ಅದು ನಾನು ಪಾಕ್ಷಿಕ ಶಿಬಿರದಲ್ಲಿ ಪಾಲ್ಗೊಂಡಿದ್ದ ಸಂದರ್ಭ. ಅಲ್ಲಿಯೇ ಅವಳು ನನಗೆ ಪರಿಚಯವಾದದ್ದು. ನಾನು ನನ್ನ ಗೆಳೆಯರು, ಒಟ್ಟಿಗೆ ಪ್ರಯಾಣ ಬೆಳೆಸಿ ಶಿಬಿರ ನಡೆಯುತ್ತಿದ್ದ ಸ್ಥಳ ತಲುಪಿದೆವು. ತಲುಪಿದ ದಿನ ನನ್ನ ಗೆಳೆಯರ ಮನಸ್ಸು ಹುಡುಗಿಯರ ಆಗಮನವನ್ನೇ ಕಾಯುವಂತಿತ್ತು. ಶಿಬಿರಕ್ಕೆ ಹುಡ್ಗಿರು ಬರ್ತಾರೋ.. ಇಲ್ವೋ ಅನ್ನುವ ಚಿಂತೆ ಅವರ ಪಿಸುಗುಟ್ಟುವಿಕೆಯಲ್ಲಿ ಕೇಳಿಸುತ್ತಿತ್ತು. ನಾನೇನು ಅವರಿಂದ ಹೊರತಾಗಿರಲಿಲ್ಲ..!

ಹೀಗೆ ಶಿಬಿರಕ್ಕೆ ಪ್ರವೇಶವಾಯಿತು. ಮೊದಲ ದಿನದ ಸಂಜೆ ಸಾಂಸ್ಕೃತಿಕ ಚಟುವಟಿಕೆ. ನಾನು ಕೂಡ ಭಾಗವಹಿಸಿ ಉತ್ತಮ ಪ್ರದರ್ಶನವನ್ನೇ ನೀಡಿದ್ದೆ. ಆಗ ಗುಂಪಿನೊಳಗಿನಿಂದ ಬಂದ ಹುಡುಗಿಯೊಬ್ಬಳು ‘ಕಂಗ್ರ್ಯಾಟ್ಸ್ ರೀ. ಎಷ್ಟು ಛಲೋ ಮಾಡಿದ್ರಿ ಪರ್ಫಾರ್ಮೆನ್ಸ್ ನಾ..’ ಎಂದು ನನ್ನ ಕೈ ಕುಲುಕಿದಳು.

ಒಂದು ಕ್ಷಣ ನಾನು ದಿಗ್ಭ್ರಮೆಗೆ ಒಳಗಾದವನಂತೆ ನಿಂತುಬಿಟ್ಟೆ. ಅವಳು ಕೈ ಕುಲುಕಿದ್ದು ನನ್ನ ಹೃದಯವನ್ನೇ ಕುಲುಕಿದಂತೆ ಅನಿಸತೊಡಗಿತು. ಅಂದ ಹಾಗೆ ಅವಳು ಕೂಡ ಬೇರೊಂದು ಕಾಲೇಜಿನಿಂದ ಶಿಬಿರಕ್ಕೆ ಬಂದ್ದಿದಳು.

ರಾತ್ರಿ ಎಲ್ಲರದ್ದೂ ಊಟ ಆಯಿತು. ಅವಳನ್ನು ಮತ್ತೆ ಮತ್ತೆ ನೋಡಬೇಕು, ಮಾತನಾಡಿಸಬೇಕು ಅನಿಸಿತ್ತು. ನಿದ್ದೆ ಬರುತ್ತಿರಲಿಲ್ಲ. ಕಣ್ ಮುಚ್ಚಿದರೆ ಅವಳೇ ಕಾಣಿಸತೊಡಗಿದಳು. ತಡೆಯಲಾರದೆ ಹಾಸಿಗೆಯಿಂದ ಎದ್ದು ಅವಳಿದ್ದ ಕಡೆಗೆ ಹೋಗೋಣ ಎಂದು ಹೊರಟಿದ್ದೆ. ವಾಚ್‌ಮನ್ ಇನ್ನೂ ಎಚ್ಚರವಾಗಿದ್ದ. ಬೇಸರಗೊಂಡು ಮತ್ತೆ ಬಂದು ಮಲಗಿಕೊಂಡೆ.

