Asianet Suvarna News Asianet Suvarna News

ದೀಪಿಕಾ ಪಡುಕೋಣೆ ಹಚ್ಚಿದ ಸಣ್ಣ ಹಣತೆ ‘ಲೈವ್‌, ಲವ್‌, ಲಾಫ್‌’!

ತಾನೂ ಒಂದು ಕಾಲದಲ್ಲಿ ಖಿನ್ನತೆಯಿಂದ ಬಳಲಿ ಅದರಿಂದ ಹೊರ ಬಂದವರು ದೀಪಿಕಾ ಪಡುಕೋಣೆ. ತಾನು ಸರಿಯಾದೆ ಎಂದು ಸುಮ್ಮನೆ ಕೂರದೇ ತನ್ನಂತೆ ಕಷ್ಟಅನುಭವವಿಸುತ್ತಿರುವವರ ಪಾಲಿಗೆ ನಾನೊಂದು ಸಣ್ಣ ದೀಪವನ್ನು ಹಚ್ಚಿಯೇ ತೀರುತ್ತೇನೆ ಎಂದು ಪಣ ತೊಟ್ಟು ‘ದಿ ಲೈವ್‌ ಲವ್‌ ಲಾಫ್‌ ಫೌಂಡೇಷನ್‌’ ಸ್ಥಾಪಿಸಿದ್ದರು ದೀಪಿಕಾ. ಈಗ ಅದು ದೊಡ್ಡ ಮಟ್ಟದಲ್ಲಿ ಫಲ ಕೊಡಲು ಆರಂಭವಾಗಿದೆ. ಅದರ ಭಾಗವೇ ಮೊನ್ನೆಯಿಂದ ಶುರುವಾಗಿರುವ ಹೊಸ ಉಪನ್ಯಾಸ ಮಾಲಿಕೆ.

Bollywood actress deepika padukone initiates inaugural lecture series The Live Love Laugh
Author
Bangalore, First Published Sep 18, 2019, 10:18 AM IST

ಕೆಂಡಪ್ರದಿ

ಇಂದು ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ, ಅತಿ ಹೆಚ್ಚು ಬೇಡಿಕೆ ಇರುವ ನಟಿ ನಮ್ಮ ನೆಲದ ದೀಪಿಕಾ ಪಡುಕೋಣೆ. ಹಾರ್ಡ್‌ ವರ್ಕ್, ಎಂತಹುದೇ ಪಾತ್ರವಾದರೂ ಮಾಡಿ ಸೈ ಎನ್ನಿಸಿಕೊಳ್ಳುವ ಬೆಡಗಿಗೆ 2014-15 ಸಂಕಷ್ಟದ ಕಾಲ. ಯಾವ್ಯಾವುದೋ ಕಾರಣಗಳಿಗೆ ಡಿಪ್ರೆಷನ್‌ಗೆ ಸಿಲುಕಿದ್ದ ಚೆಲುವೆ ಅದರಿಂದ ಮೇಲೆ ಬಂದು ಹೊಸ ಬದುಕನ್ನು ಕಟ್ಟಿಕೊಂಡ ಪರಿ ಅನನ್ಯ. ಅದಕ್ಕೂ ಮಿಗಿಲಾಗಿ ಆ ಸಂಕಷ್ಟದ ದಿನಗಳ ಪರಿಣಾಮವಾಗಿ ಕಟ್ಟಿದ ‘ದಿ ಲೈವ್‌ ಲವ್‌ ಲಾಫ್‌ ಫೌಂಡೇಷನ್‌’ ನಾಲ್ಕು ವರ್ಷಗಳಿಂದ ಮಾಡಿಕೊಂಡು ಬಂದಿರುವ ಕೆಲಸದ ಪರಿ ಮತ್ತೂ ಅನನ್ಯ. ಇದೀಗ ಹೊಸ ಹೆಜ್ಜೆಯನ್ನು ದೀಪಿಕಾ ಕಟ್ಟಿದ ಸಂಸ್ಥೆ ಇಟ್ಟಿದೆ. ಅದು ಡಿಪ್ರೆಷನ್‌ಗೆ ತುತ್ತಾದವರನ್ನು ಮೇಲೆತ್ತಲು ಹೊಸದಾದ ಉಪನ್ಯಾಸ ಮಾಲಿಕೆಯನ್ನು ಶುರು ಮಾಡುವ ಮೂಲಕ.

