Asianet Suvarna News Asianet Suvarna News

ಕಾಲೇಜು ದಿನಗಳ ಖುಷಿಗೆ ಗೆಳೆಯರೇ ಸಾಕ್ಷಿ

ಕಾಲೇಜಿನ ಮೊದಲ ದಿನ ನನಗೆ ಯಾರ ಪರಿಚಯವೂ ಇರಲಿಲ್ಲ. ಕ್ಲಾಸಿನಲ್ಲಿ ನನ್ನ ಪಾಡಿಗೆ  ನಾನಿರುತ್ತಿದ್ದೆ. ಅಕ್ಕಪಕ್ಕದವರನ್ನೂ ಮಾತನಾಡಿಸದೆ ಸುಮ್ಮನೇ ಪಾಠ ಕೇಳಿ ಬರುತ್ತಿದ್ದೆ. ಅದೊಂದು ದಿನ ಮತ್ತೊಬ್ಬ ಹೊಸ ಹುಡುಗ ನನ್ನ ಪಕ್ಕ ಬಂದು ಕುಳಿತ. ಆತನೇ ನನ್ನನ್ನು ಮೊದಲು ಮಾತನಾಡಿಸಿದ. ನಂತರ ಒಬ್ಬರಿಗೊಬ್ಬರು ಪರಿಚಯವಾದೆವು. ಆತ ನಮ್ಮ ಪಕ್ಕದ ಊರಿನವನೇ ಆಗಿದ್ದ. ನಾವಿಬ್ಬರೂ ಪರಿಚಯವಾಗಿರಲಿಲ್ಲ ಅಂದಿದ್ರೆ ಅಕ್ಕಪಕ್ಕದ ಊರಿನವರಾಗಿಯೂ ನಾವು ದೂರ ದೂರ ಇರಬೇಕಾಗಿತ್ತು. ಸಾಮಾನ್ಯವಾಗಿ ನಾವು ದೂರದ ಊರಿಗೆ ಹೋಗಿ ವಿದ್ಯಾಭ್ಯಾಸ ಮಾಡುವ ಸಮಯದಲ್ಲಿ ಯಾರಾದರೂ ನಮ್ಮ ಊರಿನ ಅಥವಾ ನಮ್ಮ ಪಕ್ಕದೂರಿನವರು ಪರಿಚಯವಾದರೆ ಅದರ ಮಜಾನೇ ಬೇರೆ. ಗೊತ್ತಿರದ ಊರಿನಲ್ಲಿ, ಯಾರೊಬ್ಬರೂ ಗೊತ್ತಿರದ ಕಾಲೇಜಿನಲ್ಲಿ, ಒಬ್ಬಂಟಿಯಾಗಿಬಿದ್ದೇನೆ ಅನ್ನುವ ಕೊರಗನ್ನು ನನ್ನ ಪಕ್ಕದ ಊರಿನವನು ದೂರ ಮಾಡಿದ್ದ. ನಂತರ ಗೂಡು ತೊರೆದ ಹಕ್ಕಿಯಂತೆ ಮನಸ್ಸು ಹಗುರವಾಗಿತ್ತು.

 

College days create best memories
Author
Bengaluru, First Published Jul 13, 2018, 2:17 PM IST

ದಿನದಿಂದ ದಿನಕ್ಕೆ ನಮ್ಮ ನಡುವೆ ಸ್ನೇಹ ಬೆಳೆಯುತ್ತಾ ಹೋಯಿತು. ಆ ಸಂದರ್ಭದಲ್ಲಿ ದಾವಣಗೆರೆಯ ಇನ್ನೊಬ್ಬನ ಪರಿಚಯವಾಯಿತು. ಆತ ನಮ್ಮಿಬ್ಬರಿಗಿಂತ ಕೊಂಚ ಬೋಲ್ಡ್. ಅವನ ಪರಿಚಯವಾಗಿದ್ದು ನಮಗೆ ಒಳ್ಳೆಯದೇ ಆಯಿತು. ಯಾಕೆಂದ್ರೆ ‘ಕ್ಲಾಸಿನಲ್ಲಿ ಪಾಠ ಅರ್ಥ ಆಗ್ಲಿಲ್ಲ ಅಂದ್ರೆ ಒಂದಲ್ಲ ಎರಡು ಸಲ ಎದ್ದು ನಿಂತು ಧೈರ್ಯವಾಗಿ ಅರ್ಥ ಆಗ್ಲಿಲ್ಲ ಅಂತ ಕೇಳು...’ ಎನ್ನುವ ಸಾಕಷ್ಟು ಸಲಹೆಗಳನ್ನು ನೀಡಿದ್ದ. ಹಾಗಾಗಿ ಇಬ್ಬರಿದ್ದ ನಾವು ಆದಷ್ಟು ಕಡಿಮೆ ಸಮಯಕ್ಕೆ ಮೂವರಾದೆವು. ಅಲ್ಲಿಂದ ಸಣ್ಣ ಟೀ ಪಾರ್ಟಿ, ಪಾನಿಪುರಿಪುರಿ ಪಾರ್ಟಿಗಳು ಶುರುವಾದವು. ಮುಂದಿನ ಕ್ಲಾಸ್ ಇಲ್ಲ ಅಂದ್ರೆ ಕ್ಯಾಂಪಸ್ಸಿನಲ್ಲಿ ಕುಳಿತು ಮನಸ್ಸಿಗೆ ಬಂದ ವಿಷಯಗಳನ್ನು ಹಿಡಿದು ಹರಟುವುದು ನಮ್ಮ ತಂಡದ ಇನ್ನೊಂದು ವಿಶೇಷ ಹವ್ಯಾಸ.

