ಮಳೆಗಾಲದಲ್ಲಿ ಮೀನೂಟ ಬಾರೀ ರುಚಿ!

Fishing in Malenadu
Highlights

ತುಳು ಭಾಷೆಯಲ್ಲಿ ಉಬಾರ್ ಎಂದರೆ ಉಬ್ಬರ. ಹಿಮ್ಮುಖವಾಗಿ ನೀರು ಹರಿಯುವುದು ಎಂದರ್ಥ. ಗುದ್ದುನು ಎಂದರೆ ಹೊಡೆಯುವುದು ಎಂದರ್ಥ. ಮಳೆಯ ರಾತ್ರಿ ಮೀನು ಹೊಡೆಯುವ ಗಮ್ಮತ್ತು ರಾತ್ರಿ ಹೊತ್ತು ದೊಂದಿ, ಬ್ಯಾಟರಿ, ಹೆಡ್‌ಲೈಟ್ ಸಹಾಯದಿಂದ ಹೊಳೆ, ತೋಡುಗಳಲ್ಲಿ ಈ ಮೀನು ಹಿಡಿಯುವ ರೂಢಿ.ಚಳಿ ಮಳೆ, ಗಾಢ ಕತ್ತಲು, ಕದಡಿದ ನೀರಿನಲ್ಲಿ ಮೀನು ಹುಡುಕುತ್ತಾ ಕತ್ತಿ ಬೆನ್ನಿನಿಂದ ಮೀನಿಗೆ ಹೊಡೆದು ಹಿಡಿಯುವುದರ ಮಜಾವೇ ಬೇರೆ.

ಜೂನ್‌ನ ಜಡಿ ಮಳೆಗಾಲ ಆರಂಭದಲ್ಲಿ ಬತ್ತಿದ್ದ  ನದಿ, ಹೊಳೆ, ತೋಡುಗಳಲ್ಲಿ ಮೊಳಕಾಲ ಮಟ್ಟ ಕದಡಿದ ಕೆಂಪು ಮಳೆ ನೀರು ಹರಿಯಲಾರಂಭಿಸುತ್ತದೆ. ಈ ನೀರಿನಲ್ಲಿ ಮೀನು ಹಿಡಿಯುವುದೇ ‘ಉಬಾರ್ ಗುದ್ದುನು’.

ತುಳು ಭಾಷೆಯಲ್ಲಿ ಉಬಾರ್ ಎಂದರೆ ಉಬ್ಬರ. ಹಿಮ್ಮುಖವಾಗಿ ನೀರು ಹರಿಯುವುದು ಎಂದರ್ಥ. ಗುದ್ದುನು ಎಂದರೆ ಹೊಡೆಯುವುದು ಎಂದರ್ಥ. ಮಳೆಯ ರಾತ್ರಿ ಮೀನು ಹೊಡೆಯುವ ಗಮ್ಮತ್ತು ರಾತ್ರಿ ಹೊತ್ತು ದೊಂದಿ, ಬ್ಯಾಟರಿ, ಹೆಡ್‌ಲೈಟ್  ಸಹಾಯದಿಂದ ಹೊಳೆ, ತೋಡುಗಳಲ್ಲಿ ಈ ಮೀನು ಹಿಡಿಯುವ ರೂಢಿ.ಚಳಿ ಮಳೆ, ಗಾಢ ಕತ್ತಲು, ಕದಡಿದ ನೀರಿನಲ್ಲಿ ಮೀನು ಹುಡುಕುತ್ತಾ ಕತ್ತಿ ಬೆನ್ನಿನಿಂದ ಮೀನಿಗೆ
ಹೊಡೆದು ಹಿಡಿಯುವುದರ ಮಜಾವೇ ಬೇರೆ.

ಬಲು ರುಚಿ- ಆರೋಗ್ಯಕ್ಕೂ ಒಳ್ಳೆಯದು 

ವರ್ಷವಿಡೀ ಸಮುದ್ರದ ಉಪ್ಪು ನೀರಿನ ಮೀನು ತಿಂದವರಿಗೆ ವರ್ಷಕ್ಕೊಮ್ಮೆ ನದಿಯ ಸಿಹಿ ನೀರಿನ ಈ ಉಬಾರ್ ಮೀನು ಬಹಳ ರುಚಿಕರವಾಗಿರುತ್ತದೆ. ಮೊದಲ ಮಳೆಯಲ್ಲಿ ಸಿಗುವ ಈ ಮೀನು ಆರೋಗ್ಯಕ್ಕೂ ಒಳ್ಳೆಯದು.

ಎಂತೆಂತಹ ಮೀನುಗಳು..