ಖಿನ್ನತೆ ಗೆಲ್ಲುವುದು ಹೇಗೆ? ದೀಪಿಕಾ ಕೊಟ್ಟ ಮದ್ದಿದು!

ಅದು 2014ರ ಅಂತ್ಯ ಕಾಲ. ದೀಪಿಕಾ ಪಡುಕೋಣೆ ತಮ್ಮ ವಯಕ್ತಿಯ ಜೀವನದಲ್ಲಿ ಆದ ಘಾಸಿಯಿಂದ ಹೊರ ಬರಲು ತವಕಿಸುತ್ತಾ, ತವಕಿಸುತ್ತಾ ಆತಂಕ ಮತ್ತು ಖಿನ್ನತೆಯ ಸುಳಿಯಲ್ಲಿ ಸಿಲುಕಿಬಿಡುತ್ತಾರೆ. ಈ ವೇಳೆ ಅವರ ಸಹಾಯಕ್ಕೆ ಬಂದಿದ್ದು ಆಪ್ತ ಮಿತ್ರರು ಮತ್ತು ಕುಟುಂಬಸ್ಥರು. ಅದೂ ಸಾಕಷ್ಟುಸಮಯ ತೆಗೆದುಕೊಂಡ ದೀಪಿಕಾ ನಿಧಾನವಾಗಿ ವಾಸ್ತವ ಬದುಕಿನತ್ತ ಮುಖ ಮಾಡುತ್ತಾರೆ. ಈ ನಡುವಲ್ಲಿ ಅವರು ಕಂಡುಕೊಂಡ ಸತ್ಯ ಏನೆಂದರೆ ನಮ್ಮ ದೇಶದಲ್ಲಿ ಖಿನ್ನತೆಗೆ ಒಳಗಾಗಿ ತಮ್ಮ ಜೀವನದ ಅತ್ಯಮೂಲ್ಯ ಕ್ಷಣಗಳನ್ನೇ ನಾಶ ಮಾಡಿಕೊಳ್ಳುತ್ತಿರುವ ಲಕ್ಷಾಂತರ ಮಂದಿ ನಮ್ಮಲ್ಲಿ ಇದ್ದಾರೆ ಎನ್ನುವ ಸತ್ಯವನ್ನು.

ನನ್ನಿಂದಾಗುಷ್ಟುನಾನು ಮಾಡುವೆ

‘2014ರ ಫೆ. 15ರಂದು ಬೆಳಿಗ್ಗೆ ಏಳುತ್ತಿದ್ದ ಹಾಗೆಯೇ ನನ್ನೊಳಗೆ ಏನೋ ಗೊಂದಲ, ಆತಂಕ ಮನೆ ಮಾಡಿತ್ತು. ಹೊಟ್ಟೆಯೊಳಗೆಲ್ಲಾ ಏನೋ ಒಂದು ರೀತಿಯ ಸಂಕಟವಾಗುತ್ತಿತ್ತು. ಒಂದು ಮನಸ್ಸು ಎದ್ದು ಕೆಲಸಕ್ಕೆ ಸಿದ್ಧಳಾಗು ಎನ್ನುತ್ತಿದ್ದರೆ, ಮತ್ತೊಂದು ಮನಸ್ಸು ಶೂನ್ಯವಾಗಿ ಮುಂದೆ ಏನು ಎನ್ನುವ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾ, ಮುಂದೆ ದಾರಿಯೇ ಇಲ್ಲವೆನೋ ಎನ್ನುವ ಭಾವವನ್ನು ಬಿತ್ತುತ್ತಿತ್ತು. ಆಗ ನನಗೆ ಏನಾಗುತ್ತಿದೆ ಎನ್ನುವ ಸಣ್ಣ ಸುಳಿವೂ ಇರಲಿಲ್ಲ. ಪ್ರತಿ ದಿನದ ಮುಂಜಾವು ನನ್ನಲ್ಲಿ ಆತಂಕ, ಖಿನ್ನತೆಯನ್ನು ಉಂಟು ಮಾಡುತ್ತಿತ್ತು.

