Asianet Suvarna News Asianet Suvarna News

ತಂತ್ರಜ್ಞಾನ ಬಳಸಿದಲ್ಲಿ ಕೃಷಿಯಲ್ಲಿ ಲಾಭ: ರಾಜ್ಯಪಾಲ ಗೆಹ್ಲೋಟ್‌

  • ತಂತ್ರಜ್ಞಾನ ಬಳಸಿದಲ್ಲಿ ಕೃಷಿಯಲ್ಲಿ ಲಾಭ: ರಾಜ್ಯಪಾಲ ಗೆಹ್ಲೋಟ್‌
  • ಇರುವಕ್ಕಿ ಕೃಷಿ ವಿವಿಯಲ್ಲಿ 7ನೇ ಘಟಿಕೋತ್ಸವ
  • ಬಹುಬೆಳೆ ಕೃಷಿ ಪದ್ಧತಿ ಅಳವಡಿಸಿಕೆಗೆ ಡಾ.ಪರೋಡಾ ಸಲಹೆ
Use of technology will benefit agriculture says Governor Gehlot rav
Author
First Published Sep 29, 2022, 9:27 AM IST

ಶಿವಮೊಗ್ಗ (ಸೆ.29) : ನ್ಯಾನೋ ತಂತ್ರಜ್ಞಾನದಂತಹ ಆಧುನಿಕ ಆವಿಷ್ಕಾರಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಕೃಷಿಯನ್ನು ಲಾಭದಾಯಕಗೊಳಿಸಲು ಸಾಧ್ಯವಿದೆ ಎಂದು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಹೇಳಿದರು.

ರೈತರ ಜೊತೆ ಹೋರಾಟ ಮಾಡಿ ಜೈಲಿಗೆ ಹೋಗಿ ಬಂದವನು ನಾನು: ಕೃಷಿ ಸಚಿವ ಬಿ‌‌.ಸಿ ಪಾಟೀಲ್

ಆನಂದಪುರ ಸಮೀಪದ ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ 7ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನ್ಯಾನೋ ತಂತ್ರಜ್ಞಾನ, ಕೃಷಿಯಲ್ಲಿ ಡ್ರೋನ್‌ಗಳ ಬಳಕೆ, ನೀರಾವರಿಯಲ್ಲಿ ಯಾಂತ್ರೀಕರಣ, ಕೃಷಿ ಯಾಂತ್ರೀಕರಣ, ನೈಸರ್ಗಿಕ ಮತ್ತು ಸಾವಯವ ಕೃಷಿ, ಸಂಪನ್ಮೂಲ ಬಳಕೆ ದಕ್ಷತೆ ಮತ್ತು ಸುಸ್ಥಿರ ಕೃಷಿ ಪದ್ಧತಿಗಳು, ರೈತಸ್ನೇಹಿ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸುವ ಮತ್ತು ಹೊಸ ಸ್ಟಾರ್ಚ್‌ ಅಪ್‌ಗಳನ್ನು ಉತ್ತೇಜಿಸುವ ಮತ್ತು ಜನಪ್ರಿಯಗೊಳಿಸುವ ಅವಶ್ಯಕತೆಯಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೆಳದಿ ಶಿವಪ್ಪ ನಾಯ್ಕ ಅವರನ್ನು ಸಮರ್ಥ ಆಡಳಿತಗಾರ ಮತ್ತು ಸೈನಿಕ ಎಂದು ಸ್ಮರಿಸುತ್ತೇವೆ. ಕೃಷಿ ಕ್ಷೇತ್ರದಲ್ಲೂ ಶಿವಪ್ಪ ನಾಯ್ಕ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ನೆನಪಿಗಾಗಿ ಸ್ಥಾಪಿತವಾದ ಈ ವಿಶ್ವವಿದ್ಯಾಲಯವು ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ನಿಗದಿತ ಗುರಿಗಳನ್ನು ಸಾಧಿಸಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ರೈತರ ಸ್ಥಳೀಯ ಅಗತ್ಯಗಳನ್ನು ಪರಿಗಣಿಸಿ, ವಿಶ್ವವಿದ್ಯಾನಿಲಯವು ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದ ಹೊಸ ತಂತ್ರಜ್ಞಾನಗಳು ಮತ್ತು ತಂತ್ರಗಳ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಶ್ಲಾಘನೀಯ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದರು.

