ವಯಸ್ಸು ಸಂತಾನೋತ್ಪತ್ತಿಯ ಮೇಲೆ ಪರಿಣಾಮ ಬೀರುತ್ತದೆಯೇ?

ವಯಸ್ಸು ಮಹಿಳೆಯ ಗರ್ಭ ಧರಿಸುವ ಸಾಮರ್ಥ್ಯದ ಮೇಲೆ ಖಂಡಿತಾ ಪರಿಣಾಮ ಬೀರುತ್ತದೆ. ಪುರುಷರಲ್ಲಿ ವಯಸ್ಸಾದಂತೆ ಸಂತಾನೋತ್ಪತ್ತಿ ಸಾಮರ್ಥ್ಯ ಕುಸಿಯುತ್ತಾ ಹೋಗುತ್ತದೆಯಾದರೂ, ಅದರ ಪ್ರಮಾಣ ಕಡಿಮೆ. ಹೀಗಾಗಿಯೇ ಗರ್ಭಧಾರಣೆಯನ್ನು ಬಯಸುವ ದಂಪತಿಗೆ ಸಂತಾನೋತ್ಪತ್ತಿಯ ಮೇಲೆ ವಯಸ್ಸು ಬೀರುವ ಪರಿಣಾಮವನ್ನು ವಿವರಿಸುವ ಕುರಿತು ಶಿಕ್ಷಣ ಮತ್ತು ಹೆಚ್ಚಿನ ಅರಿವು ಮೂಡಿಸುವುದು ಅತ್ಯಂತ ಅಗತ್ಯ.

ಮಹಿಳೆಯರಲ್ಲಿ ಸಂತಾನಶಕ್ತಿ ಕುಸಿಯುವ ಸಮಯ ಯಾವುದು?

ನಿಯಮಿತ ಮಾಸಿಕ ಋತುಸ್ರಾವ ಆಗುತ್ತಿದ್ದರೂ ಮುಟ್ಟು ನಿಲ್ಲುವ ಸಮಯಕ್ಕಿಂತ ಹಲವು ವರ್ಷಗಳಿಗೆ ಮೊದಲೇ ಮಹಿಳೆಯರಲ್ಲಿ ಸಂತಾನಶಕ್ತಿ ಕುಸಿಯಲು ಆರಂಭವಾಗುತ್ತದೆ. ಸಾಮಾನ್ಯವಾಗಿ 35 ವರ್ಷ ದಾಟುತ್ತಲೇ ಈ ಪರಿಸ್ಥಿತಿ ಕಾಣಿಸಿಕೊಳ್ಳುತ್ತದೆ. ಗರ್ಭಧರಿಸುವ ಸಾಮರ್ಥ್ಯವು ಆಕೆಯ 30ನೇ ವರ್ಷದಿಂದಲೇ ಕುಂಠಿತವಾಗಬಹುದು. ಆಕೆಗೆ 40 ವರ್ಷ ಆಗುವ ವೇಳೆಗೆ ಮಾಸಿಕ ಮುಟ್ಟಿನ ಸಮಯದಲ್ಲಿ ಗರ್ಭಧರಿಸುವ ಸಾಮರ್ಥ್ಯ ಶೇ.5ಕ್ಕೆ ಇಳಿದಿರುತ್ತದೆ.

ಕೃತಕ ಗರ್ಭಧಾರಣೆ (ಐವಿಎಫ್) ಚಿಕಿತ್ಸೆಯ ಮೇಲೆ ವಯಸ್ಸು ಪರಿಣಾಮ ಹೊಂದಿದೆಯೇ?

