ಬೆಂಗಳೂರು(ಫೆ.23): ನೈಋುತ್ಯ ರೈಲ್ವೆಯು ಬೆಂಗಳೂರು ಉಪ ನಗರ ರೈಲು ಯೋಜನೆಗೆ ಪೂರಕವಾಗಿ ಬೈಯಪ್ಪನಹಳ್ಳಿಯಲ್ಲಿ ನಿರ್ಮಿಸುತ್ತಿರುವ ನೂತನ ಟರ್ಮಿನಲ್‌ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಅವರು ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಶನಿವಾರ ಅಧಿಕಾರಿಗಳ ತಂಡದೊಂದಿಗೆ ಬೈಯಪ್ಪನಹಳ್ಳಿ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ್ದ ಸಚಿವರು, ನಿರ್ಮಾಣ ಹಂತದ ಟರ್ಮಿನಲ್‌ ಕಾಮಗಾರಿ ಪರಿಶೀಲಿಸಿದರು. ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆ ಬಗೆಹರಿಸಲು ಉಪ ನಗರ ರೈಲು ಯೋಜನೆ ಅನುಷ್ಠಾನವಾಗಬೇಕು. ಇದರಿಂದ ಕೋಟ್ಯಂತರ ಜನರಿಗೆ ಅನುಕೂಲವಾಗಲಿದೆ ಎಂಬ ಕೂಗು ಬಹಳ ವರ್ಷಗಳಿಂದ ಕೇಳಿ ಬರುತ್ತಿದೆ. ಸದ್ಯ ಉಪ ನಗರ ರೈಲು ಯೋಜನೆಗೆ ಅನುಮೋದನೆ ದೊರೆತಿರುವುದು ಬೆಂಗಳೂರು ಮಟ್ಟಿಗೆ ಬಹುದೊಡ್ಡ ಮೈಲುಗಲ್ಲಾಗಿದೆ. ಈ ಹಿನ್ನೆಲೆಯಲ್ಲಿ ಯೋಜನೆಗೆ ಪೂರಕವಾಗಿರುವ ಬೈಯಪ್ಪನಹಳ್ಳಿ ನೂತನ ಟರ್ಮಿನಲ್‌ ಕಾಮಗಾರಿಯನ್ನು ಆದಷ್ಟುಬೇಗ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

2020-21ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ 18,600 ಕೋಟಿ ವೆಚ್ಚದ 148 ಕಿ.ಮೀ. ಉದ್ದದ ಉಪನಗರ ರೈಲು ಯೋಜನೆ ಘೋಷಿಸಲಾಗಿದೆ. ಈ ಯೋಜನೆಗೆ ರೈಲ್ವೆ ಮಂಡಳಿ ಅನುಮೋದನೆ ದೊರಕ್ಕಿದ್ದು, ಕೇಂದ್ರ ಸಚಿವ ಸಂಪುಟ ವ್ಯವಹಾರಗಳ ಸಮಿತಿಯ ಅನುಮೋದನೆ ಇನ್ನೂ ಬಾಕಿದೆ. ಶೀಘ್ರದಲ್ಲೇ ಅನುಮೋದನೆ ಕೊಡಿಸಿ, ಯೋಜನೆ ಅನುಷ್ಠಾನಗೊಳಿಸಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.