Asianet Suvarna News Asianet Suvarna News

ಮಾನಸಿಕ ಬಳಲಿಕೆಯಿಂದ ಹೊರ ಬರಲು ಟಿಪ್ಸ್‌!

ಕೆಲವೊಮ್ಮೆ ಹೀಗಾಗುತ್ತದೆ. ಭಾವನೆಗಳಿಗೆ ಬರಗಾಲ ಬರುತ್ತದೆ. ದುಃಖ, ನೋವು ಅತಿಯಾಗಿ ನಂತರ ಯಾವ ಭಾವನೆಯೂ ಇಲ್ಲದ ಹಂತಕ್ಕೆ ಜಾರಿಬಿಡುತ್ತೇವೆ. ಯಾವುದೂ ಖುಷಿ ಕೊಡುವುದಿಲ್ಲ, ಯಾವುದೂ ಬಾಧಿಸುವುದಿಲ್ಲ. ಅಕ್ಷರಶಃ  ಮನಸ್ಸು ಖಾಲಿ ಎನಿಸಿಬಿಡುತ್ತದೆ. 

6 Tactics to overcome emotional exhaustion
Author
Bangalore, First Published Jul 3, 2019, 9:48 AM IST
  • Facebook
  • Twitter
  • Whatsapp

ಹಲವು ಸಮಯದಿಂದ ದುಃಖ, ಸತತ ಸೋಲು, ನೋವುಂಡ ಮನಸ್ಸು ಕಡೆಗೊಮ್ಮೆ ದುಃಖವೂ ಬಾಧಿಸದ, ಸುಖವೂ ಸಾಧಿಸದ, ಅಳುವೂ ಬಾರದ, ನಗುವೂ ಬಾರದ, ಯಾವುದೂ ಕುತೂಹಲ ಮೂಡಿಸದ, ಆಶ್ಚರ್ಯ ತಾರದ ಸ್ಥಿತಿ ತಲುಪುತ್ತದೆ. ಅದೇ ಭಾವನೆಗಳ ಬರಗಾಲ. ಈ ಸ್ಥಿತಿ ಮನುಷ್ಯರೆನಿಸುವುದಿಲ್ಲ. ಮಾನಸಿಕ ಬಳಲಿಕೆಯಿಂದಾಗಿ ಕೊರಡಾಗಿಬಿಟ್ಟಿರುತ್ತೇವೆ. ಇಂಥ ಸಂದರ್ಭದಲ್ಲಿ ಮತ್ತೆ ರಿಚಾರ್ಜ್ ಆಗುವುದು ಹೇಗೆ? ಭಾವನೆಗಳ ಮಳೆ ಸುರಿದು ಮನಸ್ಸು ಮತ್ತೆ ಹದವಾಗೋದು ಹೇಗೆ? ಇದಕ್ಕೆ ನೀವೇನು ಮಾಡಬೇಕು?

ಡಿಪ್ರೆಷನ್ ಇದೆ ಎನ್ನೋದು ಗೊತ್ತಾಗೋದು ಹೇಗೆ?

