Asianet Suvarna News Asianet Suvarna News

ಕೊಲ್ಕೊತ್ತಾದ ಬೀದಿಗಳಲ್ಲಿ ಶಕ್ತಿ ಶಾರದೆಯ ಮೇಳ

ಇಲ್ಲಿ ನವರಾತ್ರಿಯ ವೈಭವ ನಡೆಯುತ್ತಿರುವ ಹೊತ್ತಿಗೇ, ಕೊಲ್ಕತ್ತಾದಲ್ಲಿ ಪ್ರಸಿದ್ಧವಾಗಿರುವ ದುರ್ಗಾಷ್ಟಮಿಯ ನೆನಪನ್ನು ಲೇಖಕಿ ಹಂಚಿಕೊಂಡಿದ್ದಾರೆ. ದುರ್ಗೆಯೆಂದರೆ ಕೊಲ್ಕೊತ್ತಾ, ಕೊಲ್ಕೊತ್ತಾ ಎಂದರೆ ದುರ್ಗಾ ಎನ್ನುವಷ್ಟರ ಮಟ್ಟಿಗೆ ಬಂಗಾಳಿಗಳ ಪಾಲಿಗೆ ದುರ್ಗೆ ಅಚ್ಚುಮೆಚ್ಚು. 

Durga puja celebration in Kolkata by K.S.Pavitra
Author
Bengaluru, First Published Oct 16, 2018, 11:38 AM IST

ಕಲ್ಕತ್ತಾ ಅಥವಾ ಈಗ ಎಲ್ಲರೂ ಕರೆಯುವಂತೆ ‘ಕೊಲ್ಕೊತ್ತಾ’ ನನಗೆ ಯಾವಾಗಲೂ ನೆನಪಿಸುವುದು ಕೆಂಪು ದೊಡ್ಡ ಕುಂಕುಮ, ಕಾಲಿಗೆ ಹಚ್ಚುವ ಬಣ್ಣ ಕೆಂಪು ಅಲ್ತಾ ಮತ್ತು ಬಟ್ಟಲು ಕಂಗಳ ‘ಕಾಲೀಮಾ’ ಇವರನ್ನು. ಕಳೆದ ಬಾರಿ ಕೊಲ್ಕೊತ್ತಾಕ್ಕೆ ನಾನು ಹೋದ ಸಮಯ ಅಕ್ಟೋಬರ್‌ನಲ್ಲಿ. ಆಗಷ್ಟೇ ನವರಾತ್ರಿ ಮುಗಿದಿದ್ದರೂ, ಬೀದಿಗೊಂದು ಎನ್ನುವಂತೆ ಸುಂದರ ದುರ್ಗೆಯ ಮೂರ್ತಿಗಳು, ಪೆಂಡಾಲ್‌ಗಳು ಎಲ್ಲ ಕಡೆ.

ದುರ್ಗಾಪೂಜೆ ಕಲ್ಕತ್ತೆಯಲ್ಲಿ ಇಷ್ಟು ಜೋರಾಗಿದ್ದು, ‘ಕಲ್ಕತ್ತೆ’ ಯೆಂದರೆ ಕಾಲೀಮಾ ಎನ್ನುವಷ್ಟು ಪ್ರಸಿದ್ಧವಾದದ್ದು ಹೇಗೆ? ಕ್ರಿ.ಶ. 1500ರಷ್ಟು ಹಿಂದೆ ಮೊದಲ ಬಾರಿಗೆ, ದಿಂಜಾಪುರ್ ಮತ್ತು ಮಾಲ್ಡಾ ಜಮೀನ್‌ದಾರರಿಂದ, ನಂತರ ತಹೀರ್‌ಪುರದ ರಾಜಾಕಂಗ್-ಶನಾರಾಯಣರಿಂದ ‘ಶರದಿಯಾ’ ಅಥವಾ ನವರಾತ್ರಿಯ ದುರ್ಗಾಪೂಜೆ ಆರಂಭವಾಯಿತು ಎಂದು ಇತಿಹಾಸ ತಿಳಿಸುತ್ತದೆ.

