ಬಹು ಪತ್ನಿತ್ವ ಗಂಡಸಿಗೆ ಸಮಾಜವೇ ಒಪ್ಪಿದ ಸಂಗತಿ, ಆತನಿಗೆ ಇಬ್ಬರು ಹೆಂಡಿರು, ಮೂರು ಜನ ಹೆಂಡಿರು, ಆತನಿಗೇನು ಊರಿಗೊಬ್ಬರಿ ದ್ದಾರೆ, ಇತ್ಯಾದಿ ಮಾತುಗಳು ಸರ್ವೆ ಸಾಮಾನ್ಯ. ಕೆಲವೇ ವರ್ಷಗಳ ಹಿಂದೆ ಗಂಡಸು ಹೆಂಡತಿಯರನ್ನು ಅಂಗಿ ಬದಲಿಸುವಂತೆ ಬದಲಿಸುತ್ತಿದ್ದ, ಅದಕ್ಕೆ ಅವಳನ್ನು ಅರ್ಧಾಂಗಿ ಎಂದು ಕರೆಯಲಾಗುತ್ತಿತ್ತೊ ಏನೋ? ಸಿನಿಮಾ ನಟರಿಗೆ, ಕಲಾವಿದರಿಗೆ ಒಬ್ಬಳೇ ಹೆಂಡತಿಯಂತೆ ಎಂಬುದು ಆಶ್ಚರ್ಯದ ವಿಷಯದ ಜೊತೆಗೆ ‘ಒಬ್ಬಾಕಿನೇ ಹೆಂಡ್ತಿಯಂತಲೇ?’ ಎಂದು ನಗಾಡುತ್ತಿದ್ದರು ಕೂಡಾ! ಸ್ವಲ್ಪ ಜನಪ್ರಿಯತೆ ಬಂದರೂ ಸಾಕು ನಮ್ಮ ಉತ್ತರ ಕರ್ನಾಟಕದ ಕಡೆ ಏನಪ್ಪಾ ಊರಾಗ ಒಬ್ಬಾಕಿ, ಬೆಂಗಳೂರಿನಾಗೆ ಒಬ್ಬಾಕಿ ಏನಪಾ? ಎಂದೇ ಕೇಳಿ ಬಿಡುತ್ತಾರೆ.

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಮಂಗಳೂರು ಹುಡುಗಿ ಅಪೇಕ್ಷಾ ಕೊಟ್ಟಾರಿ!

ಬೆಂಗಳೂರಿಗೆ ಗಾರ್ಡನ್ ಸಿಟಿ, ರೇನ್ ಸಿಟಿ, ಕೂಲ್ ಸಿಟಿ ಎಂಬಿತ್ಯಾದಿ ವಿಶೇಷಣಗಳ ಜೊತೆ ‘ಸೆಕೆಂಡ್ ಸೆಟಪ್ ಸಿಟಿ’ ಎಂಬ ಹೆಸರು ಕೂಡಾ ರಸಿಕವಲಯದಲ್ಲಿ ಚಾಲ್ತಿಯಲ್ಲಿದೆ. ನಮ್ಮ ಕಡೆಯವರು ಯಾರೇ ಇರಲಿ, ಬೆಂಗಳೂರಲ್ಲಿ ಒಂದು ಮನೆಕೊಂಡರೆ, ಕಟ್ಟಿಸಿದರೆ, ಮನೆ ಗೃಹ ಪ್ರವೇಶಕ್ಕೆ ಬಂದವರೆಲ್ಲ ‘ಇಲ್ಲಿ ಬ್ಯಾರೆ ಹೆಂಣ್ತಿಯೇನಪಾ?’ ಎಂದೇ ಛೇಡಿಸುತ್ತಾರೆ, ಎಷ್ಟೋ ಸಲ ಹೆಂಡತಿಯರ ಎದುರೇ ‘ಏನೋ ಇಲ್ಲೂ ಇದೇ ಹೆಣ್ತಿಯೇನೋ ಮಹರಾಯಾ’ ಎಂದೇ ಅಂದು, ಮುಜುಗುರ ತರುತ್ತಾರೆ.

