‘ಜಗತ್ತೇ ಕೊರೋನಾ ವೈರಸ್‌ ಅಂತ ಬಾಯ್‌ ಬಾಯ್‌ ಬಿಡ್ತಿದೆ. ನಾನು ಸತ್ತವರಿಷ್ಟು, ಸೋಂಕಿತರಿಷ್ಟು, ಶಂಕಿತರಿಷ್ಟುಅಂತ ಸೀರಿಯಸ್‌ ಆಗಿ ಲೆಕ್ಕಾಚಾರ ಮಾಡ್ತಿದ್ದೆ. ಅಷ್ಟೊತ್ತಿಗೆ ಇವ್ಳು ಬಂದ್ಳಾ.. ಕೈಯಿಂದ ಲ್ಯಾಟ್‌ಟಾಪ್‌ ಕಿತ್ಕೊಂಡು ಸೋಫಾದ ಇನ್ನೊಂದು ಬದಿ ವಿರಾಜಮಾನಳಾದಳು. ನನಗಿಂತ ಸೀರಿಯಸ್‌ ಆಗಿ ಏನೋ ಸರ್ಚ್‌ ಮಾಡ್ತಿದ್ದಳು. ಆಗಾಗ ಪ್ಚ್‌, ಥೋ, ಡಬ್ಬಾ ಅಂತೆಲ್ಲ ಕಮೆಂಟ್‌ಗಳು, ಫಳಕ್‌ ಮಿಂಚು ಹೊಡೆದಂಗೆ ಕಿಸಕ್‌ ನಗು ಸಶಬ್ದವಾಗಿ ಹೊರಬರುತ್ತಿದ್ದವು. ನನಗೆ ಕೆಟ್ಟಕುತೂಹಲ. ನಾನು ಹೇಳುವ ಯಾವ ಘನಂದಾರಿ ಜೋಕ್‌ಗೂ ನಗದವಳನ್ನು ನಗುವ ಹಾಗೆ ಮಾಡುವ ದುಷ್ಟಯಾರಿರಬಹುದು ಅಂತ.

ನಾನು ಬಾಯಿಬಿಟ್ಟು ಕೇಳಿದ್ರೆ ಅವಳು ಹೇಳಲ್ಲ. ಅದೇ ಟೈಮ್‌ಗೆ ಸರಿಯಾಗಿ ಸಿನಿಮಾದಲ್ಲಿ ಬರೋ ಹಾಗೆ ಅವಳ ಮೊಬೈಲ್‌ ರಿಂಗ್‌ ಆಯ್ತು. ಅವಳು ಲ್ಯಾಪ್‌ಟಾಪ್‌ ಇಟ್ಟು ರೂಂ ಕಡೆ ಹೋದಳು. ಸಿಕ್ಕಿದ್ದೇ ಚಾನ್ಸ್‌ ಅಂತ ಇಣುಕಿದ್ರೆ ಹತ್ತಾರು ವೆಬ್‌ಸೈಟ್‌ಗಳು ಓಪನ್‌ ಆಗಿ ಮಿನಿಮೈಸ್‌ ಆಗಿ ಕೂತಿದ್ದವು. ಓಪನ್‌ ಆಗಿದ್ರಲ್ಲಿ ಹೂ ಹೂವಿನ ಲೆಹೆಂಗಾ ಹಾಕ್ಕೊಂಡ ಕತ್ರಿನಾ ಇದ್ಲು. ಪಕ್ಕದಲ್ಲೇ ಅವಳ ಡ್ರೆಸ್‌ ಡೀಟೈಲ್‌. ಅದರ ಬೆಲೆ ಇತ್ಯಾದಿ. ನಾನು ಹೌಹಾರಿ ನೆಗೆದುಬೀಳೋದ್ರಲ್ಲಿದ್ದೆ. ಅಷ್ಟರಲ್ಲಿ ಅವಳು ಬರೋದು ಗೊತ್ತಾಯ್ತು. ಲ್ಯಾಪ್‌ಟಾಪ್‌ ಹಾಗೇ ಇಟ್ಟು ಬಂದುಬಿಟ್ಟೆ. ಕೆಲವೇ ಹೊತ್ತಲ್ಲಿ ನನ್ನ ಅಕೌಂಟಿಂದ ಎಷ್ಟೋ ಸಾವಿರ ಕೈ ಜಾರಿದ ಮೆಸೇಜ್‌ ಬಂತು. ನಿಟ್ಟುಸಿರು ಬಿಟ್ಟೆ..’

