Asianet Suvarna News Asianet Suvarna News

ಕಬ್ಬಿಗೆ ಆಗದಿರಲ್ಲಿ ಕಬ್ಬಿಣದ ಕೊರತೆ; ಈ ರೀತಿ ನಿಗವಹಿಸಿ!

ಇತ್ತೀಚೆಗೆ ಕಬ್ಬಿನ ಎಲೆಗಳಿಗೆ ಬಿಳಿಚಿಕೊಳ್ಳುವ ರೋಗ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಮೊದಲು ಕೆಲವು ಸೀಮಿತ ಕ್ಷೇತ್ರಗಳಲ್ಲಿ ಈ ರೋಗ ಕಾಣಿಸಿಕೊಳ್ಳುತ್ತಿತ್ತು. ಈಗ ಎಲ್ಲ ಕ್ಷೇತ್ರಕ್ಕೂ ವಿಸ್ತರಿಸಿಕೊಳ್ಳುತ್ತಿದೆ. ಮೊದ ಮೊದಲು ಬಿಳಿಚಾದ ಎಲೆಗಳು ಕ್ರಮೇಣ ಹಸಿರು ಬಣ್ಣಕ್ಕೆ ತಿರುಗಿ ಸಹಜವಾಗುತ್ತಿದ್ದವು. ಆದರೆ, ಇತ್ತೀಚಿಗೆ ಕಬ್ಬು ಬಿಳುಚಿಕೊಳ್ಳುವ ಪ್ರಮಾಣ ವೃದ್ಧಿಸಿದೆ. ಕಬ್ಬಿನ ಬೆಳೆಗೆ ಲಘು ಪೋಷಕಾಂಶಗಳ ಕೊರತೆಯೇ ಈ ಬಿಳಚು ಕಾಯಿಲೆಗೆ ಕಾರಣ.

Deficiency cause and prevention for Iron content in sugarcane crop
Author
Bangalore, First Published Aug 27, 2019, 11:11 AM IST

ಎಸ್‌.ಕೆ ಪಾಟೀಲ್‌

ಇದಕ್ಕೆ ಪ್ರಮುಖ ಕಾರಣ

* ರೈತರು ಕೊಟ್ಟಿಗೆ ಗೊಬ್ಬರ ಬಳಕೆ ಮಾಡುವುದನ್ನು ತೀರ ಕಡಿಮೆ ಮಾಡಿದ್ದಾರೆ.

* ಪ್ರಧಾನ ಗೊಬ್ಬರಗಳ ಕಡೆ ಮಾತ್ರ ಹೆಚ್ಚು ಗಮನ ಕೊಟ್ಟು ಸೂಕ್ಷ್ಮ ಪೋಷಕಾಂಶಗಳನ್ನು ಸರಿಯಾಗಿ ಕೊಡುತ್ತಿಲ್ಲ.

* ಪ್ರತಿ ವರ್ಷ ಒಂದೇ ಜಮೀನಿನಲ್ಲಿ ಪದೇ ಪದೇ ಕಬ್ಬು ಬೆಳೆಯುತ್ತಾರೆ. ಬೆಳೆ ಪರಿವರ್ತನೆ ಮಾಡದೇ ಇದ್ದಾಗ ಬೆಳೆಗೆ ಬೇಕಾದ ನಿರ್ದಿಷ್ಟಪೋಷಕಾಂಶ ಅಲ್ಲಿ ಲಭ್ಯ ಇರುವುದಿಲ್ಲ.

* ಜಮೀನಿನಲ್ಲಿ ಸವಳು ಪ್ರಮಾಣ ಹೆಚ್ಚಾಗಿರುವುದರಿಂದಲೂ ಸೂಕ್ಷ್ಮ ಪೋಷಕಾಂಶಗಳ ಲಭ್ಯತೆ ಕಡಿಮೆಯಾಗುತ್ತದೆ.

60 ಹಸು, 1000 ಲೀ ಹಾಲು;ಹಸು ಸಾಕಿದರೆ ಲಾಭವುಂಟು!

* ಸವಳು ಮತ್ತು ಕ್ಷಾರ ಭೂಮಿಯಲ್ಲಿ ಬೆಳೆದ ಕಬ್ಬಿಗೆ ಕಬ್ಬಿಣದ ಅಂಶ ಲಭ್ಯವಾಗುವುದಿಲ್ಲ.

* ಕ್ಯಾಲ್ಸಿಯಂ ಹೆಚ್ಚಾಗಿರುವ ಕಪ್ಪು ಭೂಮಿಯಲ್ಲೂ ಕೂಡ ಕಬ್ಬಿಗೆ ಕಬ್ಬಿಣಾಂಶದ ಕೊರತೆ ಕಾಡುತ್ತದೆ.

* ಫಲವತ್ತತೆ ಇಲ್ಲದ ಉಸುಕು ಜಮೀನಿನಲ್ಲಿ ಸಹಜವಾಗಿ ಲಘು ಪೋಷಕಾಂಶಗಳ ಕೊರತೆಯಾಗುತ್ತದೆ.