ಆದರೆ, ಇದೇ ಮಾತನ್ನು ಯಾರೂ, ಎಂದೂ ಹೆಂಣಿಗೆ ಅನ್ನುವದಿಲ್ಲ ‘ನಿನಗೆಷ್ಟು ಮಂದಿ ಗಂಡಂದಿರವ್ವ? ಎಂದು ಕೇಳಿ ಯಾರಾದರೂ, ಎಂದಾದರೂ ಪಾರಾಗಿದ್ದಾರೆಯೇ? ಗಂಡಸರು ತಾವು ಮಾತ್ರ ಶ್ರೀಕೃಷ್ಣನ ಅಪರಾವತಾರ ತಾನು ಎಂದು ಭಾವಿಸಿ ಸಾವಿರ ಹೆಂಡಿರ ಸರದಾರನಾದರೂ ಹೆಣ್ಣುಮಕ್ಕಳಿಗೆ ಮಾತ್ರ ‘ನಿಜಭಕ್ತನಿಗೆ ದೇವನೊಬ್ಬ, ಪರಮಪತಿವೃತೆಗೆ ಗಂಡನೊಬ್ಬ’ ಎಂಬ ನಾಣ್ಣುಡಿ ಮಾಡಿ ಬೀಗುತ್ತಿದ್ದಾರೆ. ಆದರೆ, ಈಗೀಗ ನಾವೇನು ಕಮ್ಮಿ ಎಂಬಂತೆ ಹೆಣ್ಣುಗಳೂ ಗಂಡಂದಿರನ್ನೂ ಬದಲಾಯಿಸುತ್ತಿದ್ದಾರೆ. ಸದ್ಯಕ್ಕೆ ಇಂಥವರ ಸಂಖ್ಯೆ ಕಡಿಮೆ ಇದೆ.

ನನ್ನ ಬಾಲ್ಯದಲ್ಲಿ ವಿಶೇಷವಾಗಿ ಬ್ರಾಹ್ಮಣ ಪರಿಸರದಲ್ಲಿ ಮಡಿ ಹೆಂಗಸರು ತುಂಬಾ ಇದ್ದರು ಗಂಡಸತ್ತ ಕೂಡಲೇ ಕೂದಲು ತೆಗೆದು, ಕೆಂಪು ನೂಲಿನ ಸೀರೆ ಉಟ್ಟರೆ ಆಕೆ ಮಡಿ ಹೆಂಗಸು. ಇನ್ನು ಆಕೆ ಸಾಯುವವರೆಗೆ ಮಡಿ. ಆಕೆಯನ್ನು ಯಾರೂ ಮೈಲಿಗೆ ಮಾಡುವಂತಿಲ್ಲ, ಮುಟ್ಟುವಂತೆಯೂ ಇಲ್ಲ. ಆಕೆಯೂ ಅಷ್ಟೆ, ರಾತ್ರಿ ಉಣ್ಣುವಂತಿಲ್ಲ, ಸೋಪು ಹಾಕಿ ಸ್ನಾನ ಮಾಡುವಂತಿಲ್ಲ, ಎಂಥ ಚಳಿಯಿದ್ದರೂ ಬಿಸಿ ನೀರು ಸ್ನಾನ ನಿಷಿದ್ಧ, ಮೈಮೇಲೊಂದು, ಕೋಲಿನ ಮೇಲೊಂದು ಎರಡೇ ಸೀರೆ ತಲೆಯ ಮೇಲಿನ ಸೆರಗು ಸರಿದು ತಲೆ ಕೂದಲು ಕಾಣುವಂತಿಲ್ಲ ಕೂದಲು ಬರುಬರುತ್ತಿದ್ದಂತೆಯೇ ಕ್ಷೌರವಾಗಬೇಕು ಮನೆಯ ಮಕ್ಕಳು ಮುದುಕರು ಏಳುವದರೊಳಗೇ ಕ್ಷೌರ ಮಾಡಿಸಿಕೊಂಡು ಸ್ನಾನಮಾಡಿ ಎಂದಿನಂತೆಯೇ ಕೂತಿರಬೇಕು.

12 ದೇಶಗಳನ್ನು ಸುತ್ತಿದ 103 ವರ್ಷದ ತೊಗಲು ಗೊಂಬೆಯಾಟದ ಭೀಮಜ್ಜಿ!

