Asianet Suvarna News Asianet Suvarna News

ಪತ್ರಕರ್ತನ ಡೈರಿ; ಪದ್ಮರಾಜ ದಂಡಾವತಿಯವರ ನೆನಪಿನ ಪುಟಗಳು

ಪ್ರಜಾವಾಣಿ ಪತ್ರಿಕೆಯ ಸಹ ಸಂಪಾದಕರಾಗಿದ್ದ ಪದ್ಮರಾಜ ದಂಡಾವತಿಯವರು ತಾವು ಪತ್ರಕರ್ತರಾಗಿದ್ದ ದಿನಗಳ ನೆನಪುಗಳನ್ನು ‘ಉಳಿದಾವ ನೆನಪು’ ಕೃತಿಯಲ್ಲಿ ದಾಖಲಿಸಿದ್ದಾರೆ. ಅಂಕಿತ ಪುಸ್ತಕ ಪ್ರಕಟಿಸಿರುವ ಆ ಕೃತಿಯು ಇಂದು ಬಿಡುಗಡೆಯಾಗುತ್ತಿದೆ. ಕೃತಿಯಲ್ಲಿರುವ ಎರಡು ನೆನಪುಗಳು ಇಲ್ಲಿ ನೀಡಲಾಗಿದೆ.

Diary of a Journalist; Padmaraja Dandavati's Memory Pages Vin
Author
First Published May 5, 2024, 1:18 PM IST

1. ಲೇಖನವನ್ನು ಓದಿಸಿ ಕೇಳಿ ಖುಷಿ ಪಟ್ಟ ಹುಕ್ಕೇರಿ ಬಾಳಪ್ಪಹುಕ್ಕೇರಿ ಬಾಳಪ್ಪನವರು ಒಬ್ಬ ಅದ್ಭುತ ಗಾಯಕ. ಕುವೆಂಪು ಅವರೇ ಬಾಳಪ್ಪನವರ ’ಬಾರಿಸು ಕನ್ನಡ ಡಿಂಡಿಮವ’ ಗಾಯನ ಕೇಳಿ, ‘ಸಾಕ್ಷಾತ್ ಶಿವನೇ ಬಂದು ಹಾಡಿದ ಹಾಗಾಯಿತು’ ಎಂದಿದ್ದರು ಎಂದ ಮೇಲೆ ಅವರು ಎಂಥ ಶ್ರೇಷ್ಠ ಗಾಯಕರು ಎಂಬು ದನ್ನು ಬೇರೆ ವಿವರಿಸಬೇಕಿಲ್ಲ.

ಅವರಿಗೆ ಮಧ್ಯ ಪ್ರದೇಶ ಸರ್ಕಾರ ‘ತುಳಸಿ ಸಮ್ಮಾನ್’ ಪ್ರಶಸ್ತಿ ಪ್ರಕಟಿಸಿತು. ಆಗ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯ ಸ್ಪೆಕ್ಟ್ರಂ ವಿಭಾಗವನ್ನು ರಘುನಾಥ ಪೆನುಮಳೆಯವರು ನೋಡಿಕೊಳ್ಳುತ್ತಿದ್ದರು. ಅವರು ಜಿಲ್ಲಾ ವರದಿಗಾರರನ್ನು ಬಳಸಿಕೊಂಡ ಹಾಗೆ ಮತ್ತೆ ಯಾರಾದರೂ ಬಳಸಿಕೊಂಡುದು ನನಗೆ ಗೊತ್ತಿಲ್ಲ.

