ವಿದ್ಯಾರ್ಥಿ ಭವನಕ್ಕೆ ತುಂಬಿತು 75: ಪಯಣದ ಕಥೆ ಇಲ್ಲಿದೆ

ಹೂವಿನ ಮಾರ್ಕೆಟ್ಟು, ಹಣ್ಣಿನ ಸಂತೆ, ತರಕಾರಿ ಮಾರುಕಟ್ಟೆ, ಪುಸ್ತಕದ ಅಂಗಡಿ, ಮಾಸ್ತಿ ಕ್ಲಬ್ಬು, ಗ್ರಂಥಿಗೆ ಅಂಗಡಿ, ವೀಳ್ಯೆದೆಲೆ ಬುಟ್ಟಿ- ಹೀಗೆ ಏನೆಲ್ಲವನ್ನು ಮಾರುವ ಗಾಂಧಿಬಜಾರಿನ ನಟ್ಟನಡುವೆ ಘಮ್ಮನೆ ಮೂಗಿಗೆ ಅಡರುವ ಮಸಾಲೆ ದೋಸೆಯ ಪರಿಮಳಕ್ಕೆ ಮನಸೋಲದವರು ಯಾರಿದ್ದಾರೆ? ಬೆಳಗ್ಗೆ ಸಂಜೆ ಅಲ್ಲಿ ಜನ ಸಾಲುಗಟ್ಟಿ ನಿಂತು ಮಸಾಲೆ ದೋಸೆಗಾಗಿ ಕಾಯುತ್ತಾರೆ. ಆಧಾರ್ ಕಾರ್ಡು ಮಾಡಿಸಿಕೊಳ್ಳಲು ಕ್ಯೂ ನಿಲ್ಲುವಂತೆ ಸರದಿಯ ಸಾಲಲ್ಲಿ ನಿಂತು ದೋಸೆ ತಿನ್ನುತ್ತಾರೆ. ದೋಸೆಗೂ ಅದನ್ನು ತಿನ್ನುವವರಿಗೂ ಭಾವನಾತ್ಮಕ ಸಂಬಂಧ ಉಂಟೆಂಬುದು ಗೊತ್ತಾಗುವುದು ವಿದ್ಯಾರ್ಥಿ ಭವನಕ್ಕೆ ಕಾಲಿಟ್ಟಾಗಲೇ. ಈ ಹೋಟೆಲ್ಲಿನ ೭೫ ವರ್ಷಗಳ ಪಯಣದ ಕತೆ ಇಲ್ಲಿದೆ.

Gandhi Bazaar  Vidyarthi Bhavan turns 75

ವಿದ್ಯಾರ್ಥಿ ಭವನಕ್ಕೆ ಹೆಸರಿಟ್ಟದ್ದು
ಆ ಕಾಲಕ್ಕೆ ಸುತ್ತಮುತ್ತಲು ಇದ್ದದ್ದು ಸ್ಕೂಲು ಕಾಲೇಜುಗಳು. ದೂರದೂರದಿಂದ ಬರುವ ಮಕ್ಕಳಿಗೆ ಮಧ್ಯಾಹ್ನದ ಊಟಕ್ಕೆ, ಮೇಷ್ಟರುಗಳಿಗೆ ಏನಾದರೂ ಹೊಟ್ಟೆಗೆ ಹಾಕಿಕೊಳ್ಳುವುದಕ್ಕೆ ಅಲ್ಲಿದ್ದದ್ದು ಒಂದು ಪುಟ್ಟ ಹೋಟೆಲು. ಅದನ್ನು ನಡೆಸುತ್ತಿದ್ದವರು ಯಡಿಯೂರು ಮಧ್ಯಸ್ಥ. ಅವರು ಆ ಹೋಟೆಲನ್ನು ಮಾರಬೇಕು ಅಂದುಕೊಳ್ಳುವ ಹೊತ್ತಿಗೆ, ಹೋಟೆಲಿಗಾಗಿ ಹುಡುಕಾಟ ನಡೆಸಿದ್ದ ವೆಂಕಟರಮಣ ಉರಾಳರು, ಮಧ್ಯಸ್ಥರ ಹೋಟೆಲನ್ನು ಕೊಂಡುಕೊಂಡು ವಿದ್ಯಾರ್ಥಿಗಳಿಗೆ ಪ್ರಿಯವಾದ ತಿನಿಸುಗಳನ್ನು ಕೊಡುವ ಮೂಲಕ ಅದನ್ನು ಜನಪ್ರಿಯಗೊಳಿಸಿದರು. ಆ ಹೋಟೆಲಿಗೊಂದು ಹೆಸರಿಡಬೇಕು ಎಂದು ಯೋಚಿಸುತ್ತಿದ್ದಾಗ ಉರಾಳರ ಮಿತ್ರರಾದ ರಾಮ ಅಲ್ಸೆ, ಎರಡು ಶಾಲೆಗಳ ನಡುವೆ ಇರುವ ಹೋಟೆಲ್ಲಿಗೆ ವಿದ್ಯಾರ್ಥಿ ಭವನ ಎಂದು ಹೆಸರಿಡಲು ಸೂಚಿಸಿದರು. ೧೯೪೪ರಲ್ಲಿ ವಿದ್ಯಾರ್ಥಿ ಭವನ ಕಣ್ತೆರೆಯಿತು.

