Woman beats Corona : 158 ದಿನಗಳ ನಂತರ ಕೊರೋನಾ ಗೆದ್ದ ಕೊಪ್ಪಳದ ಮಹಿಳೆ

* 158 ದಿನ ಹೋರಾಡಿ ಕೋವಿಡ್‌ ಗೆದ್ದ ಮಹಿಳೆ, ವೈದ್ಯಕೀಯ ವಿಸ್ಮಯ

* ಸೋಂಕಿನಿಂದ ಶ್ವಾಸಕೋಶಕ್ಕೆ ಶೇ.96 ಹಾನಿ

* ಸರ್ಕಾರಿ ಆಸ್ಪತ್ರೆಯಲ್ಲಿ 104 ದಿನ ವೆಂಟಿಲೇಟರ್‌ನಲ್ಲಿದ್ದು ಚೇತರಿಕೆ

* 5 ತಿಂಗಳ ಬಳಿಕ ಕೊಪ್ಪಳದ ಗೀತಾಬಾಯಿ ಡಿಸ್ಜಾರ್ಜ್

Woman beats Coronavirus after 158 days Koppala Karnataka mah

ಕೊಪ್ಪಳ(ಡಿ. 08)  ಇದು ಯಮಲೋಕದ ಬಾಗಿಲು ಬಡಿದು ವಾಪಸ್‌ ಬಂದ ಗಟ್ಟಿಗಿತ್ತಿಯ ಕಥೆ. ಒಂದಲ್ಲ, ಎರಡಲ್ಲ ಬರೊಬ್ಬರಿ 158 ದಿನ ಅಂದರೆ ಐದು ತಿಂಗಳಿಗೂ ಹೆಚ್ಚುಕಾಲ ಆಸ್ಪತ್ರೆಯಲ್ಲಿ( Hospital)ಚಿಕಿತ್ಸೆ, ಅದರಲ್ಲಿ 104 ದಿನ ವೆಂಟಿಲೇಟರ್‌ನಲ್ಲೇ ಸಾವು-ಬದುಕಿನ ಹೋರಾಟ ನಡೆಸಿ ಬದುಕಿ ಬಂದ ಕೊಪ್ಪಳದ (Koppal) ಕೋವಿಡ್‌ (Coronavirus) ಸೋಂಕಿತೆಯೊಬ್ಬರ ಹೋರಾಟದ ಪ್ರಕರಣ!

ಕೋವಿಡ್‌ನಿಂದಾಗಿ ಶೇ.96ರಷ್ಟುಶ್ವಾಸಕೋಶ ಹಾನಿಗೊಳಗಾಗಿದ್ದ ಹಿನ್ನೆಲೆಯಲ್ಲಿ ವೈದ್ಯರೇ ಈಕೆ ಬದುಕುಳಿಯುವ ನಿರೀಕ್ಷೆ ಕೈಬಿಟ್ಟಿದ್ದರು. ಆದರೂ ಸುಮಾರು 2500 ಗಂಟೆಗಳಷ್ಟುಸುದೀರ್ಘ ಕಾಲ ವೆಂಟಿಲೇಟರ್‌ ವ್ಯವಸ್ಥೆಯಲ್ಲಿದ್ದರೂ ಗುಣಮುಖರಾಗಿ ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್‌ ರೋಗಿಯೊಬ್ಬರು 158 ದಿನಗಳಷ್ಟುಸುದೀರ್ಘ ಕಾಲ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿರುವುದು ರಾಜ್ಯದಲ್ಲಿ ಇದೇ ಮೊದಲು ಎಂದು ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದಾರೆ.