 

ಆಗ ನನ್ನ ಸಹಾಯಕ್ಕೆ ನಿಂತವರು ನನ್ನ ಕುಟುಂಬ ವರ್ಗ ಮತ್ತು ಆಪ್ತ ಬಳಗ. ನನ್ನಲ್ಲಿ ಖಿನ್ನತೆ ಮನೆ ಮಾಡಿದೆ ಎನ್ನುವುದನ್ನು ಅರಿತ ಅವರು ನಿಧಾನಕ್ಕೆ ನನಗೆ ಏನು ಬೇಕು ಎನ್ನುವುದನ್ನು ಅರಿತುಕೊಂಡು ಅದಕ್ಕೆ ತಕ್ಕಂತೆ ಸಹಕಾರ ನೀಡಿದರು. ನಿಧಾನಕ್ಕೆ ನಾನು ಖಿನ್ನತೆಯ ಸುಳಿಯಿಂದ ಹೊರಗೆ ಬರಲು ಆರಂಭಿಸಿದ್ದೆ. ನನ್ನ ಅದೃಷ್ಟ, ನನ್ನ ಜೊತೆಗಿದ್ದವರ ಪ್ರೀತಿಯಿಂದ ನಾನು ಸಹಜ ಸ್ಥಿತಿಗೆ ಮರಳಿದೆ. ಅದಾದ ಮೇಲೆಯೇ ನನಗೆ ಅನ್ನಿಸಿದ್ದು, ನನ್ನ ಹಾಗೆಯೇ ಲಕ್ಷಾಂತರ ಮಂದಿ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು. ಅವರಿಗೆ ಸರಿಯಾದ ಮಾರ್ಗದರ್ಶನ ಮಾಡುವ ವ್ಯಕ್ತಿಗಳು ಇಲ್ಲದೇ ಅವರ ಬದುಕು ಮುಂದೆ ಖಿನ್ನತೆಯ ಕೂಪದಲ್ಲಿಯೇ ಮುಳುಗಿಹೋಗಬಾರದು ಎಂದುಕೊಂಡು, ಹೊಸ ವರ್ಷದ ದಿನ ಅಂದರೆ, ಜ. 1, 2015ರಂದು ನನ್ನಿಂದ ಆಗುವಷ್ಟುಹೊಸ ಬೆಳಕನ್ನು ಖಿನ್ನತೆಗೆ ಒಳಗಾದವರಿಗಾಗಿ ‘ದಿ ಲೈವ್‌, ಲವ್‌, ಲಾಫ್‌ ಫೌಂಡೇಶನ್‌’ ಅನ್ನು ಸ್ಥಾಪಿಸಿದೆ’ ಎಂದು ಸಂಸ್ಥೆಯ ಉದ್ದೇಶವನ್ನು ಹೇಳಿಕೊಳ್ಳುತ್ತಾರೆ ದೀಪಿಕಾ ಪಡುಕೋಣೆ.