ಉರಾಳರಿಂದ ಅಡಿಗರ ಕೈಗೆ
ವೆಂಕಟರಮಣ ಉರಾಳರು ಸೋದರ ಪರಮೇಶ್ವರ ಉರಾಳರ ಜೊತೆಗೆ 75 ವರ್ಷ ವಿದ್ಯಾರ್ಥಿ ಭವನವನ್ನು ನಡೆಸಿಕೊಂಡು ಬಂದರು. ನಂತರ ಅದನ್ನು ದಕ್ಷಿಣ ಕನ್ನಡ ಜಿಲ್ಲೆಯ ಶಂಕರನಾರಾಯಣದಿಂದ ಬಂದ ರಾಮಕೃಷ್ಣ ಅಡಿಗರಿಗೆ ಹಸ್ತಾಂತರ ಮಾಡಿದರು. ಅಡಿಗರು ಬೆಂಗಳೂರಿನ ದಂಡು ಪ್ರದೇಶದಲ್ಲಿದ್ದ ಲಕ್ಷ್ಮೀ ಭವನದಲ್ಲಿ ಕೆಲಸ ಮಾಡುತ್ತಿದ್ದರು. ಶಾನಾಡಿ ಶಂಕರಭಟ್ಟರ ಮಗಳು ಭಾಗೀರಥಿಯನ್ನು ಮದುವೆಯಾದ ಅಡಿಗರಿಗೆ ಮಾವ ನೀಡಿದ ಉಡುಗೊರೆಯೆಂಬಂತೆ ವಿದ್ಯಾರ್ಥಿ ಭವನ ಅವರ ಪಾಲಿಗೆ ಬಂತು. 1970 ರಿಂದ ರಾಮಕೃಷ್ಣ ಅಡಿಗರ ಸಾರಥ್ಯದಲ್ಲಿ ವಿದ್ಯಾರ್ಥಿ ಭವನ ನಡೆಯತೊಡಗಿತು.

