ಅಂತೂ ಇಂತೂ ನಿನಗೂ ವಿದಾಯ ಹೇಳುವ ಸಮಯ ಬಂತು. ಈ ಸಮಯ ನನ್ನ ಬಾಳಿನಲ್ಲಿ ಬರುತ್ತದೆ ಎಂದು ನಾನು ಖಂಡಿತಾ ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ. ಇದು ಅನಿರೀಕ್ಷಿತ ಹಾಗು ಆಘಾತಕಾರಿ.

ಈ ಸಮಯದಲ್ಲಿ ಎಲ್ಲರೂ ತಮ್ಮ ತಮ್ಮ ಸ್ನೇಹಿತರಿಗೆ ವಿದಾಯ ಹೇಳುತ್ತಿದ್ದಾರೆ. ಕೆಲವೊಂದು ಸ್ನೇಹ ಕಾಲೇಜಿನಲ್ಲಿ ಹುಟ್ಟಿ ಕಾಲೇಜಿನಲ್ಲೇ ಸಾಯುತ್ತವೆ. ಅಂತಹವರು ಕಾಲೇಜು ಮುಗಿದ ನಂತರ ವಿದಾಯ ಹೇಳುತ್ತಾರೆ. ಹಾಗಾದರೆ ನನ್ನ ನಿನ್ನ ಪ್ರೇಮ ಕ್ಷಣಿಕನಾ..? ಅಷ್ಟೊಂದು ತೆಳುವಾದದ್ದ? ನನಗೆ ಗೊತ್ತಾಗುತಿಲ್ಲ. ನನಗೆ ಇನ್ನೂ ಚೆನ್ನಾಗಿ ನೆನಪಿದೆ ನನ್ನ ನಿನ್ನ ಮೊದಲ ಭೇಟಿ, ಮೊದಲ ಚುಂಬನ, ಪ್ರೀತಿಯಲ್ಲಿ ಮೊದಮೊದಲು ಎಲ್ಲಾ ಚೆಂದ. ಕಾಲ ಕಳೆಯುತ್ತಾ ಕಳೆಯುತ್ತಾ ಹೋದಂತೆ ನಮ್ಮ ನಮ್ಮ ಅಸ್ತಿತ್ವ ನಮಗೆ ಅರ್ಥ ಆಗುತ್ತಾ ಹೋಗುತ್ತದೆ.

ಒಂದು ನಾಲ್ಕು ದಿನದ ಹಿಂದೆ ನಾಯಿ-ನರಿಗಳ ಥರ ಕಿತ್ತಾಡಿದ್ವಿ ಅಲ್ವಾ, ಅದಕ್ಕೆ ಈ ಪತ್ರ ಎಲ್ಲವನ್ನ ಇಲ್ಲಿಗೇ ಮುಗಿಸಿ ಬಿಡೋಣ ಅಂತ. ನನ್ನ ನಿನ್ನ ಜಗಳ, ನನ್ನ ಗೋಗರೆತ, ನಿನ್ನ ಕಟು ನಿರಾಕರಣೆ, ನನ್ನ ಸಿಟ್ಟು, ನಿನಗೆ ನನ್ನ ಬೈಗುಳ, ಮತ್ತೆ ನನಗೆ ಪಶ್ಚಾತ್ತಾಪ, ಮತ್ತೆ ನಿನ್ನ ಬಳಿ ಗೋಗರೆತ ಎಲ್ಲವನ್ನ ಇಲ್ಲಿಗೇ ಮುಗಿಸಿ ಬಿಡೋಣ. ಹೋಗಲಿ ಬಿಡು, ಕೆಟ್ಟ ನೆನಪು ಹುಣ್ಣು ಇದ್ದ ಹಾಗೆ ಕೆರೆದಷ್ಟು ವೃಣವಾಗುತ್ತಾ ಹೋಗುತ್ತದೆ. ಕಾಲೇಜು ಮುಗಿಯಿತು. ಇನ್ ಮೇಲೆ ನಿಜವಾದ ಬದುಕು ಶುರುವಾಯಿತು ಅಂತ ಅಪ್ಪ ಮೊನ್ನೆ ಹೇಳುತ್ತಿದ್ದರು. ಆದರೆ ನೀನಿಲ್ಲದ ಬದುಕು ಒಂದು ಬದುಕೇ ಅಂತ ದೇವರಾಣೆ ಹೇಳೋದಿಲ್ಲ.

ಯಾಕೆಂದರೆ ನೀ ನನ್ನ ಬದುಕಿಗೆ ಬರುವ ಮುಂಚೆಯೂ ನನ್ನ ಬದುಕು ನಡೆಯುತ್ತಿತ್ತು, ನೀನು ಹೋದ ನಂತರವೂ ನಡೆಯುತ್ತದೆ. ಆದರೆ ಹೇಗೆ ನಡೆಯುತ್ತದೆ ಅದು ಮುಖ್ಯ ಅಲ್ವ ಚಿನ್ನು? ಕೆಲವರು ಹೇಳುತ್ತಾರೆ ಪ್ರೀತಿ ಮಾಡಿದರೆ ನಿನ್ನ ಭವಿಷ್ಯ ಹಾಳಾಗುತ್ತೆ ಕಣೋ ಪ್ರೀತಿ ಮಾಡಬೇಡ ಅಂತ. ಆದರೆ ನಾನು ಹೇಳುತ್ತೇನೆ ಗಂಡು ಮಕ್ಕಳಿಗೆ ಪ್ರೀತಿ ಮಾಡಿದರೆ ಭವಿಷ್ಯದ ಬಗ್ಗೆ ಯೋಚನೆ, ಕಾಳಜಿ, ಸ್ವಲ್ಪ ಮಟ್ಟಿಗಿನ ಭಯನೂ ಶುರುವಾಗುತ್ತದೆ.

