ಮೈಸೂರು(ನ.25): ಡಿ. ದೇವರಾಜ ಅರಸರ ಕರ್ಮಭೂಮಿ ಹುಣಸೂರಿನಲ್ಲಿ 1991 ರವರೆಗೂ ಸಾಂಪ್ರದಾಯಿಕ ಎದುರಾಳಿಗಳಾದ ಕಾಂಗ್ರೆಸ್‌ ಹಾಗೂ ಜನತಾ ಪರಿವಾರದ ನಡುವೆ ಹೋರಾಟ. ಬೇರೆ ಬೇರೆ ಕಾರಣಗಳಿಂದ 1994 ಹಾಗೂ 1999 ರಲ್ಲಿ ಇಲ್ಲಿ ಬಿಜೆಪಿ ಗೆದ್ದಿದೆ. ಎರಡು ದಶಕಗಳ ನಂತರ ಈ ಬಾರಿ ‘ಕಮಲ’ ಅರಳಿಸಲು ಹರಸಾಹಸ ಮಾಡಲಾಗುತ್ತಿದೆ.

1980ರಲ್ಲಿ ಬಿಜೆಪಿ ಉದಯವಾಯಿತು. 1983ರಲ್ಲಿ ಹುಣಸೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಸೋಮೇಗೌಡ ಸ್ಪರ್ಧಿಸಿ 516 ಮತಗಳನ್ನು ಮಾತ್ರ ಪಡೆದರು. 1985ರಲ್ಲಿ ಯಾರೂ ಕಣಕ್ಕಿಳಿಯುವ ಸಾಹಸ ಮಾಡಲಿಲ್ಲ. 1989ರಲ್ಲಿ ಮಹದೇವರಾವ್‌ ಕದಂ ಸ್ಪರ್ಧಿಸಿ, 1,164 ಮತಗಳನ್ನು ಗಳಿಸಿದರು. ಈ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಕಾಂಗ್ರೆಸ್‌ನ ಚಂದ್ರಪ್ರಭ ಅರಸು ಅವರು ಲೋಕಸಭೆಗೆ ಆಯ್ಕೆಯಾಗಿದ್ದರಿಂದ 1991ರಲ್ಲಿ ಉಪಚುನಾವಣೆ ನಡೆಯಿತು. ಕಾಂಗ್ರೆಸ್‌ನ ಎಸ್‌. ಚಿಕ್ಕಮಾದು- 33,467 ಮತಗಳನ್ನು ಪಡೆದು ಗೆದ್ದರು. ಬಿಜೆಪಿಯಿಂದ ಕಣಕ್ಕಿಳಿದಿದ್ದ ಸಿ.ಎಚ್‌. ವಿಜಯಶಂಕರ್‌- 29,536 ಮತಗಳನ್ನು ಪಡೆದಿದ್ದರು. ಜನತಾಪಕ್ಷದ ವಿ. ಪಾಪಣ್ಣ- 24,884 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಹೋಗಿದ್ದರು.

 

1994ರ ಚುನಾವಣೆ ಎದುರಾದಾಗ ಮತ್ತೆ ಸಿ.ಎಚ್‌. ವಿಜಯಶಂಕರ್‌ ಬಿಜೆಪಿ ಅಭ್ಯರ್ಥಿಯಾಗಿ 35,973 ಮತಗಳನ್ನು ಪಡೆದು, ಗೆದ್ದು ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದರು. ಜನತಾದಳದ ವಿ. ಪಾಪಣ್ಣ- 33,122, ಕೆಸಿಪಿಯ ಪಿ. ಗೋವಿಂದರಾಜು- 23,945, ಕಾಂಗ್ರೆಸ್‌ನ ಚಂದ್ರಪ್ರಭ ಅರಸು- 19,661 ಮತಗಳನ್ನು ಗಳಿಸಿದ್ದರು. ಕಾಂಗ್ರೆಸ್‌ ಪಕ್ಷದ ಇಬ್ಭಾಗ, ಮಾಜಿ ಶಾಸಕ ಎಸ್‌. ಚಿಕ್ಕಮಾದು ಎಸ್‌. ಬಂಗಾರಪ್ಪ ನೇತೃತ್ವದ ಕೆಸಿಪಿ ಬೆಂಬಲಿಸಿದ್ದು, ಜಾತಿ ಸಮೀಕರಣ ವಿಜಯಶಂಕರ್‌ ಗೆಲುವಿಗೆ ಕಾರಣವಾದವು.