ಐವಿಎಫ್ ಚಿಕಿತ್ಸೆಯು ಯಶಸ್ವಿಯಾಗುವುದರ ಮೇಲೆ ಕೂಡಾ ಮಹಿಳೆಯ ವಯಸ್ಸು ಪರಿಣಾಮ ಹೊಂದಿರುತ್ತದೆ. 30 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಹಿಳೆ ಇಂಥ ಚಿಕಿತ್ಸೆಗೆ ಗುರಿಯಾದರೆ ಆಕೆ ಮಕ್ಕಳನ್ನು ಹೆರುವ ಸಾಧ್ಯತೆ ಶೇ.35-ಶೇ.40ರಷ್ಟು ಇದ್ದರೆ, 40 ವರ್ಷ ದಾಟಿದ ಮಹಿಳೆಯರಲ್ಲಿ ಈ ಸಾಧ್ಯತೆ ಕುಸಿಯುತ್ತದೆ. ದಾನಿ ಅಂಡಾಣುವನ್ನು ಬಳಸುವುದಾದರೆ ಅಂಡಾಣು ದಾನ ಮಾಡಿದ ಮಹಿಳೆಯ ವಯಸ್ಸು ಕಡಿಮೆ ಇದ್ದ ಪಕ್ಷದಲ್ಲಿ ವಯಸ್ಸಾದ ಮಹಿಳೆಯರು
ಗರ್ಭ ಧರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಮಹಿಳೆಯರಲ್ಲಿ ವಯಸ್ಸಾದಂತೆ ಗರ್ಭಧರಿಸುವ ಸಾಧ್ಯತೆ ಕಡಿಮೆ ಆಗುತ್ತಾ ಹೋಗುವುದು ಏಕೆ?

ಅಂಡಾಣು ಬಿಡುಗಡೆ ಪ್ರಮಾಣ ಮೊದಲೇ ನಿಗದಿಯಾಗಿರುತ್ತದೆ. ಹೆಣ್ಣು ಹುಟ್ಟಿದಾಗ ದೇಹದಲ್ಲಿ 10-20ಲಕ್ಷ ಅಂಡಾಣುಗಳು ಇರುತ್ತವೆ. ಋತುಮತಿಯಾಗುವಾಗ ಆ ಪ್ರಮಾಣ ಕಡಿತಗೊಂಡು 3-5 ಲಕ್ಷಕ್ಕೆ ತಲುಪುತ್ತದೆ. ಮಹಿಳೆ ತನ್ನ 37ನೇ ವಯಸ್ಸಿಗೆ ಬಂದಾಗ ಅಂಡಾಣುವಿನ ಪ್ರಮಾಣ ಕೇವಲ 25000ಕ್ಕೆ ಬಂದಿರುತ್ತದೆ. ಮುಟ್ಟು ನಿಲ್ಲುವ ಸಮಯದಲ್ಲಿ ಇದು ಕೇವಲ 1000 ಅಂಡಾಣುವಿಗೆ ಬಂದಿರುತ್ತದೆ. ವಯಸ್ಸಾದಂತೆ ಬರುವ ಗರ್ಭಾಶಯ, ಗರ್ಭನಾಳದ ಸಮಸ್ಯೆಗಳಿಂದಲೂ ಗರ್ಭಧರಿಸುವ ಸಾಧ್ಯತೆ ಕ್ಷೀಣಿಸುತ್ತದೆ. 

ಹೆಚ್ಚಾಗುವ ವಯಸ್ಸು ಹೆರಿಗೆಯ ಅಪಾಯವನ್ನು ಹೆಚ್ಚಿಸುತ್ತದೆಯೇ?

ಮಹಿಳೆಗೆ ವಯಸ್ಸು ಹೆಚ್ಚಾದಂತೆ ಹೆರಿಗೆ ಅಪಾಯಗಳು ಹೆಚ್ಚು. ಮಹಿಳೆ 35 ವರ್ಷದ ಬಳಿಕ ಗರ್ಭಧರಿಸಿದರೆ ಗರ್ಭಪಾತ ಮತ್ತು ಭ್ರೂಣದಲ್ಲಿ ಅಸಹಜ ವರ್ಣತಂತುಗಳ ಪರಿಣಾಮ ಹೆಚ್ಚು. ಈ ವಯಸ್ಸಿನವರಲ್ಲಿ ಗರ್ಭಧಾರಣೆ ಸಮಯದಲ್ಲಿ
ಕಾಣಿಸಿಕೊಳ್ಳುವ ಸಕ್ಕರೆ ಕಾಯಿಲೆ, ಗರ್ಭಧಾರಣೆ ಸಮಯದಲ್ಲಿ ಕಾಣಿಸಿಕೊಳ್ಳುವ ಅಧಿಕ ರಕ್ತದೊತ್ತಡ ಸಮಸ್ಯೆ ಮತ್ತು ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸುವ ಅನಿವಾರ್ಯತೆ ಹೆಚ್ಚಿರುತ್ತದೆ.

