Asianet Suvarna News Asianet Suvarna News

ತವಕಕ್ಕೆ ಬಿದ್ದು ಕರ್ಣನ ಕಳೆದುಕೊಂಡಳೇ ಕುಂತಿ

ಎಲ್ಲಕ್ಕೂ ಕಾಲ ಕೂಡಿ ಬರಬೇಕು ಅನ್ನುವ ಮಾತು ಸುಳ್ಳೋ ಸತ್ಯವೋ ಯಾರಿಗೆ ಗೊತ್ತು? ಅಷ್ಟಕ್ಕೂ ಕಾಲ ಕೂಡಿ ಬರುವುದು ಅಂದರೇನು? ಕಾಲ ಕೂಡಿ ಬಂತು ಅನ್ನುವುದು ನಮಗೆ ಗೊತ್ತಾಗುತ್ತದೋ ಕಾಲಕ್ಕೋ?

Don't be in hurry lesson learn from Kunti
Author
Bengaluru, First Published Jul 30, 2018, 4:49 PM IST

ಇದಕ್ಕೆ ಉದಾಹರಣೆಯಾಗಿ ಒಂದು ಕತೆ ಮಹಾಭಾರತದಲ್ಲಿದೆ. ತನಗೆ ಸೇವೆ ಮಾಡಿದ ಕುಂತಿಯ ಸೌಜನ್ಯವನ್ನು ಮೆಚ್ಚಿ ಆಕೆಗೆ ದೂರ್ವಾಸರು ಐದು ಮಂತ್ರಗಳನ್ನು ಬೋಧಿಸುತ್ತಾರೆ. ಇವುಗಳನ್ನು ಜಪಿಸಿದರೆ ಐವರು ದೇವತೆಗಳು ಬಂದು ನಿನಗೆ ಆಶೀರ್ವಾದ ಮಾಡಿ, ನಿನಗೆ ದೈವ

ಸ್ವರೂಪಿಯಾದ ಮಕ್ಕಳನ್ನು ಕೊಡುತ್ತಾರೆ ಎಂದು ಹೇಳುತ್ತಾರೆ. ಅದನ್ನು ಕೇಳಿದ ಕುಂತಿ ಸಂತೋಷದಿಂದ ಕಂಪಿಸುತ್ತಾಳೆ.

 

ದೂರ್ವಾಸರು ಹೊರಟು ಹೋದ ಮಾರನೆಯ ದಿನವೇ ಅವರು, ಅವರು ಕೊಟ್ಟ ಮಂತ್ರಗಳಲ್ಲಿ ಮೊದಲನೆಯನ್ನು ಜಪಿಸುತ್ತಾಳೆ. ಅವಳ ಮುಂದೆ ಸೂರ್ಯದೇವ ಪ್ರತ್ಯಕ್ಷನಾಗುತ್ತಾನೆ. ಕುಂತಿ ಕರ್ಣನ ತಾಯಿಯಾಗುತ್ತಾಳೆ.

ಆಗ ಅವಳಿನ್ನೂ ಕನ್ಯೆ. ಮದುವೆಯಾಗದ ಅವಳು ಮಗುವನ್ನೇನು ಮಾಡಬೇಕು? ಗಂಗೆಯಲ್ಲಿ ತೇಲಿಬಿಡುತ್ತಾಳೆ. ಮುಂದೆ ಆ ಮಗು ರಾಧೇಯನಾಗಿ ಬೆಳೆಯುತ್ತದೆ. ಕರ್ಣನೆಂಬ ಹೆಸರಿನಿಂದ ಅವನು ವಿರೋಧಿ ಪಾಳೆಯ ಸೇರುತ್ತಾನೆ. ಸ್ವಂತ ಸೋದರರ ವಿರುದ್ಧ ಹೋರಾಡಬೇಕಾಗುತ್ತದೆ. ಹೀಗೆ ಏನೇನೋ ನಡೆಯುತ್ತದೆ.