ಧಾರ್ಮಿಕ ಕಾರ್ಯದಿಂದ ಸಾಮಾಜಿಕ ಸಂಭ್ರಮವಾಗಿ ‘ದುರ್ಗಾಪೂಜೆ’ ಬದಲಾದದ್ದು 1910ರ ಸುಮಾರಿಗೆ. ಸನಾತನ ಧರ್ಮೋತ್ಸಾಹಿನೀ ಸಭಾ, ಸಾರ್ವಜನಿಕ ದೇಣಿಗೆ, ನಿಯಂತ್ರಣ ಮತ್ತು ಭಾಗವಹಿಸುವಿಕೆ ಎಲ್ಲವನ್ನೂ ಒಟ್ಟುಗೂಡಿಸಿ ಮೊದಲ ಬಾರಿಗೆ ಇದನ್ನು ಆಯೋಜಿಸಿತು. ಆ ಹೊತ್ತಿಗಾಗಲೇ ಬ್ರಿಟಿಷರ ಆಳ್ವಿಕೆಯಲ್ಲಿದ್ದ ಭಾರತಕ್ಕೆ, ವಿಶೇಷವಾಗಿ ಕಲ್ಕತ್ತೆಗೆ ಹಿಂದೂ ಬಂಗಾಲಿ ಸಂಸ್ಕತಿಯನ್ನು ಕಾಯ್ದಿಟ್ಟುಕೊಳ್ಳುವ ಅಗತ್ಯವೂ ಅದಾಗಿತ್ತು ಎಂಬುದು ಗಮನಾರ್ಹ ಸಂಗತಿ. ಇಂದಿಗೂ ಕಲ್ಕತ್ತಾದಲ್ಲಿ ದುರ್ಗಾಪೂಜೆ ಜಾತಿ-ಮತ ಭೇದಗಳನ್ನು ಮೀರಿ ಸಾಮಾಜಿಕ ಆಚರಣೆಯಾಗಿಯೇ ಮುಂದುವರಿದಿದೆ ಎನ್ನುವುದು ವಿಶೇಷ.

ಬಂಗಾಲದ ದುರ್ಗೆಯ ಮೂರ್ತಿ ನನ್ನ ಮನಸ್ಸಿನಲ್ಲಿ ಏಕ ಕಾಲದಲ್ಲಿ ಅಚ್ಚರಿ-ಸಂತಸ-ಗೌರವಗಳನ್ನು ಮೂಡಿಸುತ್ತದೆ. ಪೌರಾಣಿಕ ಕಥೆಯಂತೆ ದುರ್ಗೆತ್ರಿಮೂರ್ತಿಗಳಿಂದ, ಇತರ ದೇವತೆಗಳಿಂದ ಆಯುಧಗಳನ್ನು ಅನುಗ್ರಹಿಸಲ್ಪಟ್ಟವಳು. ಹತ್ತು ಕೈಗಳಲ್ಲಿ ಅವುಗಳನ್ನು ಹಿಡಿದಿರುವವಳು. ಕಲ್ಕತ್ತೆಯ ದುರ್ಗೆಯ ಮೆರವಣಿಗೆಯಲ್ಲಿ, ಆಕೆಯ ಪ್ರತಿಮೆಯಲ್ಲಿ ಅವಳ ನಾಲ್ಕು ಮಕ್ಕಳನ್ನು ಗಣೇಶ, ಕಾರ್ತಿಕೇಯ, ಸರಸ್ವತಿ, ಲಕ್ಷ್ಮಿ ಒಳಗೊಳ್ಳುತ್ತದೆ. ಹೀಗೆ ಸಾಂಪ್ರದಾಯಿಕವಾಗಿ ಐವರನ್ನೂ ಹೊಂದಿದ ಪ್ರತಿಮೆಯನ್ನು ‘ಏಕ್ ಚಲಾ’ (ಏಕ್ -ಒಂದು,ಚಲಾ-ಆವರಣ) ಎಂದು ಕರೆಯಲಾಗುತ್ತದೆ. ಪ್ರತಿಮೆ ಮಾಡುವುದಕ್ಕೆ ಮಣ್ಣಿನ ಮೇಲೆ ಉಪಯೋಗಿಸುವ ಅಲಂಕರಣಗಳಲ್ಲಿ ಎರಡು ವಿಧ ಶೋಲಾರ್ ಸಾಜ್ ಮತ್ತು ಡಾಕರ್ ಸಾಜ್. ಹೀಗೆ ವಿಧ ವಿಧವಾಗಿ, ಅಲಂಕಾರಗೊಳ್ಳುವ ದುರ್ಗೆ ನವರಾತ್ರಿಗೆ ಒಂದು ವಾರ ಮೊದಲು ಹೊರಗೆ ಬಂದಿಳಿಯುತ್ತಾಳೆ. ಆದರೆ ಅವಳ ಕಣ್ಣುಗಳನ್ನು ಮಾತ್ರ ಕಲಾಕಾರ ಬರೆಯುವುದು ‘ಮಹಾಲಯ’ ದಂದೇ. ‘ಚೊಕ್ಕು ದಾನ್’ ಎಂದು ಕರೆಯಲ್ಪಡುವ ಈ ಪದ್ಧತಿ ‘ಚಕ್ಷುದಾನ’ ದಿಂದ ದೇವಿ ಧರೆಗಿಳಿಯುತ್ತಾಳೆ ಎಂಬ ನಂಬಿಕೆಯಿಂದ ಬಂದದು.

