ಕೊತ್ತಂಬರಿ, ಮೆಂತೆಯಿಂದ ಓಡಿ ಹೋಗುತ್ತೆ ಗ್ಯಾಸ್ಟ್ರಿಕ್ ಗುಮ್ಮ
ಈಗಿನ ಜೀವನಶೈಲಿ, ಒತ್ತಡದ ಬದುಕು ಹಾಗೂ ತಿನ್ನೋ ಆಹಾರದಿಂದ ಎಲ್ಲರೂ ಸಾಮಾನ್ಯವಾಗಿ ಅನುಭವಿಸೋ ಸಮಸ್ಯೆ ಎಂದರೆ ಗ್ಯಾಸ್ಟ್ರಿಕ್. ಇದಕ್ಕೆ ಸಿಂಪಲ್ ಮನೆ ಮದ್ದುಗಳಿವೆ. ಸುಖಾ ಸುಮ್ಮನೆ ಏನೇನೋ ಮಾತ್ರೆ, ಔಷಧಿಗಳನ್ನು ತಿನ್ನೋ ಬದಲು ಇವನ್ನು ಟ್ರೈ ಮಾಡಿ.
ಧಾವಂತದ ಜೀವನ ಕೇವಲ ಮಹಾನಗರಗಳಲ್ಲಿ ಅಷ್ಟೇ ಅಲ್ಲ , ಎಲ್ಲಡೆಯೂ ಇದೆ. ಕೆಲಸದ ಒತ್ತಡದ ಜೊತೆಗೆ ತರೇಹವಾರಿ ಖಾದ್ಯ, ತಿನಿಸುಗಳೂ ದೇಹಕ್ಕೆ ಹಾನಿ ಮಾಡುತ್ತವೆ. ಆರೋಗ್ಯಕರವಲ್ಲದ ತಿನ್ನುವ ಕ್ರಮವೂ ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗುತ್ತದೆ. ಈ ಸಮಸ್ಯೆಯೊಂದಿಗೆ ವ್ಯಾಧಿಗಳು ಸಾಲು ಸಾಲಾಗಿ ಆಕ್ರಮಿಸಿಬಿಡುವುದರಿಂದ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.
ಈಗ ಯಾರನ್ನೇ ಭೇಟಿಯಾದರೂ, ಹತ್ತರಲ್ಲಿ 7 ಮಂದಿ ತಮಗೆ ಗ್ಯಾಸ್ಟ್ರಿಕ್ ಇದೆ ಎಂದು ಹೇಳಿಕೊಳ್ಳುತ್ತಾರೆ. ಗ್ಯಾಸ್ಟ್ರಿಕ್ ಗಂಭೀರವಾದ ಸಮಸ್ಯೆಯೇನೂ ಅಲ್ಲ ಎಂದು ಅನ್ನಿಸಿದೂ ಅದು ನಮ್ಮ ದಿನನಿತ್ಯದ ಚಟುವಟಿಕೆಗಳನ್ನು ಸಮರ್ಪಕವಾಗಿ ನಡೆಸದಂತೆ ಕಿರಿಕಿರಿ ಉಂಟು ಮಾಡಿ ಬಿಡುತ್ತದೆ. ಆದರೆ ಇದರಿಂದ ಬಿಡಿಸಿಕೊಳ್ಳುವುದು ಸುಲಭವಲ್ಲದ ಕಾರಣ, ಬದುಕಿನ ಭಾಗವೆಂಬಂತೆ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಒಪ್ಪಿಕೊಂಡುಬಿಟ್ಟಿದ್ದಾರೆ. ಗ್ಯಾಸ್ಟ್ರಿಕ್ ಅಷ್ಟು ಸರಳ ಸಮಸ್ಯೆಯೇ? ಜ್ವರ, ಕೆಮ್ಮು, ನೆಗಡಿಯಷ್ಟು ಸರಳವಾಗಿ ಅದರನ್ನು ಪರಿಗಣಿಸಬಹುದೆ?
ಯಾಕೆ ಗ್ಯಾಸ್ಟ್ರಿಕ್ ಆಗುತ್ತೆ?
