Asianet Suvarna News Asianet Suvarna News

ಮಹದಾಯಿ: 'ನೀರು ಜಲಾಶಯ ಸೇರುವವರೆಗೂ ಹೋರಾಟ ನಿಲ್ಲೋದಿಲ್ಲ'

2005 ರ ಜುಲೈ 16 ರಂದು ನರಗುಂದದಲ್ಲಿ ರೈತ ಸೇನಾ ಸಂಘಟನೆ ಆಶ್ರಯದಲ್ಲಿ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿ ಮಾಡಬೇಕೆಂದು ನಿರಂತರ ಹೋರಾಟ ಪ್ರಾರಂಭ| 14 ನೂರು ವಿವಿಧ ಕನ್ನಡಪರ ಸಂಘಟನೆಗಳು, ಮಠಾಧೀಶರು, ಸಾಹಿತಿಗಳು, ರೈತ ಸಮುದಾಯ, ಮಾಧ್ಯಮದವರು, ಪೊಲೀಸ್ ಇಲಾಖೆ ನಮ್ಮ ಹೋರಾಟಕ್ಕೆ ಸಹಕಾರ ನೀಡಿದ್ದರಿಂದ ರಾಷ್ಟ್ರ ಮಟ್ಟದ ದೊಡ್ಡ ಆಂದೋಲನವಾಗಲು ಸಾಧ್ಯವಾಯಿತು| 

Veeresh Sobaradamath Reacts Over Gazette Notification on Mahdayi
Author
Bengaluru, First Published Feb 29, 2020, 9:36 AM IST

ನರಗುಂದ(ಫೆ.29): ಮಹದಾಯಿ ಕುರಿತು ಕೇಂದ್ರ ಸರ್ಕಾರವೇನೋ ಅಧಿಸೂಚನೆ ಹೊರಡಿಸಿರಬಹುದು ಆದರೆ ಮಲಪ್ರಭಾ ಜಲಾಶಯಕ್ಕೆ ಕಳಸಾ- ಬಂಡೂರಿ ನಾಲಾದ ನೀರು ಬಂದು ಸೇರುವ ತನಕವೂ ಈ ಹೋರಾಟ ನಿಲ್ಲುವುದಿಲ್ಲ ಎಂದು ರೈತ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಶ್ರೀ ತಮ್ಮ ಮುಂದಿನ ಹೆಜ್ಜೆಯನ್ನು ಸ್ಪಷ್ಟಪಡಿಸಿದ್ದಾರೆ. 

