ಯಾದಗಿರಿ(ಫೆ.23): ವಸತಿ ನಿಲಯದಲ್ಲಿ ಚಪಾತಿ ಹಂಚಿಕೆ ವಿಚಾರದಲ್ಲಿ ನಡೆದ ಕ್ಷುಲ್ಲಕ ಜಗಳ, ಯುವಕನೊಬ್ಬನ ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ. ಹಾಡುಹಗಲೇ ಯುವಕನೊಬ್ಬನನ್ನು ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾದ ಘಟನೆ ಜಿಲ್ಲೆಯ ಗುರುಮಠಕಲ್ ಪಟ್ಟಣದ ಮುಖ್ಯ ರಸ್ತೆಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದ್ದು, ಇದಕ್ಕೆ ಸಾಕ್ಷಿಯಾದ ಸಾರ್ವಜನಿಕರು ಆತಂಕಗೊಂಡು ಪರಾರಿಯಾಗಿದ್ದಾರೆ. 

ಗುರುಮಠಕಲ್ ಪಟ್ಟಣದ ಸ್ವಾಮಿ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಮೋಹನ್ ಪವಾರ್ ಕೊಲೆಯಾದ ವಿದ್ಯಾರ್ಥಿ. ಬೋರ ಬಂಡಾ ಗ್ರಾಮದ ಈ ವಿದ್ಯಾರ್ಥಿ ಗುರುಮಠಕಲ್ ಪಟ್ಟಣದ ಸರ್ಕಾರಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ವಾಸವಿದ್ದ. ವಸತಿ ನಿಲಯದಲ್ಲಿ ಶುಕ್ರವಾರ ಚಪಾತಿ ಹಂಚಿಕೆ ವಿಚಾರವಾಗಿ ಯುವಕರಿಬ್ಬರ ಜೊತೆ ವಾಗ್ವಾದವಾಗಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಸಂಜೆ ಪಟ್ಟಣದ ಗಂಜ್ ಹತ್ತಿರ ಮತ್ತೆ ಮೋಹನ್ ಹಾಗೂ ಮತ್ತಿಬ್ಬರ ನಡುವೆ ವಾಗ್ವಾದ ನಡೆದಿದ್ದಾಗ, ಅಲ್ಲಿದ್ದ ಸ್ಥಳೀಯ ಪೊಲೀಸರು ಮೋಹನ್ ಹಾಗೂ ಯುವಕರ ತಂಡಕ್ಕೆ ಬುದ್ಧಿವಾದ ಹೇಳಿ ಕಳುಹಿಸಿದ್ದರು ಎನ್ನಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಶನಿವಾರ ಮಧ್ಯಾಹ್ನ ತನ್ನ ಇಬ್ಬರು ಸ್ನೇಹಿತರೊಡನೆ ಹೇರ್ ಕಟಿಂಗ್ ಮಾಡಿಸಲು ನ್ಯೂ ಲುಕ್ ಸೆಲೂನ್‌ಗೆ ಮೋಹನ್ ಬಂದಿದ್ದ. ಸ್ನೇಹಿತರಿಬ್ಬರು ಸೆಲೂನ್ ಒಳಗಡೆ ಇದ್ದಾಗ, 12.20 ರ ಸುಮಾರಿಗೆ ಹೊರಗಡೆ ಬಂದು ಮೊಬೈಲ್‌ನಲ್ಲಿ ಮಾತನಾಡುತ್ತ ನಿಂತಿದ್ದ ಮೋಹನ್‌ನನ್ನು ಬೈಕಿನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಚಾಕುವಿನಿಂದ ಹೊಟ್ಟೆ ಹಾಗೂ ಎದೆಗೆ ಇರಿದು ಪರಾರಿಯಾಗಿದ್ದಾರೆ. 

ಗುರುಮಠಕಲ್ ಪಟ್ಟಣದಲ್ಲಿ ಜನನಿಬಿಡ ಪ್ರದೇಶವಾಗಿರುವ ಇಲ್ಲಿ, ಹಾಡುಹಗಲೇ ಇಂತಹ ಘಟನೆ ನಡೆದಾಗ ಸುತ್ತಮುತ್ತಲು ಇದ್ದ 20-25 ಕ್ಕೂ ಹೆಚ್ಚು ಅಂಗಡಿಗಳು ಆತಂಕಗೊಂಡು ದಿಢೀರನೇ ಬಾಗಿಲು ಮುಚ್ಚಿದರೆ, ಅಲ್ಲಿ ಓಡಾಡುತ್ತಿದ್ದ ಸಾರ್ವಜನಿಕರು ಆತಂಕಗೊಂಡು ಕಾಲ್ಕಿತ್ತರು. ಗಾಯ ಗೊಂಡು ನರಳುತ್ತಿದ್ದ ಮೋಹನ್‌ನನ್ನು ಸ್ನೇಹಿತರಿಬ್ಬರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಗಂಭೀರ ಗಾಯ ಗಳಿಂದಾಗಿ ಹಾಗೂ ತೀವ್ರ ರಕ್ತಸ್ರಾವದಿಂದ ಮೋಹನ್ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೋ ನವಣೆ ಹಾಗೂ ಡಿಎಸ್ಪಿ ಶರಣಪ್ಪ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ದ್ದಾರೆ. ಮೃತ ವಿದ್ಯಾರ್ಥಿ ಸ್ನೇಹಿತ ವೆಂಕಟೇಶ ಹೇಳಿಕೆಯಂತೆ, ತೈರೀಮ್ ಹಾಗೂ ಮಹಿಪಾಲ್ ಎನ್ನು ವವರಿಬ್ಬರು ಚಾಕುವಿನಿಂದ ಇರಿದಿದ್ದಾರೆ ಎಂದು ಮೋಹನ್ ತಂದೆ ಬಾಲ್ಯಾ ನಾಯಕ್ ಗುರುಮಠಕಲ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಕೊಲೆಗಾರರ ಪತ್ತೆಗೆ ಜಾಲ ಬೀಸಿದ್ದಾರೆ.