‘ದುರ್ಗಾಪೂಜೆ’ಯ ಇಂಥ ಪದ್ಧತಿಗಳೆಲ್ಲಕ್ಕೂ ಅಧ್ಯಾತ್ಮಿಕ, ಸಾಂಕೇತಿಕ ಅರ್ಥಗಳಿವೆ. ಉದಾಹರಣೆಗೆ ಮೊದಲ ದಿನ ಪೂಜೆಯ ಕೇಂದ್ರ ಬಿಂದು ‘ಕಲಶ’. ಈ ಕಲಶ ದೇವಿಯ ಗರ್ಭದ ಆರಾಧನೆ ದೇವಿಯ, ‘ಸ್ತ್ರೀ’ಯ ಸೃಷ್ಟಿ ಮಾಡುವ, ಶಕ್ತಿಯ ಕುರುಹು. ಹಾಗೆಯೇ ಭೂಗರ್ಭದ ಫಲವತ್ತತೆಯ ಸಂಕೇತವೂ ಹೌದು. ಹಾಗಾಗಿಯೇ ಬಂಗಾಲೀ ಸಂಪ್ರದಾಯದಂತೆ ಮೊದಲ ದಿನ ಹಸಿಮಣ್ಣಿನಲ್ಲಿ ದುರ್ಗೆಯ ಮುಂದೆ ಬಾರ್ಲಿ ಬೀಜಗಳನ್ನು ನೆಡಲಾಗುತ್ತದೆ. ಹತ್ತು ದಿನಗಳಲ್ಲಿ ಅವುಗಳಿಂದ ಹೊರಬರುವ ಮೊಳಕೆಗಳು ದುರ್ಗೆಯ ಆಯುಧಗಳ - ಕತ್ತಿಯ ಅಲಗುಗಳೆಂದು ಭಾವಿಸಲಾಗುತ್ತದೆ. ನವರಾತ್ರಿಯ ರಾತ್ರಿಗಳನ್ನು ಸೃಷ್ಟಿ- ಸ್ಥಿತಿ, ಲಯಗಳೆಂಬ ಜೀವನದ ಮೂರು ಹಂತಗಳಿಗೂ ಸಮಾನವಾಗಿ ಪ್ರತಿಯೊಂದಕ್ಕೂ ಮೂರು ರಾತ್ರಿಗಳೆಂಬಂತೆ ವಿಭಾಗಿಸಿ ಅರ್ಥೈಸಿಕೊಳ್ಳಲಾಗುತ್ತದೆ. ಪ್ರತಿಯೊಂದು ವ್ಯಕ್ತಿಯಲ್ಲಿರುವ ಕೆಟ್ಟ ಗುಣಗಳನ್ನು ನಾಶ ಮಾಡುವ ದೈವೀ ಶಕ್ತಿಯಾಗಿ ‘ದುರ್ಗೆ’ಯನ್ನು ಬಂಗಾಲಿಗಳು ಪರಿಭಾವಿಸುತ್ತಾರೆ.