ಅವರು ನಮಗೆ ಕರೆ ಮಾಡಿ, ಇಂಥ ಲೇಖನ ಬರೆದು ಕೊಡಿ, ಈ ವರದಿ ಬರೆದುಕೊಡಿ ಎಂದು ಕೇಳುತ್ತಿದ್ದರು. ‘ಪ್ರಜಾವಾಣಿ’ಗಿಂತ ಅವರು ಹೆಚ್ಚಿನ ಸಂಭಾವನೆ ಕೊಡುತ್ತಿದ್ದರು. ಆಗ ‘ಪ್ರಜಾವಾಣಿ’ಯಲ್ಲಿ ಒಂದು ಲೇಖನಕ್ಕೆ 150 ರೂಪಾಯಿ ಸಂಭಾವನೆ ಇತ್ತು. ಅದೇ ಲೇಖನ ‘ಡೆಕ್ಕನ್ ಹೆರಾಲ್ಡ್’ನಲ್ಲಿ ಪ್ರಕಟವಾದರೆ 1000 ರೂಪಾಯಿ ಸಂಭಾವನೆ ಸಿಗುತ್ತಿತ್ತು. ಇಂಗ್ಲಿಷ್‌ನಲ್ಲಿ ಲೇಖನ ಪ್ರಕಟವಾದರೆ ಆ ವರದಿಗಾರನಿಗೆ ಜಿಲ್ಲಾ ಆಡಳಿತದ ಮಟ್ಟದಲ್ಲಿ ಒಳ್ಳೆಯ ಹೆಸರೂ ಬರುತ್ತಿತ್ತು.

ಔತ್ತಮ್ಯದ ಗೀಳಿನಲ್ಲಿ

ಪೆನುಮಳೆಯವರು ಒಂದು ದಿನ ನನಗೆ ಕರೆ ಮಾಡಿ ಬಾಳಪ್ಪ ಹುಕ್ಕೇರಿ ಅವರನ್ನು ಭೇಟಿ ಮಾಡಿ ಅವರ ಕುರಿತು ಒಂದು ಲೇಖನ ಬರೆದುಕೊಡಿ ಎಂದು ಕೇಳಿದರು. ಬಾಳಪ್ಪನವರು ಸವದತ್ತಿ ತಾಲ್ಲೂಕಿನ ಮುರಗೋಡದಲ್ಲಿ ವಾಸವಾಗಿದ್ದರು. ಅವರ ಊರಿಗೆ ಅವರನ್ನು ಹುಡುಕಿಕೊಂಡು ಹೋದೆ. ಬಾಳಪ್ಪ ರಸಿಕ, ಅದ್ಭುತ ಮಾತುಗಾರ. ಮೂಲತಃ ಒಬ್ಬ ಸಾದಾ ಸೀದಾ ಮನುಷ್ಯ.

ಅವರು ತಮ್ಮ ಮನೆಯಲ್ಲಿ ನನಗೆ ಊಟ ಮಾಡಿಸಿ ತಮ್ಮ ಕಥೆಯನ್ನೆಲ್ಲ ಹೇಳಿದರು. ‘ಲೇಖನ ಯಾವಾಗ ಬರುತ್ತದೆ ತಿಳಿಸಿ. ನಾನು ಅಂದು ಬೆಳಗಾವಿಗೆ ಬರುತ್ತೇನೆ. ನೀವು ಆ ಲೇಖನ ಓದಿ ಅದರ ಅರ್ಥ ನನಗೆ ಹೇಳಬೇಕು’ ಎಂದು ಬಾಳಪ್ಪನವರು ಷರತ್ತು ಹಾಕಿದ್ದರು. ನಾನು ಅವರಿಗೆ ಇಂಥ ದಿನ ಲೇಖನ ಬರುತ್ತದೆ ಎಂದು ಹೇಳಿದ್ದೆ. ಅಂದು ಅವರು ರಾಮದೇವ ಗಲ್ಲಿಯ ಹಳೆಯ ಲಾಡ್ಜ್‌ವೊಂದಕ್ಕೆ ಬಂದಿದ್ದರು. ಅವರಿಗೆ ಲೇಖನ ಓದಿ ಅದರ ಅರ್ಥವನ್ನೆಲ್ಲ ಹೇಳಿದೆ. ಅವರಿಗೆ ಎಷ್ಟು ಖುಷಿಯಾಯಿತು ಎಂದರೆ ‘ಇದು ಬೆಂಗಳೂರಿಗೂ ಬಂದಿರ್ತೈತೇನ್ರಿ’ ಎಂದು ಕೇಳಿದರು. ‘ಹೌದು ಎಲ್ಲಾ ಕಡೆ ಬಂದಿರುತ್ತದೆ’ ಎಂದು ಅವರಿಗೆ ಹೇಳಿದೆ. ‘ಮತ್ತ ಭೆಟ್ಟಿ ಆಗೂನ್ರಿ’ ಎಂದು ಬಾಳಪ್ಪ ಹೇಳಿದರು. ಅದೇ ಲೇಖನ ‘ಪ್ರಜಾವಾಣಿ’ಯಲ್ಲಿಯೂ ಪ್ರಕಟವಾಯಿತು. ಅದು ಅವರಿಗೆ ಮತ್ತಷ್ಟು ಖುಷಿ ತಂದಿತು.