ಆ್ಯಂಟಿಕ್ ಅಂತ ಮನೇನಲ್ಲಿ ಏನೇನೋ ಇಟ್ಕೋಬೇಡಿ!

ಕೊರೋನಾ ಕಾರಣಕ್ಕೆ ಟೆಕ್ಕಿ ಮಿತ್ರನಿಗೆ ವರ್ಕ್ ಫ್ರಂ ಹೋಂ. ಅವನಿಗೆ ಟೈಮ್‌ ಇದ್ರೆ ಹೀಗೆ ಗಂಟೆಗಟ್ಟಲೆ ಮಜಬೂತ್‌ ಆಗಿ ಮಾತಾಡೋದ್ರಲ್ಲಿ ಅವ್ನು ಎಕ್ಸ್‌ಪರ್ಟ್‌. ಆದ್ರೆ ಅವನ ಅಕೌಂಟಿಂದ ದುಡ್ಡು ಹೋದದ್ರಲ್ಲಿ ಪರೋಕ್ಷವಾಗಿ ನನ್ನ ಪಾತ್ರವೂ ಇತ್ತು. ಹಾಗಾಗಿ ಅವನ ಮಾತನ್ನಿಲ್ಲಿ ದಾಖಲಿಸಬೇಕಾಯ್ತು. ಅವನ ಹುಡುಗಿಗೆ ಆ ಡ್ರೆಸ್‌ಗಳ ಡೀಟೈಲ್ಸ್‌ ಕೊಟ್ಟ ಪಾಪಿ ನಾನೇ ಅಂತ ಗೊತ್ತಾದ್ರೆ ಅವನು ನನ್ನ ಹುಟ್ಟಿಲ್ಲ ಅಂತನಿಸಿಬಿಡ್ತಾನೆ ಅಂತ ಗೊತ್ತಿದ್ರೂ ಇಲ್ಲಿ ಆ ಡ್ರೆಸ್‌ ಡೀಟೆಲ್ಸ್‌ ಹೇಳ್ತಿದ್ದೀನಿ.

1. ವಸಂತಕ್ಕೆ ಹೂಗಳ ಪಿಸುಮಾತು.

ಫ್ಯಾಶನ್‌ ಮಾಂತ್ರಿಕ ಸಭ್ಯಸಾಚಿ ಸಮ್ಮರ್‌ಗೆಂದು ಫ್ಲೇರ್‌ನಲ್ಲಿ ಅದ್ಭುತ ಡಿಸೈನ್‌ಗಳನ್ನು ಮಾಡಿದ್ದಾರೆ. ಕತ್ರಿನಾ ಕೈಫ್‌ ತೊಟ್ಟಿರುವ ಲೆಹೆಂಗಾದಲ್ಲಿ ಹೂಗಳ ರಾಶಿಯೇ ಇದೆ. ಇದು ಪಾಸ್ಟಲ್‌ ಲೆಹೆಂಗಾ. ಸಭ್ಯಸಾಚಿ ‘ಮದುಮಗಳ ಕನಸಿನ ದಿರಿಸಿದು’ ಅಂತ ಹೇಳಿದ್ದಾರೆ ಈ ಉಡುಗೆಗೆ. ಸಿಂಪಲ್‌ ಆಗಿ, ಗಾರ್ಜಿಯಸ್‌ ಆಗಿ ಕನಸಲ್ಲಿ ಬಂದ ಹೂಗಳೇ ಕಣ್ಮುಂದೆ ಬಂದ ಹಾಗಿರುವ ಡಿಸೈನ್‌ ಇದು. ಫ್ಲೇರ್‌ನಲ್ಲಿ ಪಾಸ್ಟಲ್‌ ಕಲರ್‌ನಲ್ಲಿ ಈ ಥರದ ಲೆಹೆಂಗಾ ನೀವೂ ಟ್ರೈ ಮಾಡಬಹುದು.