ಶುಕ್ರವಾರ ಇಲ್ಲಿ ಮಹದಾಯಿ ನಿರಂತರ ಹೋರಾಟ ವೇದಿಕೆಯ ಪಕ್ಕದ ಬನ್ನಿಮಹಾಂಕಾಳಿ ದೇವಿಗೆ ಪೂಜೆ ಸಲ್ಲಿಸಿ, 1857 ರಲ್ಲಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ವೀರ ಬಾಬಾಸಾಹೇಬರ ಮೂರ್ತಿಗೆ ಮತ್ತು 1980 ರಲ್ಲಿ ರೈತ ಬಂಡಾಯದಲ್ಲಿ ವೀರ ಮರಣ ಹೊಂದಿದ ಈರಪ್ಪ ಕಡ್ಲಕೊಪ್ಪ ಅವರ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ರೈತ ಕುಲ ಉದ್ಧಾರ ಮಾಡಬೇಕೆಂದು ನಾನು ಸನ್ಯಾಸ ದೀಕ್ಷೆ ಸ್ವೀಕರಿಸಿದೆ. ನರಗುಂದ ನೆಲದಲ್ಲಿ ನಿರಂತರ ಹೋರಾಟ ಪ್ರಾರಂಭ ಮಾಡಿದ ನಂತರ ನಾಡಿನ ಜನತೆ ಈ ಹೋರಾಟಕ್ಕೆ ಬೆಂಬಲ ನೀಡಿದ್ದರಿಂದ ನಿರಂತರ ಹೋರಾಟ ಮಾಡಲು ಸಾಧ್ಯವಾಯಿತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸದ್ಯ ನಮಗೆ ಮಹದಾಯಿ ಜಲ ವಿವಾದಕ್ಕೆ ನೇಮಕವಾದ ನ್ಯಾಯಾಧಿಕರಣದ ನ್ಯಾಯಾಧೀಶರು ಕೇವಲ 13.42 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಿದ್ದಾರೆ. ಇದರಲ್ಲಿ 5.5 ಟಿಎಂಸಿ ನೀರು ಕುಡಿಯಲಿಕ್ಕೆ, 8 ಟಿಎಂಸಿ ನೀರು ವಿದ್ಯುತ್‌ಗೆ ಬಳಕೆ ಮಾಡಿಕೊಂಡು ಮರಳಿ ಈ ನೀರನ್ನು ಮಹದಾಯಿ ನದಿಗೆ ಬಿಡಬೇಕೆಂದು ಈ ಆದೇಶದಲ್ಲಿದೆ. ಆದ್ದರಿಂದ ನಾವು ಕೆಲವು ದಿನಗಳಲ್ಲಿ ಮಲಪ್ರಭೆ ಅಚ್ಚುಕಟ್ಟು ಪ್ರದೇಶದ ಮಠಾಧೀಶರು, ರೈತ ಹೋರಾಟಗಾರರು, ಸಾಹಿತಿಗಳ ಸಭೆ ಕರೆದು ಮುಂದಿನ ದಿನಗಳಲ್ಲಿ ಈ ಹೋರಾಟ ಯಾವ ಮಾರ್ಗದಲ್ಲಿ ಮುಂದವರಿಯಬೇಕು ಎಂದು ಚರ್ಚೆ ಮಾಡಿ ನಿರ್ಣಯ ತೆಗೆದುಕೊಳ್ಳುತ್ತೇವೆ. ಕೆಲವರು ಈ ಯೋಜನೆ ಜಾರಿಯಾಗಿದೆ, ಇನ್ನು ಹೋರಾಟ ನಿಲ್ಲುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ನಾವು ಯಾವುದೇ ಕಾರಣಕ್ಕೆ ನಮ್ಮ ಪಾಲಿನ ನೀರು ಮಲಪ್ರಭಾ ಜಲಾಶಯಕ್ಕೆ ಬರುವವರೆಗೆ ನಿರಂತರ ಹೋರಾಟ ನಿಲ್ಲಿಸುವುದಿಲ್ಲವೆಂದು ಸ್ಪಷ್ಟಪಡಿಸಿದರು.

6 ಕೋಟಿ ಕನ್ನಡಿಗರಿಗೆ ಸಿಕ್ಕ ಜಯ: ಸೊಬರದಮಠ ಶ್ರೀ

ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರ ಬಹುದಿನಗಳ ಬೇಡಿಕೆಯಾದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳ ನೀರು ಬಳಕಗೆ ಕೇಂದ್ರ ಸರ್ಕಾರ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಿದ್ದು, ರಾಜ್ಯದ 6 ಕೋಟಿ ಕನ್ನಡಿಗರಿಗೆ ಸಿಕ್ಕ ಜಯವಾಗಿದೆ ಎಂದು ರೈತ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಶ್ರೀ ಸಂತಸ ವ್ಯಕ್ತಪಡಿಸಿದ್ದಾರೆ.