ಘಟಿಕೋತ್ಸವ ಭಾಷಣ ಮಾಡಿದ ಟ್ರಸ್ಟ್‌ ಫಾರ್‌ ಅಡ್ವಾನ್ಸ್‌ಮೆಂಟ್‌ ಆಫ್‌ ಅಗ್ರಿಕಲ್ಚರ್‌ ಸೈನ್ಸ್‌ ಅಧ್ಯಕ್ಷ ಡಾ. ಆರ್‌.ಎಸ್‌. ಪರೋಡಾ, ರೈತರು ಆರ್ಥಿಕವಾಗಿ ಸಬಲರಾಗಲು ಬಹು ಬೆಳೆ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಕೃಷಿ ಉತ್ಪಾದನಾ ವೆಚ್ಚ ಕಡಿಮೆ ಮಾಡಿ, ಹೆಚ್ಚಿನ ಲಾಭ ಪಡೆಯುವ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು, ಮಲೆನಾಡಿನಲ್ಲಿ ಅಡಿಕೆ ಬೆಳೆಗಾರರು ತಮ್ಮ ಆದಾಯವನ್ನು ದ್ವಿಗುಣ ಮಾಡಲು ಸಾಧ್ಯವಿದೆ ಎಂದು ಹೇಳಿದರು.

ಕುಲಪತಿ ಡಾ. ಆರ್‌.ಸಿ.ಜಗದೀಶ್‌ ಅವರು ಸ್ವಾಗತಿಸಿ, ವಿಶ್ವವಿದ್ಯಾಲಯದ ವರದಿಯನ್ನು ಮಂಡಿಸಿದರು. ಕುಲಸಚಿವ ಡಾ.ಆರ್‌.ಲೋಕೇಶ್‌ ಮತ್ತಿತರರು ಉಪಸ್ಥಿತರಿದ್ದರು.

ಚಿನ್ನದ ಪದಕ, ಪದವಿ ಪ್ರದಾನ

ಸಮಾರಂಭದಲ್ಲಿ ರಾಜ್ಯಪಾಲರು 355 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ, 79 ಎಂ.ಎಸ್ಸಿ ಪದವಿ, 10 ಪಿಎಚ್‌.ಡಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. 7 ಬಿಎಸ್‌ಸಿ ಅಗ್ರಿ ವಿದ್ಯಾರ್ಥಿಗಳಿಗೆ 14 ಚಿನ್ನದ ಪದಕ, 13 ಎಂ.ಎಸ್ಸಿ ಅಗ್ರಿ ವಿದ್ಯಾರ್ಥಿಗಳಿಗೆ 14 ಚಿನ್ನದ ಪದಕ ಮತ್ತು 4 ಪಿಎಚ್‌.ಡಿ ವಿದ್ಯಾರ್ಥಿಗಳಿಗೆ 5 ಚಿನ್ನದ ಪದಕ ಸೇರಿ ಒಟ್ಟು 24 ವಿದ್ಯಾರ್ಥಿಗಳಿಗೆ 33 ಚಿನ್ನದ ಪದಕಗಳನ್ನು ಪ್ರದಾನ ಮಾಡಿದರು.

‘ಚಿನ್ನದ ಪದಕ ನಿರೀಕ್ಷೆ ಇರಲಿಲ್ಲ’