ಅನ್ನಕ್ಕಿಂತ ಹೆಚ್ಚು ಅಳ್ಳಿಟ್ಟು, (ಅರಳಹಿಟ್ಟು) ಅವಲಕ್ಕಿ, ಅಪರೂಪಕ್ಕೆ ಹಾಲು ಆಕೆಯ ರಾತ್ರಿ ಆಹಾರ, ಹಗಲು ಒಂದೇ ಊಟ, ಏಕಾದಶಿಯ ದಿನವಂತೂ ನೀರನ್ನೂ ಕುಡಿಯುವಂತಿಲ್ಲ, ರೇಡಿಯೋ ಕೇಳುವಂತಿಲ್ಲ, ಪೇಪರ್ ಓದುವಂತಿಲ್ಲ ಸುಮ್ಮನೆ ಕೂರುವಂತಿಲ್ಲ ಹೂಬತ್ತಿ ಮಾಡಬೇಕು, ಗೆಜ್ಜೆವಸ್ತ್ರ ಮಾಡಬೇಕು, ಒಂದೇ ಎರಡೇ, ಮಡಿ ಹೆಂಗಸೆಂದರೆ ಜೀವಾವಧಿ ಕಠಿಣ ಶಿಕ್ಷೆಯ ಖೈದಿಯಿದ್ದಂತೆ. ಮೊನ್ನೆ ಮೊನ್ನೆಯವರೆಗೂ ನಮ್ಮ ತಂದೆ, ತಾತನ ಕಡೆಯ ಸಂಬಂಧಿಗಳಲ್ಲಿ ಅಂಬಕ್ಕ, ತುಂಗಕ್ಕ, ಗೋಧಕ್ಕ, ಸಾವಿತ್ರವ್ವ, ಶ್ಯಾಕಮ್ಮ, ಸುಬ್ಬಮ್ಮ ಎಂಬ ಮಡಿ ಹೆಂಗಸರು ನನ್ನ ಸುತ್ತಲೂ ಇದ್ದರು. ಅವರು ಗೂಡಿಸಿಕೊಂಡು ಮನೆಯಲ್ಲಿ ಕೂರುತ್ತಿದ್ದ ಅವರ ಸುತ್ತು ಇರುತ್ತಿದ್ದ ಒಂದು ಗೋಣಿತಾಟು, ಹರಿದ ಸೀರೆಗಳ ಒಂದು ಗಂಟು, ತಲೆದಿಂಬು, ಒಂದು ತಂಬಿಗಿ, ಲೋಟಗಳ, ದೃಶ್ಯ ಕಣ್ಣಿಗೆ ಕಟ್ಟಿದೆ. ಇವರಲ್ಲಿ ಅನೇಕರಿಗೆ ಲಗ್ನ ಆದದ್ದು,

ಗಂಡನ ಮುಖ ನೋಡಿದ್ದು ಕೂಡಾ ನೆನಪಿದ್ದಿಲ್ಲ. ‘ಅಷ್ಟವರ್ಷೆಭವೇತ್ ಕನ್ಯಾ’, ಎಂಟನೆಯ ವರ್ಷಕ್ಕೆ ಲಗ್ನ ಒಂಬತ್ತೊ, ಹತ್ತನೆಯ ವಯಸ್ಸಿಗೇ ಬೆಳಿಗ್ಗೆ ಏಳುತ್ತಿದ್ದಂತೆಯೆ ಮನೆ ಮಂದಿ ಅಳೋದು ಕೇಳಿ ಆ ಹುಡುಗಿ ‘ಯಾಕ್ ಅಳ್ತಿದಿರಿ ಎಲ್ಲಾರು’ ಎಂದು ಆಕೆ ಕೇಳಿದರೆ ‘ನಿನ್ನ ಗಂಡ ಸತ್ನಂತೆ ಅಂಬಕ್ಕ’ ಎಂದರೆ, ಗಂಡ ಅಂದರೆ? ಸತ್ತ ಅಂದರೆ, ಹೋಗ್ರೆವ್ವಾ ನನಗೇನೂ ತಿಳಿವಲ್ದು ಎಂದು ಗಾಬರಿಯಾಗಿ ಆ ಹುಡುಗಿ ಮನೆ ನಾಯಿ ಮರಿಯನ್ನೊ, ಬೆಕ್ಕಿನ ಮರಿಯನ್ನೊ, ಆಕಳ ಕರುವನ್ನೊ ಮುದ್ದಿಸುತ್ತಾ ಹೊರಗೆ ಓಡಿಹೋಗಿ ಬಿಡುತ್ತಿದ್ದಳು. ಮುಂದೆ ಹತ್ತನೆಯ ದಿನಕ್ಕೆ ಆ ಹುಡುಗಿಯನ್ನು ಮಡಿ ಮಾಡುವ ಕ್ರಿಯೆ, ಜಡೆ ಕತ್ತರಿಸಲು ಒಲ್ಲೆಯೆಂದು ಅಳುವ, ‘ಯಾಕ್ ಹೆಳ್ಳು ಕತ್ತರಿಸ್ತಿರಿ’, ನಾ ಹೂವಾ ಎಲ್ಲಿಟ್ಕೊಳ್ಳಿ ಎಂದು ಅಳುವ ಹುಡುಗಿಗೆ ತಾಯಿ ಹಾಗೂ ಓಣಿ ಹೆಂಗಸರು ‘ತಲ್ಯಾಗ ಹೇನು ಆಗ್ಯಾವೆ ಅಂಬಕ್ಕ ಹೇನು ಆದ ತಲ್ಯಾಗೆ ಹೂ ಇಟಗೊಂಡ್ರೆ ಹುಳ ಬೀಳ್ತಾವೆ ತಲ್ಯಾಗೆ’ ಎಂದು ತಾವೂ ಅಳುತ್ತಾ, ಆ ಹುಡುಗೀನ ಸಮಾಧಾನಿಸುತ್ತಿದ್ದರು.