ಅವರು ಶುಕ್ರವಾರ 1688ನೇ ದಿನದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಹೋರಾಟ ವೇದಿಕೆಯಲ್ಲಿ ಮಾತನಾಡಿದರು. ಮಲಪ್ರಭಾ ಅಚ್ಚುಕಟ್ಟು ಪ್ರದೇಶ ತೀರಾ ಹಿಂದುಳಿದಿದ್ದು, ಗುಳೇದಗುಡ್ಡದ ದಿ. ಮಾಜಿ ಶಾಸಕ ಬಿ.ಎಂ. ಹೊರಕೇರಿ ಅವರು ಮಲಪ್ರಭಾ ಜಲಾಶಯಕ್ಕೆ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳ ನೀರು ತಂದು ಜೋಡಣೆ ಮಾಡಬೇಕೆಂದು 40 ವರ್ಷದ ಹಿಂದೆ ನದಿ ಮತ್ತು ಎಲ್ಲ ಹಳ್ಳಗಳ ನಕ್ಷೆ ತಯಾರಿಸಿ ಅಂದಿನ ಸರ್ಕಾರಗಳಿಗೆ ಮನವಿ ಮಾಡಿಕೊಂಡರೂ ಕೂಡ ಯಾವುದೇ ರೀತಿ ಪ್ರಯೋಜನವಾಗಲಿಲ್ಲ. ನಂತರ ದಿನಗಳ ಈ ಹೋರಾಟವನ್ನು ವಿಜಯ ಕುಲಕರ್ಣಿ, ನ್ಯಾಯವಾದಿ ಬಿ.ಎಂ. ಸೋಮಾಪುರ ಅವರು ಜೀವಂತ ಇಟ್ಟಿದ್ದರು. ಮುಂದೆ 2015ರ ಜುಲೈ 16ರಂದು ನರಗುಂದದಲ್ಲಿ ರೈತ ಸೇನಾ ಸಂಘಟನೆ ಆಶ್ರಯದಲ್ಲಿ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿ ಮಾಡಬೇಕೆಂದು ನಿರಂತರ ಹೋರಾಟ ಪ್ರಾರಂಭಗೊಂಡ ನಂತರ ಈ ನಾಡಿನ 14 ನೂರು ವಿವಿಧ ಕನ್ನಡಪರ ಸಂಘಟನೆಗಳು, ಮಠಾಧೀಶರು, ಸಾಹಿತಿಗಳು, ರೈತ ಸಮುದಾಯ, ಮಾಧ್ಯಮದವರು, ಪೊಲೀಸ್‌ ಇಲಾಖೆ ನಮ್ಮ ಹೋರಾಟಕ್ಕೆ ಸಹಕಾರ ನೀಡಿದ್ದರಿಂದ ಈ ಹೋರಾಟವನ್ನು ರಾಷ್ಟ್ರ ಮಟ್ಟದ ದೊಡ್ಡ ಆಂದೋಲನವಾಗಲು ಸಾಧ್ಯವಾಯಿತು ಎಂದು ಸ್ಮರಿಸಿದರು.

ಯೋಜನೆ ಜಾರಿ ವಿಳಂಬವಾಗಿದ್ದರಿಂದ 250 ಮಹದಾಯಿ ಹೋರಾಟಗಾರರು ದೆಹಲಿಗೆ ಹೋಗಿ ರಾಷ್ಟ್ರಪತಿಗಳಿಗೆ ನಮಗೆ ನೀರು ಕೊಡಿ ಇಲ್ಲವಾದರೆ ದಯಾ ಮರಣ ನೀಡಬೇಕೆಂದು ಮನವಿ ನೀಡಿದ ನಂತರ ಈ ಮಹದಾಯಿ ಜಲ ವಿವಾದಕ್ಕೆ ನೇಮಕವಾದ ನ್ಯಾಯಾಧಿಕರಣದ ನ್ಯಾಯಾಧೀಶರು 2018ರ ಆಗಸ್ಟ್‌ 14ರಂದು ಕರ್ನಾಟಕ ರಾಜ್ಯಕ್ಕೆ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳಲ್ಲಿ ಹರಿಯುವ ನೀರಿನಲ್ಲಿ 13.42 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಿದರೂ ಸಹ ಕೇಂದ್ರ ಸರ್ಕಾರ ಈ ನೀರು ಬಳಕೆ ಮಾಡಿಕೊಳ್ಳಲು ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸದ್ದರಿಂದ ನಮ್ಮ ಹೋರಾಟಕ್ಕೆ ಹಿನ್ನಡೆಯಾಗಿತ್ತು. ಆದರೆ ಸುಪ್ರೀಂ ಕೋರ್ಟ್‌ ಕರ್ನಾಟಕ ರಾಜ್ಯಕ್ಕೆ ಈ ನೀರು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಬೇಕೆಂದು ಸಲಹೆ ನೀಡಿದ್ದರಿಂದ ಕೇಂದ್ರ ಸರ್ಕಾರ ಫೆ. 27ರಂದು ಈ ನೀರು ಬಳಕೆ ಮಾಡಿಕೊಳ್ಳಲು ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಿದ್ದು ಮಹದಾಯಿ ಹೋರಾಟಗಾರರಿಗೆ ಸಂತೋಷ ತಂದಿದೆ. ಇದರಿಂದ 6 ಕೋಟಿ ಕನ್ನಡಿಗರಿಗೆ ಸಿಕ್ಕಂತಾಗಿದೆ ಎಂದರು.