ಪವಾಡದಂತೆ ಬದುಕಿ ಬಂದರು:  ಯಲಬುರ್ಗಾ ತಾಲೂಕಿನ ಬೋದೂರು ಗ್ರಾಮದ ನಿವಾಸಿ ಗೀತಾಬಾಯಿ ಭರಮಪ್ಪ (46) ಕೋವಿಡ್‌ ಜತೆಗೆ ಹೋರಾಡಿ ಗೆದ್ದ ಮಹಿಳೆ. ಸಾಮಾನ್ಯವಾಗಿ ರೋಗಿಯ ಶ್ವಾಸಕೋಶ ಶೇ.80ಕ್ಕಿಂತ ಹೆಚ್ಚು ಹಾನಿಗೊಳಗಾಗಿದ್ದರೆ ಅಂಥ ವ್ಯಕ್ತಿ ಬದುಕುವುದು ಕಷ್ಟ. ಅಂಥದ್ದರಲ್ಲಿ ಕೋವಿಡ್‌ನಿಂದಾಗಿ ಗೀತಾಬಾಯಿ ಅವರ ಶ್ವಾಸಕೋಶ ಶೇ.96ರಷ್ಟುಹಾಳಾಗಿದ್ದರೂ ಪವಾಡ ಎಂಬಂತೆ ಬದುಕುಳಿದಿದ್ದಾರೆ. ಕೊಪ್ಪಳ ಜಿಲ್ಲಾಸ್ಪತ್ರೆಗೆ (ಜು.3ರಂದು) ಗೀತಾಬಾಯಿ ಚಿಕಿತ್ಸೆಗೆಂದು ದಾಖಲಾದಾಗ ವೈದ್ಯರೂ ಈಕೆ ಬದುಕುಳಿಯುವ ನಿರೀಕ್ಷೆ ಕೈಬಿಟ್ಟಿದ್ದರು. ಆದರೂ ಸವಾಲಿನ ರೀತಿಯಲ್ಲಿ ಉತ್ತಮ ಚಿಕಿತ್ಸೆ ನೀಡುವ ಮೂಲಕ ಗೀತಾಬಾಯಿ ಅವರಿಗೆ ವೈದ್ಯರು ಪುನರ್ಜನ್ಮ ನೀಡಿದ್ದಾರೆ.

ಕರ್ನಾಟಕದ ಶಾಲೆಗಳಿಗೆ ಮತ್ತೆ ಕೊರೋನಾ ಕಾಟ

ಸಾಮಾನ್ಯವಾಗಿ ಒಂದು ವಾರದ ಬಳಿಕ ವೆಂಟಿಲೇಟರ್‌ನಿಂದ ಹೊರಬರಬೇಕು. ಕೆಲ ವಿಶೇಷ, ಅಪರೂಪದ ಸಂದರ್ಭದಲ್ಲಿ 30-40 ದಿನಗಳ ಕಾಲ ಕೃತಕ ಉಸಿರಾಟದ ವ್ಯವಸ್ಥೆಯಲ್ಲಿ (ವೆಂಟಿಲೇಟರ್‌ನಲ್ಲಿ) ಚಿಕಿತ್ಸೆ ಪಡೆದವರಿದ್ದಾರೆ. ವೈದ್ಯಕೀಯ ಪರಿಭಾಷೆಯಲ್ಲಿ ಕ್ರಿಟಿಕಲ್‌ ಎಂಬ ಸಂದರ್ಭದಲ್ಲಿ 90 ದಿನಗಳವರೆಗೂ ರೋಗಿಗಳು ವೆಂಟಲೇಟರಿನಲ್ಲಿದ್ದ ಉದಾಹರಣೆಗಳಿವೆ. ಆದರೆ ಈ ಮಹಿಳೆ 104 ದಿನಗಳ ಸುದೀರ್ಘ ಕಾಲ ವೆಂಟಿಲೇಟರ್‌ನಲ್ಲಿದ್ದು ಚಿಕಿತ್ಸೆಗೆ ಸ್ಪಂದಿಸಿದ್ದಾಳೆ.

