ಮರಿಯಮ್ಮನಹಳ್ಳಿ(ಡಿ.05):  ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪದ ಹುರುಗಲವಾಡಿಯಲ್ಲಿ ದುಷ್ಕರ್ಮಿಯಿಂದ ಅತ್ಯಾಚಾರ ಯತ್ನ, ಹತ್ಯೆಗೊಳಗಾಗಿರುವ ಇಲ್ಲಿಗೆ ಸಮೀಪದ ತಾಳೆ ಬಸಾಪುರ ತಾಂಡಾದ ಬಾಲಕಿಯ ಶವವನ್ನು ಶುಕ್ರವಾರ ಮುಂಜಾನೆ ಇಲ್ಲಿಗೆ ತರಲಾಗಿದ್ದು, ಗ್ರಾಮದ ನೂರಾರು ಜನರು ರಸ್ತೆಯ ಮೇಲೆ ಶವವಿಟ್ಟು ಪ್ರತಿಭಟನೆ ನಡೆಸಿ ಬಾಲಕಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕು, ಆರೋಪಿಗೆ ಉಗ್ರ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದ್ದಾರೆ. 

ಕಳೆದ ಡಿ.2 ರಂದು ಮದ್ದೂರು ತಾಲೂಕಿನ ಕೊಪ್ಪದ ಹುರುಗಲವಾಡಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ದುಷ್ಕರ್ಮಿಯೋರ್ವ ಈ ಬಾಲಕಿಯ ಮೇಲೆ ಅತ್ಯಾಚಾರವೆಸಗಲು ಯತ್ನಿಸಿ ಹತ್ಯೆಗೈದಿದ್ದರು. ಶುಕ್ರವಾರ ಬೆಳಗಿನ ಜಾವ 3 ಗಂಟೆಗೆ ಬಂದ ಬಾಲಕಿಯ ಮೃತದೇಹವನ್ನು ತಾಂಡಾದ ಹೊರವಲಯದಲ್ಲಿ ತಡೆಗಟ್ಟಿಆರೋಪಿಗೆ ಗಲ್ಲುಶಿಕ್ಷೆ ನೀಡಬೇಕು. ಪ್ರಕರಣ ಹೊಸಪೇಟೆಗೆ ವರ್ಗಾಯಿಸಬೇಕು. ಬಾಲಕಿಗೆ ನ್ಯಾಯ ಸಿಗುವ ವರೆಗೆ ಅಂತ್ಯಸಂಸ್ಕಾರ ಮಾಡಲು ಬಿಡುವುದಿಲ್ಲ ಎಂದು ಒತ್ತಾಯಿಸಿ, ತಾಳಿಬಸಾಪುರ ತಾಂಡಾದಲ್ಲಿ ಸಾವಿರಾರು ಜನರು ಪ್ರತಿಭಟನೆ ನಡೆಸಿ ಅಂತ್ಯಸಂಸ್ಕಾರ ನಡೆಸಲು ಬಿಡದೇ ಶವವನ್ನು ಇಟ್ಟುಕೊಂಡು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಘಟನಾ ಸ್ಥಳಕ್ಕೆ ಬರುವ ವರೆಗೂ ಪ್ರತಿಭಟನೆಯನ್ನು ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

ಪ್ರತಿಭಟನಾ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾ​ಧಿಕಾರಿ ಎಸ್‌.ಎಸ್‌. ನಕುಲ್‌ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಪ್ರತಿಭಟನಕಾರರೊಂದಿಗೆ ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಮಾತನಾಡಿ, ಕೊಲೆ ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದೆ. ಸೂಕ್ತ ತನಿಖೆ ನಡೆಸಿ ಆರೋಪಿಗೆ ನ್ಯಾಯಾಲಯ ಶಿಕ್ಷೆ ವಿ​ಧಿಸುತ್ತದೆ. ಬಾಲಕಿ ಕುಟುಂಬಕ್ಕೆ ಜಿಲ್ಲಾಡಳಿತ ಅಗತ್ಯ ನೆರವು ನೀಡುತ್ತದೆ. ಪ್ರಕರಣ ವರ್ಗಾವಣೆ ಸಂಬಂ​ಧಿಸಿದಂತೆ ಪೊಲೀಸ್‌ ವರಿಷ್ಠಾಧಿಕಾರಿ ಜತೆ ಚರ್ಚಿಸಿ ನ್ಯಾಯ ಒದಗಿಸಲಾಗುತ್ತದೆ. ಕುಟುಂಬಕ್ಕೆ ಕಾನೂನುಬದ್ಧವಾಗಿ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನೂ ಕಲ್ಪಿಸುತ್ತದೆ ಎಂದು ಭರವಸೆ ನೀಡಿದರು.