1. ಮರುಕಕ್ಕೆ ಸಮಯ ನಿಗದಿ ಮಾಡಿ

ನಿಮಗೆ ಅತಿಯಾಗಿ ನೋವುಣಿಸಿದ ಆ ಸಂದರ್ಭಗಳ ಬಗ್ಗೆ ಯೋಚಿಸಿ, ಕಣ್ಣೀರಾಗಲು ಸಮಯ ನಿಗದಿ ಮಾಡಿಕೊಳ್ಳಿ. ಇಂದು ಪೂರ್ತಿ ನಾನು ಸಮಾಧಾನವಾಗುವಷ್ಟು ಈ ವಿಷಯವನ್ನೇ ಯೋಚಿಸಿ ಎಷ್ಟು ಬೇಕೋ ಅಷ್ಟು ಅತ್ತು ಬಿಡುತ್ತೇನೆ. ನಾಳೆಯಿಂದ ಮತ್ತೆ ಈ ವಿಷಯಕ್ಕೆ ನನ್ನ ಬದುಕಿನಲ್ಲಿ ಯಾವ ಬೆಲೆಯೂ ಇಲ್ಲ ಎಂದುಕೊಳ್ಳಿ. ಆಗ ದುಃಖಕ್ಕೊಂದು ಎಕ್ಸ್‌ಪೈರಿ ಡೇಟ್ ಇರುತ್ತದೆ.  ಮನಸ್ಸು ನೋವಿನ ಎಲ್ಲ ತುಂಡುತುಂಡುಗಳನ್ನೂ ಒಟ್ಟಾಗಿ ಜೋಡಿಸಿ, ಕೂಡಿಸಿ ದುಃಖದ ಕಟ್ಟೆ ತುಂಬಿಸಿಕೊಂಡು ಒಡೆದುಬಿಡುತ್ತದೆ. ಒಮ್ಮೆ ಒಳಗೆ ಮೋಡ ಕಟ್ಟಿದ್ದು ಕರಗಿದರೆ ಬಹಳಷ್ಟು ಹಾಯೆನಿಸುತ್ತದೆ. ಮರುದಿನದಿಂದ ಆ ಚಿಂತೆಗೆ ನಿಮ್ಮ ಬದುಕಲ್ಲಿ ಜಾಗವಿಲ್ಲ ಎಂದು ಮನಸ್ಸನ್ನು ತಯಾರು ಮಾಡಿದ್ದೀರಾದ್ದರಿಂದ ಅದು ನಿಮಗೆ ಎದ್ದು ನಿಲ್ಲಲು ಮತ್ತಷ್ಟು ಬಲ ಕೊಡುತ್ತದೆ. 

2. ಇತರರ ಕಷ್ಟಗಳನ್ನು, ಅವರು ಅದನ್ನು ಮೀರಿ ನಿಂತ ಕತೆಗಳನ್ನು ಓದಿ

ಕಷ್ಟ ಎಂಬುದು ನಿಮ್ಮೊಬ್ಬರಿಗೇ ಅಲ್ಲ. ಎಲ್ಲರಿಗೂ ಬರುತ್ತದೆ. ಹೀಗಾಗಿ, ನಿಮ್ಮಂತೆಯೇ ಕಷ್ಟಗಳನ್ನು ಅನುಭವಿಸಿದ, ಅದರಿಂದ ಹೊರಬಂದು ಯಶಸ್ಸು ಸಾಧಿಸಿದ ಕತೆಗಳಿಗಾಗಿ ಗೂಗಲ್‌ನಲ್ಲಿ ತಡಕಾಡಿ. ಸಾವಿರಾರು ಕತೆಗಳು ಸಿಗುತ್ತವೆ. ಅಂಥವನ್ನು ಓದಿ. ನಿಮಗೆ ಗೊತ್ತಿಲ್ಲದೆಯೇ ಅದೆಷ್ಟೋ ರಿಲೀಫ್ ಸಿಗುತ್ತದೆ. ಶ್ರೀಮಂತರು, ಫೇಮಸ್ ಆದವರಿಗೂ ನೋವುಗಳು ತಪ್ಪಿದ್ದಲ್ಲ. ಉದಾಹರಣೆಗೆ ಸತತ ಅಬಾರ್ಶನ್‌ನಿಂದ ನೀವು ಕಂಗೆಟ್ಟಿದ್ದರೆ, ಮಿಶೆಲ್ ಒಬಾಮಾ ಕೂಡಾ ಅಬಾರ್ಶನ್ ಆಗಿದ್ದರಿಂದ ಇನ್‌ವಿಟ್ರೋ ಫರ್ಟಿಲೈಜೇಶನ್ ಮೂಲಕ ಎರಡು ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದು, ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಝುಕರ್ಬರ್ಗ್ ಪತ್ನಿ ಸತತ ಅಬಾರ್ಶನ್‌‌ಗಳ ಬಳಿಕ ಎಕ್ಟೋಪಿಕ್ ಪ್ರಗ್ನೆನ್ಸಿ ಮೊರೆ ಹೋದಂತ ಕತೆಗಳು ಕಷ್ಟಗಳು ಯಾರನ್ನೂ ಬಿಡುವುದಿಲ್ಲ ಎಂಬುದನ್ನು ಅರ್ಥ ಮಾಡಿಸುತ್ತವೆ. ಈ ಬಾಳಿನ ಕಷ್ಟದಲ್ಲಿ ನಾನು ಒಂಟಿಯಲ್ಲ, ಇವೆಲ್ಲಕ್ಕೂ ಒಂದು ಅಂತ್ಯವಿದೆ ಎಂಬ ಭಾವನೆಯೇ ಚೇತೋಹಾರಿಯಾದುದು. ಯಶಸ್ಸು ಕೈಗೆಟುಕದ್ದೇನೂ ಅಲ್ಲ ಎನಿಸಿಬಿಡುತ್ತದೆ. ನಿಮ್ಮ ಸುತ್ತಮುತ್ತಲೇ ಹಲವರು ನೋವು, ಸೋಲುಗಳನ್ನನುಭವಿಸಿರುತ್ತಾರೆ. ಅಂಥವರೊಂದಿಗೆ ಮಾತನಾಡಿ. ಇದು ಕೌನ್ಸೆಲಿಂಗ್‌ನಂತೆ ಕೆಲಸ ಮಾಡುತ್ತದೆ. 

