ಗೆಳೆತನ ಎಂದರೆ ಅದು ನೂರಾರು ಬಣ್ಣಗಳನ್ನು ಸೇರಿಸಿ ಮಾಡಿದ ಚಿತ್ರದಂತೆ. ಎಲ್ಲಾ ಬಣ್ಣಗಳೂ ಸರಿಯಾಗಿ ಸೇರಿದರೆ ಮಾತ್ರ ಸುಂದರ ಚಿತ್ರವಾಗಲು ಸಾಧ್ಯ. ಅದೇ ರೀತಿ ನನ್ನ ನಿನ್ನ ಗೆಳೆತನವೂ. ಕಾಲೇಜಿನ ಆ ಎರಡು ವರ್ಷದಲ್ಲಿ ನಾವು ಮಾಡಿದ ಕಿತಾಪತಿಗಳೆಲ್ಲಾ ನಮ್ಮ ಒಂದೊಂದು ನೆನಪುಗಳು. ನೆನಪುಗಳೇ ಹಾಗೆ ಮತ್ತೆ ಮತ್ತೆ ಮರುಕಳಿಸಿ ಕಾಡುತ್ತವೆ.

ಎಂದೊ ಆದ ಪರಿಚಯದಿಂದ ಸ್ನೇಹ. ಸ್ನೇಹಕ್ಕೆ ಮನಸೋಲದವರಿಲ್ಲ. ಬಾಹ್ಯಾಕೃತಿ ಹೇಗಿದ್ದರೂ ಸರಿ ನಮಗದರ ಕ್ಯಾರೇ ಇಲ್ಲ. ನಮ್ಮನ್ನೊಪ್ಪುವ ಮನಸಿದ್ದರೆ ಸಾಕು ಅನ್ನುವವರು ನಾವು.. ಒಟ್ಟಿಗೇ ಎಲ್ಲಾ ಕೆಲಸಗಳನ್ನು ಮಾಡುತ್ತಾ ಹರಟೆ ಹೊಡೆಯುತ್ತಾ ಕೊಂಚ ಜಗಳವಾಡುತ್ತಾ ತುಸು ಹೊತ್ತು ಮುನಿಸಿನಿಂದ ಇದ್ದರೂ ಮತ್ತೆ ಒಂದಾಗುವ ಗೆಳೆತನವೇ ಬೆಸ್ಟ್. ಅಂತಹ ಗೆಳತಿಯನ್ನು ಮರೆತರೂ ಮರೆಯಲಾಗಲಿಲ್ಲ. ಹಾಗೆ ಯಾವುದೋ ಕಾರಣಗಳಿಗಾಗಿ ಬೀದಿ ಬದಿಯ ಅಂಗಡಿಯಲ್ಲಿ ಸಣ್ಣ ಕಾರಣಕ್ಕೆ ಜಗಳವಾಡುವಾಗ ನಿನ್ನ ನೆನಪು ಮತ್ತೆ ಕಾಡಿತು.

ಅದೇ ಅಂಗಡಿಯಲ್ಲೇ ನಾವಿಬ್ಬರು ಒಂದು ವಸ್ತುಗಾಗಿ ಚೌಕಾಶಿ ಮಾಡಿ ಕೊಡುವುದಾದರೆ ಈ ರೇಟ್‌ಗೆ ಕೊಡಿ ಇಲ್ದಿದ್ರೆ ಬೇಡ ಎಂದು ಹೊರಟವರನ್ನು ಮತ್ತೆ ಆ ಅಂಗಡಿಯಾತ ಕರೆದು ನಾವು ಹೇಳಿದ ರೇಟಿಗೆ ಕೊಟ್ಟಿದ್ದಕ್ಕೆ ಮಹಾಕಾರ್ಯ ಮಾಡಿದ ಸಂತಸದಲ್ಲಿ ಮನೆಗೆ ಬಂದಿದ್ದು, ಮಳೆಗಾಲದ ಸಂದರ್ಭದಲ್ಲಿ ಕೈಗಾಡಿಯಲ್ಲಿ ಜೋಳ ತಿನ್ನಬೇಕೆಂಬ ಆಸೆಗೆ ಚಿರಿಪಿರಿ ಮಳೆಯಲ್ಲಿ ರಸ್ತೆ ಬದಿಯಲ್ಲಿ ತಿಂದು ಖಾರ ಎಂದು ಬಾಯಿ ಉರಿಸಿಕೊಂಡು ಬಂದಿದ್ದು, ಗೋಲ್ ಗಪ್ಪಾ ಅಂಗಡಿಯಲ್ಲಿ ಕೇಳಿ ಕೇಳಿ ಗೋಲ್‌ಗಪ್ಪಾ ತಿಂದು ಹೊಟ್ಟೆ ಉರಿ ಎಂದು ಅತ್ತು ಅದನ್ನು ಮರೆಯಲು ಮತ್ತೆ ಐಸ್ ತಿಂದು ಶೀತ ಬರಿಸಿಕೊಂಡಿದ್ದು, ಎಲ್ಲಕ್ಕಿಂತ ಹೆಚ್ಚು ಹೋಳಿ ಆಡಿ ಮೈಯೆಲ್ಲಾ ಬಣ್ಣ ಮಾಡಿಕೊಂಡ ನಂತರ ಸೆಲ್ಫೀಗೆ ಫೋಸು ಕೊಟ್ಟಿದ್ದು ಇಂದೂ ನೆನಪಾಗುತ್ತೆ.