ನಾವು ಸೇವಿಸಿದ ಆಹಾರವನ್ನು ಪಚನ ಮಾಡಲು ಹೊಟ್ಟೆಯಲ್ಲಿ ಹೈಡ್ರೋಕ್ಲೋರಿಕ್ ಆಮ್ಲ ಉತ್ಪತ್ತಿಯಾಗುತ್ತದೆ. ಇದರಿಂದ ಮುಂದೆ ಸಣ್ಣ ಕರುಳು, ಯಕೃತ್ತು ಸ್ರವಿಸುವ
ರಸಗಳು ಪಚನವನ್ನು ಮುಂದುವರಿಸುತ್ತವೆ. ಊಟದಲ್ಲಿರುವ ಸಾರಾಂಶವನ್ನು ದೇಹಕ್ಕೆ ಹೀರಿಕೊಂಡು, ತ್ಯಾಜ್ಯ ವಸ್ತುವನ್ನು ಮುಂದೆ ತಳ್ಳುತ್ತವೆ. ಮತ್ತೆ ದೊಡ್ಡ ಕರುಳಿನ ಗ್ರಂಥಿಗಳು ತ್ಯಾಜ್ಯ ವಸ್ತುವಿನಲ್ಲಿನ ನೀರಿನಾಂಶವನ್ನು ಹೀರಿಕೊಂಡು ಮಲವನ್ನು ಗಟ್ಟಿಗೊಳಿಸುತ್ತವೆ. ಇದು ಸಕಾಲಿಕವಾಗಿ ದೇಹದಿಂದ ಹೊರಹೋಗುತ್ತದೆ. ಈ ಪ್ರಕ್ರಿಯೆಯಲ್ಲಿ ಸ್ರವಿಸುವ ರಸಗಳ ಪ್ರಮಾಣ, ಅಂಗಗಳ ಒಳಗೋಡೆಯ ಸಾಮರ್ಥ್ಯ, ಆಹಾರವನ್ನು ಮುಂದೆ ತಳ್ಳುವ ಕ್ಷಮತೆ ಮತ್ತು ಇವುಗಳಿಗೆ ಪೂರಕವಾಗಿರುವ ನರತಂತುಗಳ ಹೊಂದಾಣಿಕೆ ಅತಿ ಮುಖ್ಯ.
ಈ ಇಡೀ ಪ್ರಕ್ರಿಯೆಯಲ್ಲಿ ಆಗುವ ವ್ಯತ್ಯಾಸವೇ ಸಮಸ್ಯೆ ತಂದೊಡ್ಡುತ್ತದೆ. ಅತಿಯಾಗಿ ನೋವಿನ ಮಾತ್ರೆ ಸೇವಿಸುವುದರಿಂದ ಜಠರದ ಗೋಡೆಯಲ್ಲಿ ಊತವಾಗಿ ಹುಣ್ಣಾಗುತ್ತದೆ. ಅದರಿಂದ ನೋವು ಹಾಗೂ ಆಮ್ಲದ ಸ್ರವಿಸುವಿಕೆಯಲ್ಲಿ ಲೋಪ ಉಂಟಾಗುತ್ತದೆ. ಆಗ ಅಜೀರ್ಣ, ಹೊಟ್ಟೆಯುರಿ, ವೇದನೆ ಉಂಟಾಗುತ್ತದೆ. ಯಕೃತ್
ತೊಂದರೆಯಲ್ಲಿ ಸರಿಯಾಗಿ ಪಿತ್ತಸ್ರಾವ ಆಗದಿರುವಾಗ ಆಹಾರದಲ್ಲಿರುವ ಜಿಡ್ಡಿನಂಶದ ಪಚನ ಆಗುವುದಿಲ್ಲ. ಆಹಾರ ಮುಂದೆ ಹೋಗಲು ಸಮಯ ತೆಗೆದುಕೊಳ್ಳುತ್ತದೆ. ಅಂತೆಯೇ ಅದು ಹುಳಿಯಾಗಿ ವಾಯುವನ್ನು ಶೇಖರಿಸುತ್ತದೆ, ಇದರಿಂದ ಮಲಬದ್ಧತೆ ಉಂಟಾಗಬಹುದು.
ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಮಾಂಸ, ಬೇಳೆ, ಕಾಳು ಮುಂತಾದವುಗಳ ಪಚನಕ್ಕೆ ಹೆಚ್ಚಿನ ಆಮ್ಲದ ಅಗತ್ಯ ಇರುತ್ತದೆ. ಅದು ಹೆಚ್ಚಾಗಿ ಉತ್ಪತ್ತಿಯಾದಾಗ ಹುಣ್ಣಾಗುವ ಸಂಭವ ಹೆಚ್ಚು. ಒಂದು ವೇಳೆ ಸರಿಯಾಗಿ ಆಮ್ಲ ಸ್ರವಿಸದಿದ್ದಾಗ ಅಜೀರ್ಣವಾಗಿ ವಾಯು ತುಂಬಿ ಬಾಧೆ ಕೊಡುತ್ತದೆ. ಅಲ್ಲದೆ ಅಶುಚಿಯಾದ ಆಹಾರ ಸೇವನೆಯಿಂದ ಸೋಂಕು ತಗುಲಿ ಜಠರದಲ್ಲಿ ಹುಣ್ಣು ಆಗಬಹುದು. ಪಚನಕ್ಕೆ ಹಾಗೂ ಮಲದ ಉತ್ಪತ್ತಿಗೆ ನೀರು ಅತ್ಯವಶ್ಯಕ. ಸರಿಯಾಗಿ ನೀರು ಸೇವಿಸದಿದ್ದಲ್ಲಿ ಮಲಬದ್ದತೆ, ಅಜೀರ್ಣ ಉಂಟಾಗುತ್ತದೆ. ಇವೆಲ್ಲವುಗಳಲ್ಲಿ ತೊಂದರೆ ಸಾಮಾನ್ಯವಾಗಿ ಒಂದೇ ರೀತಿ ಇರುವಂತೆ ತೋರಿದರೂ ಕಾರಣ ಬೇರೆ ಬೇರೆ.
ಅಜೀರ್ಣಕ್ಕೆ ಒಳ್ಳೆಯದೆಂದು ಹೆಚ್ಚು ಜೀರಿಗೆ ಸೇವಿಸಿದರೆ, ಅತ್ಯಾಮ್ಲ ಇದ್ದವರಿಗೆ ತೊಂದರೆ ಹೆಚ್ಚುತ್ತದೆ! ಗ್ಯಾಸ್ಟ್ರಿಕ್‌ನಿಂದೇನು ಸಮಸ್ಯೆ? ಜೀರ್ಣಾಂಗದಲ್ಲಿ ಏನೇ ವ್ಯತ್ಯಾಸಗಳಾದರೂ ಅದನ್ನು ಸಹಿಸಿಕೊಳ್ಳುವುದು ಕಷ್ಟವೇ. ಅದು ನಮ್ಮೆಲ್ಲಾ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಆಹಾರ ಸೇವನೆ, ಕೌಟುಂಬಿಕ ವ್ಯವಹಾರ ಅಥವಾ ದೈನಂದಿನ ಯಾವುದೇ ಚಟುವಟಿಕೆಗಳಲ್ಲಿರಬಹುದು. ಎಲ್ಲವೂ ಅಸ್ತವ್ಯಸ್ಥವಾಗುವುದಕ್ಕೆ ಕಾರಣವಾಗಬಹುದು ಈ ಗ್ಯಾಸ್ಟ್ರಿಕ್ ಎಂಬ ಗುಮ್ಮ. ಸಾಮಾನ್ಯವಾಗಿ ಗ್ಯಾಸ್ಟ್ರಿಕ್ ಇದ್ದವರಲ್ಲಿ ಹೊಟ್ಟೆ ಉಬ್ಬರ, ಅತಿಯಾದ ತೇಗು, ಗುದದ್ವಾರದಿಂದ ವಾಯು ಹೊರಬರುವುದು, ಹೊಟ್ಟೆ ಹಿಂಡಿದಂತೆ ನೋವು, ಎದೆಯುರಿ, ಮಲ ವಿಸರ್ಜನೆಯಲ್ಲಿ ತೊಂದರೆ, ಹಸಿವಿನ ತೊಂದರೆ ಇರುತ್ತದೆ. ಈ ಸಮಸ್ಯೆ ಇಷ್ಟಕ್ಕೆ ಇದ್ದರೆ ಆಹಾರ ಮತ್ತು ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವ ಮೂಲಕ ನಿಯಂತ್ರಣಕ್ಕೆ ತಂದುಕೊಳ್ಳಬಹುದು. ಆದರೆ ಸಣ್ಣಪ್ರಮಾಣದ ಉಪೇಕ್ಷೆಯಿಂದ ಗ್ಯಾಸ್ಟ್ರಿಕ್ ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಉದಾಹರಣೆಗೆ ಹೈಪರ್ ಅಸಿಡಿಟಿ, ಪೆಪ್ಟಿಕ್ ಅಲ್ಸರ್, ಅಜೀರ್ಣ, ಪಿತ್ತಕೋಶದ ತೊಂದರೆ, ಯಕೃತ್ ದೋಷ, ಕರುಳಿನ ಸೋಂಕು, ಬೊಜ್ಜಿನ ತೊಂದರೆ, ಮಲಬದ್ಧತೆ. ಮೇಲ್ನೋಟಕ್ಕೆ ಇವು ಗ್ಯಾಸ್ಟ್ರಿಕ್‌ನಂತೆಯೇ ಭಾಸವಾಗುತ್ತವೆ. ಆದರೆ ಪರಿಣಾಮ ಮತ್ತು ತೀವ್ರತೆಗಳೆರಡೂ ಬೇರೆಯದೇ ಆಗಿರುತ್ತವೆ. ಗ್ಯಾಸ್ಟ್ರಿಕ್ ಅನ್ನು ಸೂಕ್ತ ರೀತಿಯಲ್ಲಿ ನಿಯಂತ್ರಿಸದೇ ಹೋದಾಗ ಈ ಸಮಸ್ಯೆಗಳು ಉಲ್ಬಣಿಸಿ ಅನಾರೋಗ್ಯ ಹೆಚ್ಚಿಸುತ್ತವೆ.