ಮನಸ್ಸಿನ ಸಮಸ್ಯೆಗೊಂದು ಪರಿಹಾರ!

3. ಬ್ರೇಕ್ ತೆಗೆದುಕೊಳ್ಳಿ

ಕೆಲವೊಮ್ಮೆ ಅತಿಯಾದ ಒತ್ತಡವೂ ನಿಮ್ಮ ಭಾವನೆಗಳ ಬರಗಾಲಕ್ಕೆ ಕಾರಣವಾದೀತು. ಬಹಳ ಸಮಯದಿಂದ ಸ್ಟ್ರೆಸ್‌ನಲ್ಲಿಯೇ ಇದ್ದರೆ ಮಾನಸಿಕ ಬಳಲಿಕೆಯಾಗುವುದು ಸಾಮಾನ್ಯ. ಆಗ ದೈನಂದಿನ ದಿನಚರಿಯಿಂದ ಒಂದು ಪುಟ್ಟ ಬ್ರೇಕ್ ತೆಗೆದುಕೊಳ್ಳಿ. ಗಂಭೀರ ಕಾಯಿಲೆಗಳಿಂದ ನೀವು ಚಿಂತೆಗೀಡಾಗಿ ಮಾನಸಿಕ ಬಳಲಿಕೆ ಅನುಭವಿಸುತ್ತಿದ್ದರೆ ಬ್ರೇಕ್ ತೆಗೆದುಕೊಳ್ಳಲಾಗದು. ಆದರೆ, ಇತರೆ ಸಂದರ್ಭಗಳಲ್ಲಿ ಖಂಡಿತಾ ಬ್ರೇಕ್ ತೆಗೆದುಕೊಳ್ಳಬಹುದು. ಉದಾಹರಣೆಗೆ ಸಂಗಾತಿಯೊಂದಿಗೆ ಪದೇ ಪದೆ ಜಗಳ, ಬಗೆಹರಿಯದ, ಕೊನೆಮೊದಲಿಲ್ಲದ ವಾಗ್ವಾದಗಳಿಂದ ನೀವು ಬೇಸತ್ತು ಹೋಗಿದ್ದರೆ, ಅವರೊಂದಿಗೆ ಈ ಬಗ್ಗೆ ಚರ್ಚಿಸಿ, ಕೆಲ ದಿನಗಳ ಕಾಲ ಬ್ರೇಕ್ ತೆಗೆದುಕೊಳ್ಳೋಣ ಎಂದು ನಿರ್ಧರಿಸಿ. ಈ ಸಮಯದಲ್ಲಿ ನಿಮ್ಮ ತವರಿಗೆ ಹೋಗುವುದು, ಗೆಳೆಯರ ಭೇಟಿ, ಟ್ರಿಪ್ ಹೋಗುವುದು ಹೀಗೆ ಏನಾದರೊಂದು ಮಾಡಿ ಕೆಲ ದಿನಗಳ ಕಾಲ ಜಗಳವಾಗುತ್ತಿದ್ದ ಸಂಗತಿಗಳಿಗೆ ಸಂಪೂರ್ಣ ಬ್ರೇಕ್ ಕೊಡಿ. ಇದರಿಂದ ಆತ್ಮಾವಲೋಕನಕ್ಕೂ ನಿಮಗೆ ಹಾಗೂ ನಿಮ್ಮವರಿಗೆ ಸಮಯ ಸಿಗುತ್ತದೆ. ಇಂಥ ಬ್ರೇಕ್‌ಗಳು ಮಾನಸಿಕವಾಗಿ ಮತ್ತೆ ನಿಮ್ಮನ್ನು ರಿಚಾರ್ಜ್ ಮಾಡುತ್ತವಲ್ಲದೆ, ಪರಿಹಾರ ಕಂಡುಕೊಳ್ಳಲೂ ಸಮಯ ನೀಡುತ್ತವೆ. ಎಲ್ಲ ವಿಷಯಗಳನ್ನೂ ಎಮರ್ಜೆನ್ಸಿ ಎಂದು ಟ್ರೀಟ್ ಮಾಡುವುದು ಬಿಟ್ಟು, ನಿಧಾನವಾಗಿ ಸರಿ ಹೋಗಲು ಅವಕಾಶ ಮಾಡಿಕೊಡಿ. ಬ್ರೇಕ್ ಕೆ ಬಾದ್ ಬಹಳಷ್ಟು ಬದಲಾಗಿರುತ್ತವೆ.