ಅಲ್ಲಿಂದ ಮುಂದೆ ಕ್ಲಾಸಿನ ಉಳಿದವರ ಪರಿಚಯವೂ ಆಯಿತು. ನಮ್ಮ ಮೂರು ಜನರ ತಂಡಕ್ಕೆ ಇನ್ನೂ ನಾಲ್ಕು ಜನ ಸೇರಿಕೊಂಡರು. ತಂಡದಲ್ಲಿ ಸದಸ್ಯರ ಸಂಖ್ಯೆ ಹೆಚ್ಚಾದಷ್ಟೂ ಟೀ ಪಾರ್ಟಿಗಳ ಸಂಖ್ಯೆ ಕೂಡ ಹೆಚ್ಚಾಯಿತು. ಯಾಕೆಂದರೆ ಏಳು ಮಂದಿ ಇದ್ದಿದ್ದರಿಂದ ಒಬ್ಬರಲ್ಲ ಒಬ್ಬರ ಹತ್ತಿರ ದುಡ್ಡು ಇದ್ದೇ ಇರುತ್ತಿತ್ತು. ಹಾಗಾಗಿ ಪಾರ್ಟಿಗಳಿಗೆ ನಮ್ಮಲ್ಲಿ ಬರ ಇರಲಿಲ್ಲ. ತಂಡ ದೊಡ್ಡದಾದ್ದರಿಂದ ನಮಗಾದ ಇನ್ನೊಂದು ಉಪಯೋಗ ಏನಂದ್ರೆ ತುಂಬಾ ಸರಾಗವಾಗಿ ನೋಟ್ಸ್ಗಳು ಸಿಗುತ್ತಿದ್ದವು. ಎಕ್ಸಾಂ ಹತ್ತಿರ ಬಂತು ಅನ್ನುವಾಗಲೇ ಎಲ್ಲರೂ ಯಾರ ಹತ್ತಿರ ಯಾವ ಯಾವ ನೋಟ್ಸ್ ಇದೆ, ಯಾವ ನೋಟ್ಸ್ ಇಲ್ಲ ಅಂತ ಲೆಕ್ಕ ಹಾಕುತ್ತಿದ್ದೆವು. ಇರುವುದನ್ನೆಲ್ಲಾ ಹಂಚಿಕೊಂಡು, ಇಲ್ಲದ ನೋಟ್ಸ್ಗಳನ್ನು ನಮ್ಮ ತಂಡದ ಯಾರಾದರೂ ಒಬ್ಬರೂ ಅವರಿಗೆ ಗೊತ್ತಿರುವವರ ಬಳಿ ತೆಗೆದುಕೊಂಡು ಬರುತ್ತಿದ್ದರು. ಹಾಗಾಗಿ ಯಾವ ಎಕ್ಸಾಮಿನಲ್ಲೂ ನಮಗೆ ಆತಂಕ ಇರಲಿಲ್ಲ.