ವರ್ಷದಿಂದ ಕಾಂಗ್ರೆಸ್ ಬೆಂಬಲಿಸಿದ್ದ ನಾಯಕ BJPಗೆ..!

ವಿಜಯಶಂಕರ್‌ ಮೈಸೂರಿನಿಂದ ಲೋಕಸಭೆಗೆ ಆಯ್ಕೆಯಾಗಿದ್ದರಿಂದ 1998ರಲ್ಲಿ ಉಪ ಚುನಾವಣೆ ಎದುರಾಯಿತು. ಜನತಾದಳದ ಜಿ.ಟಿ. ದೇವೇಗೌಡರು ಬಂಡಾಯ ಅಭ್ಯರ್ಥಿ ವಿ. ಪಾಪಣ್ಣ ವಿರುದ್ಧ ಅಲ್ಪಮತಗಳ ಅಂತರದಿಂದ ಗೆದ್ದರು. ಕಾಂಗ್ರೆಸ್‌ನಿಂದ ಎಚ್‌.ಎನ್‌. ಪ್ರೇಮಕುಮಾರ್‌ ಸ್ಪರ್ಧಿಸಿದ್ದರು. ಬಿಜೆಪಿಯು ಮಿತ್ರಪಕ್ಷವಾದ ಲೋಕಶಕ್ತಿಗೆ ಸೀಟು ಬಿಟ್ಟುಕೊಟ್ಟಿತ್ತು. ಅರಸರ ಪುತ್ರಿ ಭಾರತಿ ಅರಸು ಸ್ಪರ್ಧಿಸಿದ್ದರು.

1999ರ ಸಾರ್ವತ್ರಿಕ ಚುನಾವಣೆ ಎದುರಾದಾಗ ವಿ. ಪಾಪಣ್ಣ ಬಿಜೆಪಿ ಸೇರಿ ಅಭ್ಯರ್ಥಿಯಾದರು. ಎರಡು ಬಾರಿ ಸೋಲಿನಿಂದ ಉಂಟಾಗಿದ್ದ ಅನುಕಂಪ, ಜನತಾಪಕ್ಷದ ಇಬ್ಭಾಗ, ಕಾಂಗ್ರೆಸ್‌ನಲ್ಲಿ ಎಸ್‌. ಚಿಕ್ಕಮಾದು ಅವರ ಬಂಡಾಯದ ಬಾವುಟದಿಂದಾಗಿ ಪಾಪಣ್ಣ- 35,046 ಮತಗಳನ್ನು ಪಡೆದು ವಿಜೇತರಾದರು. ಎರಡನೇ ಬಾರಿ ಕ್ಷೇತ್ರದಲ್ಲಿ ಕಮಲ ಅರಳಿತು. ಕಾಂಗ್ರೆಸ್‌ ಬಂಡಾಯಗಾರ ಎಸ್‌.ಚಿಕ್ಕಮಾದು- 32,256, ಜೆಡಿಎಸ್‌ನ ಜಿ.ಟಿ. ದೇವೇಗೌಡ- 31,051, ಕಾಂಗ್ರೆಸ್‌ನ ಚಂದ್ರಪ್ರಭ ಅರಸು- 21,736 ಮತಗಳನ್ನು ಪಡೆದಿದ್ದರು.

