Asianet Suvarna News Asianet Suvarna News

ಪ್ರಕೃತಿ ಚಾಲೆಂಜ್ ಹಾಕುತ್ತಿದೆ, ಯಾಕೆ ಯಾರೂ Accept ಮಾಡ್ತಾ ಇಲ್ಲ?!

ಪ್ರಕೃತಿ ಚಾಲೆಂಜ್ ಹಾಕುತ್ತಿದೆ, ಯಾಕೆ ಯಾರೂ Accept ಮಾಡ್ತಾ ಇಲ್ಲ?!/ ಲಾಕ್ ಡೌನ್ ಎಂಬ ಒತ್ತಡದಿಂದ ಕೊಂಚ ಹೊರಬಂದು ಪ್ರಪಂಚ ನೋಡಿ/ ನಿಸರ್ಗ ನೀಡುತ್ತಿರುವ ಚಾಲೆಂಜ್ ಗಳನ್ನು ನಾವೇಕೆ ಸ್ವೀಕಾರ ಮಾಡಬಾರದು?

Coronavirus Lockdown Why can t we did not Accept Nature Challenge
Author
Bengaluru, First Published Apr 12, 2020, 6:20 PM IST

ಕೃಷ್ಣಮೋಹನ ತಲೆಂಗಳ 

ಲಾಕ್ ಡೌನ್ ಬಂದಿತ್ತು, ಈಗ ಮತ್ತೆ ಅರ್ಧ ತಿಂಗಳು ವಿಸ್ತರಣೆ ಆಗಿದೆ. ನಾವು ವಾಟ್ಸಪ್ಪು ಸ್ಟೇಟಸ್ಸುಗಳಲ್ಲಿ ವಿಧ ವಿಧದ ಚಾಲೆಂಜುಗಳನ್ನು ಗಂಭೀರವಾಗಿ ಅಂಗೀಕರಿಸಿ ಅನುಷ್ಠಾನ ಮಾಡುವುದರಲ್ಲಿ ವ್ಯಸ್ತರಾಗಿದ್ದೇವೆ. ಆದರೆ ಒಂದು ಗಮನಿಸಿದ್ದೀರ? ಅಯಾಚಿತವಾಗಿ ಈಗ ಸಿಕ್ಕ ಬಿಡುವು ಬದುಕನ್ನು ಎಷ್ಟು ಬದಲಿಸಿದೆ ನೋಡಿ. ಅಕ್ಕ ಪಕ್ಕದ ಪುಟ್ಟ ಪುಟ್ಟ ಸಹಜ ಪರಿಸರವನ್ನು ಝೂಮ್ ಮಾಡಿ ನೋಡಿಯಂತೆ. ಪ್ರಕೃತಿ ಕರೆ ಕರೆದು ನಮಗೆ ಚಾಲೆಂಜ್ ಮಾಡುತ್ತಿದೆ... ಕೊರೋನಾಗೆ ಇಷ್ಟೆಲ್ಲ ಒದ್ದಾಡುತ್ತಿದ್ದೀರಲ್ಲ. ಈ ಅವಧಿಯಲ್ಲೂ ನಾನು ಸಹಜವಾಗಿದ್ದೇನೆ... ನಿಮಗ್ಯಾಕೆ ಸಹಜವಾಗಿರಲು ಸಾಧ್ಯವಾಗುತ್ತಿಲ್ಲ? ಅಂತ.

ಹೌದಲ್ವೇ...
ಕೊರೋನಾ ಬಂದಿರುವುದ ನಮಗೆ, ಮನುಷ್ಯರಿಗೆ. ಗಡಿಬಿಡಿಗೆ ಒಳಗಾಗಿ ಬದಲಾಗಿರುವುದು ನಮ್ಮ ಬದುಕು, ಬದುಕಿನ ಓಡಾಟದ ಹರಿವೇ ಬಹುತೇಕ ನಿಂತಿದೆ. ಉಣ್ಣಲು ಸಿಕ್ಕಿದರೆ ಸಾಕು, ಜೀವ ಉಳಿದರೆ ಸಾಕು ಎಂಬಂಥ ಆತಂಕಗಳೂ ಇವೆ. ಆಧರೆ ಪರಿಸರ, ಪ್ರಾಣಿಗಳಿಗೆ ಇಂತಹ ಆತಂಕ ಇಲ್ಲ. ಅವು ಸಹಜವಾಗಿಯೇ ಇವೆ. ಚಿಗುರು, ಹೂವು, ಹಣ್ಣು, ತಂಗಾಳಿ, ಸೂರ್ಯೋದಯ, ಸೂರ್ಯಾಸ್ತದ ಚೆಲುವು, ಸಮುದ್ರದ ಅಲೆಗಳ ನರ್ತನ ಎಲ್ಲ ಸಹಜವಾಗಿಯೇ ಇದೆ. ಬದುಕು ಅತಂತ್ರ ಎನಿಸಿರುವುದು ನಮಗೆ, ಮನೆ ಬಿಟ್ಟು ಓಡಾಡಲು ಸಾಧ್ಯವಾಗದೇ ಇರುವುದು ನಮಗೆ, ಇನ್ನೆಷ್ಟು ದಿನ ಹೀಗಿದೆಯೋ, ಕೊರೋನಾ ತೊಲಗಿದ ಬಳಿಕದ ಬದುಕು ಹೇಗೋ... ಎಂಬಿತ್ಯಾದಿ ಚಿಂತೆಗಳು ಆವರಿಸಿರುವುದು ನಾಗರಿಕರಿಗೆ. ನಿಮ್ಮ ಮನೆಯ ಸಾಕು ಪ್ರಾಣಿಗಳೋ, ಕಾಡಿನಲ್ಲಿ ಅಡ್ಡಾಡುವ ಜೀವಿಗಳೋ, ದೂರದ ಹಿಮಾಲಯವೋ, ನೂರಾರು ನದಿ, ತೊರೆಗಳೋ, ಅರಣ್ಯಗಳೋ ಯಾವುವೂ ವಿಚಲಿತವಾಗಿಲ್ಲ ಕೊರೋನಾ ಬಂದಿದೆ. ಅಂತ.

