Asianet Suvarna News Asianet Suvarna News

ಈ ಶಾಲೆಯ ಗೌರವ ಶಿಕ್ಷಕಿಯರ ಕೈ ಹಿಡಿದ ಮಲ್ಲಿಗೆ!

ಓ..ಮಲ್ಲಿಗೆ ನಿನ್ನೊಂದಿಗೆ ನಾನಿಲ್ಲವೇ... ಎಂಬ ಚಿತ್ರಗೀತೆಯ ಹಾಡು ಕೇಳಿದ್ದೀರಿ. ಆದರೆ ಮೆಲ್ಲಮೆಲ್ಲನೇ ಬರುವ ಮಲ್ಲಿಗೆ ಕೃಷಿಯ ಆದಾಯವನ್ನೇ ನಂಬಿಕೊಂಡು ಸರ್ಕಾರಿ ಶಾಲೆಯೊಂದು ಗೌರವ ಶಿಕ್ಷಕಿಯರಿಗೆ ಗೌರವಧನ ನೀಡುತ್ತಿದೆ ಎಂದರೆ ನೀವು ನಂಬುತ್ತೀರಾ? ಆದರೆ ನಂಬಲೇ ಬೇಕು. ದಕ್ಷಿಣಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಓಜಲ ಕಿರಿಯ ಪ್ರಾಥಮಿಕ ಶಾಲೆಯ ಗೌರವ ಶಿಕ್ಷಕಿಯರ ಗೌರವ ಧನಕ್ಕೆ ಇಲ್ಲಿನ ಮಲ್ಲಿಗೆ ಕೃಷಿಯೇ ಆಧಾರವಾಗಿದ್ದು, ಮಲ್ಲಿಗೆಯ ಆದಾಯ ಕಡಿಮೆ ಆದಾಗೆಲ್ಲಾ ದಾನಿಗಳೇ ಮುನ್ನಡೆಸಿದ ನಿದರ್ಶನವೂ ಇಲ್ಲಿದೆ.

 

Bantwal government school students teachers grow jasmine as financial Support
Author
Bangalore, First Published Jul 22, 2019, 2:29 PM IST

ಮೌನೇಶ ವಿಶ್ವಕರ್ಮ ಬಂಟ್ವಾಳ

ಏನಿದು ಮಲ್ಲಿಗೆ ಪರಿಮಳ?

1968ರಲ್ಲಿ ಆರಂಭಗೊಂಡಿರುವ ಓಜಲ ಕಿರಿಯ ಪ್ರಾಥಮಿಕ ಶಾಲೆಗೆ 1.06ಎಕ್ರೆ ಜಮೀನಿನಲ್ಲಿದೆ. ಕಳೆದ 51 ವರ್ಷಗಳಲ್ಲಿ ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡಿದ ಹೆಗ್ಗಳಿಕೆ ಈ ಓಜಲ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಿದೆ. ಆದರೆ ಎಲ್ಲಾ ಸರ್ಕಾರಿ ಶಾಲೆಗಳಂತೆ ಮಕ್ಕಳ ಸಂಖ್ಯೆ ಇಲ್ಲಿಯೂ ಕಡಿಮೆಯಾಗಿ 2007ರಲ್ಲಿ 7  ವಿದ್ಯಾರ್ಥಿಗಳು ಮಾತ್ರ ಉಳಿದುಕೊಂಡು ಶಾಲೆ ಮುಚ್ಚುವ ಹಂತಕ್ಕೂ ತಲುಪಿತ್ತು. ಆಗ ಅಂದಿನ ಎಸ್‌ಡಿಎಂಸಿಯ ಅಧ್ಯಕ್ಷರು ಮತ್ತು ಸದಸ್ಯರು ಶಾಲೆ ಉಳಿಸಲು ಮುಂದಾದರು. ಶಾಲೆಯಲ್ಲೀಗ 87 ಮಕ್ಕಳು ಕಲಿಯುತ್ತಿದ್ದು, ಗಮನಾರ್ಹ ಶೈಕ್ಷಣಿಕ ಸಾಧನೆ ಮಾಡುತ್ತಿದೆ. 2014ರಿಂದ ಶಾಲೆಯಲ್ಲಿ ಮಲ್ಲಿಗೆ ಕೃಷಿ ಆರಂಭಿಸಿದ್ದು, ಇದೀಗ ಶಾಲೆಯ ಆದಾಯದ ದೊಡ್ಡ ಮೂಲವಾಗಿ ಬೆಳೆಯುತ್ತಿದೆ.