ನಾನು ಸಿದ್ದು ಅಣ್ಣ ತಮ್ಮಂದಿರಂತೆ: ಬರ್ತ್‌ಡೇ ಸಂದರ್ಭ ಜಿಟಿಡಿ ಮಾತು

2004ರ ಚುನಾವಣೆಯಲ್ಲಿ ಜೆಡಿಎಸ್‌ನ ಜಿ.ಟಿ. ದೇವೇಗೌಡ- 60,258 ಮತಗಳನ್ನು ಪಡೆದು ಗೆದ್ದರು. ಕಾಂಗ್ರೆಸ್‌ನ ಎಸ್‌. ಚಿಕ್ಕಮಾದು- 46,126, ಬಿಜೆಪಿಯ ಬಿ.ಎಸ್‌. ಮರಿಲಿಂಗಯ್ಯ- 19,967 ಮತಗಳನ್ನು ಪಡೆದಿದ್ದರು.

2008ರ ಚುನಾವಣೆಯಲ್ಲಿ ಜಿ.ಟಿ. ದೇವೇಗೌಡರೆ ಬಿಜೆಪಿ ಅಭ್ಯರ್ಥಿಯಾಗಿದ್ದರು. ಕಾಂಗ್ರೆಸ್‌ನ ಎಚ್‌.ಪಿ. ಮಂಜುನಾಥ್‌- 57,947 ಮತಗಳನ್ನು ಪಡೆದು ಗೆದ್ದರು. ಜೆಡಿಎಸ್‌ನ ಎಸ್‌. ಚಿಕ್ಕಮಾದು- 42,456, ಜಿ.ಟಿ. ದೇವೇಗೌಡ- 36,004 ಮತಗಳನ್ನು ಪಡೆದಿದ್ದರು.

2013 ರಲ್ಲಿ ಕಾಂಗ್ರೆಸ್‌ನ ಎಚ್‌.ಪಿ. ಮಂಜುನಾಥ್‌- 83,930 ಮತಗಳನ್ನು ಪಡೆದು ಪುನಾರಾಯ್ಕೆಯಾದರು. ಜೆಡಿಎಸ್‌ನ ಕುಮಾರಸ್ವಾಮಿ- 43,273, ಬಂಡಾಯ ಅಭ್ಯರ್ಥಿ ಸಿ.ಟಿ. ರಾಜಣ್ಣ- 12,637, ಕೆಜೆಪಿಯ ಎಂ.ಸಿ. ಮಂಜುನಾಥ ಅರಸು- 9,011, ಬಿಜೆಪಿಇಯ ಕೆ.ಎಸ್‌. ಅಣ್ಣಯ್ಯನಾಯಕ- 4,229, ಬಿಎಸ್‌ಆರ್‌ ಕಾಂಗ್ರೆಸ್‌ನ ದ್ಯಾವಪ್ಪನಾಯಕ- 1,434 ಮತಗಳನ್ನು ಗಳಿಸಿದ್ದರು.

ಪಟ್ಲ ಸತೀಶ್‌ ವಜಾಕ್ಕೆ ಕಾರಣ ಕೊಟ್ಟ ಕಟೀಲು ಮೇಳ ಸಂಚಾಲಕ, ಹೇಳಿದ್ದೇನು..?

2018 ರಲ್ಲಿ ಜೆಡಿಎಸ್‌ನ ಎಚ್‌. ವಿಶ್ವನಾಥ್‌- 91,667 ಮತಗಳನ್ನು ಪಡೆದು ಗೆದ್ದರು. ಕಾಂಗ್ರೆಸ್‌ನ ಎಚ್‌.ಪಿ. ಮಂಜುನಾಥ್‌- 83,092, ಬಿಜೆಪಿಯ ಜೆ.ಎಸ್‌. ರಮೇಶ್‌ಕುಮಾರ್‌- 6,406 ಮತಗಳನ್ನು ಗಳಿಸಿದ್ದರು.

