ಕೋಲಾರ(ಜೂ.20): ಪತಿಯ ಕಿರುಕುಳದ ಸಂಬಂಧ ದೂರು ನೀಡಲು ಹೋದ ತಮಗೆ ಸಹಾಯ ಮಾಡುವುದಾಗಿ ನಂಬಿಸಿ ಮನೆಗೆ ಬಂದ ಪೇದೆಯೊಬ್ಬರು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಡಿ.ಪಾರ್ವತಿ ಕೋಂ.ಗೋಪಾಲ ಎಂಬುವವರು ನಗರದ ಗಾಂಧಿವನದಲ್ಲಿ ಶುಕ್ರವಾರ ಮೌನ ಪ್ರತಿಭಟನೆ ನಡೆಸಿದರು.

ನನ್ನ ಪತಿಯ ಕಿರುಕುಳ ತಾಳಲಾರದೇ ದೂರು ನೀಡಲು ಹೋಗಿದ್ದ ಸಂದರ್ಭದಲ್ಲಿ ಶ್ರೀನಿವಾಸಪುರ ಠಾಣೆ ಪೇದೆ ರವೀಂದ್ರ ಎಂಬುವವರು ದೂರು ಪಡೆದು ಸಹಾಯ ಮಾಡುವ ಭರವಸೆ ನೀಡಿದ್ದರು. ನಂತರ ಮನೆಗೆ ಬಂದು ಬಲವಂತವಾಗಿ ಅತ್ಯಾಚಾರ ಎಸಗಿದ್ದಾರೆ. ಈ ಸಂಬಂಧ ಶ್ರೀನಿವಾಸಪುರ ಠಾಣೆ, ಮುಳಬಾಗಿಲು ಡಿವೈಎಸ್‌ಪಿ ಅವರಿಗೂ ದೂರು ನೀಡಿದ್ದು, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಹಲ್ಲೆ ಮಾಡಿದ ಆರೋಪ:

ಈ ನಡುವೆ ದೂರು ನೀಡಿ ಬರುತ್ತಿದ್ದಾಗ ಮಾರ್ಗಮಧ್ಯೆ ಒಮ್ಮೆ ಹಾಗೂ ಶ್ರೀನಿವಾಸಪುರ ತಹಸೀಲ್ದಾರ್‌ ಕಚೇರಿ ಸಮೀಪ ಒಮ್ಮೆ ಪೇದೆ ರವೀಂದ್ರ ಹಾಗೂ ಅವರ ಪತ್ನಿ ನನ್ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ತಲೆಗೆ 12 ಹೊಲಿಗೆ ಹಾಕಲಾಗಿದೆ ಎಂದು ಅಳಲು ತೋಡಿಕೊಂಡರು.

ಅಕ್ರಮ ಎಸಗಿದ ವೆಬ್‌ಸೈಟ್‌ಗೆ ಕುಕ್ಕೆ ದೇವಳ ಆನ್‌ಲೈನ್‌ ಸೇವೆಗೆ ಅವಕಾಶ

ಈ ಸಂಬಂಧ ನಾನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಮೊದಲು ಅತ್ಯಾಚಾರ ಎಸಗಿ ನಂತರ ಅವಾಚ್ಯಪದಗಳಿಂದ ನಿಂದಿಸಿ ಹಲ್ಲೆ ಮಾಡಿರುವ ಪೇದೆ ರವೀಂದ್ರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಈ ಧರಣಿ ನಡೆಸುತ್ತಿರುವುದಾಗಿ ಪಾರ್ವತಿ ತಿಳಿಸಿದರು.