ವೆಂಟಿಲೇಟರ್‌ನಲ್ಲಿದ್ದ ಸಂದರ್ಭದಲ್ಲಿ ಪ್ರತಿ ನಿಮಿಷಕ್ಕೆ ಸರಾಸರಿ 10 ಲೀಟರ್‌ ಆಮ್ಲಜನಕ ಬಳಕೆಯಾಗುತ್ತಿತ್ತು. ಸದ್ಯ ಗೀತಾಬಾಯಿಯನ್ನು ಡಿಸ್ಚಾಜ್‌ರ್‍ ಮಾಡಿದ್ದರೂ ಸಹಜವಾಗಿ ಉಸಿರಾಟ ಕಷ್ಟವಾಗುತ್ತಿದೆ. ಹೀಗಾಗಿ ಪ್ರತಿ ನಿಮಿಷಕ್ಕೆ ಈಗ ಸುಮಾರು 1 ಲೀಟರ್‌ ಆಕ್ಸಿಜನ್‌ ನೀಡಬೇಕಾಗುತ್ತದೆ. ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಗೀತಾಬಾಯಿ ಆಗಾಗ ಆಕ್ಸಿಜನ್‌ ಸಹಾಯ ಇಲ್ಲದೆಯೂ ಉಸಿರಾಡಲು ಪ್ರಯತ್ನಿಸುತ್ತಿದ್ದಾರೆ.

ಧೈರ್ಯವೇ ಉಳಿಸಿತು: ಯಾವುದೇ ಪರಿಸ್ಥಿತಿಯಲ್ಲೂ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಧೈರ್ಯದಿಂದ ಪರಿಸ್ಥಿತಿ ಎದುರಿಸಿ, ಆಶಾವಾದಿಯಾಗಿದ್ದಲ್ಲಿ ರೋಗಿಗೆ ನೀಡುವ ಚಿಕಿತ್ಸೆ ಕೂಡ ಪರಿಣಾಮಕಾರಿಯಾಗುತ್ತದೆ ಎಂಬ ಮಾತು ಗೀತಾಬಾಯಿ ವಿಚಾರದಲ್ಲಿ ಅಕ್ಷರಶಃ ನಿಜವಾಗಿದೆ. ಐದು ತಿಂಗಳಷ್ಟುಸುದೀರ್ಘ ಆಸ್ಪತ್ರೆ ವಾಸದ ಬಳಿಕವೂ ಆಕೆ ಕೊಂಚವೂ ಎದೆಗುಂದಲಿಲ್ಲ, ಭಯಪಡಲಿಲ್ಲ, ನಕಾರಾತ್ಮಕ ಚಿಂತನೆ ಹತ್ತಿರವೂ ಸುಳಿಯಲು ಬಿಡಲಿಲ್ಲ. ಇದರಿಂದಾಗಿಯೇ ಆಕೆ ಈಗ ಹೊಸ ಬದುಕು ಪಡೆದಿದ್ದಾರೆ ಎಂದು ವೈದ್ಯರು ವಿಶ್ಲೇಷಣೆ ಮಾಡುತ್ತಾರೆ. ಮಧ್ಯವಯಸ್ಕರಾದ ಗೀತಾಬಾಯಿ ಅವರು ಮಧುಮೇಹ ಅಥವಾ ಬೇರಿನ್ಯಾವುದೇ ಗಂಭೀರ ರೋಗ ಲಕ್ಷಣ ಹೊಂದಿಲ್ಲದ ಕಾರಣ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದರು ಎನ್ನುತ್ತಾರೆ ಚಿಕಿತ್ಸೆ ನೀಡಿದ ಕೊಪ್ಪಳ ಜಿಲ್ಲಾಸ್ಪತ್ರೆಯ ವೈದ್ಯ ಡಾ.ವೇಣುಗೋಪಾಲ್‌.

