ಕೊರೋನಾ ಭೀತಿಗೆ ವಾಪಸ್ಸಾಗಿದ್ದ ವಲಸಿಗರು: ಮತ್ತೇ ಬೆಂಗಳೂರಿನತ್ತ ಕಾರ್ಮಿಕರ ಚಿತ್ತ!
ಈ ಹನ್ನೆರಡು ದಿನಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಬೆಂಗಳೂರಿಗೆ| ಯಾದಗಿರಿ, ಶಹಾಪುರ, ಸುರಪುರದಿಂದ ಬೆಂಗಳೂರಿಗೆ ದಿನವೊಂದಕ್ಕೆ ಹತ್ತಾರು ಬಸ್‌ಗಳು ಫುಲ್| ಹನ್ನೆರೆಡು ದಿನಗಳಲ್ಲಿ ಬೆಂಗಳೂರಿಗೆ ತೆರಳಿದ ಐದು ಸಾವಿರಕ್ಕೂ ಹೆಚ್ಚು ಕಾರ್ಮಿಕರು|
ಆನಂದ್ ಎಂ. ಸೌದಿ
ಯಾದಗಿರಿ(ಜೂ.03): ಕೊರೋನಾ ಮಹಾಮಾರಿ ಹಾಗೂ ಲಾಕ್‌ಡೌನ್ ಎಫೆಕ್ಟ್‌ನಿಂದಾಗಿ, ಆತಂಕದಲ್ಲೇ ತಮ್ಮೂರು ಸೇರಿದ್ದ ಕೂಲಿ ಕಾರ್ಮಿಕರು ಹಾಗೂ ವಲಸಿಗರು ಇದೀಗ ಮತ್ತೇ ಬೆಂಗಳೂರಿನತ್ತ ದೌಡಾಯಿಸುತ್ತಿದ್ದಾರೆ. ರಾಜ್ಯದಲ್ಲೇ ಅತಿ ಹೆಚ್ಚು ವಲಸಿಗರ ವಾಪಸ್ಸಾತಿಗೆ (ಮಾ.24 ರಿಂದ ಮೇ 25 ರವರೆಗೆ 1.5 ಲಕ್ಷ ವಲಸಿಗರು) ಸಾಕ್ಷಿಯಾದ ಯಾದಗಿರಿ ಜಿಲ್ಲೆಯಲ್ಲಿ ಗುಳೆ ಪರ್ವ ಮತ್ತೇ ಶುರುವಾಗಿದೆ.
ವಾಪಸ್ಸಾದ ವಲಸಿಗರಿಗೆಂದೇ, ಜಿಲ್ಲಾ ಪಂಚಾಯತ್ ಉದ್ಯೋಗ ಖಾತ್ರಿ ಯೋಜನೆಗಳನ್ನು ಸಮರೋಪಾದಿಯಲ್ಲಿ ರೂಪಿಸಲಾಗುತ್ತಿದ್ದರೂ, ಬಹುತೇಕ ಜನರ ಒಲವು ಮತ್ತೇ ಬೆಂಗಳೂರಿನತ್ತ ಸಾಗುವ ಬಸ್ಸುಗಳನ್ನು ಹತ್ತುವಂತೆ ಮಾಡುತ್ತಿವೆ. ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಜಾರ್ಖಂಡ್, ಓಡಿಸ್ಸಾ, ಬಿಹಾರ್ ಮುಂತಾದ ರಾಜ್ಯಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಕಾರ್ಮಿಕರು ಅವರವರ ರಾಜ್ಯಗಳಿಗೆ ವಾಪಸ್ಸಾಗಿದ್ದರಿಂದ ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕರ ಕೊರತೆ ಭಾರಿ ಪ್ರಮಾಣದಲ್ಲಿ ಕಂಡುಬಂದಿದೆ.
ಕೊರೋನಾ ಕಾಟ: ಯಾದಗಿರಿ ವ್ಯಕ್ತಿಯ ರಿಪೋರ್ಟ್‌ನಲ್ಲಿ ಗೊಂದಲವೋ ಗೊಂದಲ !
ಹೀಗಾಗಿ, ಹೆಚ್ಚಿನ ಹಣ (ಗಂಡಸರಿಗೆ 600-800 ರು., ಮಹಿಳೆಯರಿಗೆ 400-600 ರು.ಗಳು) ನೀಡುವುದಾಗಿ ಮೇಸ್ತ್ರಿ (ಗುಂಪಿನ ನಾಯಕ) ಮೂಲಕ ಇಲ್ಲಿನ ಕಾರ್ಮಿಕರಿಗೆ ಮನವೊಲೈಸಿ ಬೆಂಗಳೂರಿಗೆ ಕರೆದೊಯ್ಯಲಾಗುತ್ತಿದೆ ಅನ್ನೋದು ಏವೂರು ದೊಡ್ಡ ತಾಂಡಾದ ತುಳಜಾರಾಮ್ ಪವಾರ್ ಅಭಿಪ್ರಾಯ.