ವಿಜಯಶಂಕರ್‌ ಸ್ಪರ್ಧಿಸಿದಾಗ ಒಮ್ಮೆ ಗೆಲವು, ಮತ್ತೊಮ್ಮೆ ಎರಡನೇ ಸ್ಥಾನ, ಪಾಪಣ್ಣ ಸ್ಪರ್ಧಿಸಿದಾಗ ಒಮ್ಮೆ ಗೆಲವು ಹೊರತುಪಡಿಸಿದರೆ ಸ್ವತಃ ಜಿ.ಟಿ. ದೇವೇಗೌಡ ಸ್ಪರ್ಧಿಸಿದಾಗಲೂ ಬಿಜೆಪಿಗೆ 3ನೇ ಸ್ತಾನ. ಅದರಲ್ಲೂ ಕಳೆದೆರಡು ಚುನಾವಣೆಗಳಲ್ಲಿ ಠೇವಣಿ ಕಳೆದುಕೊಂಡಿದೆ. ಕಳೆದ ಬಾರಿ ಜೆಡಿಎಸ್‌ನಿಂದ ಗೆದ್ದಿದ್ದ ಎಚ್‌. ವಿಶ್ವನಾಥ್‌ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿರುವುದು ಹಾಗೂ ಗೆದ್ದಲ್ಲಿ ಮಂತ್ರಿಯಾಗುತ್ತಾರೆ ಎಂಬುದು, ರಾಜ್ಯದಲ್ಲಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರ ಇರುವುದು, ಹಿಂದೆ ಗೆದ್ದಿದ್ದ ಸಿ.ಎಚ್‌. ವಿಜಯಶಂಕರ್‌ ಜೊತೆಗಿರುವುದು, ಜನತಾ ಪರಿವಾರದಿಂದ ಎರಡು ಬಾರಿ ಗೆದ್ದು, ತಲಾ ಒಂದು ಬಾರಿ ಜೆಡಿಎಸ್‌ ಹಾಗೂ ಬಿಜೆಪಿಯಿಂದ ಸೋತಿರುವ ಚಾಮುಂಡೇಶ್ವರಿ ಕ್ಷೇತ್ರದ ಹಾಲಿ ಶಾಸಕ ಜಿ.ಟಿ. ದೇವೇಗೌಡರು ಜೆಡಿಎಸ್‌ನಿಂದ ದೂರವಾಗಿರುವುದರ ಲಾಭ ಪಡೆದು, ಮೂರನೇ ಬಾರಿ ‘ಕಮಲ’ ಅರಳಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದೆ. 

ಈವರೆಗೆ ಗೆದ್ದವರು : 1994- ಸಿ.ಎಚ್‌. ವಿಜಯಶಂಕರ್‌, 1999- ವಿ. ಪಾಪಣ್ಣ, 

ಈವರೆಗೆ ಸೋತವರು: 1983- ಸೋಮೇಗೌಡ, 1989- ಮಹದೇವರಾವ್‌ ಕದಂ, 1991ರ ಉಪ ಚುನಾವಣೆ- ಸಿ.ಎಚ್‌. ವಿಜಯಶಂಕರ್‌, 1998ರ ಉಪ ಚುನಾವಣೆ- ಭಾರತಿ ಅರಸು (ಬಿಜೆಪಿ ಬೆಂಬಲಿತ ಲೋಕಶಕ್ತಿ), 2004- ಬಿ,ಎಸ್‌. ಮರಿಲಿಂಗಯ್ಯ, 2008- ಜಿ.ಟಿ. ದೇವೇಗೌಡ, 2013-ಕೆ.ಎಸ್‌. ಅಣ್ಣಯ್ಯನಾಯಕ್‌, 2018-ಜೆ.ಎಸ್‌. ರಮೇಶ್‌ಕುಮಾರ್‌

-ಅಂಶಿ ಪ್ರಸನ್ನಕುಮಾರ್‌