Coronavirus Lockdown Why can t we did not Accept Nature Challenge

ಬಿಝಿ ಬಿಝಿ ಅನ್ನುವ ನಾವು ಎಷ್ಟು ಸಹಜವಾಗಿ ಎಷ್ಟು ಸಲ ಮನೆಯ ಸುತ್ತಮುತ್ತ ಕಾಣುವ ಸೂರ್ಯೋದಯ, ಸೂರ್ಯಾಸ್ತವನ್ನು ಗಮನಿಸಿದ್ದೇವೆ? ಮನೆಯ ಸುತ್ತಮುತ್ತ ಏನೇನು ಮರಗಳಿವೆ, ಎಷ್ಟು ಹೂವಾಗುತ್ತದೆ, ಯಾವಾಗ ಹೂವು ಅರಳುತ್ತದೆ ಎಂಬುದನ್ನು ಗಮನಿಸಿದ್ದೇವೆ? ಬೆಳಗ್ಗಿನ ಬಸ್ ಹಿಡಿಯುವ ಧಾವಂತದಲ್ಲಿ ಕಿವಿಗೆ ಮೊಬೈಲ್ ತಗಲಿಸಿ ಓಡು ನಡಿಗೆಯಲ್ಲಿ ನಡೆಯುವ ನಿಮ್ಮಲ್ಲಿ ಎಷ್ಟು ಮಂದಿ ರಸ್ತೆಯುದ್ದಕ್ಕೂ ಚೆಲ್ಲಿರುವ ಹಳದಿ ಹೂಗಳ ಹಾಸಿಗೆಯ ಸೌಂದರ್ಯವನ್ನು ಗಮನಿಸಿದ್ದೀರಿ? ಕರುವಿನೊಂದಿಗೆ ಮೇಯಲು ಬರುವ ಆಕಳು, ಮರಿಗಳೊಂದಿಗೆ ಆಟವಾಡುವ ಬೀದಿ ನಾಯಿ, ಬೆಳ್ಳಂಬೆಳಗ್ಗೆ ಬುಡದ ತುಂಬ ಕಂಪು ಹೊತ್ತ ಹೂಗಳ ರಾಶಿ ಸುರಿಸುವ ಪಾರಿಜಾತದ ಮರ... ಹೀಗೆ ಮೌನವಾಗಿ ಮನಸ್ಸಿಗೆ ಮುದ ನೀಡುವ ಎಷ್ಟೊಂದು ಕೌತುಕಗಳ ಮನೆಯ ಸುತ್ತಮುತ್ತಲೇ ಇದ್ದವು ಎಂಬುದು ಹಲವರಿಗೆ ಲಾಕ್ ಡೌನ್ ಬಂದ ಮೇಲೆ ಗೊತ್ತಾಗಿದೆ.

ಲಾಕ್‌ಡೌನ್ ಎಫೆಕ್ಟ್: ಬಂಧಿಯಾದ ಜನ, ಪ್ರಾಣಿ, ಪಕ್ಷಿಗಳು ಫ್ರೀ..!.

ಕೆಲವು ಕೆಲಸ, ಕೆಲವು ಜವಾಬ್ದಾರಿಗಳೇ ಹಾಗೆ. ಅನಿವಾರ್ಯವಲ್ಲದ ಹೊರತು ಬಿಡುವು, ರಜೆ ಸಿಕ್ಕುವುದೇ ಇಲ್ಲ. ಅಂತಹ ಕೆಲಸಗಳು, ವ್ಯವಹಾರ ಅಂತಹ ತೊಡಗಿಸಿಕೊಳ್ಳುವಿಕೆಯನ್ನು ಬಯಸುವ ಕಾರಣ ಕೆಲವು ವಿಶಿಷ್ಟ ಕೆಲಸಗಳಲ್ಲಿ ದುಡಿಯುವವರು ಇಂತಹ ಸಣ್ಣ ಪುಟ್ಟ ಖುಷಿಗಳನ್ನು ಬದುಕಿನಲ್ಲಿ ಕಳೆದುಕೊಂಡೇ ಜೀವಿಸುತ್ತಿರುತ್ತಾರೆ. ಹೇಳದೇ ಕೇಳದೇ ಕಟ್ಟಿ ಹಾಕಿದ ಹೀಗೊಂದು ಸುದೀರ್ಘ, ತಿಂಗಳ ಅವಧಿಯ ರಜೆ ಎಲ್ಲದಕ್ಕೂ ಕಣ್ತೆರೆಯುವಂತೆ ಮಾಡಿದೆ.