2. ಪಡ್ಡೆ ಹುಡ್ಗಿಯ ಚೆಡ್ಡಿ ಬನಿಯನ್‌

ಸಾರಾ ಆಲಿ ಖಾನ್‌ ಅನ್ನೋ ಕ್ಯೂಟ್‌ ಸುಂದ್ರಿ ಸಮ್ಮರ್‌ನಲ್ಲೀಗ ಪಡ್ಡೆ ಹುಡುಗಿಯಾಗಿದ್ದಾರೆ. ಅರ್ಧ ತೊಡೆ ಮುಚ್ಚೋ ಡೆನಿಮ್‌ ಶಾಟ್ಸ್‌ರ್‍ ಮತ್ತು ಬನಿಯನ್‌ನಷ್ಟೇ ತೆಳುವಾದ ಟಾಪ್‌ ಹಾಕ್ಕೊಂಡು, ಸಮ್ಮರ್‌ನಲ್ಲಿ ಸಖತ್‌ ಹಾಟ್‌ ಆಗಿ ಮಿಂಚುತ್ತಿದ್ದಾರೆ. ಅಪ್‌ಕೋರ್ಸ್‌ ಆಕೆಗಿದು ಕೂಲ್‌ ಕೂಲ್‌ ಅನುಭವ. ಬಿಲಿನ ತೀವ್ರತೆ ತಡೆಯಲು ಇಂಥಾ ಡ್ರೆಸ್‌ಗಳು ಚೆನ್ನಾಗಿರುತ್ತವೆ. ಸ್ಟೈಲ್‌ ಆಗಿಯೂ ಇರುತ್ತವೆ.

3. ಸೀರೆಯುಟ್ಟು ಮುಗುಳ್ನಕ್ಕ ಮುಗುದೆ

ಸೋನಂ ಕಪೂರ್‌ ಬಿಸಿಲ ಬೇಗೆಯಲ್ಲಿ ನದಿಯಂತೆ ಹರಿದು ಬಂದಿದ್ದಾರೆ. ಬೆಳ್ಳನೆಯ ತೆಳು ಸೀರೆಯಲ್ಲಿ ಆಕೆ ಪುರಾಣ ಪಾತ್ರ ಗಂಗೆಯನ್ನು ನೆನಪಿಸುತ್ತಾರೆ. ಆದರೆ ಸಖತ್‌ ಮಾಡರ್ನ್‌ ಲೇಡಿಯೂ ಆಗಿರುವ ಅವರಿಗೆ ಹೀಗೆಲ್ಲ ಹೇಳಿದ್ರೆ ಇಷ್ಟಆಗುತ್ತೆ ಅನ್ನೋದಿಕ್ಕಾಗಲ್ಲ. ಇದು ಬಾಲಿವುಡ್‌ನ ಮತ್ತೊಬ್ಬ ಪ್ರತಿಭಾವಂತ ಡಿಸೈನರ್‌ ಮನೀಶ್‌ ಮಲ್ಹೋತ್ರಾ ಡಿಸೈನ್‌. ಹಾಲುಬಿಳುಪಿನ ಸೀರೆಗೆ ಒಂದೆಳೆಯ ಲೇಸ್‌ ವಿನ್ಯಾಸದ ಬಾರ್ಡರ್‌. ಸಿಂಪಲ್‌ ಆಗಿರುವ ಬೇಸಿಗೆಗೆ ಹಿತವಾದ ಸೀರೆ. ಬರಡು ನೆಲದಲ್ಲಿ ತಂಗಾಳಿಯಂತೆ ನಿಂತು ಈ ಸೀರೆಯಲ್ಲಿ ಸೋನಂ ಫೋಟೋ ಶೂಟ್‌ ಮಾಡಿಸಿಕೊಂಡಿದ್ದಾರೆ.