ಆಯಿತು, ಮುಂದೆ ಅಯಸ್ಸು ಇರುವಷ್ಟು ದಿನ ಇವರು ಕೆಂಪು ಸೀರೆ, ಬೋಳುತಲೆ, ಕೃಶದೇಹ, ಒಪ್ಪತ್ತು ಊಟ, ನೀರು ಹೊರುವದು, ಅಡಿಗೆ ಮಾಡುವದು, ದೇವರ ಸಾಮಾನುಗಳನ್ನು ತಿಕ್ಕುವದು, ಆ ಮನೆಯಲ್ಲಿ ಹುಟ್ಟುವ ಮಕ್ಕಳಿಗೆ ಎರೆಯುವುದು, ಆಡಿಸುವದರಲ್ಲೇ, ಅಖಂಡ ಬ್ರಹ್ಮಚರ್ಯದಲ್ಲೇ ಆಯುಸ್ಸು ಸವೆದು ಹೋಗುತ್ತಿತ್ತು, ಹಾಳಾಗಲಿ, ಇವರಿಗೆ ಆಯಸ್ಸೂ ಬಹಳವೇ ಪಾಪ! ಎಂಬತ್ತೈದು, ತೊಂಬತ್ತೈದು, ಒಮ್ಮೊಮ್ಮೆ ಶತಾಯಷಿಗಳಾಗಿಯೂ ಕಡೆಗೂ ಸಾಯುತ್ತಿದ್ದರು, ಪುರುಷ ದರ್ಶನ, ಪುರುಷ ಸಂಪರ್ಕವಿಲ್ಲದೇ ಪರೋಪಕಾರಕ್ಕೆ ಹುಟ್ಟಿದ ಹೆಣ್ಣು ಮಕ್ಕಳಾದ ಇವರೇ ನಿಜವಾದ ಪ್ರಾತಃಸ್ಮರಣೀಯ ಪಂಚಕನ್ಯೆಯರು ಎಂದು ನನಗೆ ಅನೇಕ ಬಾರಿ ಅನಿಸಿದ್ದುಂಟು.

'ಬಾಲ್ಡ್ ಕ್ವೀನ್' ಆಗಿ ಬಾಡಿ ಶೇಮಿಂಗ್ ಗೆ ಸಡ್ಡು ಹೊಡೆದ ಅಕ್ಷಯಾ

ಬೆಂಗಳೂರಿನ ಎಂ.ಜಿ.ರೋಡ್, ಬ್ರಿಗೇಡ್ ರೋಡ್ ಮುಂತಾದ ಕಡೆಯಲ್ಲಿ ಚಳಿಗಾಲದಲ್ಲೂ ರಾತ್ರಿ ಎರಡರವರೆಗೆ ಐಸ್‌ಕ್ರೀಂ ಮೆಲ್ಲುತ್ತ ತುಂಡು ಮಿಡಿ ಉಡುಪಿನಲ್ಲಿ ಬಾಯ್‌ಪ್ರೆಂಡ್‌ಗಳ ಭುಜಕ್ಕೆ ಒರಗಿ ನಡೆಯುವ, ಆತನ ಸೊಂಟಬಳಸಿ ಗಾಡಿ ಮೇಲೆ ಹೋಗುವ ಕೇವಲ 18- 20 ರ ತರುಣಿಯರನ್ನು ಕಂಡಾಗ ನಮ್ಮ ಅಂಬಕ್ಕ, ತುಂಗಕ್ಕ, ಗೋದಕ್ಕ ಮಾಡಿದ್ದ ಪಾಪವಾದರೂ ಏನು? ಈ ಬೆಂಗಳೂರು ಹುಡುಗಿಯರು ಮಾಡಿದ್ದ ಪುಣ್ಯವಾದರೂ ಏನು? ಎಂದು ಚಿಂತೆಗೆ ಒಳಗಾಗುತ್ತೇನೆ. ಗಂಡನ ಮುಖವನ್ನೆ ನೋಡದೆ ಬಾಳನ್ನು ಆತನ ಹೆಸರಲ್ಲಿ ಕಳೆದ ಇವರ ಕರ್ಮದ ಹಿಂದಿನ ಗುಟ್ಟೇನು?