Coronavirus Lockdown Why can t we did not Accept Nature Challenge

ಜವಾಬ್ದಾರಿಗಳು, ಟಾರ್ಗೆಟ್ಟುಗಳು, ಸಮಸ್ಯೆಗಳು, ಸಾಲಗಳು, ಪ್ರಮೋಶನ್ ಜೊತೆಗೆ ವೃತ್ತಿ, ಪ್ರವೃತ್ತಿ, ಮನರಂಜನೆ, ಸಾಹಸ, ಪ್ರವಾಸ ಅಂತೆಲ್ಲ ಎಷ್ಟೊಂದು ಓಡಾಟ, ಶಿಫ್ಟು, ಓವರ್ ಟೈಂ, ದಿನಪೂರ್ತಿ ಪ್ರಯಾಣ ಎಷ್ಟೊಂದು ಟೆನ್ಶನ್ನುಗಳು... ಇವೆಲ್ಲವನ್ನೂ ಮೀರಿ ಈಗ ಯಾರೂ ಕೇಳದೇ, ಬಯಸದೇ ಸುದೀರ್ಘ ರಜೆ ಬಹುತೇಕರಿಗೆ ಸಿಕ್ಕಿದೆ. ಯಾರೂ ಕೇಳಿದ್ದಲ್ಲ, ಸಿಕ್ಕಿದ ರಜೆಯಲ್ಲಿ ಎಲ್ಲೂ ಹೋಗಲೂ ಸಾಧ್ಯವಿಲ್ಲ. ಆದರೆ, ಇಂಥದ್ದೊಂದು ವಿಚಿತ್ರ ಸನ್ನಿವೇಶ ಯಾವ ಕಾಲಕ್ಕೂ ಬಿಝಿ ಇರುವವರನ್ನು, ಓಡಾಡುತ್ತಲೇ ಇರುವವರನ್ನು, ಯಾವ ಕಾಲಕ್ಕೂ ಪುರುಸೊತ್ತಿಲ್ಲ ಅಂತ ಹೇಳುವವರನ್ನು, ಮನೆಯಲ್ಲಿ ಯಾವತ್ತೂ ಕಾಣಸಿಗದೇ ಇರುವಂಥವರನ್ನೆಲ್ಲ ಈಗ ಮನೆಯಲ್ಲೇ ಕಟ್ಟಿ ಹಾಕಿದೆ. ಎಷ್ಟೋ ಮಂದಿಗೆ ನೆನಪೇ ಇರಲಾರದು ಎಷ್ಟು ಸಮಯವಾಯಿತು ಹೀಗೆ ಮನೆ ಮಂದಿಯೆಲ್ಲ ಒಟ್ಟಿಗೇ ವಾರಗಳ ಕಾಲ ಜೊತೆಯಾಗಿ ಇದ್ದು ಎಂದು. ಬದುಕಿನ ಜಂಜಡ, ಒತ್ತಡ, ಓಡಾಟಗಳು ವೃತ್ತಿಯಿಂದ ನಿವೃತ್ತರಾದರೂ ಮುಗಿಯುವುದಿಲ್ಲ. ಜೀವ ಇದ್ದಷ್ಟೂ ಕಾಲ ಒದ್ದಾಟ ಇದ್ದದ್ದೇ... ಆದರೆ, ಇಂಥದ್ದೊಂದು ಅಸಹಜ ಲಾಕ್ ಡೌನ್ ಮಾತ್ರ ಊಹಿಸದ ರೀತಿಯಲ್ಲಿ ಮನೆಮಂದಿಯನ್ನು ಒಟ್ಟಾಗಿ ಕಟ್ಟಿ ಹಾಕಿದೆ (ನನಗೆ ಗೊತ್ತು ವಿದೇಶದಲ್ಲಿ ಬಾಕಿಯಾಗಿರುವ ಭಾರತೀಯರು, ದೂರದ ಊರುಗಳಲ್ಲಿ ಅನಿವಾರ್ಯವಾಗಿ ಕೆಲಸಕ್ಕೋಸ್ಕರ ಉಳಿದವರು, ತುರ್ತು ಸೇವೆಗಳಿಗೋಸ್ಕರ ಕಂಕಣಬದ್ಧರಾಗಿ ದೂರವೇ ಉಳಿದವರನ್ನು ಹೊರತುಪಡಿಸಿ) ಅನಿವಾರ್ಯವಾಗಿ ದೂರು ಉಳಿದವರ ಹೊರತುಪಡಿಸಿದರೆ ವಿಚಿತ್ರವಾದ ಆತಂಕದ ನಡುವೆಯೂ ದೇಶದಲ್ಲಿ ಒಂದು ಕೌಟುಂಬಿಕ ವಾತಾವರಣ ಸೃಷ್ಟಿಯಾಗಿದೆ.

Coronavirus Lockdown Why can t we did not Accept Nature Challenge

ತುಂಬ ಚುಟುಕಾಗಿ ಹೇಳಬೇಕೆಂದರೆ, ದೇಶ ಲಾಕ್ ಡೌನ್ ಆಗಿರುವುದು ಕೊರೋನಾದ ವೈರಸ್ಸು ಬೀದಿ ಬೀದಿಗಳಲ್ಲಿ ಓಡಾಡುತ್ತವೆ, ದೂರವಿರಿ ಅಂತಲ್ಲ. ಕೊರೋನಾ ಸೋಂಕು ತಗುಲದೇ ಇರಲು, ಜನರ ಸಾಮಿಪ್ಯ ತಗ್ಗಿಸಲು ಮನವಿ ಮಾಡಿದರೆ, ಕೋರಿಕೆ ಸಲ್ಲಿಸಿದರೆ, ಯಾರೂ ಕೇಳುವುದಿಲ್ಲ, ಕಡ್ಡಾಯ ಮಾಡಿದರೆ ಮಾತ್ರ ಪಾಲನೆ ಮಾಡುವವರು ನಾವು ಎಂಬ ಕಾರಣಕ್ಕೆ ದೇಶ ಲಾಕ್ ಡೌನ್ ಆಗಿದೆ. ಹಾಗೂ ಮತ್ತಷ್ಟು ಕಠಿಣ ನಿಯಮಗಳ ಮೂಲಕ ಮನೆಯೊಳಗೇ ಜನರಿರುವ ಹಾಗೆ ನೋಡಿಕೊಳ್ಳಲು ಶತಪ್ರಯತ್ನ ಸಾಗಿದೆ. ಸರಳವಾಗಿ ಅವಲೋಕಿಸಿದರೆ, ನಮ್ಮ ವರ್ತನೆ, ಅತಿಯಾದ ಆತಂಕ, ಆತುರ ಹಾಗೂ ವೈಯಕ್ತಿಕತೆ ಹೊರತುಪಡಿಸಿದರೆ ಗುಂಪಿನೊಳಗೆ ನಿರ್ಬಂಧ ರಹಿತ ವರ್ತನೆಗಳೇ ಲಾಕ್ ಡೌನ್ ಬಿಗಿಯಾಗಿರಲು ಕಾರಣ ಅಷ್ಟೇ. ಪ್ರತಿ ಪ್ರಜೆಗೂ ಸ್ವಯಂ ನಿರ್ಬಂಧ ಸಾಧ್ಯವಿದ್ದರೆ ಅಥವಾ ಪ್ರತಿಯೊಬ್ಬರು ಕೇವಲ ಮನವಿಗೇ ಬೆಲೆ ಕೊಟ್ಟು ಸರ್ಕಾರದ ನಿಗಮಯಗಳನ್ನು ಪಾಲಿಸಲು ಸಾಧ್ಯವಾಗುತ್ತಿದ್ದರೆ ಇಷ್ಟೊಂದು ಕಠೋರ ಲಾಕ್ ಡೌನ್ ಎದುರಿಸಬೇಕಾದ ಅಗತ್ಯವೇ ಇರಲಿಲ್ಲವೇನೋ...

