ಮಳೆಗಾಲದಲ್ಲಿ ಮೀನು ಹಿಡಿಯುವ ಮಜವೇ ಬೇರೆ!
ಬೆತ್ತದಿಂದ ವಿಶಿಷ್ಟವಾದ ಆಕಾರದಲ್ಲಿ ರಚಿಸುವ ಕೂಲಿ ಹಾಗೂ ಗೊಂಬೊಲೆ ಬಳಸಿ ಮೀನು ಹಾಗೂ ಏಡಿ ಹಿಡಿಯುವ ತಂತ್ರವೂ ಹಳ್ಳಿಗರಲ್ಲಿದೆ. ಗೊಂಬೊಲೆಯ ಒಳಗೆ ಮೀನಿನ ತುಣಕನ್ನು ಇಟ್ಟು ಅದನ್ನು ಹರಿಯುವ ನೀರಿನಲ್ಲಿ ಇಟ್ಟರೆ ಆಯ್ತು. ಮೀನಿನ ವಾಸನೆ ಹಿಡಿದು ಬರುವ ಮೀನು, ಏಡಿಗಳು ಇದರಲ್ಲಿ ಒಳಹೊಕ್ಕಿದರೆ ಬಂದಿಯಾದಂತೆ. ಹೀಗೆ ಸಂಗ್ರಹವಾದ ಏಡಿ, ಮೀನನ್ನು ತಂದು ಸಾರು, ಫ್ರೈ ಮಾಡಿ ತಿನ್ನುವ ಸಡಗರ . ಗೊಂಬೊಲೆ, ಕೂಲಿಯ ರಚನೆ ಒಂದೊಂದು ಕಡೆ ಒಂದೊಂದು ರೀತಿ. ಉದ್ದವಾಗಿ ರಚಿಸುವುದು, ಅಂಡಾಕೃತಿ, ಚಿಕ್ಕದು ಹೀಗೆ ಬೇರೆ ಬೇರೆ ಆಕಾರದಲ್ಲಿ ಇರುತ್ತದೆ.
ಮಳೆಗಾಲದಲ್ಲಿ ಉತ್ತರ ಕನ್ನಡದ ಯಾವುದೆ ಹಳ್ಳಿಗೆ ಹೋಗಿ ನೋಡಿ, ಕೊಂಡ್ಲಿ ಬಲೆ, ಕೂಲಿ, ಗಾಳ ಹಿಡಿದು ಮೀನು, ಏಡಿ ಬೇಟೆಗೆ ತದೇಕಚಿತ್ತದಿಂದ ಕಾಯುತ್ತಿರುವವರ ಕಾಣದಿದ್ದರೆ ಹೇಳಿ. ಹೊರಗೆ ಸುರಿಯುವ ಮಳೆ, ಮನೆಯೊಳಗೆ ಆಗ ತಾನೆ ಹಿಡಿದು ತಂದ ಏಡಿ, ಮೀನಿನ ಬಿಸಿಬಿಸಿ ಅಡುಗೆ ತಯಾರಿಸಿ ಊಟ ಮಾಡುವ ಗಮ್ಮತ್ತೆ ಬೇರೆ.
ಚಿಕ್ಕದಾದ ಕೋಲು, ಅದಕ್ಕೊಂದು ದಾರ, ದಾರದ ತುದಿಗೆ ಸರಿಗೆಯ ಕೊಕ್ಕೆ. ಅದಕ್ಕೊಂದು ಎರೆಹುಳ ಹಾಗೂ ಮೀನಿನ ಚಿಕ್ಕ ತುಣುಕನ್ನು ಸಿಕ್ಕಿಸಿ ಗಂಟೆ ಕಾಲ ತದೇಕಚಿತ್ತದಿಂದ ಕುಳಿತು ದಾರ ಬಿಗುವಾಗುತ್ತಿದ್ದಂತೆ ಚಕ್ಕನೆ ಎಳೆದಾಗ ಒಂದು ಮೀನು ಕೈಗೆ ಬಂದಿರುತ್ತದೆ. ಬೆತ್ತದಿಂದ ವಿಶಿಷ್ಟವಾದ ಆಕಾರದಲ್ಲಿ ರಚಿಸುವ ಕೂಲಿ ಹಾಗೂ ಗೊಂಬೊಲೆ ಬಳಸಿ ಮೀನು ಹಾಗೂ ಏಡಿ ಹಿಡಿಯುವ ತಂತ್ರವೂ ಹಳ್ಳಿಗರಲ್ಲಿದೆ. ಗೊಂಬೊಲೆಯ ಒಳಗೆ ಮೀನಿನ ತುಣಕನ್ನು ಇಟ್ಟು ಅದನ್ನು ಹರಿಯುವ ನೀರಿನಲ್ಲಿ ಇಟ್ಟರೆ ಆಯ್ತು.