ವೈಯನ್ಕೆ ಫೇವರಿಟ್ ಹೋಟೆಲ್
ಕನ್ನಡಪ್ರಭ ಸಂಪಾದಕರಾಗಿದ್ದ ವೈಯನ್ಕೆ ಅಚ್ಚುಮೆಚ್ಚಿನ ಹೋಟೆಲ್ ಆಗಿತ್ತು ವಿದ್ಯಾರ್ಥಿ ಭವನ. ಭಾನುವಾರ ಬೆಳಗ್ಗೆ ವಿದ್ಯಾರ್ಥಿ ಭವನಕ್ಕೆ ಹೋಗಿ ಅರ್ಧ ಮಸಾಲೆದೋಸೆ ತಿನ್ನುವುದು ಅವರ ಜೀವನ ಶೈಲಿಯ ಒಂದು ಭಾಗವೇ ಆಗಿತ್ತು. ಹಿರಿಯ ಸಾಹಿತಿಗಳಾದ ಮಾಸ್ತಿ, ಡಿವಿಜಿ, ಗೋಪಾಲಕೃಷ್ಣ ಅಡಿಗ, ನಿಸಾರ್ ಅಹಮದ್ ಪತ್ರಕರ್ತರಾದ ಟಿಎಸ್ಸಾರ್, ಖಾದ್ರಿ ಶಾಮಣ್ಣ, ಇನ್‌ಫೋಸಿಸ್ ನಾರಾಯಣ ಮೂರ್ತಿ, ವಿಜ್ಞಾನಿ ಸಿಎನ್‌ಆರ್ ರಾವ್, ರಾಜಕಾರಣಿಗಳ ಪೈಕಿ ದೇವೇಗೌಡ, ರಾಮಕೃಷ್ಣ ಹೆಗಡೆ, ಎಸ್ ಎಂ ಕೃಷ್ಣ, ಯಡಿಯೂರಪ್ಪ, ಅನಂತಕುಮಾರ್, ನಟರಾದ ರಾಜ್‌ಕುಮಾರ್, ವಿಷ್ಣುವರ್ಧನ್- ಹೀಗೆ ಎಲ್ಲರೂ ವಿದ್ಯಾರ್ಥಿ ಭವನದ ದೋಸೆ ರುಚಿಗೆ ಮಾರುಹೋಗಿದ್ದವರೇ ಆಗಿದ್ದರು.

ಸಾಹಿತಿ ಕಲಾವಿದರ ಚಿತ್ರ ಚಿತ್ತಾರ
ವಿದ್ಯಾರ್ಥಿ ಭವನದಲ್ಲಿ ಕೆಲಸ ಮಾಡುತ್ತಿದ್ದ ಸು. ವಿ. ಮೂರ್ತಿ ಕಲಾವಿದರೂ ಹೌದು. ಅವರ ಕೈಚಳಕದಲ್ಲಿ ಅರಳಿದ ಚಿತ್ರಗಳು ವಿದ್ಯಾರ್ಥಿ ಭವನದ ಗೋಡೆಯನ್ನು ಅಲಂಕರಿಸಿವೆ. ಹೋಟೆಲ್ಲಿಗೆ ಬಂದವರ ರೇಖಾಚಿತ್ರಗಳನ್ನು ಪೆನ್ಸಿಲ್ಲಿನಲ್ಲಿ ರಚಿಸಿ, ಅದನ್ನು ಗೋಡೆಯಲ್ಲಿ ತೂಗುಹಾಕಿರುವುದು ವಿದ್ಯಾರ್ಥಿ ಭವನವನ್ನು ಒಂದು ಸಾಹಿತ್ಯ ಚರಿತ್ರೆಯ ಸಂಗಮ ತಾಣವನ್ನಾಗಿ ಮಾಡಿದೆ. ವಿದ್ಯಾರ್ಥಿ ಭವನದಲ್ಲಿ ಆಗಾಗ ನಾಟಕ, ಕಾವ್ಯಗೋಷ್ಠಿ, ಕವನ ವಾಚನ, ಕಥಾ ವಾಚನಗಳು ನಡೆಯುವುದುಂಟು. ಒಂದು ಕಾಲದಲ್ಲಿ ಅದು ಸಾಹಿತಿಗಳ ಮೀಟಿಂಗ್ ಪಾಯಿಂಟ್ ಆಗಿತ್ತು. 1954 ರಿಂದಲೇ ವಿದ್ಯಾರ್ಥಿ ಭವನದ ಗಿರಾಕಿಯಾಗಿರುವ ನಿಸಾರ್ ಅಹಮದ್, ವಿದ್ಯಾರ್ಥಿ ಭವನದ ದೋಸೆಯನ್ನೂ ರೇಖಾ ಚಿತ್ರವನ್ನೂ ಏಕಪ್ರಕಾರವಾಗಿ ಮೆಚ್ಚಿಕೊಂಡಿದ್ದರು.