ಪ್ರಾಣಿಗಳಿಗೆ ಇದಕ್ಕಿಂತ ಖುಷಿ ಬೇಕೆ

ಬೆಳಗ್ಗಿನ ಹಕ್ಕಿಯ ಚಿಲಿಪಿಲಿ, ಮಂದ ಮಾರುತದೊಂದಿಗೆ ರಸ್ತೆಯಲ್ಲಿ ತೆಳುವಾಗಿ ಹರಡಿರುವ ಚಳಿ, ಯಾರೂ ಬೀಳಿಸದೆ ಗಾಳಿಗೆ ತಾನಾಗಿ ಸುರುಳಿ ಸುರುಳಿಯಾಗಿ ಬೀಳುತ್ತಾ ಇರುವ ಹೂವು, ಸಂಜೆ ಯಾರೋ ಕರೆಸಿದಂತೆ ಧಾವಂತದಿಂದ ಮನೆಗೆ ಮರಳುವ ಗೋವುಗಳ ಹಿಂಡು, V ಆಕಾರದಲ್ಲಿ ಆಕಾಶದಲ್ಲಿ ಗೂಡಿನೆಡೆಗೆ ಧಾವಿಸುವ ಹಕ್ಕಿಗಳ ಸಾಲು, ಸೂರ್ಯ ಮುಳುಗುತ್ತಾ ಆಕಾಶ ಕೆಂಪಾಗಿರುವ ಹೊತ್ತಿಗೆ ಹೊಳೆಯಲು ಶುರು ಮಾಡುವ ಯಾವುದೋ ತಾರೆ... ವಾಹನವೇ ಓಡಾಡದ ರಸ್ತೆಯ ಎರಡೂ ಪಕ್ಕದಲ್ಲಿ ಮೌನವಾಗಿ ನಿಂತಿರುವ ಮರಗಳ ಸಾಲು... ಇವುಗಳನ್ನು ಮೌನವಾಗಿ ಆಸ್ವಾದಿಸುವುದೇ ಅನುಭೂತಿ. ಅಂತಹ ಅನುಭೂತಿಯನ್ನು ನಾವೇ ಕಂಡುಕೊಳ್ಳಬೇಕು. ಬರಹಗಳಿಂದ, ಭಾಷಣದಿಂದ, ವಾಟ್ಸಪ್ಪು ಸ್ಟೇಟಸುಗಳಿಂದ, ವರ್ಣನೆಯಿಂದ ಅನುಭೂತಿಯನ್ನು ವಿವರಿಸಬಹುದೇ ಹೊರತು ಅನುಭವಿಸಲು ಸಾಧ್ಯವೇ ಇಲ್ಲ. ಅಂತಹ ಅನುಭೂತಿಗಳನ್ನು ಕಂಡುಕೊಳ್ಳಲು ಇರುವ ಸೂಕ್ತ ಸಮಯವೇ ಲಾಕ್ ಡೌನ್ ಅವಧಿ. ಕಂಡೂ ಕಾಣದಂತಿದ್ದ ಎಷ್ಟೋ ವಿಚಾರಗಳು ಮನೆಯ ಸುತ್ತಮುತ್ತಲೇ ಇವೆ ಎಂಬುದು ಗೊತ್ತಾಗುವುದೇ ಬಿಡುವಿದ್ದಾಗ. ಸಂಚಾರಕ್ಕೆ ತಡೆಯಾದಾಗ ಬಾಲ್ಕನಿ, ಟೆರೇಸು, ಮನೆಯ ಸಿಟೌಟ್ ಗಳೇ ಸ್ವರ್ಗ ಸದೃಶವಾಗುತ್ತವೆ.

Coronavirus Lockdown Why can t we did not Accept Nature Challenge

ಮನೆಯ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡದೇ ದಿನವೆಷ್ಟಾಗಿರಬಹುದು? ಒಂದು ಸಾಲನ್ನೂ ಬಿಡದೆ ಪೇಪರ್ ಓದದೆ ಎಷ್ಟು ದಿನ ಆಗಿರಬಹುದು? ಟಿ.ವಿ.ಯೆದುರು ಕುಳಿತು ಒಂದೇ ಸಿನಿಮಾವನ್ನು ಶಿಸ್ತಿನಿಂದ ಆರಂಭದಿಂದ ಕೊನೆ ತನಕ ನೋಡದೆ ವರ್ಷಗಳೆಷ್ಟು ಸಂದಿರಬಹುದು? ಕಂಪ್ಯೂಟರಿನಲ್ಲಿ ಹಳೆಯ ಫೈಲುಗಳ ವಿಲೇವಾರಿ, ಹಳೇ ಆಲ್ಬಂಗಳ ದರ್ಶನ, ಯಾವುದೋ ಹಳೆ ಸಿ.ಡಿ.ಯ ಪ್ರದರ್ಶನ, ಹಳೆ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ, ಕತೆಗಳ ಕಡತಗಳ ಮೆಲುಕು, ಅಟ್ಟದಲ್ಲಿದ್ದ ಯಾವುದೋ ಕಾಲದ ಚಂದಮಾಮಾ, ಬಾಲಮಂಗಳದ ಕಡೆಗೊಂದು ನಿಟ್ಟುಸಿರಿನ ಕುಡಿನೋಟ, ಮೂಲೆ ಸೇರಿದ್ದ ಲೂಡೋ, ಹಾವೇಣಿ, ಚೆಸ್, ಕೇರಂಗಳ ಭರಾಟೆ, ದಶಕಗಳ ಹಿಂದೆ ನೋಡಿದ್ದ ಅದೇ ರಾಮಾಯಣ, ಮಹಾಭಾರದ ಧಾರಾವಾಹಿಗಳ ಮರು ದರ್ಶನ.... ಹೀಗೆ ಎಷ್ಟೊಂದು ವಿಚಾರಗಳಿಗೆ ಲಾಕ್ ಡೌನ್ ವೇದಿಕೆ ಕಲ್ಪಿಸಿದೆ ಅಲ್ಲವೇ...
ಇದೊಂಥರ ವಿಷಾದದ ನಡುವೆಯೂ ಸಿಕ್ಕಿದ ವಿಚಿತ್ರ ಒಗ್ಗಟ್ಟು, ವಿಚಿತ್ರ ಏಕಾಂತ, ವಿಚಿತ್ರ ವಿಶ್ರಾಂತಿ ಹಾಗೂ ವಿಚಿತ್ರವಾದ ಸಾಮಾಜಿಕ ಅನುಭೂತಿ.

ಯಾರಾದರೂ ಹೇಳಿದ್ದರ ಇಂತಹ ತಿಂಗಳಿನಿಂದ ವಿಶ್ವಕ್ಕೇ ಕೊರೋನಾ ವಕ್ಕರಿಸುತ್ತದೆ ಅಂತ... ಯಾರಾದರೂ ಭವಿಷ್ಯ ನುಡಿದಿದ್ದರೆ ಇಂಥದ್ದು ಮಾಡಿದರೆ ಕೊರೋನಾ ಬಾರದಂತೆ ತಡೆಯಬಹುದು ಅಂತ, ಹವಾಮಾನ ಇಲಾಖೆಯವರು, ಪರಿಣತರು ಮುುನ್ನೆಚ್ಚರಿಕೆ ಕೊಟ್ಟಿದ್ದರೇ ಇಂತಹ ಅವಧಿಯಲ್ಲಿ ವಿಚಿತ್ರ ವೈರಸ್ ಬಾಧೆ ಕಾಡಲಿದೆ, ಎಲ್ಲರೂ ಜಾಗ್ರತೆ ಮಾಡಿ ಅಂತ, ಸರ್ಕಾರ ವಿಶೇಷ ಹಣಕಾಸು ಎತ್ತಿಟ್ಟಿತ್ತೇ ಕೊರೋನಾ ಬಜೆಟ್ ಗೆ ಅಂತ?
ಇಲ್ಲವಲ್ಲ....?