ಕುಗ್ಗಾಮದಲ್ಲಿ ಬೆಳೆದ ನಾನು ಎಂಜಿನಿಯರ್‌ ಅಥವಾ ಮೆಡಿಕಲ್‌ ಕ್ಷೇತ್ರದ ಬಗ್ಗೆ ಆಶಕ್ತಳಾಗಿದ್ದೆ. ಆದರೆ, ತಂದೆಯ ಆಸೆಯಂತೆ ಕೃಷಿ ಕ್ಷೇತ್ರವನ್ನು ಆಯ್ಕೆ ಮಾಡು ಅವರ ಇಚ್ಚೆಯಂತೆ ಕಠಿಣ ಅಭ್ಯಾಸ ನಡೆಸಿದೆ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಬರಬೇಕು ಎಂದುಕೊಂಡಿದ್ದೆ. ಆದರೆ, ಚಿನ್ನದ ಪದಕ ನಿರೀಕ್ಷೆ ಇರಲಿಲ್ಲ. ಇದರ ಹಿಂದೆ ನನ್ನ ಶ್ರಮಕ್ಕಿಂತ ತಂದೆ, ತಾಯಿಯ ಕಾಳಜಿ, ಉಪನ್ಯಾಸಕರ ಪ್ರೋತ್ಸಾಹ ಅಡಗಿದೆ ಎಂದು ನಾಲ್ಕು ಚಿನ್ನದ ಪದಕ ಪಡೆದ ಕೆ.ಜೆ.ಶ್ರಾವ್ಯ ಅಭಿಪ್ರಾಯಪಟ್ಟರು.

ತಾಯಿ ಆಸೆ ಪೂರೈಸಿದ ಮಗಳು

10 ವರ್ಷದ ಹಿಂದೆ ತಂದೆ ಕಳೆದುಕೊಂಡು ಅಜ್ಜಿ ಮನೆಯಲ್ಲಿದ್ದುಕೊಂಡು ವ್ಯಾಸಂಗ ಮಾಡಿ ಬಿಎಸ್ಸಿ ತೋಟಗಾರಿಕೆಯಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡ ಆರ್‌.ಎನ್‌.ತನುಜಾ ಅಮ್ಮನ ಆಸೆಯನ್ನು ಈಡೇರಿಸಿದ್ದಾರೆ.

BIG 3: ಕೃಷಿ ಪಂಪ್ಸೆಟ್‌ಗೆ ಉಚಿತ ವಿದ್ಯುತ್ ಪಡೆಯಲು ಹಲವು ವರ್ಷಗಳಿಂದ ಅಲೆದಾಟ!

ಚಿಕ್ಕ ವಯಸ್ಸಿನಲ್ಲೇ ತಂದೆ ಕಳೆದುಕೊಂಡ ತನುಜಾಳಿಗೆ ತಾಯಿ ಮಂಜುಳಾ ಇದ್ದಾರೆ. ಸಾಗರದಲ್ಲಿರುವ ಅಜ್ಜಿ ಮನೆಯಲ್ಲಿ ಇರಿಸಿ ಶಿಕ್ಷಣ ಕೊಡಿಸಿದ್ದಾರೆ. ಕಷ್ಟಪಟ್ಟು ಓದಿ ನಾಲ್ಕು ಚಿನ್ನವನ್ನು ಪಡೆದಿರುವ ತನುಜಾ ತನ್ನ ಈ ಯಶಸ್ಸನ್ನು ಕುಟುಂಬ, ಗೆಳೆಯರು ಹಾಗೂ ಶಿಕ್ಷಕರಿಗೆ ಅರ್ಪಿಸಿದ್ದಾರೆ. ತನುಜಾ ತಾಯಿ ಮಂಜುಳಾ ಕೂಡ ಕೃಷಿ ಕಾಲೇಜಿನಲ್ಲಿ ಡಿಪ್ಲೊಮಾ ಓದಿದ್ದಾರೆ. ನನಗೂ ಆಗ ಎಂಎಸ್ಸಿ ಕಲಿಯುವ ಆಸೆ ಇತ್ತು. ಮನೆಯ ಪರಿಸ್ಥಿತಿಯಿಂದ ಅದು ಕೈಗೂಡಿರಲಿಲ್ಲ. ಮಗಳ ಮೂಲಕ ಈಗ ಅದು ನನಸಾಗಿದೆ ಎನ್ನುವಾಗ ಅವರ ಕಣ್ಣಲ್ಲಿ ಆನಂದಬಾಷ್ಪ ಮೂಡಿತು

Follow Us:
Download App:
  • android
  • ios