ಅವರ ಗಂಡಂದಿರ ಹಣೆ ಬರಹವೂ ಅಷ್ಟೆ, ತಮ್ಮ ಹೆಸರಿನ ಮೇಲೆಯೇ ಒಂದು ಜೀವ ಬದುಕಿದ್ದರೂ ಅದನ್ನು ಬಳಸಲಾರದೇ ಹೋದ ಆ ಗಂಡುಗಳದು ಯಾವ ಪುರುಷಾರ್ಥವೋ, ಯಾವ ಪಾಪವೋ, ತಿಳಿಯೆ. ‘ಮೈಗೊಬ್ಬ, ಮನಸ್ಸಿಗೊಬ್ಬ, ಮ್ಯಾರೇಜಿಗೊಬ್ಬ’ ಎಂಬಂತೆ ಇರುವ ಈಗಿನ ಹೆಣ್ಣಗಳದು ಅದಾವ ಪುಣ್ಯವೋ ಯೋಚಿಸಿ ಯೋಚಿಸಿ ಹಣ್ಣಾಗುತ್ತೇನೆ, ಒಂದು ಚುಟುಕದಲ್ಲಿ ಹೇಳಬೇಕೆಂದರೆ,ಗಂಡನನ್ನೆ ನೋಡದವರು ಮಡಿ ಹೆಂಗಸರು ‘ಮೂರು ಮೂರು ಗಂಡಂದಿರು ಇರುವವರು ಮಿಡಿ ಹೆಂಗಸರು.’

ನಮ್ಮ ತಾಯಿಯ ದೊಡ್ಡಮ್ಮ ಅಂಬಕ್ಕ, ತಾತನ ತಂಗಿ ಸಾವಿತ್ರವ್ವ, ಈ ಇಬ್ಬರೂ ನನ್ನನ್ನು ಎತ್ತಿ, ಎರೆದು, ಮಲಗಿಸಿ ಬೆಳೆಸಿದವರು ಹುಟ್ಟಾ ಮಡಿ ಹೆಂಗಸರು, ಕನ್ನಡಿಯನ್ನೆ ನೋಡಿಕೊಳ್ಳದವರು. ಅಂಬಕ್ಕ ಬರುಬರುತ್ತಾ ಸಿಟ್ಟಿನ ಪ್ರತಿರೂಪವಾದವಳು. ತನ್ನ ತಂಗಿ ಸತ್ತ ಮೇಲೆ ಆಕೆಯ ಐದು ಮಕ್ಕಳನ್ನು ನೋಡಿಕೊಳ್ಳಲೆಂದೇ ಹುಟ್ಟಿದವಳು, ಹಾಗೆಯೇ ಬದುಕಿದವಳು. ನಿದ್ದೆ ಬರದ ನಮ್ಮನ್ನು ತೊಡೆಯ ಮೇಲೆ ಮಲಗಿಸಿಕೊಂಡು ತಲೆಯನ್ನೊ, ಬೆನ್ನನ್ನೊ ತಟ್ಟುತ್ತಾ ಮಲಗಿಸುತ್ತಿದ್ದಳು. ಇದಕ್ಕೆ ನಮ್ಮ ಕಡೆ ಚುಕ್ಕು ತಟ್ಟುವುದು , ಚೌವ್ವಿ ಬಡಿಯುವುದು ಎನ್ನುತ್ತಾರೆ.

ಹಾಗೆ ತಟ್ಟುವಾಗ ತನ್ನ ತಂಗಿಯ ಗಂಡ, ನನ್ನ ತಾತ ಶ್ಯಾಮರಾಯನ ಜೊತೆ ಜಗಳಕ್ಕಿಳಿಯುತ್ತಿದ್ದಳು, ಮಾತಿನ ರಭಸ ಹೆಚ್ಚಿದಂತೆ ನಮಗೆ ನಿದ್ದೆ ಬರಲು ತಟ್ಟುತ್ತಿದ್ದ ಚುಕ್ಕು’ ಚವ್ವಿಗಳು ಹೊಡೆತಗಳಾಗಿ ಬಿಡುತ್ತಿದ್ದವು, ನಿದ್ದೆ ಹಾರಿ ಹೋಗಿ, ಉರಿಯುತ್ತಿದ್ದ ಬೆನ್ನು, ತಲೆಗಳಿಗೆ ಎದ್ದು ಕೂರುತ್ತಿದ್ದೆ. ‘ನೀ ಯಾಕೆ ಎದ್ಯೊ ಸನ್ಯಾಸಿ ಎಂದು ರಪ್ಪನೆ ಎಳೆದುಕೊಂಡು, ರಪ್, ರಪ್ ಎಂದು ಮತ್ತೆ ತಟ್ಟುತ್ತಿದ್ದಳು, ಎದ್ದು ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದೆ, ಜಗಳ ಕಾಯುತ್ತಿದ್ದ ತಾತನಿಗೆ ಬೀಳಬೇಕಾದ ಏಟುಗಳವು, ನನಗೆ ಬೀಳುತ್ತಿದ್ದವು.