ಅರಳು ಕಣ್ಣುಗಳ ದುರ್ಗೆಯನ್ನು ‘ತಾಯಿ’ಯಾಗಿ ನೋಡಿದಂತೆಯೇ ತಮ್ಮ ‘ಮಗಳಾ’ಗಿಯೂ ಬಂಗಾಲಿಗಳು ಕಲ್ಪಿಸಿಕೊಳ್ಳುವುದು ವಿಶೇಷ! ಬಂಗಾಲಿಗಳು ಹೇಳುವಂತೆ ‘ಮನೆಯ ಮಗಳು ತವರು ಮನೆಗೆ ಪ್ರತಿವರ್ಷ ಬರುವಂತೆ, ದುರ್ಗೆ ಪ್ರತಿ ದುರ್ಗಾಪೂಜೆಯಂದು ನಮ್ಮ ಮನೆಗೆ ಬರುತ್ತಾಳೆ; ನಮ್ಮನ್ನು ಪ್ರೀತಿಯಿಂದ ಹರಸುತ್ತಾಳೆ. ಮತ್ತೆ ‘ಸ್ವರ್ಗ’ಕ್ಕೆ ಅಂದರೆ ‘ತನ್ನ’ ಮನೆಗೆ ತೆರಳುತ್ತಾಳೆ!’.

ಕಲ್ಕತ್ತೆಯಲ್ಲಿ ನಾವು ಯಾವಾಗ ಹೋದರೂ ದೇವಿಯನ್ನು ನೆನೆಸುವಂತೆ ಎರಡು ಕಾಳಿ ಮಂದಿರಗಳು ಇವೆ. ಒಂದು ದಕ್ಷಿಣೇಶ್ವರದ, ರಾಮಕೃಷ್ಣ ಪರಮಹಂಸರ ಆರಾಧ್ಯದೈವ ‘ಕಾಳಿ’ಯ ದೇವಾಲಯ. ಹೂಗ್ಲಿ ತಟದಲ್ಲಿ ದೇವಸ್ಥಾನಗಳ ಒಂದು ಸಂಕೀರ್ಣವೇ ಇಲ್ಲಿದೆ.

ಸಂಜೆಯ ವೇಳೆ ಜನಜಂಗುಳಿಯಿಂದ ತುಂಬಿ ಹರಿದರೂ, ಕಾಳಿಯ ಮುಖ, ಆಕೆಯ ದೇವಸ್ಥಾನದ ಎದುರಲ್ಲಿ ಸಾಲಾಗಿ ಈಶ್ವರ ಲಿಂಗಗಳ ಗುಡಿಗಳು, ಬಂಗಾಲಿಗಳ ಸುಮಧುರ, ಮನಸ್ಸು ಕಲಕುವ ಭಜನೆಗಳು ಎಂಥ ನಾಸ್ತಿಕನನ್ನೇ ಆದರೂ ಒಂದು ಕ್ಷಣ ‘ದೇವರನ್ನು ನಂಬಬಹುದೇನೋ’ ಎಂಬ ಅನುಮಾನ ಮೂಡಿಸದೇ ಬಿಡುವುದಿಲ್ಲ. ಅದೇ ಕಲ್ಕತ್ತೆಯ ಇನ್ನೊಂದು ‘ಕಾಲೀಘಾಟ್’ನ ಕಾಲೀಮಂದಿರ ‘ದೇವಿಯಾಗಿರುವುದರಿಂದ ಮಾತ್ರ ಈ ಮನುಷ್ಯರ ನಡುವೆ ಇರುವುದು ಸಾಧ್ಯ’ ಎಂಬ ಭಾವನೆ ಮೂಡಿಸುತ್ತದೆ! ಬಂಗಾಲೀ ಭಟ್ಟರ ಮೋಸ-ವ್ಯವಹಾರ ಚತುರತೆ, ಭಕ್ತರನ್ನು ಹೇಗಾದರೂ ಹಿಡಿದು ಸಿಕ್ಕಿ ಹಾಕಿಸುವ ಜಾಣ್ಮೆ, ಸ್ವಚ್ಛತೆಯ ಎಲ್ಲ ನಿಯಮಗಳನ್ನುಗಾಳಿಗೆ ತೂರುವ ಬಂಗಾಲಿಗಳ ದಿಟ್ಟತನ, ಬಡತನ ಇವುಗಳ ಮೇಲೆ ವಿಷಾದ-ಬೆರಗುಗಳ ಮಿಶ್ರಿತ ಭಾವನೆ ಕಾಡತೊಡಗುತ್ತದೆ! 