ಕಾರಣಕರ್ತರು ಇವರು

ಈ ಹಿಂದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಟುವಟಿಕೆಗಳಲ್ಲಿದ್ದ ಗ್ರಾಮದ ನಿವಾಸಿಗಳಾದ ಹೊನ್ನಪ್ಪ ಗೌಡ ಹಾಗೂ ದಯಾನಂದ ಅವರು ಶಾಲೆಗೆ ಜೊತೆಯಾಗಿ ಮಲ್ಲಿಗೆ ಕೃಷಿಯನ್ನು ಆರಂಭಿಸಿದರು. ಆಗಿನ ಎಸ್‌ಡಿಎಂಸಿ ಅಧ್ಯಕ್ಷರಾಗಿದ್ದ ರಮೇಶ್ ಭಟ್ ಮಲ್ಲಿಗೆ ಕೃಷಿಗೆ ಸಾಥ್ ನೀಡಿದರು. ಕಳೆದ ವರ್ಷದವರೆಗೂ ಅಧ್ಯಕ್ಷರಾಗಿದ್ದ ಸುಂದರ ಗೌಡರು ಶಾಲೆಯಲ್ಲಿ ಹಲವು ಗುಣಾತ್ಮಕ  ಬದಲಾವಣೆ ಮಾಡಿದರು. ಮಕ್ಕಳ ಪೋಷಕರೂ ಶಾಲಾ ಕಟ್ಟಡ ರಚನೆಗೆ ಕೈ ಜೋಡಿಸಿದ್ದಾರೆ. ಇಲ್ಲಿನ ಸುವರ್ಣ ವರ್ಷಾಚರಣೆಯ ಕಚೇರಿ ಕಟ್ಟಡ ಎಸ್‌ಡಿಎಂಸಿ ಅಧ್ಯಕ್ಷರ ಹಾಗೂ ಮಕ್ಕಳ ಪೋಷಕರ ಶ್ರಮದ ಫಲವಾಗಿ ರೂಪುಗೊಂಡಿದೆ.

ಈ ಶಾಲಾ ಮಂಡಳಿ ಸದಸ್ಯರೆಲ್ಲ ಕೂಲಿ ಕಾರ್ಮಿಕರು.ಹೃದಯ ಶ್ರೀಮಂತರು. ಶಾಲೆಯ ಎಲ್ಲಾ ಅಭಿವೃದ್ಧಿ ಕೆಲಸಗಳಲ್ಲಿ ಶ್ರಮದಾನದ ಮೂಲಕ ಕೈಜೋಡಿಸುತ್ತಾರೆ. ಶಾಲೆಗಾಗಿ ಅವಿಶ್ರಾಂತ ದುಡಿಯುವ ಮುಖ್ಯ ಶಿಕ್ಷಕಿಯ ಶ್ರಮ, ಸಾಧನೆಯನ್ನು ಕಂಡು ನಾವೇ ಕಳೆದ ಶೈಕ್ಷಣಿಕ ವರ್ಷದಲ್ಲಿ ಶಿಫಾರಸು ಮಾಡಿ ಪ್ರಶಸ್ತಿ ಕೊಡಿಸಿದ್ದೇವೆ-  ಎನ್.ಶಿವಪ್ರಕಾಶ್ ಕ್ಷೇತ್ರ
 

- ಶಿಕ್ಷಣಾಧಿಕಾರಿ, ಬಂಟ್ವಾಳ

ವರ್ಷವಿಡೀ ಸಮೃದ್ಧ ನೀರು

ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ತನ್ನ ಸಾಮಾಜಿಕ ಜವಾಬ್ದಾರಿ ಯೋಜನೆಯಲ್ಲಿ (ಸಿಎಸ್‌ಆರ್) ಈ ಶಾಲೆಗೆ ೨ ಲಕ್ಷ ರು. ವೆಚ್ಚದಲ್ಲಿ ಶೌಚಾಲಯ ನಿರ್ಮಿಸಿಕೊಟ್ಟಿದೆ. ಊರವರು ನಿರ್ಮಿಸಿದ ಕೊಳವೆ ಬಾವಿ ಇದೆ. ಮಳೆ ನೀರು ಇಂಗು ಗುಂಡಿ ರಚಿಸಿರುವುದರಿಂದ ವರ್ಷವಿಡೀ ಸಮೃದ್ಧ ನೀರು ಲಭ್ಯವಿದೆ. ಶಾಲೆಗೆ ೬ನೇ ತರಗತಿ ಮಂಜೂರಾಗಿದ್ದು, ಮುಂದಿನ ವರ್ಷ ಎಲ್‌ಕೆಜಿ ತರಗತಿ ಆರಂಭಿಸುವ ಬಗ್ಗೆ ಶಾಲಾಭಿವೃದ್ಧಿ ಸಮಿತಿ ಚಿಂತಿಸಿದೆ.