ಸದಾ ಹಸಿ ಕಟ್ಟಿಗೆಯ ಒಲೆಗಳನ್ನು ಊದುತ್ತಾ ನೀರು ಕಾಸುತ್ತಲೋ, ಅನ್ನ ಬೇಯಿಸುತ್ತಲೋ ಇರುತ್ತಿದ್ದ ಅಂಬಕ್ಕನ ಸೀರೆಮೈಯಿಂದ ಹೊಗೆಯ ವಾಸನೆ ಬರುತ್ತಿತ್ತು. ಮಡಿ ಹೆಂಗಸು ಅಲ್ಲವೆ! ಮೈಗೆ, ಬಟ್ಟೆಗೆ ಸೋಪು ಬಳಸುವಂತಿಲ್ಲ! ನೀರಲ್ಲಿ ಹಿಂಡಿ, ನೆರಳಿಗೇ ಒಣಗಬೇಕು, ದೇವರ ಕೋಣೆಯಲ್ಲಿ ಹಾಕಿದ ಗಳುವಿಗೇ ಒಣಗಬೇಕು, ಇಡೀ ಮನೆಯೇ ಹೊಗೆಮಯವಾಗಿರುತ್ತಿತ್ತು. ಹೀಗಾಗಿ ಅಂಬಕ್ಕೆ ಸ್ಮೋಕ್ ಉಮೆನ್. ದಿನ ಹೀಗೇ ‘ಚವ್ವಿ’ ತಟ್ಟಿಸಿಕೊಳ್ಳುತ್ತಾ ಆಕೆಯ ಬಳಿ ಮಲಗಿದಾಗ ಒಂದು ದಿನ ನಾನು ‘ಅಂಬಕ್ಕ ನಿನ್ನ ಮೈ, ಸೀರಿ, ಹೊಗಿ ವಾಸನಿ ಆಗ್ಯಾವ’ ಎಂದು ಬಿಟ್ಟೆ,

ರಪ್ ಎಂದು ಗುದ್ದಿದ ಅಂಬಕ್ಕ ‘ಹೋಗು, ಎದ್ದು ಹೋಗು, ದೊಡ್ಡಾತ ಆದಿ, ಇನ್ನು ನನ್ನ ಬಗಲಾಗ ಮಲಗಬೇಡ ಎಂದು ತಳ್ಳಿದ್ದಳು, ದೇಹದ ಅಂಗಗಳು ಬಣ್ಣ, ವಾಸನೆ, ಗುರುತಿಸಲಾರಂಭಿಸಿದರೆ ದೊಡ್ಡವರಾದೆವು ಎಂಬ ಆ ಹಿರಿಯರ ಸೂಕ್ಷ್ಮ ಜ್ಞಾನಗಳು ಎಂಥಹ ಓದಿದವನಿಗೂ ತಿಳಿಯದ ‘ವಾಸನಾ ಸೂಕ್ಷ್ಮಗಳು’ ಎನಿಸುತ್ತಿದೆ ಇಂದು. ತಂಗಿಯ ಗಂಡ, ಆತನ ಐದು ಮಕ್ಕಳ ಪೋಷಣೆಯಲ್ಲಿಯೇ ಅಂಬಕ್ಕ ಸವೆದು ಸವೆದು ಹೋದಳು. ಮನೆಯಿಂದ ಇಪ್ಪತ್ತು ಹೆಜ್ಜೆಯಲ್ಲಿ ಇದ್ದ ರಾಯರ ಮಠಕ್ಕೆ ಹೋಗಿದ್ದು ಬಿಟ್ಟರೆ ಇಡೀ ಆಯುಷ್ಯ ಅಂಬಕ್ಕ ಹೊರ ಪ್ರಪಂಚವನ್ನೇ ನೋಡಲಿಲ್ಲ, ಯಾವ ಸುಖವನ್ನೂ ಕಾಣದ ಅಂಬಕ್ಕ ಬರೀ ಹಲ್ಲು ಕಡಿಯುವುದು, ಸಿಟ್ಟಿಗೇಳುವುದು, ತಂಗಿಯ ಗಂಡನೊಂದಿಗೆ ನಿತ್ಯ ಮೂರು ಹೊತ್ತು ಜಗಳಕ್ಕಿಳಿಯುವದರಲ್ಲೇ ಕಳೆದು ಹೋದಳು.