ಹಾಗಿದ್ದರೆ, ವಿಶ್ವ ಇಷ್ಟೊಂದು ವೇಗವಾಗಿ ತಾಂತ್ರಿಕವಾಗಿ, ಬೌದ್ಧಿಕವಾಗಿ ಬೆಳೆದಿದ್ದರೂ, ಇಷ್ಟೊಂದು ಮುಂದಾಲೋಚನೆ, ಮುನ್ಸೂಚನೆಗಳು ಲಭ್ಯವಿದ್ದರೂ, ಪರಿಣತರ ಪಡೆಯೇ ಇದ್ದರೂ ಇಂಥದ್ದೊಂದು ಸನ್ನಿವೇಶ ಯಾರದ್ದೂ ಊಹೆಗೆ ಸಿಲುಕದೇ ಹೋಯಿತು. ಬಂದ ಮೇಲೆ ಎಚ್ಚೆತ್ತಿರುವುದು ನಿಜ. ಆದರೆ, ಯಾರಿಗೂ ಹೇಳದೆ ವಿಶ್ವವನ್ನೇ ಏಕಕಾಲಕಕ್ಕೆ ಕಾಡಿದ, ಮನೆಯೊಳಗೆ ಎಲ್ಲರನ್ನೂ ಬಂಧಿಸಿದ, ಸಾವಿರಗಟ್ಟಲೆ ಮಂದಿಯ ಬಲಿ ಪಡೆದ, ಗೃಹ ನಿರ್ಬಂಧದಲ್ಲಿ ಇರಿಸಿದ ಕೊರೋನಾ ಮಾನವಾತೀತ ಎನ್ನುವುದು ನಿರ್ವಿವಾದ. ನಾವಿಂದ ಹೋರಾಡುತ್ತಿದ್ದೇವೆ ನಿಜ. ಅದರಲ್ಲಿ ಸಂಶಯವೇ ಇಲ್ಲ. ಆದರೆ ಇಡೀ ನಾಗರಿಕ ಸಮಾಜವನ್ನೇ ಬೆಚ್ಚಿ ಬೀಳಿಸಿದ, ಈ ಮಟ್ಟಿಗೆ ಅಲುಗಾಡಿಸಿದ, ಅಧೀರರನ್ನಾಗಿಸಿದ, ಇಡೀ ಸಂಚಾರ ಸಾಧ್ಯತೆಯನ್ನೇ ಸ್ತಬ್ಧಗೊಳಿಸಿದ ಕೊರೋನಾ ಒಂದು ವಿಚಿತ್ರ ಪಾಠವೂ ಹೌದು.

Coronavirus Lockdown Why can t we did not Accept Nature Challenge

ನಾನು ಏನೂ ಮಾಡಿಯೇನು, ತಾಂತ್ರಿಕ ಹಾಗೂ ಬೌದ್ಧಿಕ ಸಾಮರ್ಥ್ಯ ಇದೆ, ಕಂಪ್ಯೂಟರ್ ಇದೆ, ದುಡ್ಡಿದೆ, ಪರಿಣತರಿದ್ದಾರೆ, ಯಂತ್ರಗಳಿವೆ ಎಂಬಿತ್ಯಾದಿ ಹುಸಿ ಅಹಂಗಳನ್ನು ಕೊರೋನಾ ನುಚ್ಚು ನೂರು ಮಾಡಿದೆ. ದೇವರಿದ್ದಾನೆಯೇ, ಪಾಪ ಪುಣ್ಯಗಳಿವೆಯೇ, ಸ್ವರ್ಗ, ನರಕಗಳಿವೆಯೇ, ಜ್ಯೋತಿಷ್ಯ ಎಂಬುದು ಸತ್ಯವೇ, ಸುಳ್ಳೇ??? ಎಂಬಿತ್ಯಾದಿ ವಾದಗಳನ್ನು ದಾಟಿ ಮಾನವನ ಊಹೆಗೆ ನಿಲುಕದಂತೆ ಜಗತ್ತನ್ನೇ ಅಲ್ಲಾಡಿಸಬಲ್ಲ ವ್ಯವಸ್ಥೆಯೂ ಇದೆ ಎಂಬುದು ಸಾಬೀತಾಗಿದೆ. ಪ್ರಾರ್ಥನಾಲಯಗಳೇ ಭಕ್ತರ ಪಾಲಿಗೆ ಬಂದ್ ಆಗಿವೆ, ಮನೆಯೇ ಪ್ರಾರ್ಥನೆಗೆ ಗುಡಿಗಳಾಗಿವೆ, ನಾಳಿನ ಭವಿಷ್ಯ ನಿಖರವಾಗಿ ಹೇಳುವವರಿಲ್ಲ, ಜಾತ್ರೆ, ಉತ್ಸವ, ನೇಮ, ಕೋಲ, ಬಯಲಾಟಗಳು ವೈಭವದಿಂದ ನಡೆಯುವ ಹಾಗಿಲ್ಲ. ಟೆಸ್ಟು, ಮದುವೆ, ಮುಂಜಿ, ಪೂಜೆ, ಪುನಸ್ಕಾರ, ಹಬ್ಬಗಳ ಆಚರಣೆಗೆ ನಿಂತಿವೆ. ತಿರುಗಾಟ, ಪ್ರವಾಸ, ಮೋಜು ಮಸ್ತಿ, ಸುರಪಾನಗಳಿಗೂ ಅವಕಾಶ ಇಲ್ಲ. ಸಿನಿಮಾ, ವೀಕೆಂಡ್ ಡ್ರೈವ್, ಜಾಲಿ ರೈಡ್, ಅಷ್ಟೇ ಯಾಕೆ ಗ್ರಂಥಾಲಯಗಳಿಗೆ ಹೋಗಿ ಪುಸ್ತಕಗಳನ್ನೂ ತರುವ ಹಾಗಿಲ್ಲ.
ಡ್ರೈವಿಂಗೇ ಮರೆತ ಹಾಗೆ, ಕಚೇರಿಗೆ ಹೋಗಿ ಎಷ್ಟೋ ವರ್ಷಗಳೇ ಸಂದ ಹಾಗೆ, ದೂರದ ತಾಣಗಳೆಲ್ಲ ಎಲ್ಲೋ ಕನಸಿನಲ್ಲಿ ಕಂಡ ಹಾಗೆ ಭಾಸವಾಗುವ ದಿನಗಳಿವು. ಬೀದಿಯಲ್ಲೇ ಇರುವ ದೇವಸ್ಥಾನ, ಮನೆ ಹಿಂದಿನ ದಿಬ್ಬ, ಪೊದರುಗಳಿಂದ ಕೂಡಿದ ಒಂದು ಪುಟ್ಟ ಗುಡ್ಡಗಳೇ ಈಗ ನಾಗರಿಕರ ಪಾಲಿಗೆ ಪ್ರಕೃತಿ ರಮಣೀಯ, ಮನಶಾಂತಿ ನೀಡುವ ತಾಣಗಳು.... ಬೇರೆ ಆಯ್ಕೆಯೇ ಇಲ್ಲ