ಕಬ್ಬಿಣ ಕೊರತೆಯ ಲಕ್ಷಣ : ಮೊದಮೊದಲು ಬೆಳವಣಿಗೆ ಸಹಜವಾಗಿರುತ್ತದೆ. ಕ್ರಮೇಣ ಎಲೆಗಳ ನರಗಳ ಮಧ್ಯಭಾಗ ಪತ್ರ ಹರಿತ್ತನ್ನು ಕಳೆದುಕೊಂಡು ಹಸಿರು ಮತ್ತು ಬಿಳಿ ಪಟ್ಟಿಗಳು ಕಾಣಿಸಿಕೊಳ್ಳುತ್ತವೆ. ಕೊರತೆ ಜಾಸ್ತಿಯಾದಾಗ ಎಲೆ ಸಂಪೂರ್ಣ ಹಳದಿ ಬಣ್ಣಕ್ಕೆ ತಿರುಗಿ, ನಂತರ ಬಿಳಿಯಾಗುತ್ತದೆ. ಆಮೇಲೆ ಒಣಗಿ ಸಾಯುತ್ತವೆ. ಈ ಲಕ್ಷಣವನ್ನು ಐರನ್‌ ಕ್ಲೋರಾಸಿಸ್‌ ಎಂದು ಕರೆಯುತ್ತಾರೆ.

ಕೊಬ್ಬು ಕರಗಿಸುವ ಕಬ್ಬಿನ ಹಾಲು ಮ್ಯಾಜಿಕ್ ಇಲ್ಲಿದೆ!

ನಿರ್ವಹಣೆ : ನಾಟಿ ಮಾಡುವ ಮೊದಲು ಎಕರೆಗೆ 10 ಟನ್‌ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟನ್ನು ಜಮೀನಿಗೆ ಕಡ್ಡಾಯವೆಂಬಂತೆ ಹಾಕಬೇಕು. ಕಬ್ಬು ನಾಟಿ ಮಾಡುವಾಗ ಶಿಫಾರಸ್ಸು ಮಾಡಿದಷ್ಟೇ ರಾಸಾಯನಿಕ ಗೊಬ್ಬರ ಕೊಡಬೇಕು. ಜೊತೆಗೆ 1 ಕ್ವಿಂಟಲ್‌ ಎರೆಹುಳು ಗೊಬ್ಬರದಲ್ಲಿ ಅಂದಾಜು 10 ಕೆ.ಜಿ ಕಬ್ಬಿಣದ ಸಲ್ಪೇಟ್‌ ಬೆರೆಸಿ, ನೀರು ಚಿಮುಕಿಸಿ ಒಂದು ರಾತ್ರಿ ಇಟ್ಟು. ಮಾರನೇ ದಿನ ಕಬ್ಬು ನಾಟಿ ಮಾಡುವ ಸಾಲುಗಳಲ್ಲಿ ಜಮೀನಿಗೆ ಹಾಕಬೇಕು. ಕಬ್ಬು ಕಟಾವಾದ ನಂತರ ಬೋದುಗಳನ್ನು ರಂಟೆಯಿಂದ ಸಡಿಲು ಮಾಡಿ ಆ ಸಾಲಿನಲ್ಲಿ 10 ಕೆ.ಜಿ ಕಬ್ಬಿಣದ ಸಲ್ಪೇಟ್‌ ಭೂಮಿಗೆ ಸೇರಿಸಬೇಕು. ಅಂದರೆ ಕೂಳೆ ಬೆಳೆಗೆ ಕಬ್ಬಿಣದ ಕೊರತೆ ಕಾಡುವುದಿಲ್ಲ.

ಕೆಲವು ರೈತರು ಲಘು ಪೋಷಕಾಂಶಗಳನ್ನು ಹಾಕಿದ್ದರೂ ಕೂಡ ಅವು ಬೆಳೆಗೆ ಲಭ್ಯವಾಗಿರುವುದಿಲ್ಲ. ಹಾಗಾದಾಗ ಕಬ್ಬು ಮೊಳಕೆಯೊಡೆದ ಒಂದು ತಿಂಗಳ ನಂತರ ಪೋಷಕಾಂಶದ ಕೊರತೆ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ತಕ್ಷಣ ಒಂದು ಲೀಟರ್‌ ನೀರಿಗೆ 5 ಗ್ರಾಂ. ನಂತೆ ಕಬ್ಬಿಣದ ಸಲ್ಫೇಟ್‌ ಬೆರೆಸಿ, ಕಬ್ಬಿನ ಎಲೆ ಮೇಲೆ ಹಸಿರು ಭಾಗ ಪೂರ್ತಿ ತೊಯ್ಯುವಂತೆ ಸಿಂಪಡಿಸಬೇಕು. ಮತ್ತೆ ಒಂದು ತಿಂಗಳ ನಂತರ ಎರಡನೇ ಬಾರಿ ಹಾಗೂ 3 ನೇ ತಿಂಗಳ ನಂತರ 3 ನೇ ಸಲ ಹೀಗೆ ಸಿಂಪಡಿಸಬೇಕು. ಇದರಿಂದ ಸಂಪೂರ್ಣ ಕಬ್ಬಿಣದ ಕೊರತೆಯನ್ನು ಹೋಗಲಾಡಿಸಬಹುದು. ಮತ್ತು ಕಬ್ಬಿನಲ್ಲಿ ಬಿಳಿಚಾಗುವಿಕೆಯನ್ನು ಸಂಪೂರ್ಣವಾಗಿ ನಿವಾರಿಸಬಹುದು.

 

Follow Us:
Download App:
  • android
  • ios