ಆಕೆಯ ದೊಡ್ಡ ಬೈಯ್ಗೆಳೆಂದರೆ ‘ಸನ್ಯಾಸಿ’ ಎಂಬ ಶಬ್ಧ, ಆಕೆಯು ಒಮ್ಮೆ ಎದುರಿಗೆ ಇರುವವರೂ ಕಾಣದಷ್ಟು ಹೊಗೆಯಲ್ಲಿ ಅಡಿಗೆ ಮಾಡುತ್ತಿರುವಾಗ ಅಂಗಳದಲ್ಲಿ ಒಬ್ಬ ಭಿಕ್ಷುಕ ಬಂದು ‘ಅಮ್ಮಾತಾಯಿ’ ಎಂದು ಕೂಗಿದ, ‘ಯಾರದು’ ಎಂದ ಅಂಬಕ್ಕನಿಗೆ ಆತ ‘ನಾನಮ್ಮ ಸನ್ಯಾಸಿ’ ಎಂದ ಪಾಪ. ಅಂಬಕ್ಕ, ‘ನಮ್ಮನಿ ತುಂಬಾ ಸನ್ಯಾಸಿ ಸೂಳೆಮಕ್ಳ’ ಇದ್ದಾರ, ನೀನೊಂದು ಹೆಚ್ಚಾದೇನು, ನನ್ನ ಹೆಣಕ್ಕ ಎಂದು ಗದರಿದ್ದಕ್ಕೆ ಆತ ತಿರುಗಿ ನಮ್ಮ ಓಣಿಗೆ ಬಂದರೂ ನಮ್ಮ ಮನೆ ಮುಂದೆ ನಿಲ್ಲುತ್ತಿರಲಿಲ್ಲ. ಇಷ್ಟೆಲ್ಲ ಮಾಡುತ್ತಾ ದುಡಿಯುತ್ತಿದ್ದ ಅಂಬಕ್ಕನಿಗೆ ನಮ್ಮ ತಾತ ಭಯಂಕರ ರೇಗಿಸುತ್ತಿದ್ದ, ಆಕೆ ಅಂದದ್ದಕ್ಕೆ, ಇಲ್ಲದ್ದು ಊಹಿಸಿ ಕಾಲು ಕೆರೆದು ಜಗಳದ ‘ಕಂಟಿನ್ಯೂಟಿ’ ಕಾಪಾಡುತ್ತಿದ್ದ.

ಅಂಬಕ್ಕ ಪಾಪ, ಎರಡು ಮೂರು ತಿಂಗಳಿಗೊಮ್ಮೆ ಕ್ಷೌರ ಮಾಡಿಸಿಕೊಂಡು ‘ಮಡಿ’ಯಾಗಲು ಕ್ಷೌರಿಕನನ್ನು ಕರೆತರಲು ಹೇಳುತ್ತಿದ್ದರೆ, ಸದಾ ಮರೆಯುತ್ತಿದ್ದ. ನಾಲ್ಕೈದು ತಿಂಗಳಾದರೆ ತಲೆತುಂಬಾ ಕ್ರಾಪು ಬಂದು ಆಕೆಗೆ ಮುಜುಗರವಾಗುತ್ತಿತ್ತು, ಬಿರುಬೇಸಿಗೆಯ ದಿನಗಳಲ್ಲಂತೂ ಆಕೆ ತಲೆ ಕೂದಲಿನಿಂದಾಗಿ ರೊಚ್ಚಿಗೇಳುತ್ತಿದ್ದಳು ಬೆಳಿಗ್ಗೆ ಎಂಟು, ಒಂಭತ್ತರತನಕ ಕಾದು, ಇಂದೂ ಹೇಳಲಿಲ್ಲೆನೋ ತಲಿಬೋಳಿಸಾತನಿಗೆ ಸನ್ಯಾಸಿ ಎಂದು ತಂಗಿಯ ಗಂಡನಿಗೆ ಬೈದು ಸ್ನಾನಮಾಡುತ್ತಿದ್ದಳು ಎಲ್ಲರೂ ಏಳುವ ಮುಂಚೆ ಈ ಕೆಲಸವಾಗಬೇಕು ತಾನೆ? ಕ್ಷೌರಿಕನಿಗೆ ಹೇಳಲು ಮರೆಯುತ್ತಿದ್ದ ನಮ್ಮ ತಾತ, ಅವ ಊರಾಗಿಲ್ಲ, ಯಾರಿಗೊ ಮಾಡಲಿಕ್ಕೆ ಹಾಳ್ಯಾಗಿ ಹೋಗ್ಯಾನಂತ, ಯಾವದೋ ಹುಡುಗನ ಮುಂಜಿವಿ ಕೂದಲಾ ತೆಗಿಲಿಕ್ಕ ಹೋಗ್ಯಾನಂತ ಎಂದೆಲ್ಲ ದಿನಾ ಒಂದು ಸುಳ್ಳು ಹೇಳುತ್ತಿದ್ದ.