ಅಲ್ಲದೆ ಗ್ರೂಪ್ ಸ್ಟಡಿಗೂ ಅನುಕೂಲವಾಯಿತು. ಇಂಟರ್ನಲ್ ಸಮಯದಲ್ಲಿ ಯಾರಿಗಾದರೂ ಯಾವುದಾದರೂ ಪ್ರಶ್ನೆಗೆ ಡೌಟ್ ಇದೆ ಎಂತಾದರೆ ಆ ಪ್ರಶ್ನೆಯನ್ನು ಗ್ರೂಪಿನಲ್ಲಿ ಹಾಕಿ ರುಬ್ಬಿ, ಉತ್ತರ ಬರುವವರೆಗೂ ಬಿಡುತ್ತಿರಲಿಲ್ಲ. ನಂತರ ಆ ಖುಷಿಯನ್ನು ಸಲೆಬ್ರೇಟ್ ಮಾಡಲು ಮತ್ತೆ ಪಾರ್ಟಿಗಳು. ಅಂಥ ಸಮಯದಲ್ಲಿ ಪಾರ್ಟಿಗಳನ್ನು ಕೊಂಚ ದುಬಾರಿಗೊಳಿಸುತ್ತಿದ್ದೆವು. ಅಂದರೆ ಟೀ ಪಾರ್ಟಿ ಬದಲು ಎಗ್ರೈಸ್ ಪಾರ್ಟಿ, ಪಾನಿಪುರಿ ಪಾರ್ಟಿ ಬದಲು ಬಿರಿಯಾನಿ ಪಾರ್ಟಿ ಹೀಗೆ ಪಾರ್ಟಿಗಳ ಆಯಾಮಗಳು ಬದಲಾದವು. ಗ್ರೂಪ್ ಸ್ಟಡಿ ಅಥವಾ ನಮ್ಮ ಚರ್ಚಾಕೂಟಕ್ಕೆ ಗೈರು ಆದವರು ಈ ಪಾರ್ಟಿಗಳಿಗೆ ಎಲ್ಲೇ ಇದ್ದರೂ ಹಾಜರಾಗುತ್ತಿದ್ದರು. ನಮ್ಮ ಪಾರ್ಟಿಯ ಗಮ್ಮತ್ತೇ ಹಾಗಿರುತ್ತಿತ್ತು.

ಹೀಗೆ ಹೊಂದಾಣಿಕೆಯಿಂದ ಇದ್ದ ನಮ್ಮ ನಡುವಿನ ಸ್ನೇಹ ನಾಲ್ಕನೇ ಸೆಮಿಸ್ಟರ್ ಎಕ್ಸಾಂ ಹತ್ತಿರಕ್ಕೆ ಬರುತ್ತಲೇ ಸ್ವಲ್ಪ ಮಂಕಾಗಿಬಿಟ್ಟಿತು. ಅದಕ್ಕೆ ಕಾರಣ ನಮ್ಮ ತಂಡದ ಗೆಳೆಯನೊಬ್ಬನೊಂದಿಗಿನ ಮನಸ್ತಾಪ. ಮೊದಲೇ ಹೇಳಿದ ಹಾಗೆ ಎಕ್ಸಾಂ ಹತ್ತಿರವಾಗುತ್ತಿದ್ದಂತೆ ನಮ್ಮಲ್ಲಿ ಸಹಜವೆನ್ನುವಂತೆ ನೋಟ್ಸ್ ಹುಡುಕುವುದೇ ಒಂದು ಕೆಲಸವಾಗಿಬಿಡುತ್ತಿತ್ತು. ಹೀಗೆ ಅವತ್ತು ಎಲ್ಲರನ್ನೂ ಕೇಳಿ ಒಟ್ಟು ಮಾಡಿಕೊಂಡರು ಒಂದು ವಿಷಯದ ನೋಟ್ಸ್ ಮಾತ್ರ ಸಿಗಲೇ ಇಲ್ಲ. ನಮ್ಮ ತಂಡದ ಎಲ್ಲರೂ ಎಲ್ಲ ರೀತಿ ಸರ್ಕಸ್ ಮಾಡಿದ್ರೂ ಆ ನೋಟ್ಸ್ ಸಿಗಲೇ ಇಲ್ಲ.

ನಮಗೆ ಬೇಸರವಾದದ್ದು ಈ ಕಾರಣಕ್ಕಲ್ಲ; ಬದಲಿಗೆ ನಮ್ಮ ತಂಡದಲ್ಲೇ ಇದ್ದ ಒಬ್ಬ ಗೆಳೆಯನ ಬಳಿ ಆ ನೋಟ್ಸ್ ಇತ್ತು. ಆತ ಇದ್ದರೂ ಇಲ್ಲದವನಂತೆ ನಟಿಸಿಬಿಟ್ಟನಲ್ಲಾ ಅನ್ನುವ ಕಾರಣಕ್ಕೆ ನಮ್ಮೆಲ್ಲರಲ್ಲೂ ಬೇಸರ ಉಂಟಾಯಿತು. ಅದೇ ಕೊನೆ ಮತ್ತೆ ಅವನನ್ನು ನಮ್ಮ ತಂಡಕ್ಕೆ ಸೇರಿಸಿಕೊಳ್ಳಲಿಲ್ಲ. ಆತ ಕೂಡ ಬರುವ ಆಸಕ್ತಿ ಉಳಿಸಿಕೊಂಡಿರಲಿಲ್ಲ.