ಒಂದು ವೇಳೆ ಕುಂತಿ ಕೊಂಚ ತಡೆದಿದ್ದರೆ, ಮದುವೆಯಾಗುವ ತನಕ ತನ್ನ ಕುತೂಹಲವನ್ನು ತಡೆಹಿಡಿದಿದ್ದರೆ ಏನಾಗುತ್ತಿತ್ತು? ಕರ್ಣ ಪಾಂಡವರಲ್ಲೇ ಹಿರಿಯ ಅನ್ನಿಸಿಕೊಳ್ಳುತ್ತಿದ್ದ. ಪಾಂಡವರಿಗೆ ಸಿಕ್ಕ ಶಿಕ್ಷಣವೇ ಅವನಿಗೆ ಸಿಗುತ್ತಿತ್ತು. ಕೌರವರನ್ನು ಸುಲಭವಾಗಿ ಸೋಲಿಸಬಹುದಾಗಿತ್ತು ಅಥವಾ ಕೌರವರು ಪಾಂಡವರ ವಿರುದ್ಧ ಯುದ್ಧ ಹೂಡುವ ಧೈರ್ಯವನ್ನೇ ಮಾಡುತ್ತಿರಲಿಲ್ಲ. ಕುಂತಿ ತನ್ನೊಬ್ಬ ಮಗನನ್ನು ಕಳೆದುಕೊಳ್ಳಬೇಕಾಗಿರಲಿಲ್ಲ. ಆಕೆ ಕರ್ಣನನ್ನು ಅವಸರ ಮಾಡಿ ಕಳೆದಕೊಂಡಳು.

ಇಂಥ ಅವಸರದಿಂದಲೇ, ಅಕಾಲದಲ್ಲಿ ಮಾಡುವ ಕೆಲಸಗಳಿಂದಲೇ ನಾವು ಎಷ್ಟೆಷ್ಟನ್ನೋ ಕಳೆದುಕೊಳ್ಳುತ್ತೇವೆ. ಹೀಗೆ ನಾವು ಅಕಾಲಕ್ಕೆ ಆಕರ್ಷಿತರಾಗುವ ಅನೇಕ ಉದಾಹರಣೆಗಳನ್ನು ಜೀವನದ ಉದ್ದಕ್ಕೂ ನೋಡಬಹುದು. ಕೊಂಚ ತಡೆದಿದ್ದರೆ, ಇನ್ನೊಂದು ದಿನ ಕಾದಿದ್ದರೆ, ಇನ್ನೊಂದು ದಿವ್ಯಕ್ಷಣ ಬಂದು ಬದುಕನ್ನೇ ಬದಲಾಯಿಸುತ್ತಿತ್ತು ಅಂತ ನಮಗೂ ಎಷ್ಟೋ ಸಲ ಅನ್ನಿಸುತ್ತಿರುತ್ತದೆ.

ಹೀಗಾಗಿಯೇ ನಾವೇನೇ ಮಾಡುವುದಿದ್ದರೂ, ಕಾಲ ಪಕ್ವವಾಗಿದೆಯೋ ಇಲ್ಲವೋ ನೋಡಬೇಕು. ನಮ್ಮನ್ನು ಸಿಂಹಾಸನದಲ್ಲಿ ಕೂರಿಸಲು ನಮ್ಮ ಸುತ್ತಲ ಮಂದಿ ಕಾಯುತ್ತಿರುತ್ತಾರೆ. ನಾವು ಅದಕ್ಕೆ ಅರ್ಹತೆ ಪಡಕೊಂಡಿದ್ದೇವೋ ಇಲ್ಲವೋ ಅನ್ನುವುದು ನಮಗೆ ಮಾತ್ರ ಗೊತ್ತಿರುತ್ತದೆ.

ನಮ್ಮೊಳಗೆ ಹುಟ್ಟುವ ಆಸೆ, ಕಾವ್ಯ, ಕತೆ ಎಲ್ಲವೂ ಅಷ್ಟೇ, ಸರಿಯಾದ ಕಾಲ ಬರುವ ತನಕ ಕಾದರೆ ಮಾತ್ರ ಅದು ಪೂರ್ಣತೆ ಪಡೆಯಲು ಸಾಧ್ಯ. ಇಲ್ಲದೇ ಹೋದರೆ ಕರ್ಣನಂತೆ ಕುಂತಿಯ ಮಗನಾಗಿದ್ದೂ ಆತ ಅನಾಥನಂತೆ ಬೆಳೆಯಬೇಕಾಗುತ್ತದೆ. ನಮ್ಮ ಕನಸುಗಳು ಕೂಡ ಹೀಗೆಯೇ, ಅವಸರದಿಂದಾಗಿ, ಅನಾಥವಾಗುತ್ತವೆ.

Follow Us:
Download App:
  • android
  • ios