ವಿದ್ಯಾರ್ಥಿ ಭವನದಲ್ಲಿ ಅರುಣೋದಯ
ರಾಮಕೃಷ್ಣ ಅಡಿಗರ ಮಕ್ಕಳಿಬ್ಬರೂ ಇಂಜಿನಿಯರಿಂಗ್ ಓದಿದವರು. ಹಿರಿಯ ಮಗ ಡೆಟ್ರಾಯಿಟ್‌ನಲ್ಲಿದ್ದಾರೆ. ಕಿರಿಯ ಮಗ ಅರುಣ್ ರಿಲಯನ್ಸ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರು. ಮಕ್ಕಳಿಬ್ಬರೂ ಬೇರೆ ವೃತ್ತಿ ಹಿಡಿದಾಗ ಅರವತ್ತರ ಹರೆಯದ ಅಡಿಗರು, ಹೋಟೆಲನ್ನು ಮಾರುವ ನಿರ್ಧಾರ ಮಾಡಿದ್ದರು. ಆಗ ಕಿರಿಯ ಮಗ ಅರುಣ್ಮನಸ್ಸು ಬದಲಾಯಿಸಿದವರು ಜೈರಾಜ್ ಮತ್ತು ಎನ್ ಆರ್ ನಾರಾಯಣ ಮೂರ್ತಿ. ನಾರಾಯಣ ಮೂರ್ತಿ ಹೋಟೆಲ್ಲಿಗೆ ಬಂದಾಗ ಹೇಳಿದ ಮಾತು ಅರುಣ್ ಮನ ಪರಿವರ್ತನೆಗೆ ಕಾರಣವಾಯಿತು. ಅವರು ಅಂದಿದ್ದರು: ರಿಲೈಯನ್ಸ್ ಕಂಪೆನಿಗೆ ಯಾರು ಬೇಕಾದರೂ ಸೇರಬಹುದು. ನೀನು ಅಲ್ಲಿದ್ದರೂ ಇಲ್ಲದಿದ್ದರೂ ಸಂಸ್ಥೆಗೇನೂ ವ್ಯತ್ಯಾಸ ಆಗುವುದಿಲ್ಲ. ಆದರೆ ವಿದ್ಯಾರ್ಥಿ ಭವನಕ್ಕೆ ನೀನೇ ಬೇಕು. ನಿನ್ನ ಬದಲು ಬೇರೆ ಯಾರೋ ಬಂದು ಇದನ್ನು ಮುಂದುವರಿಸಿಕೊಂಡು ಹೋಗಲು ಆಗುವುದಿಲ್ಲ. ನೀನಿದ್ದರೆ ಹೋಟೆಲ್ ಇರುತ್ತದೆ. ನೀನಿಲ್ಲದೇ ಹೋದರೂ ರಿಲೈಯನ್ಸ್ ಇರುತ್ತದೆ. ಈ ಮಾತು ಕೇಳಿದ್ದೇ ತಡ, ಕೆಲಸಕ್ಕೆ ರಾಜೀನಾಮೆ ಕೊಟ್ಟರು. ಹೋಟೆಲಿಗೆ ಕಾಲಿಟ್ಟರು ಅರುಣ್.