ಒಂದು ಗಮನಿಸಿದ್ದೀರ...?

ಬದುಕಿನಲ್ಲಿ ಅಸ್ತಿತ್ವದ ಪ್ರಶ್ನೆ ಬಂದಾಗ ಮತ್ತೆಲ್ಲಾ ಬೇಡಿಕೆಗಳು, ನಿರೀಕ್ಷೆಗಳು ಎಡಿಟ್ ಆಗುತ್ತಾ ಹೋಗುತ್ತವೆ. ಐಶಾರಾಮ, ಗಮ್ಮತ್ತು, ಹಾಗೆಯೇ ಆಗಬೇಕು, ಹೀಗೆಯೇ ಆಗಬೇಕೆಂಬ ನಿರ್ಬಂಧ ಇವೆಲ್ಲ ತನ್ನಿಂತಾನೆ ಕಡಿಮೆಯಾಗುತ್ತಾ ಕೊನೆಗೊಮ್ಮೆ ತಾನು ಬದುಕಿದರೆ ಸಾಕೆಂಬ ಅದಮ್ಯ ಆಕಾಂಕ್ಷೆ ಮನೆ ಮಾಡುತ್ತದೆ. ಕೊರೋನಾ ಮಾಡಿದ್ದೂ ಇದನ್ನೇ ಆರಂಭದಲ್ಲಿ ಮಾಲ್, ಸಿನಿಮಾ ಮಂದಿರಗಳನ್ನು ಮುಚ್ಚಿದಾಗ ಜನ ನಿಬ್ಬೆರಗಾದರು, ಹಪಹಪಿಸಿದರು, ಬಸ್ಸು, ರೈಲು ನಿಲ್ಲಿಸಿದಾಗ ಆತಂಕಕ್ಕೊಳಗಾದರು, ಕೊನೆಗೊಮ್ಮೆ ರಸ್ತೆಗೆ ಇಳಿಯುವಂತಿಲ್ಲ ಎಂದಾಗ ಅದಕ್ಕೂ ಹೊಂದಿಕೊಂಡರು. ಹೊಂದಿಕೊಳ್ಳಲೇ ಬೇಕು. ಕಾಲ ಹಾಗೆ ಮಾಡಿದೆ. ಸಿನಿಮಾ ಮಂದಿರ ಬೇಕು, ಬಾರ್ ತೆಗೆಯಬೇಕು, ಪಿಜ್ಜಾ ತಿನ್ನಬೇಕು ಎಂಬಿತ್ಯಾದಿ ಬೇಡಿಕೆಗಳಿಗಿಂತಲೂ ಜಾಸ್ತಿ ನನಗೆ, ನನ್ನ ಬೀದಿಗೆ ಕೊರೋನಾ ಬಾರದಿರಲಿ ಎಂಬುದೇ ಆದ್ಯತೆ ಆಗಿ ಬಿಟ್ಟಿತು. ಹೊಟ್ಟೆ ತುಂಬಿದ ಮೇಲೆ ಮತ್ತಷ್ಟರ ಆಸೆ ಮೂಡುವುದು. ಹೊಟ್ಟೆಯೇ ತುಂಬದಿದ್ದಾಗ ಪಾಯಸ ತಿನ್ನುವ ಆಸೆ ಹೇಗೆ ಹುಟ್ಟಲು ಸಾಧ್ಯ. ಅಸ್ತಿತ್ವದ ಹಪಹಪಿಕೆ ಮಾನವ ಜನಾಂಗವನ್ನು ಅಲ್ಲಾಡಿಸಿ ಬಿಟ್ಟಿದೆ. ಮೂರು ವಾರಗಳ ದಿಗ್ಬಂಧನ ಅಹಂಗಳನ್ನು ದಾಟಿ ಒಂದಷ್ಟು ಚಿಂತನೆಗಳನ್ನೂ ಹುಟ್ಟು ಹಾಕಿದೆ.

ಮೊಬೈಲುಗಳಲ್ಲಿ, ಅಂತರ್ಜಾಲ ಸಂಕಪರ್ಕದಿಂದಾಗಿ ಜಗತ್ತೂ ಇನ್ನೂ ಬೆಸೆದಿದೆ. ಟಿ.ವಿ., ಪೇಪರ್ ಬರುವ ಕಾರಣ ಸುದ್ದಿಗಳೂ ತಿಳಿಯುತ್ತಿವೆ. ಆದರೆ ಹೊರ ಜಗತ್ತನ್ನು ಕಣ್ಣಾರೆ ಕಾಣುವ ಅನುಭೂತಿಯಿಲ್ಲ. ರಸ್ತೆಯುದ್ದಕ್ಕೂ ವೇಗವಾಗಿ ಬೈಕ್ ಓಡಿಸುವ, ಕಡಲ ತಡಿಯ ಅಲೆಗಳಲ್ಲಿ ಪಾದಗಳನ್ನು ತೋಯಿಸುವ ಅನುಭೂತಿ ಸಿಕುತ್ತಿಲ್ಲ. ಮಾರುಕಟ್ಟೆಯ ಚೌಕಾಸಿ, ಹೊಟೇಲಿನ ಬೈಟೂ ಕಾಫಿ, ತನ್ನ ಚಿಂತೆಗಳ ಬಗ್ಗೆ ಚಿಂತಿಸಲೂ ಪುರುಸೊತ್ತಿಲ್ಲದಂತೆ ಕಾಡುತ್ತಿದ್ದ ಉದ್ಯೋಗ ಇವೆಲ್ಲದರ ದೈನಂದಿನ ಒಟ್ಟೂ ದಿನಚರಿಯಿಂದ ಏಕಾಏಕಿ ಹೊರ ದಬ್ಬಿದಾಗ ಆಗುವ ಅನಾಥ ಪ್ರಜ್ನೆ ಎಲ್ಲೆಡೆ ಮನೆ ಮಾಡಿದೆ. ರಜೆ ಕೊಡಿ ಸ್ವಾಮಿ ಅನ್ನುತ್ತಿದ್ದವರೇ ಕೆಲಸ ಯಾವಾಗ ಆರಂಭ? ಎಂದು ಕೇಳುತ್ತಿದ್ದಾರೆ ಎಂಬ ಬಗ್ಗೆ ಬಂದ ಜೋಕು ಈ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯೂ ಹೌದು.