ಸೋಂಕು ತಗುಲಿದ್ದು ಹೇಗೆ?:  ಗೀತಾಬಾಯಿ ಅವರುಸಂತೆಗೆಂದು ಹೋಗಿದ್ದ ಸಂದರ್ಭದಲ್ಲಿ ಕೋವಿಡ್‌ ಸೋಂಕು ತಗುಲಿತ್ತು. ಆರಂಭದಲ್ಲಿ ಮನೆಯಲ್ಲೇ ಚಿಕಿತ್ಸೆ ಪಡೆದಿದ್ದ ಅವರು ಆಸ್ಪತ್ರೆಗೆ ಬರುವ ಹೊತ್ತಿಗೆ ಪರಿಸ್ಥಿತಿ ಕೈಮೀರಿತ್ತು. ಗಂಭೀರ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದರು. ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಆರಂಭಿಸಿದಾಗ ಅದಾಗಲೇ ಇವರ ಶ್ವಾಸಕೋಶ ಶೇ.96ರಷ್ಟುಹಾನಿಗೊಳಗಾಗಿತ್ತು. ವೈದ್ಯರಿಗೆ ಗೀತಾಬಾಯಿ ಬದುಕುಳಿಯುವ ನಿರೀಕ್ಷೆ ಕಡಿಮೆ ಇದ್ದರೂ ಹೆಚ್ಚಿನ ನಿಗಾವಹಿಸಿ ಚಿಕಿತ್ಸೆ ನೀಡಿದರು. ಇದೀಗ ಆಕೆ ಬಹುತೇಕ ಸುಧಾರಿಸಿಕೊಳ್ಳುತ್ತಿದ್ದಾರೆ. ಸದ್ಯ ಅವರು ಕೆಲದಿನಗಳ ಕಾಲ ಕೃತಕ ಆಕ್ಸಿಜನ್‌ ನೆರವು ಪಡೆದೇ ಉಸಿರಾಡಬೇಕು. ಹೀಗಾಗಿ ಮನೆಯಲ್ಲಿಯೇ ಆಕ್ಸಿಜನ್‌ಗೆ ವ್ಯವಸ್ಥೆ ಮಾಡಿ, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎನ್ನುತ್ತಾರೆ ವೈದ್ಯರು.

ಇದು ಪವಾಡ:  ಇದು ಪವಾಡವೇ ಸರಿ. ಇಷ್ಟುಸುದೀರ್ಘ ಚಿಕಿತ್ಸೆಯ ಬಳಿಕ ರೋಗಿ ಗುಣಮುಖವಾಗಿರುವುದು ಇದೇ ಮೊದಲು. ಆದರೆ, ಎದೆಗುಂದದೆ ಇದ್ದಿದ್ದರಿಂದ ಗೀತಾಬಾಯಿ ಗುಣಮುಖವಾಗಲು ಸಾಧ್ಯವಾಯಿತು  ಎಂದು ಕೊಪ್ಪಳ ಜಿಲ್ಲಾಸ್ಪತ್ರೆ ವೈದ್ಯ ಡಾ.ವೇಣುಗೋಪಾಲ್‌ ಹೇಳುತ್ತಾರೆ.

ನನ್ನ ಪತ್ನಿ ಬದುಕುವುದೇ ಇಲ್ಲ ಎಂದು ತಿಳಿದಿದ್ದೆವು. ಆದರೆ, ದೇವರು, ದೇವರಂತೆ ಬಂದ ವೈದ್ಯರು ನನ್ನ ಪತ್ನಿಯನ್ನು ಕಾಪಾಡಿದ್ದಾರೆ. ಅತ್ಯುತ್ತಮ ಚಿಕಿತ್ಸೆ ನೀಡಿದ್ದಾರೆ ಎಂದು ರೋಗಿಯ ಪತಿ  ಭರಮಪ್ಪ ಸ್ಮರಿಸುತ್ತಾರೆ.

 

Latest Videos
Follow Us:
Download App:
  • android
  • ios