ಪುರುಷ ಸಂಗಾತಿಯ ವಯಸ್ಸು ಸಂತಾನ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆಯೇ?

ಪುರುಷನಿಗೂ ವಯಸ್ಸಾದಾಗ ವೀರ್ಯಾಣುವಿನ ಗುಣಮಟ್ಟ ಕಡಿಮೆಯಾಗುತ್ತದೆ, ಸಂತಾನಶಕ್ತಿ ಕುಂಠಿತಗೊಳ್ಳುತ್ತಾ ಹೋಗುತ್ತದೆ. ಇದು ಒಟ್ಟಾರೆ ಗರ್ಭಧಾರಣೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಗರ್ಭಪಾತ ಮತ್ತು ಗರ್ಭಾವಸ್ಥೆಯಲ್ಲೇ ಶಿಶುಮರಣಕ್ಕೆ ಕಾರಣವಾಗುವ ಸಾಧ್ಯತೆ ಹೆಚ್ಚಿಸುತ್ತದೆ. ವಯಸ್ಸಾದ ತಂದೆಗೆ ಹುಟ್ಟಿದ ಮಕ್ಕಳಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆ ಹೆಚ್ಚಿರುತ್ತದೆ. 30 ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ತಂದೆಗೆ ಹುಟ್ಟಿದ ಮಕ್ಕಳಿಗೆ ಹೋಲಿಸಿದರೆ 40 ವರ್ಷ ಮತ್ತು ಅದಕ್ಕೆ ಮೇಲ್ಪಟ್ಟ ವಯಸ್ಸಿನ ತಂದೆಗೆ ಹುಟ್ಟಿದ ಮಕ್ಕಳಲ್ಲಿ ಆಟಿಸಂ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ 5 ಪಟ್ಟು ಹೆಚ್ಚು. ಅಲ್ಲದೆ ವಯಸ್ಸಾದ ತಂದೆಗೆ ಹುಟ್ಟಿದ ಮಕ್ಕಳು ನಂತರದ ವರ್ಷಗಳಲ್ಲಿ ಸ್ಕಿಜೋಫ್ರೇನಿಯಾ (ದ್ವಂದ್ವ ವ್ಯಕ್ತಿತ್ವ) ಮತ್ತು ಇತರೆ ಮಾನಸಿಕ ಆರೋಗ್ಯ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಅಧಿಕವಿರುತ್ತದೆ.

ಸಂತಾನಧಾರಣ ಶಕ್ತಿಯ ಸಮಸ್ಯೆಯಿಂದ ನಾವು ಹೇಗೆ ಹೊರಬರಬಹುದು?