ಅಲ್ಲೇ ಬಳಿಯಲ್ಲೇ ನಿನ್ನ ಇರುವಿಕೆಯನ್ನು ಸಾರಿತ್ತು ಕನ್ನಡಿಯಲ್ಲಿದ್ದ ನಿನ್ನ ಪ್ರತಿಬಿಂಬ. ಪಕ್ಕವಿದ್ದರೂ ಮಾತಾಡಿಸದಷ್ಟು ಹೇಳಿ ತೋರಿಸಲಾಗದ ತಪ್ಪು ಮಾಡಿದೆನೆ. ಸ್ನೇತರ ದಿನದಂದು ಮಾಡಿದ ಪ್ರಮಾಣಗಳಿಗೆಲ್ಲಾ ಅರ್ಥವಿಲ್ಲವೇ ಕೇವಲ ಬಾಯಿ ಮಾತಿಗೋಸ್ಕರ, ಆಚರಣೆ ಅಗತ್ಯಕ್ಕಾಗಿಯೇ ಗೆಳೆತನ. ಕಾರಣವಿಲ್ಲದೇ ಸ್ನೇಹ ಮರೆಯಲು ಸ್ನೇಹ ಮಾಡಬೇಕಾಗಿತ್ತೇ? ನಿನ್ನೊಡನೆ ಕಳೆದ ಪ್ರತಿ ಘಳಿಗೆಯೂ, ಹೊತ್ತಲ್ಲದ ಹೊತ್ತಿನ ಕರೆಗಳು... ಪರೀಕ್ಷೆಯ ದಿನಗಳೆಂಬುದನ್ನೂ ಮರೆತು ಅನಿರೀಕ್ಷಿತ ಮೀಟಿಂಗ್‌ಗಳು ಮಾಡಿದ ಮೋಜು ಮಸ್ತಿ ಕಿತಾಪತಿಗಳೆಲ್ಲಾ ಸುತ್ತಾಡಿದ ಸ್ಥಳಗಳೆಲ್ಲಾ ಇಷ್ಟೆನಾ ನಿಮ್ಮ ಸ್ನೇಹಾ? ಎಂದು ಕುಹಕವಾಡಿ ಪ್ರಶ್ನಿಸುತ್ತಿರುವಂತಿದೆ.

ಒಟ್ಟಿಗೇ ಇದ್ದ ಪ್ರತಿ ನಿಮಿಷಗಳೂ ಈಗಿನ ನಿಮಿಷಗಳೊಂದಿಗೆ ಸೇರಿ ಮನಸಿನ ನೆಮ್ಮದಿ ಕಸಿಯುತ್ತಿದೆ. ಸರಿ, ಹೋದೆಯಾದರೆ ಹೋಗು ಆದರೆ ಕಾರಣವ ಹೇಳಿ ಹೋಗು. ಆದರೆ ಒಂದು ಮಾತು, ಹಿಂತಿರುಗಿ ಬರುವೆಯಾದರೆ ಮೊದಲಿನ ಪತ್ರ ಸ್ನೇಹದ ಆಶ್ವಾಸನೆ ಮಾತ್ರ ಕೊಡಲಾರೆ ಏಕೆಂದರೆ ಒಮ್ಮೆ ಚೂರಾದ ಕನ್ನಡಿಯನ್ನು ಮತ್ತೆ ಮೊದಲಿನಂತೆಯೇ ನಾಜೂಕಾಗಿ ಜೋಡಿಸುವುದು ಸಾಧ್ಯವಿಲ್ಲ.

- ಇಂತಿ ಪನ್ನಾ, 

ಅಪರ್ಣಾ ಎ ಎಸ್