ನದಿಗಳಲ್ಲಿರುವ ಕಪ್ಪು(ಕಲ್ಲು) ಏಡಿ, ಮುಗುಡು, ಮರಿ ಮುಗುಡು, ಅಬ್ರೋಣಿ, ಕಿಜನ್, ಮಾಲಾಯಿ, ವಾಳೆ (ಬಾಲೆ) ಮೀನು ಇತ್ಯಾದಿಗಳು ಹೇರಳವಾಗಿ ಸಿಗುತ್ತವೆ. ಆಹಾರದಾಸೆಗೆ ಓಡುವ ಮೀನು ಆಹಾರವಾಗುತ್ತವೆ! ಬೇಸಿಗೆ ಕಾಲದಲ್ಲಿ ನದಿ, ಹೊಳೆ, ಕೆರೆಗಳ ಮೀನುಗಳು ತಳದ ಕೆಸರಿನಲ್ಲಿ ಹೂತುಕೊಂಡು ಜೀವವನ್ನು ಕಾಪಾಡಿಕೊಂಡಿರುತ್ತವೆ. ನೀರಿಲ್ಲದಿದ್ದರೂ ಒಣ ಕೆಸರನೊಳಗೆ ಬದುಕುತ್ತವೆ. ಬತ್ತಿದ್ದ ಹೊಳೆ, ತೋಡುಗಳಲ್ಲಿ ಮಳೆಯ ಕೆಂಪು ನೀರು ತುಂಬಿದಾಗ ನಾನಾ ಬಗೆಯ ಮೀನುಗಳು, ಏಡಿಗಳು ಬಿಲದಿಂದ ಹೊರಗೆ ಬಂದು ನೀರಿನ ಹರಿವಿಗೆ ಎದುರಾಗಿ (ಹಿಮ್ಮುಖವಾಗಿ) ಚಲಿಸುತ್ತಿರುತ್ತವೆ.

ಎತ್ತರದಿಂದ ಮೊದಲ ಮಳೆಯ ನೀರು ಹರಿದು ಬರುವಾಗ, ತನ್ನೊಂದಿಗೆ ಕಾಡಿನ ಮಣ್ಣು, ಕೊಳೆತ ತ್ಯಾಜ್ಯದ ಎಲೆ, ಸತ್ತ ಪ್ರಾಣಿಗಳು ಇತ್ಯಾದಿಗಳನ್ನೆಲ್ಲಾ ಕೊಚ್ಚಿಕೊಂಡು ಬರುತ್ತದೆ. ಅದೇ ಮೀನುಗಳಿಗೆ ಆಹಾರವಾಗಿರುತ್ತದೆ. ಅದರ ಪರಿಮಳವನ್ನು ಬೆನ್ನು ಹಿಡಿದು ನೀರಿನಲ್ಲಿ ಹಿಮ್ಮುಖವಾಗಿ ಓಡುವ ಮೀನುಗಳೇ ಬೇಟೆಗಾರನ ಕತ್ತಿಗೆ ಬಲಿಯಾಗುತ್ತವೆ.

ಏಡಿ ಕಚ್ಚಿಕೊಂಡರೆ ಬಿಡಿಸಿಕೊಳ್ಳುವುದು ಕಷ್ಟ:

ಉಬಾರ್ ಗುದ್ದಲು ಅನುಭವ ಬೇಕು. ಹರಿತವಾದ ಕತ್ತಿಯನ್ನು ನೀರಿನಲ್ಲಿ ಮೀನಿಗೆ ಬೀಸುವಾಗ ತಪ್ಪಿ ಮೊಣಕಾಲಿಗೆ ತಾಗುವುದಿದೆ. ಜೊತೆಗೆ ನೀರಿನಲ್ಲಿರುವ ಮುಳ್ಳು, ಗಾಜಿನ ಚೂರುಗಳೂ ಚುಚ್ಚುತ್ತವೆ, ಏಡಿ ಕಚ್ಚಿದರೆ ಅಸಾಧ್ಯ ನೋವು, ಬಿಡಿಸಿಕೊಳ್ಳುವಷ್ಟರಲ್ಲಿ ಇಷ್ಟುದ್ದ ಗಾಯವಾಗಿ ಬಿಡುತ್ತದೆ. ರಾತ್ರಿ ವೇಳೆ ಹಾವುಗಳ ಕಾಟವೂ ಇರುತ್ತದೆ. ಮಳೆಗೆ ನೆನೆದು ಜ್ವರ ಬರುವುದೂ ಇದೆ.

-ಸುಭಾಷ್ ಚಂದ್ರ ವಾಗ್ಳೆ  

loader