ಮಲ್ಲಿಗೆಯಿಂದ ಆದಾಯ

ಪ್ರಗತಿಪರ ಕೃಷಿಕರಾಗಿರುವ ಹೊನ್ನಪ್ಪ ಗೌಡರ ಮಾರ್ಗದರ್ಶನದಲ್ಲಿ ಎಲ್ಲಾ ಶಿಕ್ಷಕ ವೃಂದವೂ ಮಲ್ಲಿಗೆ ಕೃಷಿಯಲ್ಲಿ ಸಕ್ರಿಯರಾಗಿದ್ದಾರೆ. 2012ರಲ್ಲಿ ನೆಡಲಾದ  30 ಮಲ್ಲಿಗೆ ಗಿಡಗಳ ಪೈಕಿ ಪ್ರಸ್ತುತ 26 ಗಿಡಗಳು ಮಲ್ಲಿಗೆ ಬೆಳೆ ನೀಡುತ್ತಿವೆ. ವಾರ್ಷಿಕ 35 ರಿಂದ 40  ಸಾವಿರ ರು. ಆದಾಯವಿದೆ. ಕಳೆದ ವರ್ಷದವರೆಗೆ ಒಬ್ಬರೇ ಗೌರವ ಶಿಕ್ಷಕಿ ಇದ್ದು, ಅವರ ಗೌರವಧನಕ್ಕೆ ಆದಾಯದ ಮೂಲ ಇದೇ ಆಗಿತ್ತು. ಆದರೆ ಈ ಬಾರಿ ಒಂದನೇ ತರಗತಿಗೆ  29 ಮಕ್ಕಳು ಸೇರ್ಪಡೆಯಾಗಿರುವುದು ಮತ್ತು   6 ತರಗತಿಗೆ ವಿಸ್ತರಿಸಿದ್ದು, ಮಕ್ಕಳ ಸಂಖ್ಯೆ   87 ಕ್ಕೇರಿದೆ. ಹಾಗಾಗಿ ಮತ್ತಿಬ್ಬರು ಗೌರವ ಶಿಕ್ಷಕಿಯರನ್ನು ನೇಮಿಸಿಕೊಳ್ಳಲಾಗಿದೆ. ಮೂವರ ಗೌರವಧನಕ್ಕೆ ಮಲ್ಲಿಗೆ ಕೃಷಿಯ ಆದಾಯ ಸಾಲುತ್ತಿಲ್ಲ. ಒಬ್ಬ ಶಿಕ್ಷಕಿಯ ವಾರ್ಷಿಕ ಗೌರವಧನಕ್ಕೆ ಸುಮಾರು  50 ಸಾವಿರ ರು. ಬೇಕು. ಜೊತೆಗೆ ಶಾಲಾ ನಿರ್ವಹಣೆಗೂ ಆದಾಯದ ಅಗತ್ಯವಿದೆ. 

ಮಲ್ಲಿಗೆ ಖರೀದಿಗೂ ಬಂತು ಆ್ಯಪ್- ಉಡುಪಿ ವಿದ್ಯಾರ್ಥಿಗಳ ಹೊಸ ಪ್ರಯತ್ನ!