ಪ್ರಕೃತಿಯ ಚಾಲೆಂಜೂ ಅದೇ, ನನ್ನಷ್ಟು ಸಹಜವಾಗಿ ನೀವ್ಯಾಕೆ ಇಲ್ಲ ಅಂತ...
ಒಂದು ಕಥೆಯ ಮೂಲಕ ಇದನ್ನು ಅರ್ಥ ಮಾಡಿಕೊಳ್ಳಬಹುದು...

ಒಬ್ಬ ರಾಜ ಯಾವುದೋ ಉದ್ದೇಶಕ್ಕೆ ಕೊಪ್ಪರಿಗೆ ತುಂಬ ಹಾಲು ಸಂಗ್ರಹಕ್ಕೆ ಮುಂದಾದನಂತೆ. ರಾಜ್ಯದಲ್ಲಿ ಡಂಗುರ ಸಾರಿಸಿದನಂತೆ. ನಾಳೆ ಬೆಳಗ್ಗೆ ಅರಮನೆ ಮುಂದೆ ಇರಿಸುವ ಕೊಪ್ಪರಿಗೆಯ ಬಾಯಿಗೆ ಬಟ್ಟೆ ಕಟ್ಟಲಾಗುವುದು. ಎಲ್ಲರೂ ಒಂದು ಲೀಟರ್ ಹಾಲು ತಂದು ಕೊಪ್ಪರಿಗೆಗೆ ತುಂಬಬೇಕು. ಇದು ರಾಜಾಜ್ನೆ ಅಂತ. ಸರಿ ಮರುದಿನ ಸಾಲು ಸಾಲಾಗಿ ಜನ ಬಂದು ಹಾಲು ಸುರಿಯತೊಡಗಿದರಂತೆ. ಒಬ್ಬ ಅತಿ ಬುದ್ಧಿವಂತ ಮಾತ್ರ ಎಲ್ಲರೂ ಲೀಟರುಗಟ್ಟಲೆ ಹಾಲು ಹಾಕುವಾಗ ನಾನೊಬ್ಬ ನೀರು ಹಾಕಿದರೆ ಯಾರಿಗೆ ತಾನೇ ಗೊತ್ತಾಗುತ್ತದೆ ಅಂತ ಒಂದು ಲೀಟರ್ ನೀರು ತಂದು ಸುರಿದನಂತೆ. ಸಂಜೆ ಬಂದು ರಾಜ ಭಟರು ನೋಡುವಾಗ, ಕೊಪ್ಪರಿಗೆ ತುಂಬ ಹಾಲಿರಲಿಲ್ಲ, ನೀರೇ ತುಂಬಿತ್ತಂತೆ. ಕಾರಣ ಇಷ್ಟೇ... ಪ್ರತಿಯೊಬ್ಬರೂ ಅಂದುಕೊಂಡದ್ದು ಅದನ್ನೇ... ನಾನೊಬ್ಬ ನೀರು ಹಾಕಿದರೆ ಯಾರಿಗೆ ತಾನೆ ಗೊತ್ತಾದೀತು ಅಂತ...

ಹೌದು ನಾವಿರೋದೇ ಹೀಗೆ... ಈ ಮನಸ್ಥಿತಿಗೇ ದೇಶ ಲಾಕ್ ಡೌನ್ ಆಗಿರುವುದು. ನಮ್ಮ ದೇಶ ಸರಿ ಇಲ್ಲ, ಜನ ಸರಿ ಇಲ್ಲ, ನಮಗೆ ಕ್ಲೀನ್ ಗೊತ್ತಿಲ್ಲ, ಕಾಮನ್ ಸೆನ್ಸ್ ಇಲ್ಲ ಅಂತೆಲ್ಲ ಹೀಗಳೆಯುವ ಉದ್ದೇಶ ನನಗಿಲ್ಲವೇ ಇಲ್ಲ. ನಾವು ಬೆಳೆದು ಬಂದಿರುವುದು, ನಮ್ಮ ಮನಸ್ಥಿತಿಯೇ ಹಾಗಿದೆ.

ಭಾರತೀಯ ರೈಲ್ವೇ ಇಲಾಖೆಯ ರೈಲುಗಳಲ್ಲಿ ಬೇಕಾಬಿಟ್ಟಿ ಹೋಗುವವರು, ಸೀಟಿನ ಮೇಲೆ ಕಾಲು ಚಾಚುವವರು, ಕಸವನ್ನು ಅಲ್ಲೇ ಎಸೆಯುವವರು ಮೆಟ್ರೋ ರೈಲಿನಲ್ಲಿ ಹೋಗುವಾಗ ಅತಿ ಸಭ್ಯರಂತೆ ಕೂರುತ್ತಾರೆ! ಇದು ಹೇಗೆ? ಮಾಮೂಲಿ ಟಾಕೀಸುಗಳಲ್ಲಿ ಒಳಗೇ ಉಗಿದು, ಬೀಡಿ ಸೇದಿ, ಎದುರಿನ ಸೀಟಿಗೆ ಕಾಲಿಟ್ಟು ಮಲಗುವವರು ಮಲ್ಟಿ ಪ್ಲೆಕ್ಸಿಗೆ ಹೋದಾಗ ಅಷ್ಟು ಸದ್ಗೃಹಸ್ಥರಂತೆ ವರ್ತಿಸುತ್ತಾರೆ ಯಾಕೆ? ಅಲ್ಲಿನ ವಾತಾವರಣ, ಶಿಸ್ತು ಕಾರಣವೇ? ಅಥವಾ ಅಲ್ಲಿನ ಸ್ಟಾಂಡರ್ಡಿಗೆ ತಕ್ಕ ಹಾಗೆ ನಾನು ಸಭ್ಯನಂತೇ ಇರಬೇಕೆಂಬ ಯೋಚನೆ ಕಾರಣವೇ? ಕ್ಯೂ ತಪ್ಪಿಸಿ ಹೋಗುವುದು, ಬೇಗ ಕೆಲಸ ಮುಗಿಸಲು ವಶೀಲಿ ಮಾಡುವುದು, ಕಾದಿರಿಸಿದ ರೈಲು ಸೀಟಿನಲ್ಲಿ ಪ್ರಯಾಣಿಕನ್ನು ದೂಡಿ ಕೂರುವುದು, ಕೊನೆಗೇ ತಾನೋ ಸೀಟಿನುದ್ದಕ್ಕೂ ಮಲಗುವುದು, ಕುಳಿತಲ್ಲಿಂದಲೇ ಕಿಟಕಿಯಾಚೆ ಉಗಿಯುವುದು, ಪಬ್ಲಿಕ್ ಟಾಯ್ಲೆಟ್ ತಾನೆ ಅಂತ ಫ್ಲಶ್ ಮಾಡದೆ ಬರುವುದು, ಬಸ್ಸಿನಲ್ಲಿ ಚಿತ್ರವಿಚಿತ್ರ ಕೆತ್ತನೆ ಮಾಡುವುದು... ಎಷ್ಟೆಲ್ಲ ವಿಕೃತಿಗಳು...

