್ಲದ ಆಹಾರವನ್ನು ಸೇವಿಸಿದಾಗ ಅಜೀರ್ಣವಾಗಿ ಹೊಟ್ಟೆನೋವು ಬರುತ್ತದೆ.
ಸೇವಿಸುವ ಆಹಾರ ಪದಾರ್ಥ ಹಾಗೂ ಸೇವಿಸುವ ಕ್ರಮ ರೋಗದ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೊಬ್ಬುರಹಿತ, ಕಡಿಮೆ ಖಾರವುಳ್ಳ, ಸುಲಭಜೀರ್ಣ ಆಹಾರದ ಸೇವನೆ ಅತ್ಯಗತ್ಯ. ರೋಗದ ಮೊದಲು ಐದು ದಿನಗಳು ಅಥವಾ ಜೀರ್ಣಶಕ್ತಿ ಹೆಚ್ಚುವವರೆಗೆ ಅಕ್ಕಿ ಗಂಜಿ, ಮಜ್ಜಿಗೆ ಅನ್ನ, ಜೀರಿಗೆ ನೀರು, ಬಾರ್ಲಿ ಗಂಜಿಯ ನೀರು, ಮೂಲಂಗಿ ರಸ ಸೇವಿಸಬೇಕು. ನೀರಿನಂಶ ಉಳಿಸಿಕೊಳ್ಳಲು ಎಳನೀರು, ನಿಂಬೆಹಣ್ಣು, ಮೂಸಂಬಿ ರಸವನ್ನು ಸೇವಿಸಬೇಕು ನಂತರ ಪೊಂಗಲ್‌, ಕಿಚಡಿ, ಅನ್ನದೊಂದಿಗೆ ಹೆಸರುಬೇಳೆ ಕಟ್ಟು, ಹುರುಳಿ ಕಟ್ಟು, ಬೇಯಿಸಿದ ಸೋರೆಕಾಯಿ, ಪಡುವಲ ಕಾಯಿ, ಸೌತೆಕಾಯಿ, ಮೂಲಂಗಿಯನ್ನು ಕ್ರಮೇಣ ಸೇವಿಸಬೇಕು. ಅಲ್ಲದೆ ಕೆಂಪು ಅಕ್ಕಿ, ಗೋಧಿ, ಹೆಸರುಕಾಳು, ಕಬ್ಬಿನಹಾಲು, ನಲ್ಲಿಕಾಯಿ, ದ್ರಾಕ್ಷಿರಸದ ಸೇವನೆ ಉತ್ತಮ ಪಥ್ಯ.
ಅತಿಯಾದ ಖಾರ, ಕರಿದ ಪದಾರ್ಥ, ಮಸಾಲೆ ಪದಾರ್ಥ, ಮಾಂಸಾಹಾರ, ಉದ್ದಿನಪದಾರ್ಥ, ಝಂಕ್‌ಫುಡ್‌, ಮದ್ಯಪಾನ, ಧೂಮಪಾನ, ಮೊಸರು, ಚಹಾ, ಕಾಫಿಯ ಸೇವನೆ, ಸಾಸಿವೆ ಎಣ್ಣೆಯ ಸೇವನೆ, ಮಾನಸಿಕ ಒತ್ತಡ, ಅನವಶ್ಯ ವ್ಯಾಯಾಮ, ಬಿಸಿಲಿಗೆ ಮೈ ಒಡ್ಡುವುದನ್ನು ನಿಲ್ಲಿಸುವುದು ಉತ್ತಮ.
(ಕೃಪೆ: ಕನ್ನಡ ಪ್ರಭ)

Follow Us:
Download App:
  • android
  • ios