ಕೆವಿ ತಿರುಮಲೇಶ್; ಹೊರನಾಡಿನ ಪರಮ ಕವಿ

ಮುಂದೆ ಕೆಲವೇ ದಿನಗಳಲ್ಲಿ ಬಾಳಪ್ಪನವರು ತೀರಿಕೊಂಡರು. ತಮಗೆ ಯಾವು ದಾದರೂ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಕೊಡಬೇಕು ಎಂದು ಬಾಳಪ್ಪ ಬಯಸಿದ್ದರು. ಅವರ ಅಪೇಕ್ಷೆ ಈಡೇರಲಿಲ್ಲ. ಅವರ ಮಧುರ ಕಂಠಕ್ಕೆ ಡಾಕ್ಟರೇಟ್ ಪದವಿ ಭಾರವೇನೂ ಆಗುತ್ತಿರಲಿಲ್ಲ.

2. ನೋಟಿಸ್ ಕಳುಹಿಸಿದ ಮಿರ್ಜಿ ಅಣ್ಣಾರಾಯರ ಪುತ್ರ

ನಾನು ಬೆಳಗಾವಿಯಲ್ಲಿ ಇದ್ದಾಗಲೇ ಒಂದು ದಿನ ಆಗಿನ ಕಾರ್ಯನಿರ್ವಾಹಕ ಸಂಪಾದಕರು ಕರೆ ಮಾಡಿ, ‘ನೀವು ಶೇಡಬಾಳಕ್ಕೆ ಹೋಗಿ ಬರಬೇಕು’ ಎಂದು ಹೇಳಿದರು. ‘ಏಕೆ’ ಎಂದು ಕೇಳಿದೆ. ‘ಮಿರ್ಜಿ ಅಣ್ಣಾರಾಯರ ಮಗ ನೋಟಿಸ್ ಜಾರಿ ಮಾಡಿದ್ದಾರೆ. ಅದನ್ನು ವಾಪಸು ತೆಗೆದುಕೊಳ್ಳಲು ಅವರ ಮನವೊಲಿಸಬೇಕು’ ಎಂದು ಅವರು ಮಾಹಿತಿ ಕೊಟ್ಟರು. ಆಗಿದ್ದೇನು ಎಂದರೆ, ಆಗ ‘ಮಯೂರ’ದಲ್ಲಿ ಮಿರ್ಜಿ ಅಣ್ಣಾರಾಯರ ‘ನಿಸರ್ಗ’ ಕಾದಂಬರಿಯನ್ನು ಸಂಕ್ಷಿಪ್ತ ರೂಪದಲ್ಲಿ ಪ್ರಕಟ ಮಾಡಿದ್ದರು; ಆದರೆ, ಅವರ ಅಥವಾ ಅವರ ಕುಟುಂಬದವರ ಅನುಮತಿ ಪಡೆದಿರಲಿಲ್ಲ. ಹೀಗಾಗಿ ಮಿರ್ಜಿ ಅಣ್ಣಾರಾಯರ ಮಗ ಪತ್ರಿಕೆಗೆ ನೋಟಿಸ್ ಜಾರಿ ಮಾಡಿದ್ದರು.

‘ನಾವು ‘ನಿಸರ್ಗ’ದ ಸಂಕ್ಷಿಪ್ತ ರೂಪವನ್ನು ಪ್ರಕಟಿಸಿದ್ದರಲ್ಲಿ ಯಾವುದೇ ದುರುದ್ದೇಶವಿಲ್ಲ. ನಿಮಗೆ ಒಂದಿಷ್ಟು ಪರಿಹಾರವನ್ನೂ ಕೊಡುತ್ತೇವೆ. ನೋಟಿಸ್ ವಾಪಸು ತೆಗೆದುಕೊಳ್ಳಿ ಎಂದು ಅವರಿಗೆ ಹೇಳಿ ಬನ್ನಿ’ ಎಂದು ಕಾರ್ಯನಿರ್ವಾಹಕ ಸಂಪಾದಕರು ನನಗೆ ಸಂಧಾನದ ಕಾರ್ಯ ವಹಿಸಿದರು. ಪತ್ರಿಕೆಯಿಂದ ಮಿರ್ಜಿ ಅಣ್ಣಾರಾಯರಿಗೆ ಅನುಕೂಲವೇ ಆಗಿದೆ. ಅವರ ಮಗ ನೋಟಿಸ್ ಜಾರಿ ಮಾಡಿ ತಪ್ಪು ಮಾಡಿದ್ದಾರೆ ಎನ್ನುವ ಧಾಟಿಯಲ್ಲಿ ಅವರು ಮಾತನಾಡಿದರು!

