ಮಹಿಳೆ ಮೇಲೆ ರೊಚ್ಚಿಗೆದ್ದು ದಾಳಿ ಮಾಡಿದ ಮಂಗ: ಭಯಾನಕ ವೀಡಿಯೋ ವೈರಲ್
ಮಹಿಳೆಯ ಮೇಲೆ ಲಂಗೂರ್ ಒಂದು ಆಕ್ರಮಣಕಾರಿಯಾಗಿ ದಾಳಿ ನಡೆಸಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಾರಂಭದಲ್ಲಿ ಪ್ರೀತಿಯಿಂದ ವರ್ತಿಸಿದ ಲಂಗೂರ್, ಒಮ್ಮೆಗೆ ಸಿಟ್ಟಿಗೆದ್ದು ದಾಳಿ ಮಾಡಿದ್ದು ಏಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ತನ್ನ ಮೇಲೆ ಪ್ರೀತಿಯ ಮಳೆಗರೆಯುತ್ತಿದ್ದ ವ್ಯಕ್ತಿ ಮೇಲೆಯೇ ಕೆಲ ಕ್ಷಣದ ನಂತರ ಬೀದಿ ನಾಯಿಯೊಂದು ಅಚಾನಕ್ ಆಗಿ ಆಕ್ರಮಣಕಾರಿಯಾಗಿ ದಾಳಿ ನಡೆಸಿದ ಘಟನೆ ಕೆಲ ದಿನಗಳ ಹಿಂದೆ ನಡೆದಿತ್ತು. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಜನರಲ್ಲಿ ಭಯ ಹುಟ್ಟಿಸಿದ್ದವು. ಈ ಘಟನೆ ಮಾಸುವ ಮುನ್ನವೇ ಈಗ ಅಂಥದ್ದೇ ಘಟನೆಯೊಂದು ನಡೆದಿದೆ. ಆದರೆ ಈ ಬಾರಿ ಶ್ವಾನದ ಬದಲಾಗಿ ಲಂಗೂರ್ (ಮಂಗನ ಮತ್ತೊಂದು ಜಾತಿ) ಒಂದು ತನ್ನನ್ನು ಮುದ್ದಿಸುತ್ತಿದ್ದ ಮಹಿಳೆ ಮೇಲೆ ಆಕ್ರಮಣಕಾರಿಯಾಗಿ ದಾಳಿ ನಡೆಸಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಲಂಗೂರ್‌ನ ಈ ವಿಚಿತ್ರ ನಡತೆಗೆ ಕಾರಣ ಏನಿರಬಹುದು ಎಂದು ಜನ ಅಚ್ಚರಿಯಿಂದ ನೋಡುತ್ತಿದ್ದಾರೆ.
ಸಾಮಾನ್ಯವಾಗಿ ಮೂಕ ಪ್ರಾಣಿಗಳು ತುಸು ಪ್ರೀತಿ ತೋರಿದರೆ, ನಾವು ತೋರಿದ ಪ್ರೀತಿಗೆ ಮೂರು ಪಟ್ಟು ಹೆಚ್ಚು ಪ್ರತಿಯಾಗಿ ಪ್ರೀತಿ ತೋರುತ್ತವೆ, ಜೊತೆಗೆ ಕೃತಜ್ಞರಾಗಿರುತ್ತವೆ. ಆದರೆ ಇಲ್ಲಿ ಮಾತ್ರ ಉಲ್ಟಾ ಆಗಿದೆ. ತನ್ನ ಮೈದಡವಿ ಮುದ್ದು ಮಾಡ್ತಿದ್ಧ ಮಹಿಳೆಯ ಜೊತೆ ಪ್ರಾರಂಭದಲ್ಲಿ ಚೆನ್ನಾಗಿಯೇ ಇದ್ದ ಲಂಗೂರ್ ಒಮ್ಮೆಗೆ ಸಿಟ್ಟಿಗೆದ್ದು ಆಕ್ರಮಣಕಾರಿಯಾಗಿ ದಾಳಿ ಮಾಡಿದೆ. ಲಂಗೂರ್‌ನ ಈ ವರ್ತನೆಗೆ ಏನು ಕಾರಣ ಇರಬಹುದು ಎಂಬುದು ಮಾತ್ರ ಯಾರಿಗೂ ಅರ್ಥವಾಗಿಲ್ಲ.