ಪರಿಹಾರವೇನು?
ಮೊಟ್ಟ ಮೊದಲಾಗಿ ಅವರ ಆಹಾರ ಕ್ರಮವನ್ನು ಪರಿಶೀಲಿಸಿ, ಪರಿಷ್ಕರಿಸಿಕೊಳ್ಳಬೇಕಾದಲ್ಲಿ ಸೂಕ್ತ ಸಲಹೆ ನೀಡಲಾಗುತ್ತದೆ. ಸೇವಿಸುವ ಆಹಾರಕ್ಕೂ ಉದರದ ಸಮಸ್ಯೆಗೂ ನೇರ ಸಂಬಂಧವಿರುವುದರಿಂದ, ಯಾವ ಆಹಾರ ತಿಂದ ತರುವಾಯ ಸಮಸ್ಯೆ ಉಲ್ಬಣಿಸುತ್ತದೆ ಎಂಬುದನ್ನು ರೋಗಿಯೇ ಪತ್ತೆ ಹಚ್ಚಿ, ಆಹಾರವನ್ನು ಬದಲಿಸಿಕೊಳ್ಳಬೇಕು. ಕೆಲವರಿಗೆ ಗೋಧಿ, ಹಾಲು, ಬೇಳೆ ಇತ್ಯಾದಿ ಆಹಾರ ಪದಾರ್ಥಗಳು ಜೀರ್ಣವಾಗುವುದಿಲ್ಲ. ಅಂಥವರು ಪರ್ಯಾಯ ಆಹಾರ ಪದಾರ್ಥಗಳನ್ನು ಸೇವಿಸಬೇಕು.
ಇನ್ನು ನಿಯಮಿತ ಸಮಯಕ್ಕೆ ಆಹಾರ ಸೇವನೆ ಮಾಡುವುದನ್ನು ರೂಢಿ ಮಾಡಿಕೊಳ್ಳುವುದು ಉತ್ತಮ. ಒಂದೊಂದು ದಿನ ಒಂದೊಂದು ಸಮಯದಲ್ಲಿ ಊಟ-ತಿಂಡಿ ಮಾಡಿದರೆ, ಮಾನವನ ಜೀರ್ಣಾಂಗ ವ್ಯೆಹ ಸರಿಯಾಗಿ ಕೆಲಸ ಮಾಡುವುದಿಲ್ಲ. ಆಹಾರ ಸೇವಿಸುವಾಗ ಅವಸರಿಸದೇ ಇರುವುದು ಒಳ್ಳೆಯದು. ಗಬಗಬನೇ ನುಂಗುವುದರಿಂದ,
ಇಲ್ಲವೇ ಎಡೆಬಿಡದೇ ಮಾತನಾಡುತ್ತಲೇ ತಿನ್ನುವುದರಿಂದ ಆವಶ್ಯಕತೆಗಿಂತ ಹೆಚ್ಚಿನ ಗಾಳಿ ಜಠರ ಸೇರುತ್ತದೆ. ಆಹಾರದಲ್ಲಿ ಮೊಸರು ಆಥವಾ ಮಜ್ಜಿಗೆಯನ್ನು ಬಳಸುವುದು ಜೀರ್ಣಾಂಗದ ಆರೋಗ್ಯಕ್ಕೆ ಪೂರಕ. ಸೊಪ್ಪು, ತರಕಾರಿ, ಸಾಂಬಾರ ಪದಾರ್ಥಗಳೂ ಜೀರ್ಣಾಂಗದ ಸಮಸ್ಯೆಗಳನ್ನು ನಿವಾರಿಸಲು ಸಹಕರಿಸುತ್ತವೆ.