ಯಾವ ಮಹಿಳೆ ಗರ್ಭ ಧರಿಸುವ ಸಮಯವನ್ನು 40 ವರ್ಷದ ಆಸುಪಾಸಿಗೆ ಮುಂದೂಡಲು ಬಯಸುತ್ತಾಳೋ ಅಂಥವರು ತಮ್ಮ ಆರಂಭಿಕ ವಯಸ್ಸಿನಲ್ಲಿ ಸಂತಾನಶಕ್ತಿಯನ್ನು ಸಂರಕ್ಷಿಸುವ ಕೆಲಸ ಮಾಡಬಹುದು. ಅಂಡಾಣು ಅಥವಾ ಭ್ರೂಣವನ್ನು ಸಂರಕ್ಷಿಸಿ ಇಡಬಹುದು. ಮಕ್ಕಳಾಗುವುದನ್ನು ಮುಂದೂಡಲು ಬಯಸುವ ಯುವ ಮಹಿಳೆಯರು ಅಂಡಾಣು  ಐವಿಎಫ್ ವಿಧಾನ ಆಯ್ದುಕೊಳ್ಳಬಹುದು. ವಯಸ್ಸಾದ ಸಂತಾನ ಸಾಮರ್ಥ್ಯ ಕಳೆದುಕೊಂಡಿರುವ ಪುರುಷ ಮತ್ತು ಮಹಿಳೆಯರು, ಅಂಡಾಣು, ವೀರ್ಯಾಣು ಮತ್ತು ಭ್ರೂಣ ದಾನ ಪಡೆಯಬಹುದು.

ಸೋಷಿಯಲ್ ಎಗ್ ಫ್ರೀಜಿಂಗ್ ಎಂದರೇನು?

ಇನ್ನೂ 30 ವರ್ಷದ ದಾಟದ ಮಹಿಳೆಯೊಬ್ಬಳ ದೇಹದಿಂದ ಅಂಡಾಣುವನ್ನು ಸಂಗ್ರಹಿಸಿ ಇಡುವ ವಿಧಾನವೇ ಸೋಷಿಯಲ್ ಎಗ್ ಫ್ರೀಜಿಂಗ್. ಇದರಿಂದ ಆಕೆ ತಾನು ಬಯಸಿದಾಗ ಈ ಅಂಡಾಣುಗಳನ್ನು ಸಾಮಾನ್ಯ ಸ್ಥಿತಿಗೆ ತಂದು ಗರ್ಭಧರಿಸಬಹುದು. 38 ವರ್ಷ ಮೇಲ್ಪಟ್ಟವರಿಗೆ ಎಗ್ ಪ್ರೀಜಿಂಗ್ ಕಷ್ಟ. 

ವಯಸ್ಸಾದ ಬಳಿಕ ಕುಂಠಿತಗೊಳ್ಳುವ ಸಂತಾನ ಧಾರಣ ಶಕ್ತಿಯನ್ನು ಉತ್ತಮ ಆರೋಗ್ಯ ಶೈಲಿಯ ಮೂಲಕ ಮರಳಿ ಪಡೆಯಬಹುದೇ?

ಧೂಮಪಾನ, ಬೊಜ್ಜು, ಆರೋಗ್ಯಕ್ಕೆ ಮಾರಕ ಆಹಾರ ಸೇವನೆ ಮತ್ತು ಒತ್ತಡವು ಗುಣಮಟ್ಟದ ಅಂಡಾಣು/ ವೀರ್ಯಾಣುವಿನ ಮೇಲೆ ಪರಿಣಾಮ ಹೊಂದಿರುತ್ತದೆ. ಆರೋಗ್ಯಪೂರ್ಣ ಆಹಾರ ಸೇವನೆ, ನಿಯಮಿತವಾಗಿ ವ್ಯಾಯಾಮ, ಉತ್ತಮ ನಿದ್ದೆ, ಆರೋಗ್ಯಕರ ಜೀವನಶೈಲಿಯಿಂದ ಸಂತಾನಧಾರಣ ಶಕ್ತಿ ಹೆಚ್ಚಿಸಬಹುದು. ಇದು ನಮ್ಮ ಒಟ್ಟಾರೆ ಆರೋಗ್ಯವನ್ನು ಕೂಡ ಕಾಪಾಡಬಲ್ಲದು.

ಡಾ. ರಾಜಂ ಮುರಳಿ ಎಸ್.ಆರ್
ಡಾ. ದೇವಿಕಾ ಗುಣಶೀಲ

ಸಂತಾನಫಲ ತಜ್ಞರು, ಗುಣಶೀಲ ಫರ್ಟಿಲಿಟಿ ಸೆಂಟರ್,
ಬಸವನಗುಡಿ, ಬೆಂಗಳೂರು