ಕಾಮಪಿಶಾಚಿ;  ಕೆಲಸ ಅರಸಿ ಬಂದ ಬಳ್ಳಾರಿ ಬಾಲಕಿ ಮಂಡ್ಯದ ಹೊಲದಲ್ಲಿ ಶವವಾದಳು!

ಜಿಲ್ಲಾಧಿ​ಕಾರಿ ಜತೆ ಆಗಮಿಸಿದ್ದ ಎಸ್‌ಪಿ ಸೈದುಲ್ಲಾ ಅಡಾವತ್‌ ಮಾತನಾಡಿ, ಒಂದೇ ದಿನದಲ್ಲಿ ಯಾವುದೂ ಬಗೆಹರಿಯುವುದಿಲ್ಲ. ಬೇಡಿಕೆಗಳನ್ನು ತಾಳ್ಮೆಯಿಂದ ಈಡೇರಿಸಿಕೊಳ್ಳಬೇಕು. ನಾವು ನಿಮ್ಮ ಜತೆ ಇರುತ್ತೇವೆ. ಆರೋಪಿಗಳಿಗೆ ತಕ್ಕ ಶಿಕ್ಷೆಯಾಗುತ್ತದೆ. ಕಾನೂನು ಪ್ರಕಾರ ಏನು ಮಾಡಬೇಕು ಅದನ್ನು ಖಂಡಿತ ಮಾಡುತ್ತೇವೆ. ಅಂತ್ಯಸಂಸ್ಕಾರಕ್ಕೆ ಅನುವು ಮಾಡಿ ಬಾಲಕಿಯ ಆತ್ಮಕ್ಕೆ ಶಾಂತಿ ಕೋರಬೇಕಿದೆ ಎಂದು ಅವರು ಪ್ರತಿಭಟನಕಾರರ ಮನವೊಲಿಸಿದರು.

ಗೋರ್‌ ಸೇನಾ ಗೋರ್‌ ಸಿಕವಾಡಿಯ ರಾಷ್ಟ್ರೀಯ ಅಧ್ಯಕ್ಷ ಅರುಣ್‌ ಚವ್ಹಾಣ ದಿಗಂಬರ್‌ ಮಾತನಾಡಿ, ನಾವು ಕೂಡ ದೇಶದ ಪ್ರಜೆಗಳಾಗಿದ್ದು, ಸಂವಿಧಾನದ ಎಲ್ಲ ಹಕ್ಕುಗಳು ಮತ್ತು ಕರ್ತವ್ಯಗಳಿಗೆ ಬದ್ಧರಾಗಿದ್ದೇವೆ. ಆದರೆ ಸಂವಿಧಾನದ ಪ್ರಕಾರ ನಮಗೆ ಸಿಗಬೇಕಾದ ಯಾವುದೇ ಸೌಲಭ್ಯ ಹಾಗೂ ಭದ್ರತೆ ಸಿಗುತ್ತಿಲ್ಲ. ನಮ್ಮ ಸಮಾಜದ ಬಾಲಕಿಯ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸುತ್ತೇವೆ. ನಮಗೆ ಸೂಕ್ತ ನ್ಯಾಯ ಒದಗಿಸುವಂತೆ ಹೋರಾಟ ನಡೆಸುತ್ತೇವೆ. ಆರೋಪಿಯನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದರು.

ದೂಪದಹಳ್ಳಿ ತಾಂಡಾದ ಧರ್ಮಗುರು ಶಿವಪ್ರಕಾಶ್‌ ಮಹಾರಾಜ್‌ ಮಾತನಾಡಿ, ಬಾಲಕಿ ಕೊಲೆ ಮಾಡಿರುವುದು ಹೇಯಕೃತ್ಯ. ಇದು ದೇಶವೇ ತಲೆತಗ್ಗಿಸುವಂಥದ್ದು. ಇಂತಹ ಘಟನೆಗಳು ನಿರಂತರವಾಗಿದ್ದು, ತಡೆಗಟ್ಟುವಲ್ಲಿ ಸರ್ಕಾರಗಳು ವಿಫಲವಾಗಿವೆ. ಮೃತಪಟ್ಟಬಾಲಕಿ ಕುಟುಂಬಕ್ಕೆ ನ್ಯಾಯ ಸಿಗಬೇಕು. ಮುಂದೆ ಇಂತಹ ಘಟನೆ ನಡೆಯಬಾರದು ಎಂದರೆ, ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕಿದೆ. ಹೈದರಾಬಾದ್‌ ಮಾದರಿಯಲ್ಲಿ ಗುಂಡಿಕ್ಕಿ ಕೊಲ್ಲಬೇಕು ಅಥವಾ ಅವರನ್ನು ಗಲ್ಲಿಗೇರಿಸಬೇಕು ಎಂದರು.