ಮೀನಿನ ವಾಸನೆ ಹಿಡಿದು ಬರುವ ಮೀನು, ಏಡಿಗಳು ಇದರಲ್ಲಿ ಒಳಹೊಕ್ಕಿದರೆ ಬಂದಿಯಾದಂತೆ. ಹೀಗೆ ಸಂಗ್ರಹವಾದ ಏಡಿ, ಮೀನನ್ನು ತಂದು ಸಾರು, ಫ್ರೈ ಮಾಡಿ ತಿನ್ನುವ ಸಡಗರ . ಗೊಂಬೊಲೆ, ಕೂಲಿಯ ರಚನೆ ಒಂದೊಂದು ಕಡೆ ಒಂದೊಂದು ರೀತಿ. ಉದ್ದವಾಗಿ ರಚಿಸುವುದು, ಅಂಡಾಕೃತಿ, ಚಿಕ್ಕದು ಹೀಗೆ ಬೇರೆ ಬೇರೆ ಆಕಾರದಲ್ಲಿ ಇರುತ್ತದೆ. ಇದಕ್ಕೆ ಪ್ರಾದೇಶಿಕವಾಗಿ ಬೇರೆ ಬೇರೆ ಹೆಸರಿನಲ್ಲಿ ಕರೆಯಲಾಗುತ್ತದೆ. ಆದರೆ ಮೀನು ಹಾಗೂ ಏಡಿ ಹಿಡಿಯಲು ಬಳಸುವ ಸಾಂಪ್ರದಾಯಿಕ ಸಾಧನ ಇದಾಗಿದೆ.
ಕೊಂಡ್ಲಿ ಬಲೆ ಚಿಕ್ಕದಾದ ಬಲೆ. ಇದೂ ಕೂಡ ಹರಿಯುವ ನೀರಿನಲ್ಲಿ ಮೀನು, ಏಡಿಯನ್ನು ಹಿಡಿಯಲು ಬಳಸಲಾಗುತ್ತದೆ. ಬಲೆ ಹಿಡಿದು ಮೆಲ್ಲನೆ ಹೋಗುತ್ತಿರುವಾಗ ಏಡಿ, ಮೀನು ಕಣ್ಣಿಗೆ ಬಿತ್ತೆಂದರೆ ಸರಕ್ಕೆಂದು ಬಲೆ ಬೀಸಿ ಮೀನು ಹಿಡಿಯುತ್ತಾರೆ. ಮಧ್ಯರಾತ್ರಿಯಲ್ಲೂ ಮೀನು, ಏಡಿಯ ಬೇಟೆ ನಡೆಯುವುದು ವಿಶೇಷ. ಒಂದು ಹೆಡ್ ಲೈಟ್ ಒಂದು ಕತ್ತಿ ಹಿಡಿದು ಗದ್ದೆ ಅಥವಾ ಹಳ್ಳಕ್ಕೆ ಹೋದರೆಂದರೆ ಮರುದಿನ ಮನೆಯಲ್ಲಿ ಸಮಾರಾಧನೆ. ಬೆಳಕಿಗೆ ಆಕರ್ಷಿತವಾಗಿ ಬರುವ ಮೀನು, ಏಡಿಯನ್ನು ಕತ್ತಿಯಿಂದ ಕಡಿದು ಹಿಡಿದು ಬುಟ್ಟಿ ತುಂಬುತ್ತಾರೆ.
ಕೆಲವರು ಮೊನಚಾದ ಕಟ್ಟಿಗೆಯಿಂದ ಮೀನು, ಏಡಿ ಬೇಟೆಯಾಡುವುದೂ ಇದೆ. ಸಮುದ್ರದ ಮೀನು ಹಾಗೂ ಏಡಿಗಳಿಗಿಂತ ಸಿಹಿನೀರಿನ ಮೀನು, ಏಡಿಯ ರುಚಿಯಲ್ಲಿ ವ್ಯತ್ಯಾಸ ಇರುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಸಿಗುವ ಇದು ತುಂಬ ಸ್ವಾದಿಷ್ಟಕರ. ಹೀಗಾಗಿ ತಾಜಾ ಹಿಡಿದು ತಂದ ಇದನ್ನು ತಿನ್ನಲು ಮನೆ ಮಂದಿಯೆಲ್ಲ ಕಾತರದಿಂದ ಕಾಯುತ್ತಿರುತ್ತಾರೆ. ಜೂನ್ ತಿಂಗಳಿನಿಂದ ಆರಂಭವಾಗುವ ಈ ಬೇಟೆ ಸೆಪ್ಟೆಂಬರ್ ತಿಂಗಳ ತನಕ ಮುಂದುವರಿಯುತ್ತದೆ. ಮಳೆ ಬೀಳುತ್ತಿದ್ದಂತೆ ಅಟ್ಟದಲ್ಲಿದ್ದ ಮೀನು ಹಿಡಿಯಲು ಬಳಸುವ ಸಾಧನಗಳೂ ಹೊರಗೆ ಬೀಳುತ್ತವೆ.
-ವಸಂತ್ ಕುಮಾರ್ ಕತೆಗಾಲ
ಸಾಂದರ್ಭಿಕ ಚಿತ್ರ