ಅಂಬಕ್ಕ ರೊಚ್ಚಿಗೇಳುತ್ತಿದ್ದಳು, ‘ನಿನ್ನ, ನಿನ್ನ ಮಕ್ಕಳ ಸೇವಾಕ್ಕ ಹುಟ್ಟಿನಲ್ಲೊ ಸನ್ಯಾಸಿ, ನಾ ಏನ್ ನಿನಗ ಸೀರಿ ಕೇಳಿದ್ನ, ಬಂಗಾರ ಕೇಳಿದ್ನೆ, ತಲಿಬೋಳಿಸಲಿಕ್ಕ ಮನಶ್ಯಾನ್ನ ಕರ‌್ಕೊಂಬಾರೋ ಬೆಳಕ ಹರಿಯದ್ರಾಗೆ ಅಂದೆ ಅಷ್ಟೆ’ ಎಂದು ಮಧ್ಯಾನ್ಹದವರೆಗೆ ಜಗಳ. ಎಂದೂ ತನಗೆ ಗಂಡ ಇಲ್ಲ ಮಕ್ಕಳಿಲ್ಲ ಎನ್ನದ ಅಂಬಕ್ಕ, ತಂಗಿಯ ಗಂಡ, ಮಕ್ಕಳ ಸೇವೆಗೆ ಮುಡಿಪಾಗಿದ್ದ ಅಂಬಕ್ಕ, ಅಂದು ಒದರಡಾತ್ತ ಜಗಳ ಕಾಯುವಾಗ ನನಗ ಗೊತ್ತದನೋ ಸನ್ಯಾಸಿ, ಕ್ಷೌರದಾತನಿಗೆ ಎಂಟಾಣಿ ಕೊಡಬೇಕಲ್ಲಾ ಅಂತ ನಿನಗೆ ಚಿಂತಿ ಯಾಗ್ಯೇದ, ನನಗೂ ಗಂಡ ಅನ್ನಾತ ಇದ್ರ ಈ ಪರಿಸ್ಥಿತಿ ಬರ್ತಿತ್ತೆನು, ತಿಂಗಳು ತಿಂಗಳು ಸರಕ್ಕನೆ ಹೋಗಿ ಕ್ಷೌರದಾತನ್ನ ಕರೆತರುತ್ತಿದ್ದ ಎಂಟಾಣಿ ಅಲ್ಲ, ಒಂದು ರೂಪಾಯಿ ಆತನ ಮಾರಿಗೆ ಒಗೀತಿದ್ದ, ತಿಂಗಳಾ ಇಂಥ ದಿನ ನೀ ಬರಬೇಕು ಅಂತ ತಾಕೀತು ಮಾಡ್ತಿದ್ದ ಎಂದು ಬಿಟ್ಟಳು. ಮನೆಯವರೆಲ್ಲ, ನಮ್ಮ ತಾತನನ್ನೂ ಸೇರಿ ನಕ್ಕು ಬಿಟ್ಟಿದ್ವಿ ಗಂಡ ಎಂದರೆ ತಿಂಗಳಿಗೊಮ್ಮೆ ಹೆಂಡತಿಯ ತಲೆ ಕ್ಷೌರಮಾಡಲು, ಕ್ಷೌರಿಕರನ್ನು ಕರೆತರುವಾತ ಎಂಬಷ್ಟರ ಮಟ್ಟಿಗೆ ಗಂಡ ಎಂಬ ಪದದ ವ್ಯಾಖ್ಯೆ ಅಂಬಕ್ಕನ ತಲೆಯಲ್ಲಿ ಕೂತಿದ್ದು ನೆನೆದರೆ ಇಂದಿಗೂ ಕನಿಕರವೆನಿಸುತ್ತದೆ. ಗಂಡ ಇದ್ದರೆ ತಾನು ತಲೆಯನ್ನೇ ಕ್ಷೌರಿಕನಿಗೆ ಒಪ್ಪಿಸಬೇಕಿರಲಿಲ್ಲ ಎಂಬ ಪದ ಕೂಡಾ ಅಂಬಕ್ಕನಿಗೆ ತಲೆಗೆ ಹೋಗಿರಲಿಲ್ಲ. 

- ಗಂಗಾವತಿ ಪ್ರಾಣೇಶ್ 

(ಇಲ್ಲಿರುವ ಚಿತ್ರವನ್ನು ಸಾಂದರ್ಭಿಕವಾಗಿ ಬಳಸಿಕೊಳ್ಳಲಾಗಿದೆ)