ದುರ್ಗಾಪೂಜೆಯ ಈ ಸಂದರ್ಭ ಇತಿಹಾಸದ ಬಗೆಗೂ, ದೇಶದ ಏಕತೆಯ ಬಗೆಗೂ ಹಲವು ವಿಚಾರಗಳನ್ನು ನೆನಪಿಸುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಬಲವಾಗಿ ಪಾಲ್ಗೊಂಡ ಬಂಗಾಲ ಮತ್ತು ಬಂಗಾಲಿಗಳು, ಹಿಂದೂ ಸನಾತನ ಧರ್ಮವನ್ನು ಪುನರುತ್ಥಾನಕ್ಕೆ ತಂದ ಸ್ವಾಮಿ ವಿವೇಕಾನಂದ- ಆರ್ಯ ಸಮಾಜದ ದಯಾನಂದ ಸರಸ್ವತಿ - ಬ್ರಹ್ಮ ಸಮಾಜದ ರಾಜಾರಾಂ ಮೋಹನ್‌ರಾಯ್ ಇವರೆಲ್ಲಾ ವೈಚಾರಿಕತೆಯ ನಡುವೆಯೂ, ಅಧ್ಯಾತ್ಮವನ್ನು ಉಳಿಸಿದ್ದು, ಬೆಳೆಸಿದ್ದು ‘ದುರ್ಗೆ’ಯ ವಿಭಿನ್ನ ಶಕ್ತಿಗಳಿಂದ- ಸ್ಫೂರ್ತಿಯಿಂದ ಎಂದು ನನಗನ್ನಿಸುತ್ತದೆ. ತಾಯಿಯಾಗಿ, ಮಗಳಾಗಿ, ಕಾಳಿಯೇ ಆಗಿ ಕೊನೆಗೆ ಸ್ವಾತಂತ್ರ್ಯ ದೇವಿಯೂ ಆಗಿ ಬಂಗಾಲಿಗಳು ಶಕ್ತಿಯ ಆರಾಧನೆಗೆ ತೊಡಗಿರುವುದರ ಹಿಂದಿನ ಅರ್ಥವಿಸ್ತಾರ-ವೈವಿಧ್ಯಗಳು ವಿಸ್ಮಯ ಮೂಡಿಸುತ್ತವೆ.

ಕೊಲ್ಕೊತ್ತಾದ ಕಾಳಿ ಮಂದಿರದಲ್ಲಿ ಕಾಳಿಯ ಮುಖ ನೋಡುತ್ತಾ, ನಮ್ಮ ಒಳಗನ್ನೇ ದಿಟ್ಟಿಸಿ, ನೇರವಾಗಿ, ಹುಡುಕಿ ನೋಡುವ ತಾಯಿಯ ಕಂಗಳಂತೆ ಭಾಸವಾದ ಕಾಳಿಯ ದೊಡ್ಡ ಕಣ್ಣುಗಳನ್ನು ನೋಡುತ್ತಾ ಆ ಕ್ಷಣದಲ್ಲಿ ಹೊಳೆದ ಯೋಚನೆಗಳು ಇವು. ಎಲ್ಲೆಂದರಲ್ಲಿ ಚಲಿಸುವ ಶಕ್ತಿಯಿರುವ ಮಾನವ ಮನಸ್ಸಿಗೂ, ‘ಚಂಚಲ’ ಎಂದು ನಾವಂದುಕೊಳ್ಳುವ ಹೆಣ್ಣಿನ ಮನಸ್ಸಿಗೂ, ‘ಕಾಲೀಮಾ’ಳ ಶಕ್ತಿಗೂ ಸಂಬಂಧವಿದೆಯೇ ಎಂದು ಯೋಚಿಸುತ್ತಲೇ ಪ್ರತಿಯೊಬ್ಬರಲ್ಲೂ ಇರುವ ‘ಮಾತೃಶಕ್ತಿ’ಗೆ ಕೈಮುಗಿದು ಹೊರಬಂದೆ.

ಡಾ|| ಕೆ ಎಸ್ ಪವಿತ್ರ

Follow Us:
Download App:
  • android
  • ios