ನನ್ನ ಭವಿಷ್ಯದ ಕನಸು ನಿನ್ನೊಂದಿಗೆ ಕಟ್ಟಿಕೊಂಡಿದ್ದೆ. ಹಳೇ ಹಿಂದಿ ಸಿನಿಮಾದ ಥರ ನಮ್ಮ ದಾಂಪತ್ಯ ಇರುತ್ತೆ. ನೀನು ಬೆಳಗ್ಗೆ ನನಗೆ ಕಾಫಿ ಮಾಡಿ ತಂದು ಕೊಡೋದಂತೆ, ನಾನು ನಿನಗೊಂದು ಮುತ್ತು ಕೊಟ್ಟು ಅದನ್ನ ಕುಡಿಯೋದಂತೆ  ಇತ್ಯಾದಿ ಇತ್ಯಾದಿ. ಕನಸುಗಳಿಗೇನು ಕಾಸು ಕೊಡಬೇಕಾ? ಹಾಗಾದರೆ ಹಿರಿಯರು ಹೇಳಿದ ಮಾತು ಪ್ರೀತಿ ಮಾಡಿದರೆ ಹಾಳಾಗಿ ಹೋಗ್ತೀಯ ಅನ್ನೊ ಮಾತು ಸುಳ್ಳ? ಖಂಡಿತ ಸತ್ಯ. ಆದರೆ ಒಂದು ಬದಲಾವಣೆ ಇದೆ. ಪ್ರೀತಿ ಮಾಡಿದರೆ ಹಾಳಾಗೋದಿಲ್ಲ. ಬಯಸಿದ ಪ್ರೀತಿ ಫಲಿಸದೆ ಇದ್ದರೆ ಖಂಡಿತ ನಿನ್ನ ಜೀವನ ಏರುಪೇರು ಆಗುತ್ತದೆ ಅದಕ್ಕೆ ನಾನೇ ಸಾಕ್ಷಿ.

ಥ್ಯಾಂಕ್ಯು ನನ್ನ ಬಾಳನ್ನ ಹಾಳು ಮಾಡಿದ್ದಕ್ಕೆ. ಇದರಲ್ಲಿ ನನ್ನ ತಪ್ಪು ಇಲ್ಲವೇ ಇಲ್ಲ ಅಂದರೆ ಅದು ಶುದ್ಧ ಸುಳ್ಳಾಗುತ್ತದೆ. ಒಂದೇ ಕೈಯಿಂದ ಚಪ್ಪಾಳೆ ಅಗೋದಿಲ್ಲ, ಎರಡು ಕೈ ಬೇಕೇ ಬೇಕು. ನೀನು ನನ್ನನ್ನ ಬಿಟ್ಟು ಹೋಗುತ್ತಿದ್ದೀಯ ಅಂದ್ರೆ ಅದು ತಪ್ಪಾಗಬಹುದು. ಹಾಗಂತ ನಾನು ನಿನ್ನನ್ನ ಬಿಟ್ಟು ಹೋಗುತ್ತಿದ್ದೇನೆ ಅಂದ್ರೆ ಅದೂ ತಪ್ಪೇ. ಹಾಗಾದರೆ ನಾನು ನೀನು ಬೇರೆಯಾಗಲು ಕಾರಣ? ಅದು ನನಗೂ ಗೊತ್ತಿಲ್ಲ ನಿನಗೂ ಗೊತ್ತಿಲ್ಲ, ಹಾಳಾದ್ದು ಈ ವಯಸ್ಸೇ ಹೀಗೆ ಎಲ್ಲಾ ಗೊತ್ತಿದ್ಯಾ ಅಂದ್ರೆ ಹುಂ ಗೊತ್ತಿದೆ, ಏನು ಗೊತ್ತಿಲ್ವ ಅಂದ್ರೆ ಗೊತ್ತಿಲ್ಲ. ನಿಜವಾದ ಪ್ರೀತಿ, ಪವಿತ್ರ ಪ್ರೇಮ ಎಂದರೆ ಏನು? ಕಾಮ ಅಂದ್ರೆ ಏನು? ಅದು ಒಳ್ಳೆದಾ ಕೆಟ್ಟದ್ದ? ಹೀಗೆ ಸಾವಿರಾರು ಪ್ರಶ್ನೆಗಳು ನನ್ನ ನಿನ್ನ ಮನದಲ್ಲಿ. ನನಗೆ ಹಾಗು ನಿನಗೆ ಈ ಪ್ರಶ್ನೆ ಗೆ ಉತ್ತರ ಸಿಕ್ಕ ತಕ್ಷಣ ಮತ್ತೆ ಪ್ರೀತಿಸೋಣ ಅಲ್ಲಿಯ ವರೆಗೆ ಗುಡ್ ಬೈ, ಟೇಕ್ ಕೇರ್, ಲವ್ ಯು..

- ವಿಷಾದಗಳೊಂದಿಗೆ,  ನನ್ನ ಹೆಸರು ನಿನ್ನ ಮನದಲ್ಲಿದೆ
(ದಯವಿಟ್ಟು ಅಳಿಸಿ ಬಿಡು)