ಈ ಕಾಳಿಗೆ ನೂಡಲ್ಸ್, ಫ್ರೈಡ್ ರೈಸ್ ನೈವೇದ್ಯ...
ದೇವರು ಹಾಗೂ ನೈವೇದ್ಯ ಭಕ್ತಿ ಹಾಗೂ ನಂಬಿಕೆಗೆ ಸಂಬಂಧಿಸಿದ್ದು. ಒಂದೊಂದು ಕಡೆ ಒಂದೊಂದು ರೀತಿ ದೇವರನ್ನು ಆರಾಧಿಸಲಾಗುತ್ತದೆ. ಕೆಲವೆಡೆ ಮದ್ಯವನ್ನೂ ದೇವಿಗೆ ಅರ್ಪಿಸೋ ಸಂಪ್ರದಾಯವಿದೆ. ಆದರೆ, ಈ ದೇವಿಗೆ....
ದೇವಾಲಯಗಳಲ್ಲಿ ದೇವರಿಗೆ ಅನ್ನ, ಪ್ರಸಾದ, ಪಂಚಕಜ್ಜಾಯವನ್ನು ನೈವೇದ್ಯವಾಗಿ ನೀಡಲಾಗುತ್ತದೆ. ಆದರೆ ಕೊಲ್ಕತ್ತಾದಲ್ಲೊಂದು ದೇವಾಲಯವಿದೆ. ಇಲ್ಲಿ ಕಾಳಿ ದೇವಿಗೆ ನೈವೇದ್ಯವಾಗಿ ನೂಡಲ್ಸ್, ಚೌಮಿನ್, ಫ್ರೈಡ್ ರೈಸ್ ನೀಡಲಾಗುತ್ತದೆ.
ಈ ದೇವಾಲಯ ಕೋಲ್ಕತ್ತಾದ ಟಂಗ್‌ರಾ ಜಿಲ್ಲೆಯಲ್ಲಿದೆ. ಅದು ಚೈನೀಸ್ ಕಾಳಿ ಮಂದಿರ. ಈ ಮಂದಿರವನ್ನು ಹಿಂದೂ ಮತ್ತು ಚೀನಾ ವಿಧಾನಗಳಲ್ಲಿ ಪೂಜಿಸಲಾಗುತ್ತದೆ. ಅಲ್ಲದೆ ಚೈನೀಸ್ ಸಂಪ್ರದಾಯದಂತೆ ಕಾಳಿ ದೇವಿಗೆ ನೂಡಲ್ಸ್ ಮತ್ತು ಫ್ರೈಡ್ ರೈಸ್‌ನ್ನು ನೈವೇದ್ಯದ ರೂಪದಲ್ಲಿ ನೀಡಲಾಗುತ್ತದೆ.
ಆದುದರಿಂದ ಈ ಕಾಳಿಗೆ ಚೈನೀಸ್ ಕಾಳಿ ದೇವಾಲಯವೆಂದೇ ಕರೆಯುತ್ತಾರೆ. ಪೂಜೆಯ ನಂತರ ಇದನ್ನು ಭಕ್ತರಿಗೆ ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತದೆ.
ಈ ದೇವಾಲಯ ಹಿಂದೂ ಮತ್ತು ಚೈನೀಸ್ ಸಂಸ್ಕೃತಿಯನ್ನು ಸಾರುತ್ತದೆ. ಈ ದೇವಾಲಯದ ಸುತ್ತಲೂ ಚೈನೀಸ್ ವಾಸವಿದ್ದಾರೆ. ಕಾಳಿ ಪೂಜೆ ದಿನ ಎಲ್ಲರೂ ಸೇರಿ ಇಲ್ಲಿ ವಿಜೃಂಭಣೆಯಿಂದ ಹಬ್ಬ ಆಚರಿಸುತ್ತಾರೆ. ಈ ದೇವಾಲಯವನ್ನು 55 ವರ್ಷದ ಇಸೋನ್ ಚೆನ್ ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿರುವ ಪ್ರತಿ ಚೈನೀಸ್ ಕುಟುಂಬಕ್ಕೂ ಒಂದೊಂದು ಜವಾಬ್ದಾರಿಯನ್ನು ವಹಿಸಲಾಗಿದ್ದು, ಪಂಡಿತರು ಬಂದು ಪೂಜಿಸುತ್ತಾರೆ.