4. ಇದು ಬಾತ್‌ ಟವೆಲ್‌ ಅಲ್ಲ. ನನ್‌ ಸಮ್ಮರ್‌ ಡ್ರೆಸ್‌ ಅನ್ನೋ ಅಲಿಯಾ

ಅಲಿಯಾ ಬಿಂದಾಸ್‌ ಡ್ರೆಸ್‌ನಲ್ಲಿ ಸಮ್ಮರ್‌ನ ಎನ್‌ಜಾಯ್‌ ಮಾಡ್ತಿದ್ದಾರೆ. ಬೇಬಿ ಪಿಂಕ್‌ ಬಣ್ಣದಲ್ಲಿರುವ ಈ ಕಾಟನ್‌ ಟಾಪ್‌ ಮೇಲ್ನೋಟಕ್ಕೆ ಬಾತ್‌ರೂಂನಿಂದ ಕವರ್‌ ಮಾಡಿಕೊಂಡು ಬರೋ ಬಾಡಿ ರಾರ‍ಯಪ್‌ ಥರ ಇದೆ. ಹಾಗಂತ ಒಂದಿಷ್ಟುನೆಟಿಜನ್ಸ್‌ ಅಲಿಯಾ ಕಾಲೆಳೆದರೂ ಕ್ಯಾರೇ ಅನ್ನದೇ ಬೇಸಿಗೆ ಉಡುಪನ್ನು ಎನ್‌ಜಾಯ್‌ ಮಾಡುತ್ತಿದ್ದಾರೆ.

ಮಲೈಕಾ ಅರೋರಾರ ನ್ಯೂಡ್‌ ಜಿಮ್‌ಲುಕ್‌ ಮಾಡಿದೆ ಬಾರಿ ಸದ್ದು

ಸಮ್ಮರ್‌ನಲ್ಲಿ ನಿಮ್ಮ ಡ್ರೆಸ್‌ ಆಯ್ಕೆ ಹೀಗಿರಲಿ

  • ಪಾಸ್ಟಲ್‌ ಬಣ್ಣದಲ್ಲಿ ಫ್ಲೇರ್ ಡಿಸೈನ್‌ ಸೆಲೆಕ್ಟ್ ಮಾಡಿ ಸಖತ್ತಾಗಿರುತ್ತೆ.
  • ತೆಳುವಾದ ಬಿಳಿ ಟಾಪ್‌ ಅಥವಾ ಕ್ರಾಪ್‌ಟಾಪ್‌ ಕಾಂಬಿನೇಶನ್‌ ಆಗಿ ಡೆನಿಮ್‌ ಶಾಟ್ಸ್‌ರ್‍ ಸಖತ್‌ ಕ್ಯೂಟ್‌ ಮತ್ತು ಸೀಸನಲ್‌ ಸ್ಟೈಲ್‌.
  • ಲಿನೆನ್‌, ಕಾಟನ್‌, ಶಿಫಾನ್‌ ಸಾರಿಗಳು ಪಸಂದಾಗಿರುತ್ತವೆ. ಗಾಢ ಬಣ್ಣಕ್ಕಿಂತ ಲೈಟ್‌ ಕಲರ್‌ ಬೆಸ್ಟ್‌.
  • ಮೇಕಪ್‌ ಕಡಿಮೆ ಇರಲಿ. ಅಪ್ಪಿ ತಪ್ಪಿ ಬಿಸಿಲಿಗೆ ಹೋದರೆ ಮೇಕಪ್‌ ಮಾಡಿದ್ದು ಜಗಜ್ಜಾಹೀರು ಆಗದಿರಲಿ.

- ನಿಶಾಂತ ಕಮ್ಮರಡಿ