ಆದರೂ ವಹಿಸಿದ ಜವಾಬ್ದಾರಿಯನ್ನು ನಿರ್ವಹಿಸಲು ಅಜಿತ ಮಿರ್ಜಿಯವರನ್ನು ಕಂಡೆ. ಅವರು ತಮ್ಮ ಅಸಮಾಧಾನವನ್ನೆಲ್ಲ ನನ್ನ ಮೇಲೆ ಹಾಕಿದರು. ‘ನಾನು ’ನಿಸರ್ಗ’ ಕಾದಂಬರಿಯ ಮರು ಮುದ್ರಣದ ಹಕ್ಕನ್ನು ಗೀತಾ ಬುಕ್ ಹೌಸ್‌ಗೆ ಕೊಟ್ಟಿರುವೆ. ನೀವು ಹೀಗೆ ಪ್ರಕಟ ಮಾಡಿಬಿಟ್ಟರೆ ಅದು ಹೇಗೆ ಮಾರಾಟವಾಗುತ್ತದೆ? ಅವರು ಈಗ ಪ್ರಕಟ ಮಾಡುವುದಿಲ್ಲ ಎನ್ನುತ್ತಿದ್ದಾರೆ. ನನ್ನ ಮೇಲೆಯೇ ಅವರಿಗೆ ಅನುಮಾನವುಂಟಾಗಿದೆ. ನೀವು ಪ್ರಕಟ ಮಾಡುವುದಕ್ಕಿಂತ ಮುಂಚೆ ನಮ್ಮ ಅನುಮತಿಯನ್ನಾದರೂ ಕೇಳಬೇಡವೇ’ ಎಂದು ಅವರು ಕೇಳಿದರು. ಅವರು ಹೇಳಿದ್ದು ಎಲ್ಲವೂ ನಿಜವಿತ್ತು.

‘ನಮಗೆ ಯಾವ ದುರುದ್ದೇಶವೂ ಇಲ್ಲ. ನಿಮಗೆ ಆ ಸಂಕ್ಷಿಪ್ತ ಪುಸ್ತಕದ ಪ್ರಕಟಣೆಯ ಸಂಬಂಧ ಇಂತಿಷ್ಟು ಸಂಭಾವನೆ ಕಳಿಸುವುದಾಗಿ ಸಂಪಾದಕರು ತಿಳಿಸಿದ್ದಾರೆ. ಒಪ್ಪಿಕೊಳ್ಳಿ’ ಎಂದೆ. ಆ ಮೊತ್ತ ಐದು ಸಾವಿರ ರೂಪಾಯಿ ಇತ್ತು ಎಂದು ನೆನಪು. ಅವರು ನನ್ನ ಮಾತಿಗೆ ಒಪ್ಪಿದರು. ಮುಂದೆ ಅವರು ನೋಟಿಸ್ ಅನ್ನು persue ಮಾಡಲಿಲ್ಲ. ಮಿರ್ಜಿ ಅಣ್ಣಾರಾಯರು ಜೈನರಾದುದರಿಂದ ನಾನು ಬೆಳಗಾವಿ ಜಿಲ್ಲಾ ವರದಿಗಾರ ಮಾತ್ರವಾಗಿರದೇ ಜೈನನೂ ಆಗಿದ್ದುದರಿಂದ ಕಾರ್ಯನಿರ್ವಾಹಕ ಸಂಪಾದಕರು ನನ್ನನ್ನು ಈ ಕೆಲಸಕ್ಕೆ ಬಳಸಿಕೊಂಡರೇ ಎಂದು ನಂತರ ನನಗೆ ಅನುಮಾನವಾಯಿತು.

Follow Us:
Download App:
  • android
  • ios