4. ಹತ್ತಿರದವರೊಂದಿಗೆ ಹಂಚಿಕೊಳ್ಳಿ

ನಿಮಗೇನಾಗುತ್ತಿದೆ, ಯಾಕೆ ಭಾವನಾತ್ಮಕವಾಗಿ ಬರಡಾಗಿದ್ದೀರಿ ಎಂಬುದನ್ನು ಪತಿ, ಪತ್ನಿ, ಗೆಳೆಯ ಅಥವಾ ಅಮ್ಮನೊಂದಿಗೆ ಹೇಳಿಕೊಳ್ಳಿ. ಇನ್ನೊಬ್ಬರ ಸಮಾಧಾನದ ಮಾತುಗಳಿಗೆ ಗಾಯಗಳನ್ನು ಒಣಗಿಸುವ ತಾಕತ್ತು ಇದ್ದೇ ಇದೆ. ಅಲ್ಲದೆ, ಹೇಳಿಕೊಂಡಾಗ ಮನಸ್ಸಿನ ಗೋಜಲು ಸ್ಪಷ್ಟವಾಗುತ್ತದೆ. ಇದು ನಿಮ್ಮ ಯೋಚನೆಗಳೂ ಸರಾಗವಾಗಿ ಸಾಗುವಂತೆ, ಪರಿಹಾರಕ್ಕೆ ದಾರಿ ಸುಗಮ ಮಾಡಿಕೊಡುತ್ತವೆ.