ಮಲ್ಲಿಗೆ ಮಾಲೆ ದಿನಚರಿ

ಪ್ರತಿದಿನ ಬೆಳಗ್ಗೆ ಬೇಗನೇ ಶಾಲೆಗೆ ಬರುವ ಶಿಕ್ಷಕಿಯರು ಮಲ್ಲಿಗೆ ಮೊಗ್ಗು ಕೊಯ್ಲು ಮಾಡುತ್ತಾರೆ. ಮಕ್ಕಳ ಜೊತೆ ಶಾಲೆಗೆ ಬರುವ ಕೆಲವು ಪೋಷಕರು ಈ ಕಾರ್ಯದಲ್ಲಿ ಸಹಕರಿಸುತ್ತಾರೆ. ಹೀಗೆ ಕೊಯ್ಲು ಮಾಡಿದ ಮಲ್ಲಿಗೆ ಮೊಗ್ಗುಗಳನ್ನು ಶಾಲೆಯ ಬಿಸಿಯೂಟ ಅಡುಗೆ ಸಿಬ್ಬಂದಿ ಹರಿಣಾಕ್ಷಿ ಮಲ್ಲಿಗೆ ಮಾಲೆ ಮಾಡಿದರೆ, ಶಾಲಾ ಶಿಕ್ಷಕಿಯರು ಮಧ್ಯಾಹ್ನ ಇಲ್ಲವೇ ಸಂಜೆ ಶಾಲೆ ಬಿಟ್ಟು ಮನೆಗೆ ಹೋಗುವ ದಾರಿಯಲ್ಲಿ ಕಬಕದ ಹೂವಿನ ಅಂಗಡಿಗೆ ಮಾರಾಟಕ್ಕೆ ಕೊಡುತ್ತಾರೆ. ಕೆಲವೊಮ್ಮೆ ಎಸ್‌ಡಿಎಂಸಿ ಅಧ್ಯಕ್ಷರೂ ಈ ಕೆಲಸಕ್ಕೆ ಸಾಥ್ ನೀಡುತ್ತಾರೆ. ರಜಾ ದಿನಗಳಲ್ಲಿ ಎಸ್‌ಡಿಎಂಸಿ ಸದಸ್ಯರು, ಪೋಷಕರು ಹಾಗೂ ಬಿಸಿಯೂಟ ಅಡುಗೆ ಸಿಬ್ಬಂದಿ ಮಲ್ಲಿಗೆ ತೋಟದ ಮೇಲುಸ್ತುವಾರಿ ವಹಿಸುತ್ತಾರೆ. ಹೀಗಾಗಿ ಇಲ್ಲಿನ ಮಲ್ಲಿಗೆ ಕೃಷಿ ಎಲ್ಲರ ಗಮನ ಸೆಳೆಯುತ್ತಿದೆ.

ಎಸ್‌ಡಿಎಂಸಿಯ ಮಾಜಿ ಅಧ್ಯಕ್ಷರಿಂದ ಹಿಡಿದು ಎಲ್ಲಾ ಶಿಕ್ಷಕ ವೃಂದದವರ ಸಹಕಾರದಿಂದ ಗುಣಾತ್ಮಕ ಶಿಕ್ಷಣ ನೀಡುವತ್ತ ಹೆಜ್ಜೆ ಹಾಕಿದ್ದೇವೆ. ಈ ವರ್ಷ 33 ಮಕ್ಕಳ ಸೇರ್ಪಡೆಯೊಂದಿಗೆ ಒಟ್ಟು ಮಕ್ಕಳ ಸಂಖ್ಯೆ 87ಕ್ಕೆ ಏರಿಕೆಯಾಗಿದೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಎಲ್‌ಕೆಜಿ, ಯುಕೆಜಿ ಆರಂಭಿಸುವ ಯೋಚನೆ ಇದೆ. ಭವಿಷ್ಯದಲ್ಲಿ ಮಕ್ಕಳ ಸಂಖ್ಯೆ ನೂರರ ಗಡಿ ದಾಟುವ ನಿರೀಕ್ಷೆ ಇದೆ-  ಹೊನ್ನಪ್ಪ ಗೌಡ ಅಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ, ಓಜಲ ಶಾಲೆ

ಹೂ ಅರಳಿದರೆ ದುಂಬಿ ನಲಿಯುತ್ತೆ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಳ ಎಂಬ ಗ್ರಾಮದಲ್ಲಿನ ಓಜಲ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣ, ಬಿಸಿಯೂಟ, ಹಾಗೂ ಅಲ್ಲಿನ ಗೌರವ ಶಿಕ್ಷಕಿಯರಿಗೆ ಆದಾಯವಾಗಿ ಇರುವುದು ಎಕ್ರೆ ಭೂಮಿಯ ಮಲ್ಲಿಗೆ ಕೃಷಿ. ಪ್ರತಿ ವರ್ಷವೂ ಶಿಕ್ಷಣದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿರುವ ಈ ಶಾಲೆಯ ಪ್ರಗತಿಯ ಹಿಂದೆ ಹಲವು ಕಾಣದ ಕೈಗಳು ಶ್ರಮವಹಿಸಿವೆ. ಆದರೆ ಇದಕ್ಕೆಲ್ಲ ಮೂಲವೇ ಮಲ್ಲಿಗೆ ಕೃಷಿ ಎನ್ನುವುದು ವಿಶೇಷ. 

 

Follow Us:
Download App:
  • android
  • ios