ಜನರಿಗೆ ಜನರ ಮೇಲೆ ನಂಬಿಕೆ ಇದ್ದರೆ, ಸರ್ಕಾರಕ್ಕೆ, ಆಡಳಿತಕ್ಕೆ ಪರಸ್ಪರ ನಂಬಿಕೆ ಇದ್ದರೆ, ಇಷ್ಟೊಂದು ಪೊಲೀಸರು, ಸಿ.ಸಿ. ಕ್ಯಾಮೆರಾಗಳು, ಥಂಬ್ ಇಂಪ್ರೆಶನ್ ಗಳು, ಒಟಿಪಿ, ಬಯೋಮೆಟ್ರಿಕ್ಸ್, ಕೋರ್ಟು, ವಕೀಲರು, ಮಂಪರು ಪರೀಕ್ಷೆ.... ಇತ್ಯಾದಿ ಇತ್ಯಾದಿಗಳು ಬೇಕೆ.... ಬೇಡ ಅಲ್ಲವೇ? ನಾವು ಕಡ್ಡಾಯವಲ್ಲದೆ ಯಾವುದಕ್ಕೂ ತಲೆ ಬಾಗುವುದಿಲ್ಲ (ನಾವು ಅನ್ನುವುದು ಒಟ್ಟೂ ಮನಸ್ಥಿತಿಯ ಪ್ರತೀಕ ಅಷ್ಟೆ), ಡೆಡ್ ಲೈನ್ ನೀಡದೆ ಟಾಸ್ಕ್ ಪೂರ್ತಿ ಮಾಡುವುದಿಲ್ಲ, ನನಗೆ ಮೊದಲು ಬೇಕು, ನಾನೇ ಕ್ಯೂವಿನಲ್ಲಿ ಮೊದಲಿರಬೇಕೆಂಬ ಹಪಹಪಿಕೆ, ನನ್ನಂತೆ ಕ್ಯೂವಿನ ಅಷ್ಟೂ ಮಂದಿಗೂ ಸ್ವಂತ ಒತ್ತಡಗಳಿವೆ ಎಂಬ ಪ್ರಜ್ನೆ ಸ್ವಲ್ಪ ಕಮ್ಮಿ... ಮನೆಯಲ್ಲೇ ಇರಿ ಮನೆಯಲ್ಲೇ ಇರಿ ಎಂಬ ವಿನಂತಿಗೆ ಯಾರು ಕ್ಯಾರ್ ಮಾಡದ ಕಾರಣ ಲಾಕ್ ಡೌನ್ ಬಂತು... ಮತ್ತೆ ಇದೀಗ ವಿಸ್ತರಣೆಯಾಯಿತು.

ಆದರೆ ಪ್ರಕೃತಿ ನೋಡಿ ಎಷ್ಟು ಸಹಜವಾಗಿದೆ? ಯಾರಿಗೂ ಕೇಡು ಬಗೆಯದೆ, ಯಾರನ್ನೂ ನೋಯಿಸದೆ, ಇಷ್ಟೊಂದು ಜನಸಂಖ್ಯೆಗೆ ಆಶ್ರಯ ಕೊಟ್ಟು ಲವಲವಿಕೆಯಿಂದಿದೆ. ಪ್ರಕೃತಿ ಕುಂದಿದರೆ ಅದಕ್ಕೆ ನಮ್ಮ ಅತಿರೇಕಗಳೇ ಕಾರಣ. ನಾಗರಿಕ ಮಧ್ಯಪ್ರವೇಶ ತಗ್ಗಿದೆ ಎಂಬ ಕಾರಣಕ್ಕೇ 200 ಕಿ.ಮೀ. ದೂರದಿಂದ ಹಿಮಾಲಯ ಕಾಣುತ್ತಿದೆ, ನದಿಗಳು ಸ್ವಚ್ಛವಾಗಿ ಹರಿಯತೊಡಗಿವೆ. ರಸ್ತೆಗಳಲ್ಲಿ ಹೊಗೆ ಕಡಿಮೆಯಾಗಿದೆ. ಮನೆಯೊಳಗಿದ್ದರೂ ನಮ್ಮ ಅಹಂಗಳು ನಿಂತಿಲ್ಲ., ದುರಂತ ನಿರ್ವಹಣೆಯ ವಿಚಾರದ ರಾಜಕೀಯ, ಪರೋಕ್ಷ ಪ್ರಚಾರದ ಹಪಹಪಿಕೆ, ವಾದ ವಿವಾದ, ಅವಹೇಳನ, ವ್ಯಂಗ್ಯ, ಕೆಣಕುವಿಕೆ ಯಾವುದೂ ನಿಂತಿಲ್ಲ.

ಪ್ರಕೃತಿ ಅದೆಷ್ಟು ಶಾಂತವಾಗಿ ಚಾಲೆಂಜ್ ಕೊಡುತ್ತಲೇ ಇದೆ... ಸಹಜವಾಗಿರಿ, ಸಹಜವಾಗಿರಿ ಅಂತ. ಯಾಕೆ ಯಾರೂ ಅಕ್ಸೆಪ್ಟ್ ಮಾಡ್ತಾ ಇಲ್ಲ. ಛೆ.

Follow Us:
Download App:
  • android
  • ios