ಇದನ್ನೂ ಓದಿ:ಮುದ್ದು ಮಾಡ್ತಿದ್ದವನಿಗೆ ಸಿಟ್ಟಿಗೆದ್ದು ಕಚ್ಚೇ ಬಿಟ್ಟ ಬೀದಿ ನಾಯಿ: ಭಯಾನಕ ವೀಡಿಯೋ ವೈರಲ್
Animal🇺🇲 (pagepostinganimalattacks) ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ವೈರಲ್ ಆಗಿದ್ದು, ಎಲ್ಲಿ ಯಾವಾಗ ಈ ಘಟನೆ ನಡೆದಿದೆ ಎಂಬ ಮಾಹಿತಿ ಇಲ್ಲ. ವೀಡಿಯೋದಲ್ಲಿ ಕಾಣಿಸುವಂತೆ ಮಹಿಳೆಯೊಬ್ಬರು ಎರಡು ಮನೆಗಳ ನಡುವೆ ಇರುವ ಓಣಿಯೊಂದರಲ್ಲಿ ಕುಳಿತುಕೊಂಡಿದ್ದು, ಅಲ್ಲಿಯೇ ಈ ಲಂಗೂರ್ ಕೂಡ ಇದೆ. ಪ್ರಾರಂಭದ ಕೆಲ ನಿಮಿಷಗಳ ಕಾಲ ಮಹಿಳೆ ಹಾಗೂ ಈ ಲಂಗೂರ್ ನಡುವೆ ಬಹಳ ಆತ್ಮೀಯವಾದ ಸಂವಹನ ನಡೆದಿದೆ. ಮಹಿಳೆ ಲಂಗೂರ್‌ನ ಮುಖವನ್ನು ಕೈಯಲ್ಲಿ ಹಿಡಿದುಕೊಂಡು ಮುದ್ದು ಮಾಡಿದ್ದಾಳೆ, ಅತ್ತ ಲಂಗೂರ್ ಕೂಡ ಮಹಿಳೆ ಪ್ರೀತಿಗೆ ತುಂಬಾ ಸೊಗಸಾಗಿ ಪ್ರತಿಕ್ರಿಯಿಸಿದ್ದು, ಆಕೆಯ ತಲೆಯನ್ನು ತನ್ನ ಕೈಯಿಂದ ಸವರಿ ಪ್ರೀತಿ ತೋರಿದೆ. ಅಲ್ಲದೇ ಮನುಷ್ಯರಂತೆ ಆಕೆಯ ಕತ್ತಿಗೆ ತನ್ನೆರಡು ಕೈಗಳನ್ನು ಹಾಕಿ ತನ್ನ ಮುಖದತ್ತ ಆಕೆಯ ಮುಖವನ್ನು ತಂದಿದೆ. ಆದರೆ ಕೆಲ ಕ್ಷಣದಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು, ಒಮ್ಮಿಂದೊಮ್ಮೆಗೆ ರೊಚ್ಚಿಗೆದ್ದ ಲಂಗೂರ್ ಮಹಿಳೆಯ ಮುಖವನ್ನು ಕಚ್ಚಿ ಆಕೆಯ ಮೇಲೆ ಆಕ್ರಮಣಕಾರಿಯಾಗಿ ದಾಳಿ ಮಾಡಿದೆ.
ಈ ವೇಳೆ ಮಹಿಳೆ ನೋವು ತಡೆದುಕೊಳ್ಳಲಾಗದೇ ಜೋರಾಗಿ ಕೂಗಾಡುವುದನ್ನು ವೀಡಿಯೋದಲ್ಲಿ ಕಾಣಬಹುದು. ಈ ವೇಳೆ ಅಲ್ಲಿದ್ದವರು ಓಡಿ ಹೋಗಿ ದೊಣ್ಣೆ ತೆಗೆದುಕೊಂಡು, ಕೋತಿಯನ್ನು ಓಡಿಸಿದ್ದಾರೆ. ಮುದ್ದು ಮಾಡುತ್ತಿದ್ದ ಕೋತಿಯ ಈ ಅಚಾನಕ್ ದಾಳಿಯಿಂದ ಮಹಿಳೆ ಸಂಪೂರ್ಣ ದಂಗಾಗಿದ್ದಾರೆ. ಈ ವೀಡಿಯೋ ನೋಡಿದ ಅನೇಕರು ಹಲವು ಕಾಮೆಂಟ್ ಮಾಡಿದ್ದಾರೆ. ವನ್ಯಜೀವಿ ಎಷ್ಟಾದರೂ ವನ್ಯಜೀವಿಯೇ ಅದಕ್ಕೆ ಅದರದ್ದೇ ಆದ ಜಾಗ ನೀಡಬೇಕು, ಮುದ್ದು ಮಾಡುವ ಹೆಸರಿನಲ್ಲಿ ಕಿರಿಕಿರಿ ಮಾಡಬಾರದು ಅವುಗಳ ಮೂಡ್ ಹೇಗೆ ಬದಲಾಗುತ್ತದೆ ಎಂದು ಹೇಳಲಾಗದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಲಂಗೂರ್ ನಿಮ್ಮ ಚರ್ಮ ಸುಲಿಬಹುದು ಎಚ್ಚರ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ ಮತ್ತೊಬ್ಬರು ಪ್ರಾಣಿಗಳನ್ನು ಪ್ರಾಣಿಗಳಂತೆಯೇ ನೋಡಬೇಕು ಏಕೆಂದರೆ ಅದು ಸಾಕುಪ್ರಾಣಿ ಅಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.