ಅವಳನ್ನು ನೋಡಲು ಬೆಳಗ್ಗೆವರೆಗೂ ಕಾಯದೆ ಬೇರೆ ದಾರಿ ಇರಲಿಲ್ಲ. ಅಂತೂ ಬೆಳಗಾಯಿತು. ಟೀ ಟೈಮಿನಲ್ಲಿ ಅವಳನ್ನು ಮಾತನಾಡಿಸಬೇಕು ಅಂದುಕೊಂಡೆ. ಅತ್ತಿತ್ತ ಹುಡುಕಾಡಿದೆ. ಅಲ್ಲೊಂದು ಕಡೆ ನಿಂತು ಅವಳು ಟೀ ಕುಡಿಯುತ್ತಿದ್ದಳು. ಆಶ್ಚರ್ಯ ಅನ್ನುವಂತೆ ಅವಳ ದೃಷ್ಟಿ ನನ್ನೆಡೆಗೇ ಇತ್ತು. ಅವಳನ್ನು ಕಂಡೊಡನೆಯೇ ಏನೋ ಅಂಜಿಕೆ ಮೂಡಿ ಮಾತನಾಡಿಸಲಾಗಲಿಲ್ಲ. ಹೀಗೆ ನಾಲ್ಕೈದು ದಿನ ಮಾತಿಲ್ಲದೆ ಬರೀ ಕಣ್ಣೋಟದಲ್ಲೇ ಕಾಲ ಕಳೆಯಿತು. ಅಷ್ಟರಲ್ಲಿ ಶಿಬಿರದ ಕೊನೆಯ ದಿನವೂ ಬಂದುಬಿಟ್ಟಿತು. ಆದರೂ ನಾನು ಮಾತನಾಡಿಸಲಾಗಲಿಲ್ಲ. 

ಎಲ್ಲರೂ ಅವರವರ ಊರುಗಳಿಗೆ ಬಸ್ ಹತ್ತಲು ಸಿದ್ಧರಾಗುತ್ತಿದ್ದರು. ಈಗಲಾದರೂ ಅವಳನ್ನು ಮಾತನಾಡಿಸೋಣ ಅಂತ ನಿರ್ಧರಿಸಿ ಬಂದೆ. ಆದರೆ ಅವಳು ಬೇರೊಂದು ಬಸ್ಸಿನ ಬಳಿ ನಿಂತು ಬೇರೊಬ್ಬ ಹುಡುಗನ ಬಳಿ ಮಾತನಾಡುತ್ತಿದ್ದಳು. ನಂತರ ತಿಳೀತು ಅವರಿಬ್ಬರೂ ಪ್ರೇಮಿಗಳು ಎಂದು. ಈ ವಿಷಯ ತಡೆದುಕೊಳ್ಳದಷ್ಟು ನೋವನ್ನೇನೂ ನೀಡಲಿಲ್ಲ. ಆದರೂ ಆ ಕ್ಷಣಕ್ಕೆ ಮನಸ್ಸು ಸಣ್ಣಗೆ ಕಣ್ಣೀರಾದದ್ದು ಸುಳ್ಳಲ್ಲ. ಯಾಕೆ ಅಂತ ಮಾತ್ರ ಈಗಲೂ ತಿಳೀತಿಲ್ಲ. 

- ದಸ್ತಗೀರ ನದಾಫ್ ಯಳಸಂಗಿ ಪತ್ರಿಕೋದ್ಯಮ ವಿದ್ಯಾರ್ಥಿ, ಕಲಬುರಗಿ