ನೀರು ಬಳಕೆ ಮಾಡಿಕೊಳ್ಳಲು ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯ ಸರ್ಕಾರಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಈ ನೀರು ಬಳಕೆ ಮಾಡಿಕೊಳ್ಳಲು ಸುಮಾರು 1000 ಕೋಟಿ ಅನುದಾನ ಬೇಕಾಗುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ಮಾ. 5ರಂದು ನಡೆಯುವ ಬಜೆಟ್‌ನಲ್ಲಿ ಹಣ ಮೀಸಲಿಡಬೇಕೆಂದು ಸೊಬರದಮಠ ಮನವಿ ಮಾಡಿದರು.

ಶ್ರದ್ಧಾಂಜಲಿ

ನರಗುಂದದಲ್ಲಿ ಮಹದಾಯಿ ಹೋರಾಟ ಪ್ರಾರಂಭಗೊಂಡ 5 ವರ್ಷದಲ್ಲಿ ನೀರಿಗಾಗಿ 12 ರೈತರು ಮೃತಪಟ್ಟಿದ್ದು, ಇದೇ ಸಂದರ್ಭದಲ್ಲಿ ಹೋರಾಟಗಾರರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ವಿಶ್ವನಾಥ ಗುಡಿಸಾಗರ, ವೀರಬಸಪ್ಪ ಹೂಗಾರ, ಎಸ್‌.ಬಿ. ಜೋಗಣ್ಣವರ, ರಮೇಶ ನಾಯ್ಕರ, ಮಲ್ಲಪ್ಪ ಓಲೇಕಾರ, ಶರಣಪ್ಪಗೌಡ ಪಾಟೀಲ, ಮುತ್ತಣ್ಣ ಕುರಿ, ಎಂ.ಎಂ. ನಂದಿ, ಪಂಚಪ್ಪ ಹಣಸಿ, ಎಂ.ಆರ್‌. ಹಿರೇಮಠ, ಎ.ಪಿ. ಪಾಟೀಲ, ಅರ್ಜುನ ಮಾನೆ, ಯಲ್ಲಪ್ಪ ಚಲವಣ್ಣವರ, ಅಯ್ಯಪ್ಪ ಮಜ್ಜಗಿ, ಲಚ್ಚವ್ವ ಜೋತಣ್ಣವರ, ಅಡಿಯಪ್ಪ ಕೋರಿ, ಜಗನ್ನಾಥ ಮುಧೋಳೆ, ಸುಭಾಸ ಗಿರಿಯಣ್ಣವರ, ಸಂಗಪ್ಪ ಶಾನವಾಡ, ವೆಂಕಪ್ಪ ಹುಜರತ್ತಿ, ಯಲ್ಲಬಿ ಮನನೇಕೊಪ್ಪ, ಅಣ್ಣಪ್ಪಗೌಡ ಪಾಟೀಲ, ಹನಮಂತ ಸರನಾಯ್ಕರ, ಸೋಮಲಿಂಗಪ್ಪ ಆಯಿಟ್ಟಿ, ವಾಸು ಚವಾಣ, ಯಲ್ಲಪ್ಪ ಗುಡದೇರಿ, ಮಾರುತಿ ಬಡಿಗೇರ, ಬಸವ್ವ ಪೂಜಾರ, ಮಂಜುಳಾ ಸರನಾಯ್ಕರ, ಮಲ್ಲಪ್ಪ ಐನಾಪುರ, ಕೆ.ಎಚ್‌. ಮೊರಬದ, ನಾಗರತ್ನ ಸವಳಭಾವಿ, ಅನಸವ್ವ ಶಿಂದೆ, ಶಾಂತವ್ವ ಭೂಸರಡ್ಡಿ, ಈರಣ್ಣ ಗಡಗಿ ಇದ್ದರು.
 

Follow Us:
Download App:
  • android
  • ios