Asianet Suvarna News Asianet Suvarna News

ಅಪಘಾತ, ಗರ್ಭಿಣಿ,ಕುರುಡರಿಗೆ ಫ್ರೀ ರಿಕ್ಷಾ ಸೇವೆ!

ನಿರಂತರ ಕೋಮು ಸಂಘರ್ಷಗಳಿಂದ ನಲುಗುತ್ತಿರುವ ಮಂಗಳೂರಿನಲ್ಲಿ ರಿಕ್ಷಾ ಚಾಲಕರೊಬ್ಬರು ಜಾತಿ, ಧರ್ಮಗಳನ್ನು ಮೀರಿ ತುರ್ತು ಚಿಕಿತ್ಸೆಯ ಅವಶ್ಯಕತೆಯುಳ್ಳ ಅಶಕ್ತರಿಗೆ ಉಚಿತವಾಗಿ ರಿಕ್ಷಾ ಸೇವೆ ಒದಗಿಸುತ್ತ ಕೋಮು ಸೌಹಾರ್ದತೆಯ ಪ್ರತೀಕವಾಗಿದ್ದಾರೆ.

Mangalore riksha driver Mohammad gives free auto drop for people in need
Author
Bengaluru, First Published Sep 25, 2018, 11:14 AM IST

ಇವರು ಮಹಮ್ಮದ್. ಮಂಗಳೂರು ಆಕಾಶಭವನದ ನಿವಾಸಿ. ಸುಮಾರು 35 ವರ್ಷಗಳಿಂದ ನಗರದಲ್ಲಿ ರಿಕ್ಷಾ ಚಾಲಕರಾಗಿ ಜೀವನ ನಿರ್ವಹಿಸುತ್ತಿದ್ದಾರೆ. ತುಂಬು ಸಂಸಾರವನ್ನು ಸಾಕುವ ಜವಾಬ್ದಾರಿ ಹೊತ್ತುಕೊಂಡಿದ್ದರೂ ಕಳೆದ ನಾಲ್ಕು ವರ್ಷಗಳಿಂದ ಧರ್ಮ ಭೇದವಿಲ್ಲದೆ ಗರ್ಭಿಣಿಯರು, ಅಪಘಾತ ಗಾಯಾಳುಗಳು, ಕುರುಡರನ್ನು ತಮ್ಮ ರಿಕ್ಷಾದಲ್ಲಿ ಉಚಿತವಾಗಿ ಕರೆದೊಯ್ದು ಮಾನವೀಯತೆಯ ಮೌಲ್ಯವನ್ನು ಸಾಕಾರಗೊಳಿಸುತ್ತಿದ್ದಾರೆ. ಇದುವರೆಗೆ ಸುಮಾರು 70ಕ್ಕೂ ಅಧಿಕ ಮಂದಿಯ ಪಾಲಿಗೆ ಆಪದ್ಭಾಂಧವ ಆಗಿದ್ದಾರೆ ಮಹಮ್ಮದ್.

ಇನ್ನಷ್ಟು ಬಡವರಿಗೆ ಸಹಾಯವಾಗಲೆಂದು ತಮ್ಮ ರಿಕ್ಷಾದಲ್ಲೂ ಉಚಿತ ಸೇವೆ ಒದಗಿಸುವ ಒಕ್ಕಣೆಯನ್ನು ಮಹಮ್ಮದ್ ಬರೆದಿದ್ದಾರೆ. ಅವರ ಮೊಬೈಲ್ ಸಂಖ್ಯೆಯನ್ನೂ ಅಲ್ಲಿ ನಮೂದಿಸಿದ್ದಾರೆ. ಅನೇಕರು ಅದನ್ನು ನೋಡಿ ಕರೆ ಮಾಡುತ್ತಾರೆ. ಕೆಲವೊಮ್ಮೆ ಸಹವರ್ತಿ ರಿಕ್ಷಾ ಚಾಲಕರು ನೋವಿನಲ್ಲಿರುವ ಜನರ ಮಾಹಿತಿ ನೀಡುತ್ತಾರೆ. ತಕ್ಷಣ ರಿಕ್ಷಾ ಸಮೇತ ಮಹಮ್ಮದ್ ಅಲ್ಲಿ ಹಾಜರ್. ಅವರ ಉಚಿತ ಸೇವೆ ಬೆಳಗ್ಗೆ 6 ರಿಂದ ಸಂಜೆ 8 ರವರೆಗೆ. ಅಗತ್ಯ ಬಿದ್ದರೆ ರಾತ್ರಿ ಕೂಡ ಅವರು ಸೇವೆಗೆ ರೆಡಿ.

ಇದುವರೆಗೆ 40ಕ್ಕೂ ಅಧಿಕ ಅಪಘಾತ ಗಾಯಾಳುಗಳನ್ನು ಮಹಮ್ಮದ್ ರಕ್ಷಿಸಿದ್ದಾರೆ. ಬಡ ಕುಟುಂಬಗಳಿಗೆ ತಮ್ಮ ಮನೆಯ ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆದೊಯ್ಯಲು ವಾಹನ ಸೌಲಭ್ಯ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಅವರ ಪಾಲಿಗೆ ಆಶಾಜ್ಯೋತಿಯಾಗಿ ಮಹಮ್ಮದ್ ಆಗಮಿಸುತ್ತಾರೆ.