ತಾಂಡಾದ ದೈವಸ್ಥರಾದ ಪೀಕ್ಲಾ ನಾಯ್ಕ್‌, ಉಮಾಶಂಕರ್‌ ನಾಯ್ಕ್‌, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಕೊಪ್ಪಳ ವಲಯದ ರವಿನಾಯ್ಕ್‌ ಚವ್ಹಾಣ, ಮುಖಂಡರಾದ ಶಿವಪ್ಪ ಜಾಗೋ ಗೋರ್‌, ಎಲ್‌. ಸೇವಾ ನಾಯ್ಕ್‌, ವೆಂಕಟೇಶ್‌ ಜಾಧವ್‌, ರೇಷ್ಮಾ ಬಾಯಿ, ಎನ್‌. ಶಿವಣ್ಣ ನಾಯ್ಕ್‌, ಅಲೋಕ್‌ ನಾಯ್ಕ್‌, ಪಿ. ಹರೀಶ್‌ ನಾಯ್ಕ್‌, ಅನಿಲ್‌ನಾಯ್ಕ್‌, ಕುಮಾರ್‌ ನಾಯ್ಕ್‌ ಹಾಗೂ ತಾಂಡಾದ ಮುಖ್ಯಸ್ಥರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭರವಸೆಗೆ ಸ್ಪಂದಿಸಿದ ಪ್ರತಿಭಟನಕಾರರು ಪ್ರತಿಭಟನೆ ವಾಪಸ್‌ ಪಡೆದರು. ಸಹಾಯಕ ಆಯುಕ್ತ ಶೇಖ್‌ ತನ್ವೀರ್‌ ಆಸೀಫ್‌, ತಹಸೀಲ್ದಾರ್‌ ಎಚ್‌. ವಿಶ್ವನಾಥ, ಡಿವೈಎಸ್‌ಪಿ ಹರೀಶ್‌ ರೆಡ್ಡಿ, ಸಿಪಿಐ ಉಮೇಶ್‌, ಪಿಎಸ್‌ಐ ಎಂ. ಶಿವಕುಮಾರ್‌, ಮೀನಾಕ್ಷಮ್ಮ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಬಾರಿ ಬಂದೋಬಸ್ತ್‌

ಘಟನೆ ಹಿನ್ನೆಲೆಯಲ್ಲಿ ತಾಂಡಾದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಎಸ್ಪಿ, ಡಿವೈಎಸ್ಪಿ, ಐವರು ಸಿಪಿಐ, 12 ಜನ ಪಿಎಸ್‌ಐ, ಒಂದು ಡಿಆರ್‌ ಸೇರಿ 80 ಪೊಲೀಸರು ಬಂದೋಬಸ್ತ್‌ ಏರ್ಪಡಿಸಿದ್ದರು.
12 ವರ್ಷದ ಈ ಬಾಲಕಿ ತನ್ನ ಸಹೋದರತ್ತೆಯ ಜೊತೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಕಬ್ಬು ಕಡಿಯುವ ಕೆಲಸಕ್ಕೆ ತೆರಳಿದ್ದಳು. ಶಾಲೆಗೆ ರಜೆ ಇರುವ ಹಿನ್ನೆಲೆಯಲ್ಲಿ ಬಾಲಕಿ ತೆರಳಿದ್ದಳೆನ್ನಲಾಗಿದೆ. ಕಬ್ಬಿನ ಗದ್ದೆಯಲ್ಲೇ ಟೆಂಟ್‌ ಹಾಕಿಕೊಂಡು ಇವರು ವಾಸಿಸುತ್ತಿದ್ದು, ಈ ಸಂದರ್ಭದಲ್ಲಿ ವ್ಯಕ್ತಿಯೋರ್ವ ಅತ್ಯಾಚಾರವೆಸಗಿದ್ದು, ಬಾಲಕಿಯ ಕೂಗಾಟ, ಕಿರುಚಾಟ ಕೇಳಿ ಅಕ್ಕಪಕ್ಕದವರು ಬರುತ್ತಿದ್ದಂತೆ ಯುವಕ ಅವಳನ್ನು ಹತ್ಯೆಗೈದು ಪರಾರಿಯಾಗಿದ್ದಾನೆ ಎನ್ನಲಾಗಿದೆ.