ಬಾಣಂತಿಗೇಕೆ ಬೇಸರವಾಗುತ್ತದೆ? ಖಿನ್ನತೆ ಬಗ್ಗೆ ಹುಷಾರ್

5. ಬದುಕನ್ನು ಕುಗ್ಗಿಸಬೇಡಿ

ಯಾವುದೋ ಒಂದು ಸಮಸ್ಯೆಯಿಂದ ಕುಗ್ಗಿ ನಿಮ್ಮ ಇಡೀ ಬದುಕನ್ನು ಕೇವಲ ಆ ಸಮಸ್ಯೆಯೊಂದಕ್ಕೇ ಕುಗ್ಗಿಸಬೇಡಿ. ನಿಮ್ಮ ಬದುಕು ಅಷ್ಟು ಸಣ್ಣದಲ್ಲ. ಸಮಸ್ಯೆಯ ಹೊರತಾಗಿಯೂ ಕೆಲಸ, ಕುಟುಂಬ, ನಿಮ್ಮ ಹವ್ಯಾಸಗಳು, ಇಷ್ಟಕಷ್ಟಗಳೆಂದು ಹಲವು ಆಯಾಮಗಳು ನಿಮ್ಮ ಬದುಕಿಗಿವೆ. ಸಮಸ್ಯೆಯ ಹೊರತಾಗಿ ಉಳಿದ ಬದುಕನ್ನು ಎಷ್ಟು ಸಾಧ್ಯವೋ ಅಷ್ಟು ಹಿಗ್ಗಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಹೊಸ ಹವ್ಯಾಸ ಬೆಳೆಸಿಕೊಳ್ಳಿ, ಇತರರಿಗೆ ಸಹಾಯ ಮಾಡಿ, ಹೊಸತನ್ನು ಕಲಿಯಿರಿ. ಇಷ್ಟವಿರುವ ಎಲ್ಲಕ್ಕೂ ಸಮಯ ಕೊಟ್ಟುಕೊಳ್ಳಿ. ಬದುಕು ಇಂಥ ಚಟುವಟಿಕೆಗಳಿಂದ ತುಂಬಿ ಹೋದಾಗ ಯಾವುದೋ ಒಂದು ಸಮಸ್ಯೆಯ ಬಗ್ಗೆ ಕೊರಗುತ್ತಾ ಕೂರಲೂ ಸಮಯವಿರುವುದಿಲ್ಲ, ಜೊತೆಗೆ ಆ ಸಮಸ್ಯೆ ಸಣ್ಣದಾಗಿ ಕಾಣತೊಡಗುತ್ತದೆ.  

6. ಹಳೆಯ ಗೆಲುವುಗಳನ್ನು ನೆನಪಿಸಿಕೊಳ್ಳಿ

ಬದುಕು ಸೋಲು ಗೆಲುವುಗಳ ರೋಲರ್ ಕೋಸ್ಟರ್. ಹಿಂದೆ ಹಲವು ಬಾರಿ ನೋವಿನ, ಸೋಲಿನ ಸಂದರ್ಭಗಳು ಬಂದಿರುತ್ತವೆ. ಅವನ್ನೆಲ್ಲ ದಾಟಿ ಬಂದ ಬಗೆಯನ್ನು ನೆನಪಿಸಿಕೊಳ್ಳಿ. ಕಷ್ಟಗಳನ್ನು ಗೆಲ್ಲಲು ನೀವು ಶಕ್ತರೆಂಬುದನ್ನು ಅವು ಹೇಳುತ್ತವೆ. ಎಸ್ಸೆಸ್ಸೆಲ್ಸಿಯಲ್ಲಿದ್ದಾಗ ಮ್ಯಾಥ್ಸ್ ಪಾಸ್ ಮಾಡುವಷ್ಟು ಕಷ್ಟ ಇನ್ನೊಂದಿಲ್ಲ ಎನಿಸಿರಬಹುದು. ಅದಕ್ಕಾಗಿ ನೀವು ಹರಸಾಹಸ ಮಾಡಿರಬಹುದು, ದೇವರಿಗೆ ಇನ್ನಿಲ್ಲದ ಆಸೆ ತೋರಿಸಿರಬಹುದು. ಈಗ ನೆನೆಸಿಕೊಂಡರೆ ಅದೊಂದು ಸಣ್ಣ ಕಷ್ಟವಾಗಿ ಕಾಣುತ್ತದೆ. ಆದರೆ ಆ ವಯಸ್ಸಿನಲ್ಲಿ ಅದೇ ದೊಡ್ಡದಾಗಿತ್ತು, ಮತ್ತು ನೀವದನ್ನು ದಾಟಿ ಬಂದಿದ್ದೀರಿ. ಇಂದಿನ ಕಷ್ಟಗಳೂ ಹಾಗೆಯೇ. ದಾಟಲು ಒದ್ದಾಡಬೇಕು. ಒಮ್ಮೆ ದಾಟಿದ ಮೇಲೆ ಅದಕ್ಕಾಗಿ ನಾನು ಅಷ್ಟೆಲ್ಲ ತಲೆ ಕೆಡಿಸಿಕೊಳ್ಳುವ ಅಗತ್ಯವಿತ್ತಾ ಎನಿಸುತ್ತದೆ. 

Follow Us:
Download App:
  • android
  • ios