ಗ್ಯಾಸ್ಟ್ರಿಕ್‌ಗೆ ಸರಳ ಮದ್ದು
- ರಾತ್ರಿ ಕೊತ್ತಂಬರಿ ಮತ್ತು ಮೆಂತ್ಯವನ್ನು ನೀರಲ್ಲಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಎದೆಯುರಿ, ಹುಳಿ ತೇಗು, ಅತ್ಯಾಮ್ಲತೆ ಶಮನವಾಗುತ್ತದೆ.
- ಆಹಾರ ಪಚನವಾಗದೇ ಹೊಟ್ಟೆಯುಬ್ಬರ ಇದ್ದಲ್ಲಿ ಜೀರಿಗೆ, ಒಣದ್ರಾಕ್ಷಿ, ಓಮದ ಕಾಳು ಜಜ್ಜಿ ಸೇವಿಸಿ
- ಹೇರಳವಾಗಿ ನೀರು ಮಜ್ಜಿಗೆ ಕುಡಿಯಿರಿ
- ಮಜ್ಜಿಗೆಗೆ ಹಿಂಗು, ಕರಿಬೇವು ಸೇರಿಸಿ ಕುಡಿದರೆ ಹೊಟ್ಟೆಯ ನುಲಿತ ಕಡಿಮೆಯಾಗುತ್ತದೆ
- ನೆಲ್ಲಿಕಾಯಿ ಪುಡಿ ಮಜ್ಜಿಗೆಯಲ್ಲಿ ಸೇರಿಸಿ ಕುಡಿಯುವುದು ಒಳ್ಳೆಯದು.
ಗ್ಯಾಸ್ಟ್ರಿಕ್ ಆಗದಂತೆ ಎಚ್ಚರ!
- ನಿಯಮಿತ ಸಮಯಕ್ಕೆ ಆಹಾರ ಸೇವನೆ
- ಶುಚಿಯಾದ ಆಹಾರ ಮತ್ತು ನೀರಿನ ಸೇವನೆ ಮಾಡುವುದು
- ಹೊರಗೆ ತಿನ್ನುವಾಗ ಎಚ್ಚರವಹಿಸಿ
- ಊಟವಾದ ಕೂಡಲೇ ಭಾರ ಎತ್ತುವುದು, ಮಲಗುವುದು ಮಾಡಬಾರದು
- ಖಾರ ಮಸಾಲೆ, ಮಾಂಸಾಹಾರ ಮಿತವಾಗಿ ಸೇವಿಸಿ
- ನೀರು, ಎಳನೀರನ್ನು ಯಥೇಚ್ಛವಾಗಿ ಸೇವಿಸಿ
- ಕರಿದ ಕುರುಕಲು ತಿಂಡಿಗಳು, ಸೋಡಾ ಬಳಸಿರುವಂತಹ ಆಹಾರ ಸೇವನೆ ಬೇಡ
- ಮೈದಾ ಹೆಚ್ಚಿರುವ (ಪಿಜ್ಜಾ ಇತ್ಯಾದಿ) ಆಹಾರಗಳ ಸೇವನೆ ಒಳ್ಳೆಯದಲ್ಲ
ಜಂಕ್ ಫುಡ್ ಸೇವಿಸುವ ಮುನ್ನ ಹುಷಾರ್..?
ಅಜೀರ್ಣಕ್ಕೆ ಉದ್ವೇಗವೂ ಆಗಬಲ್ಲದು ಕಾರಣ...
ಬರೀ ಹೊಟ್ಟೆಯಲ್ಲಿ ತಿನ್ನಬಾರದ ಆಹಾರಗಳು
ಗ್ಯಾಸ್ಟ್ರಿಕ್ ಸಮಸ್ಯೆ ಇದೆಯಾ..? ಈ ಆಹಾರಗಳನ್ನ ಬಿಟ್ಟು ಬಿಡಿ