ಆಸ್ಪತ್ರೆವರೆಗೂ ಕರೆದೊಯ್ದು ಯಾವುದೇ ಹಣ ಪಡೆಯದೆ ಮರಳುತ್ತಾರೆ. ಇದುವರೆಗೆ ೨೦ಕ್ಕೂ ಅಧಿಕ ಗರ್ಭಿಣಿಯರನ್ನು ಅವರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇನ್ನು ದಾರಿ ಮಧ್ಯೆ ಕುರುಡರೇನಾದರೂ ಕಂಡುಬಂದರೆ ಸೀದ ಅವರು ಇರುವಲ್ಲಿಗೆ ತೆರಳಿ ಅವರು ಹೋಗಬೇಕಾಗಿರುವ ಸ್ಥಳಕ್ಕೆ ಬಿಟ್ಟು ಬರುತ್ತಾರೆ.

ಯಾಮಾರಿಸುವವರೂ ಇದ್ದಾರೆ!
ಆಪತ್ಕಾಲದಲ್ಲಿ ನೆರವಾಗುವ ಮಹಮ್ಮದ್ ಅವರಿಗೂ ಯಾಮಾರಿಸುವವರ ಕಾಟ ತಪ್ಪಿಲ್ಲ. ಬೇಕೆಂದೇ ಸುಳ್ಳು ಕರೆ ಮಾಡಿ ಬರಹೇಳುತ್ತಾರೆ. ಮಹಮ್ಮದ್ ಸ್ಥಳಕ್ಕೆ ತೆರಳಿ ಮರು ಕರೆ ಮಾಡಿದರೆ ಮೊಬೈಲನ್ನೇ ಸ್ವಿಚ್ ಆಫ್ ಮಾಡಿಡುತ್ತಾರೆ. ಇಂತಹ ಹಲವು ಘಟನೆಗಳು ನಡೆದಿವೆ. ಈಗ ಪೆಟ್ರೋಲ್ದರ ಕೂಡ ಹೆಚ್ಚಿದೆ. ಹೀಗೆ ಸುಳ್ಳು ಕರೆ ಮಾಡಿ ಕರೆಸಿಕೊಂಡರೆ ರಿಕ್ಷಾವನ್ನೇ ನೆಚ್ಚಿಕೊಂಡು ಜೀವನ ಸಾಗಿಸುತ್ತಿರುವ ನನಗೆ ನಷ್ಟವಾಗುತ್ತದೆ. ಹಾಗೆ ಮಾಡಬೇಡಿ ಎಂದಷ್ಟೇ ವಿನಂತಿ. ಆದರೂ ಸೇವಾ ಕಾರ್ಯವನ್ನು ಬಿಡುವುದಿಲ್ಲ ಎನ್ನುತ್ತಾರೆ ಮಹಮ್ಮದ್.

ಥ್ಯಾಂಕ್ಯೂ
‘ನನ್ನ ಎದುರಿಗೇ ತುಂಬ ರಸ್ತೆ ಅಪಘಾತಗಳಾಗಿ ಗಾಯಾಳುಗಳು ಸಂಕಟಪಟ್ಟಿದ್ದನ್ನು ಕಣ್ಣಾರೆ ನೋಡಿದ್ದೇನೆ. ಯಾರೂ ಅವರ ಕಷ್ಟಕ್ಕೆ ಸ್ಪಂದಿಸದೆ ದೂರ ಉಳಿಯುವುದನ್ನೂ ನೋಡಿದ್ದೇನೆ. ಕೊನೆಗೆ ನಾನೇ ಖುದ್ದು ಸಹಾಯ ಮಾಡಲು ನಿರ್ಧರಿಸಿದೆ. ಬಡ ಮನೆಗಳ ಗರ್ಭಿಣಿಯರ ಸ್ಥಿತಿಯೂ ಕಷ್ಟ. ಹಾಗೆ ಕಳೆದ ನಾಲ್ಕು ವರ್ಷಗಳಿಂದ ನನ್ನ ರಿಕ್ಷಾದಲ್ಲೇ ಅಂಥವರನ್ನು ಯಾವ ಆಸ್ಪತ್ರೆಗೆ ಬೇಕೋ ಅಲ್ಲಿಗೆ ಕರೆದೊಯ್ದು ಬಿಡುತ್ತೇನೆ. ಅದಕ್ಕಾಗಿ ಯಾವ ಪ್ರತಿಫಲವನ್ನೂ ಅಪೇಕ್ಷಿಸುವುದಿಲ್ಲ. ಈ ಕೆಲಸ ನನಗೆ ತೃಪ್ತಿ ನೀಡಿದೆ. ನನ್ನ ಮನೆಯವರೂ ಇದಕ್ಕೆ ಬೆಂಬಲವಾಗಿದ್ದಾರೆ. ಇನ್ನೆಷ್ಟು ದಿನ ರಿಕ್ಷಾ ಬಿಡುತ್ತೇನೋ ಅಲ್ಲಿಯವರೆಗೂ ಈ
ಕೆಲಸವನ್ನು ಮುಂದುವರಿಸುತ್ತೇನೆ’ ಎನ್ನುವ ಮಹಮ್ಮದ್ ಅಪರೂಪದ ಕೆಲಸ ಮಾಡುತ್ತಿದ್ದಾರೆ. ಅವರ ಒಳ್ಳೆಯ ಮನಸ್ಸಿಗೆ ಥ್ಯಾಂಕ್ಸ್ ಹೇಳಿ. ಅವರಿಗೆ ನೂರಾನೆ ಬಲ ಸಿಗಲಿ. ದೂ: 9880279418

 

Follow Us:
Download App:
  • android
  • ios