ಸವಾಲಿನಲ್ಲಿ ಗೆದ್ದರೆ ಮಸಾಲೆದೋಸೆ
ಖ್ಯಾತ ನಿರ್ದೇಶಕ, ನಾಟಕಕಾರ ಟಿ ಎನ್ ಸೀತಾರಾಮ್ನ್ಯಾಷನಲ್ ಕಾಲೇಜಿನಲ್ಲಿ ಓದುತ್ತಿದ್ದ ದಿನಗಳಲ್ಲಿ ವಿದ್ಯಾರ್ಥಿ ಭವನ ಅತ್ಯಂತ ಜನಪ್ರಿಯವಾಗಿತ್ತು. ವಿದ್ಯಾರ್ಥಿಗಳ ನಡುವೆ ಯಾವುದಾದರೂ ವಿಚಾರದಲ್ಲಿ ಚಾಲೆಂಜ್ ಏರ್ಪಟ್ಟರೆ, ಗೆದ್ದವರಿಗೆ ಸೋತವರು ವಿದ್ಯಾರ್ಥಿ ಭವನದಲ್ಲಿ ಮಸಾಲೆ ದೋಸೆ ಕೊಡಿಸಬೇಕಾಗಿ ಬರುತ್ತಿತ್ತು. ವಿದ್ಯಾರ್ಥಿ ಭವನದಲ್ಲಿ ದೋಸೆ ತಿನ್ನುವುದು ಆ ಕಾಲದ ವಿದ್ಯಾರ್ಥಿ ಷೋಕಿಗಳಲ್ಲಿ ಒಂದಾಗಿತ್ತು. ಅಷ್ಟೇ ಅಲ್ಲ, ಸಾಹಿತಿಗಳೂ ಸಿನಿಮಾ ನಟರೂ ಸವಾಲು ಹಾಕಿದಾಗ, ಗೆದ್ರೆ ವಿದ್ಯಾರ್ಥಿ ಭವನದಲ್ಲಿ ಮಸಾಲೆ ದೋಸೆ ಕೊಡಿಸ್ತೀನಿ ಕಣಯ್ಯ ಎಂದು ಆಸೆ ತೋರಿಸುತ್ತಿದ್ದರು

75ನೇ ವರ್ಷದ ಮಹೋತ್ಸವ

ಇದೀಗ 75ನೇ ವರ್ಷಾಚರಣೆ ಮಾಡುತ್ತಿರುವ ವಿದ್ಯಾರ್ಥಿ ಭವನದ ಹೆಮ್ಮೆಗೆ ಭಾರತೀಯ ಅಂಚೆ ಇಲಾಖೆ, ವಿದ್ಯಾರ್ಥಿ ಭವನದ ಅಂಚೆಚೀಟಿ ಮತ್ತು ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡುತ್ತಿದೆ. ಕಳೆದ ಎಪ್ಪತ್ತೈದು ವರ್ಷಗಳ ಅವಧಿಯ ನೆನಪುಗಳನ್ನು ಮೆಲುಕು ಹಾಕುವ ಕಾಫಿ ಟೇಬಲ್ ಪುಸ್ತಕ ಹೊರಬರುತ್ತಿದೆ. ಹೋಟೆಲ್ ನೌಕರರು ಹಾಗೂ ಹಿರಿಯ ಗ್ರಾಹಕರಿಗೆ ಗೌರವ ಸಮರ್ಪಣೆಯಿದೆ. ಭಾವಗೀತೆ ಗಾಯನವಿದೆ. ಅಮೃತ ಮಹೋತ್ಸವ ವರ್ಷದಲ್ಲಿ ಹೋಟೆಲಿಗೆ ಬರುವ ಸೈನಿಕರಿಗೆ ಉಚಿತ ತಿಂಡಿ ನೀಡಲು ನಿರ್ಧರಿಸಿದ್ದಾರೆ.

ನಾಳೆ, ಅಕ್ಟೋಬರ್ 26ರ ಸಂಜೆ 5.30ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಅಮೃತವರ್ಷ ಕಾರ್ಯಕ್ರಮ. ಅದಕ್ಕೆ ಎಂ ಎನ್ ವೆಂಕಟಾಚಲಯ್ಯ, ಸಿಎನ್‌ಆರ್ ರಾವ್, ನಿಸಾರ್ ಅಹಮದ್, ಸದಾನಂದ ಮಯ್ಯ ಮತ್ತು ಅಂಚೆ ಮಹಾಪ್ರಬಂಧಕ ಚಾರ್ಲ್ಸ್ ಲೋಬೋ ಅತಿಥಿಗಳು.

Latest Videos
Follow Us:
Download App:
  • android
  • ios