ಹೀಗೆ ಐದು ಸೆಮಿಸ್ಟರ್ ಮುಗಿಸಿ ಆರನೇ ಸೆಮಿಸ್ಟರ್ ಎಕ್ಸಾಂ ಕೂಡ ಹತ್ತಿರ ಬಂತು. ಯಥಪ್ರಕಾರ ನೋಟ್ಸ್ಸಗಳ ಹುಡುಕಾಟ. ಈ ಸಲ ನಮಗೆ ಅಷ್ಟೂ ವಿಷಯಗಳ ನೋಟ್ಸ್ ಸಿಕ್ಕಿತು. ಆದರೆ ನಾಲ್ಕನೇ ಸೆಮಿಸ್ಟರ್ನಲ್ಲಿ ಯಾರು ನಮಗೆ ನೋಟ್ಸ್ ಕೊಡದೆ ಮೋಸ ಮಾಡಿದ್ದನೋ ಅವನ ಬಳಿಯೇ ನೋಟ್ಸ್ ಇರಲಿಲ್ಲ. ಬೇರೆ ದಾರಿ ಕಾಣದ ಆತ ನಮ್ಮ ಬಳಿ ಬಂದು ‘ಪ್ಲೀಸ್ ಯಾರಾದ್ರೂ ನೋಟ್ಸ್ ಕೊಡ್ರೋ.. ಹಳೆಯದನ್ನೆಲ್ಲ ಮನಸ್ಸಲ್ಲಿ ಇಟ್ಕೋಬೇಡಿ..’ ಎಂದು ಕೇಳಿಕೊಂಡ. ನಾವೂ ಮೊದಲಿಗೆ ಕೊಂಚ ಧಿಮಾಕಿನಿಂದಲೇ ಪ್ರತಿಕ್ರಿಯಿಸಿದೆವು. ನಂತರ ಎಷ್ಟೇ ಆದರೂ ಹಿಂದೊಮ್ಮೆ ನಮ್ಮ ತಂಡದವನೇ ಅಲ್ವಾ ಅನಿಸಿ ನೋಟ್ಸ್ ಕೊಟ್ಟೆವು. ನೋಟ್ಸ್ ತೆಗೆದುಕೊಂಡ ಅವನಿಗೆ ತನ್ನ ತಪ್ಪಿನ ಅರಿವಾಗಿತ್ತು. ನಮ್ಮೆಲ್ಲರನ್ನೂ ಕ್ಷಮೆ ಕೇಳಿದ. ಅಷ್ಟರಲ್ಲಿ ನಾವು ಕೂಡ ಅವನನ್ನು ಕ್ಷಮಿಸಿ ಆಗಿತ್ತು. ‘ಯಾಕೋ ಸಾರಿ ಕೇಳ್ತಿಯಾ. ನೀನು ಕೂಡ ನಮ್ಮ ಸ್ನೇಹಿತ ಅನ್ನೊದನ್ನ ಮರೆತುಬಿಟ್ಟೆಯಾ..’ ಎಂದು ಹೇಳಿದಾಗ ಅವನ ಮುಖದಲ್ಲಿ ನಗು ಮೂಡಿತ್ತು. ಇನ್ನು ಮುಂದೆ ಇಂತಹ ತಪ್ಪು ಮಾಡುವುದಿಲ್ಲ ಅನ್ನುವ ಧೀನತೆ ಕೂಡ ಅವನ ಮುಖದಲ್ಲಿ ಕಾಣುತ್ತಿತ್ತು.

ಹೀಗೆ ಬಿಟ್ಟು ಹೋಗಿದ್ದ ಒಬ್ಬ ಗೆಳೆಯ ಮರಳಿ ನಮ್ಮ ತಂಡ ಸೇರಿಕೊಂಡ. ಗೆಳೆಯರ ಮಧ್ಯೆ ಎಷ್ಟೇ ದ್ವೆಷವಿದ್ದರೂ ಕಾಲೇಜಿನ ಕೊನೆಯ ದಿನಗಳಲ್ಲಿ ಮತ್ತೆ ಒಂದಾಗುತ್ತಾರೆ ಅನ್ನುವುದಕ್ಕೆ ನನ್ನ ಗೆಳೆಯರ ತಂಡವೇ ಕಾರಣ.

ನಿಮ್ಮಲ್ಲೂ ಈ ರೀತಿಯ ಮನಸ್ತಾಪಗಳಿದ್ದರೆ ಈಗಲೇ ಸರಿಪಡಿಸಿಕೊಂಡುಬಿಡಿ. ನೆನಪುಗಳ ಚೀಲದಲ್ಲಿ ಮನಸ್ತಾಪ ಇರದಿರಲಿ. ಮತ್ತೆ ಕಾಲೇಜು ಜೀವನ ಅನ್ನುವುದು ಕನಸಿಗಷ್ಟೇ ಸೀಮಿತ. ?

ಕೆ.ಆರ್.ಮಧುಸೂಧನ್

ಕುವೆಂಪು ವಿವಿ, ಶಂಕರಘಟ್ಟ

Follow Us:
Download App:
  • android
  • ios