ಮೇ 20 ರಿಂದ ರಾಜ್ಯ ಸಾರಿಗೆ ಬಸ್ ಸಂಚಾರ ಆರಂಭಗೊಂಡಿದೆ. ಯಾದಗಿರಿ ಸೇರಿದಂತೆ ಜಿಲ್ಲೆಯ ಶಹಾಪುರ ಹಾಗೂ ಸುರಪುರ ಬಸ್ ನಿಲ್ದಾಣಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದೆ. ಜಿಲ್ಲೆಯಿಂದ ದಿನವೊಂದಕ್ಕೆ ಏನಿಲ್ಲವೆಂದರೂ 15-18 ಬಸ್‌ಗಳು ಬೆಂಗಳೂರಿನತ್ತ ತೆರಳುತ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರತಿ ಬಸ್‌ನಲ್ಲಿ 30 ಪ್ರಯಾಣಿಕರನ್ನು ಕುಳ್ಳಿರಿಸಲಾಗುತ್ತಿದೆ. ಈ ಹನ್ನೆರೆಡು ದಿನಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಬೆಂಗಳೂರಿಗೆ ತೆರಳಿದ್ದಾರೆ ಎನ್ನಲಾಗಿದೆ.
ಪ್ರತಿದಿನ 15-18 ಬಸ್‌ಗಳ ‘ಒನ್ ವೇ’ ಸಂಚಾರ (ಬೆಂಗಳೂರಿಗೆ ತೆರಳುವುದು ಮಾತ್ರ) ನಡೆದಿದೆ. ಒಂದು ಬಸ್ಸಿನಿಂದ 15-18 ಸಾವಿರ ಹಣ ಸಂಗ್ರಹವಾಗುತ್ತಿದೆ. ಯಾದಗಿರಿಯಿಂದ ದಿನಕ್ಕೆ 10-11 ಬಸ್‌ಗಳು, ಶಹಾಪುರದಿಂದ 5-6 ಹಾಗೂ ಸುರಪುರದಿಂದ 3-4 ಬಸ್‌ಗಳ ಸಂಚಾರ ನಡೆದಿದೆ ಎಂದು ಈಶಾನ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಡಿಟಿಓ ರಮೇಶ ಪಾಟೀಲ್ ’ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿದರು.
ಕೊರೋನಾ ಕಾಲಘಟ್ಟದ ಭೀತಿಯಲ್ಲಿ ಜಿಲ್ಲೆಗೆ ವಾಪಸ್ಸಾಗಿದ್ದ ಕಾರ್ಮಿಕರ ಮತ್ತೇ ಗುಳೇ ಪರ್ವ ಆತಂಕ ಮೂಡಿಸಿದೆ. ಕಾರ್ಮಿಕರ/ವಲಸಿಗರ ಹಿತದೃಷ್ಟಿಯಿಂದ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಅವರ ಬದುಕಿಗೆ ಸರ್ಕಾರ ನೆರವಾಗಿದೆ. ಈಗಾಗಲೇ ಬೆಂಗಳೂರಿನಿಂದ ವಾಪಸ್ಸಾದವರಿಗೂ ಚೀಟಿ ನೀಡಿ ಉದ್ಯೋಗ ಖಾತ್ರಿ ಕೆಲಸ ಆರಂಭವಾಗಿದೆ. ಮಹಾನಗರಗಳತ್ತ ಹೆಜ್ಜೆ ಹಾಕುವವರ ಮನವೊಲಿಸಲಾಗುತ್ತದೆ ಎಂದು ಯಾದಗಿರಿ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಅವರು ಹೇಳಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಹಣ ಬೇಗ ಸಿಗುವುದಿಲ್ಲ, ಕಾರ್ಮಿಕರಿಗೆ ತಕ್ಷಣವೇ ದುಡ್ಡು ಅವಶ್ಯಕತೆ ಇರುತ್ತದೆ. ಅಲ್ಲದೆ, 100 ದಿನಗಳ ನಂತರ ಮುಂದೇನು ಅನ್ನೋ ಅಭಧ್ರತೆ ಕಾಡುತ್ತದೆ. ಹೆಚ್ಚಿನ ಹಣಕ್ಕಾಗಿ ಮಹಾನಗರಗಳಿಗೆ ದುಡಿಯಲು ಹೋಗುವುದರಿಂದ ಅವರ ಆರೋಗ್ಯ, ಶಿಕ್ಷಣಕ್ಕೆ ಅಪಾಯಕಾರಿಯಾದರೂ, ಇದು ಕಾರ್ಮಿಕರಿಗೆ ಅನಿವಾರ್ಯ ಎಂದು ಕಾರ್ಮಿಕ ರಾಜ್ಯ ಮುಖಂಡ ಕೆ.ಸೋಮಶೇಖರ್ ಅವರು ತಿಳಿಸಿದ್ದಾರೆ.