ಚೈನೀಸ್‌ಗೇಕೆ ನಂಬಿಕೆ?:
60 ವರ್ಷ ಇತಿಹಾಸ ಹೊಂದಿರುವ ಈ ದೇವಾಲಯ ಹಿಂದೆ ಒಂದು ಮರದ ಕೆಳಗೆ ಕುಂಕುಮ ಹಚ್ಚಿದ ಒಂದು ಕಲ್ಲಿನಂತೆ ಇತ್ತಂತೆ. ಊರಿನ ಜನರು ಅಲ್ಲಿಗೆ ಬಂದು ಅದನ್ನು ಪೂಜಿಸುತ್ತಿದ್ದರು. ಚೈನೀಸ್ ಸಹ ಅದನ್ನು ಪೂಜಿಸಲು ಆರಂಭಿಸಿದರು. ಒಂದು ಬಾರಿ ಚೈನೀಸ್ ಹುಡುಗನೊಬ್ಬ ಕಾಯಿಲೆ ಬಿದ್ದನು.
ಆತನಿಗೆ ಎಲ್ಲಾ ಕಡೆಯಿಂದ ಔಷಧಿ ಮಾಡಿದರೂ ಆರೋಗ್ಯ ಸುಧಾರಿಸಲಿಲ್ಲ. ಕೊನೆಗೆ ಈ ಕಲ್ಲಿನ ಮೂರ್ತಿಯ ಬಳಿ ಕರೆದುಕೊಂಡು ಬರಲಾಗಿತ್ತು. ಇಲ್ಲಿಗೆ ಬಂದ ಕೂಡಲೇ ಆ ಹುಡುಗನ ಆರೋಗ್ಯ ಸುಧಾರಿಸಿತು. ಇದೇ ಕಾರಣದಿಂದ ಚೈನೀಸ್‌ಗೂ ಈ ದೇವಾಲಯದ ಮೇಲೆ ನಂಬಿಕೆ ಹೆಚ್ಚಾಯಿತು. ಅಂದಿನಿಂದ ಪ್ರತಿ ದಿನ ಅವರೂ ಅಲ್ಲಿ ಪೂಜಿಸುತ್ತಾರೆ.
ಚೈನೀ ಪದ್ಧತಿಯಲ್ಲಿ ಪೂಜೆ:
60 ವರ್ಷ ಹಿಂದಿನ ಈ ಕಾಳಿ ಮಂದಿರದಲ್ಲಿ ಪೂಜಿಸುವಾಗ ಸಾವಿರಾರು ಮಂದಿ ಬಂದು ದರ್ಶನ ಪಡೆಯುತ್ತಾರೆ. ಈ ದೇವಾಲಯ ನಿರ್ಮಿಸಿ 12 ವರ್ಷ ಆಯಿತು ಅಷ್ಟೇ. ಟಂಗ್ರದಲ್ಲಿರುವ ಈ ದೇವಾಲಯ ನಿರ್ಮಿಸಲು ಎಲ್ಲಾ ಚೈನೀಸ್ ಕುಟುಂಬಗಳೂ ಧನ ಸಹಾಯ ನೀಡಿದ್ದವು.
ಮುಂದೆ ಚೈನೀಸ್ ಜನರೇ ಈ ದೇವಾಲಯವನ್ನು ನಡೆಸಿಕೊಂಡು, ಅವರದೇ ರೀತಿಯಲ್ಲಿ ಪೂಜಿಸುತ್ತಿದ್ದಾರೆ. ಈ ದೇವಾಲಯದಲ್ಲಿ ದೇವಿಯ ಮುಂದೆ ಕ್ಯಾಂಡಲ್ಸ್ ಮತ್ತು ಚೈನೀಸ್ ಅಗರ್‌ಬತ್ತಿ ಹಚ್ಚಿಡಲಾಗುತ್ತದೆ.
ಹಿಂದೂ ಮತ್ತು ಚೀನಾ ಸಂಪ್ರದಾಯದಿಂದ ಕೂಡಿರುವ ಈ ದೇವಾಲಯಕ್ಕೆ ಬೇರೆ ಬೇರೆ ದೇಶಗಳಿಂದ ಪ್ರವಾಸಿಗರು ಬಂದು ಇದನ್ನೊಂದು ವಿಶೇಷ ಕೇಂದ್ರವನ್ನಾಗಿ ರೂಪಿಸಿದ್ದಾರೆ. ದೇಶದ ಬೇರೆ ಮಂದಿರಗಳಲ್ಲಿ ಪ್ರಸಾದ - ಹಣ್ಣು ಹಂಪಲುಗಳನ್ನು ನೈವೇದ್ಯವಾಗಿ ನೀಡುತ್ತಾರೆ. ಅದರೆ ಇಲ್ಲಿ ಚೀನಾದ ನೂಡಲ್ಸ್, ಚಾಂಪ್ಸಿ, ಫ್ರೈಡ್ ರೈಸ್, ವೆಜಿಟೇಬಲ್ ಮೊದಲಾದವುಗಳನ್ನು ನೈವೇದ್ಯದ ರೂಪದಲ್ಲಿ ಅರ್ಪಿಸಲಾಗುತ್ತದೆ.