ಲಕ್ಷಾಂತರ ಮಂದಿಗೆ ಸ್ಫೂರ್ತಿ

ಹೀಗೆ ಹೊಸ ವರ್ಷದಿಂದ ಹೊಸ ಬೆಳಕನ್ನು ಹರಿಸಬೇಕು ಎಂದುಕೊಂಡು ದೀಪಿಕಾ ಕಟ್ಟಿದ ಸಂಸ್ಥೆಯು ಇಂದು ಬೆಂಗಳೂರಿನ ಇಂದಿರಾ ನಗರದಲ್ಲಿ ಮುಖ್ಯ ಕಚೇರಿಯನ್ನು ಹೊಂದಿದ್ದು, ದೇಶಾದ್ಯಂತ ತನ್ನ ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸಿಕೊಂಡಿದೆ. ಆನ್‌ಲೈನ್‌ನಲ್ಲಿ, ಸೋಷಲ್‌ ಮೀಡಿಯಾಗಳಲ್ಲಿ ಸ್ಫೂರ್ತಿದಾಯಕ ಮಾತುಗಳು, ನುರಿತ ಮನೋವೈದ್ಯರ ಮಾತುಗಳು, ಹಲವಾರು ಕಡೆಗಳಲ್ಲಿ ನಿಯಮಿತವಾಗಿ ಕಾರ್ಯಾಗಾರಗಳನ್ನು ಮಾಡುವ ಮೂಲಕ ಸುಮಾರು 3500 ಮಂದಿಯ ತಂಡ ಲಕ್ಷಾಂತರ ಮಂದಿಯಲ್ಲಿ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಮಾಡಿಕೊಂಡು ಬರುತ್ತಿದೆ.

 

ಹೊಸ ಉಪನ್ಯಾಸ ಮಾಲಿಕೆ ಶುರು

ತಾವು ಮಾಡುತ್ತಿರುವ ಕಾರ್ಯವನ್ನು ಮತ್ತಷ್ಟುಪ್ರಬಲವಾಗಿ ಮಾಡಬೇಕು ಎನ್ನುವ ಉದ್ದೇಶದಿಂದ ದೀಪಿಕಾ ಪಡುಕೋಣೆ ಮತ್ತು ಸಂಸ್ಥೆಯ ಮುಖ್ಯ ಆಧಾರ ಸ್ತಂಭಗಳಾದ ಕಿರಣ್‌ ಮಜುಮ್ದಾರ್‌, ಡಾ. ಶಾಮ್‌ ಕೆ.ಭಟ್‌, ಅಣ್ಣ ಚಾಂಡಿ, ಡಾ. ಮುರಾಳ್‌ ದೊರೈಸಾಮಿ ಅವರು ಸೇರಿ ಈಗ ಸೆ. 16ರಿಂದ ಖಿನ್ನತೆಗೆ ಒಳಗಾದವರಿಗೆ ಮತ್ತು ಯುವ ಮನಸ್ಸುಗಳಿಗೆ ಉತ್ಸಾಹವನ್ನು ತುಂಬುವ ಸಲುವಾಗಿ ಹೊಸದಾದ ಉಪನ್ಯಾಸ ಮಾಲಿಕೆಯನ್ನು ಆರಂಭಿಸಿದ್ದಾರೆ. ಇದಕ್ಕೆ ಮೊನ್ನೆಯಷ್ಟೇ ದೀಪಿಕಾ ಪಡುಕೋಣೆ ದೆಹಲಿಯಲ್ಲಿ ಅಧಿಕೃತವಾಗಿ ಚಾಲನೆ ಕೊಟ್ಟಾಗಿದೆ. ಮುಂದೆ ನಿಯಮಿತವಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮನೋವೈದ್ಯರು, ತಜ್ಞರು ಖಿನ್ನತೆ, ಬದುಕಿನ ಸವಾಲುಗಳನ್ನು ಎದುರಿಸುವ ರೀತಿ, ಮನುಷ್ಯನ ಸಹಜ ವರ್ತನೆ ಮೊದಲಾದವುಗಳಿಗೆ ಸಂಬಂಧಿಸಿದಂತೆ ಉಪನ್ಯಾಸಗಳನ್ನು ನೀಡಲಿದ್ದಾರೆ.

Follow Us:
Download App:
  • android
  • ios