ಬೆಂಗಳೂರು : ಪರಿಚಯಸ್ಥೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಕಿರುತೆರೆ ನಟ ಮತ್ತು ಆತನ ಇಬ್ಬರು ಸ್ನೇಹಿತರನ್ನು ಶನಿವಾರ ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಟ ರಾಕೇಶ್‌, ಆತನ ಸ್ನೇಹಿತರಾದ ಸೂರ್ಯ ಹಾಗೂ ಮಣಿಕಂಠ ಬಂಧಿತರು. ಸಂತ್ರಸ್ತೆ ಮನೆಯಲ್ಲೇ ಮೇ 12 ರಂದು ಅತ್ಯಾಚಾರ ಕೃತ್ಯ ನಡೆದಿದ್ದು, ಕೋರಮಂಗಲ ಠಾಣೆಯಲ್ಲಿ ಶುಕ್ರವಾರ ಅವರು ದೂರು ನೀಡಿದ್ದರು. ಅದರನ್ವಯ ತನಿಖೆ ಕೈಗೆತ್ತಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಇಶಾಪಂತ್‌ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಒಂದೇ ಪ್ರದೇಶದಲ್ಲಿ ನೆಲೆಸಿದ್ದರಿಂದ ಸಂತ್ರಸ್ತೆ ಹಾಗೂ ರಾಕೇಶ್‌ ನಡುವೆ ಸ್ನೇಹವಿತ್ತು. ಈ ಪರಿಚಯದಲ್ಲೇ ಆಗಾಗ್ಗೆ ಗೆಳತಿ ಮನೆಗೆ ಆತ ಹೋಗುತ್ತಿದ್ದ. ಆದರೆ ಭಾನುವಾರ ತನ್ನ ಇಬ್ಬರು ಸ್ನೇಹಿತರನ್ನು ಕರೆದುಕೊಂಡು ಸ್ನೇಹಿತೆ ಮನೆಗೆ ಹೋಗಿದ್ದ ರಾಕೇಶ್‌, ಆ ವೇಳೆ ಸಂತ್ರಸ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಘಟನೆ ಬಗ್ಗೆ ತನ್ನ ಗೆಳತಿಯರ ಬಳಿ ಹೇಳಿಕೊಂಡು ಶೋಷಿತೆ ಮಹಿಳೆ ಕಣ್ಣೀರಿಟ್ಟಿದ್ದರು. ಬಳಿಕ ಈಶಾನ್ಯ ಭಾರತೀಯ ಸಂಘದ ಸದಸ್ಯರಿಗೂ ಲೈಂಗಿಕ ದೌರ್ಜನ್ಯದ ವಿಷಯ ಗೊತ್ತಾಯಿತು. ಆನಂತರ ಸಂತ್ರಸ್ತೆಗೆ ನೈತಿಕ ಸ್ಥೈರ್ಯ ತುಂಬಿದ ಆಕೆಯ ಸ್ನೇಹಿತರು, ಠಾಣೆಗೆ ಕರೆದುತಂದು ದೂರು ಕೊಡಿಸಿದ್ದರು. ಅಲ್ಲದೆ ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಸಂಪರ್ಕಿಸಿದ ಈಶಾನ್ಯ ಭಾರತೀಯರ ಸಂಘದ ಪದಾಧಿಕಾರಿಗಳು, ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡುಸುವಂತೆ ಸಹ ಮನವಿ ಮಾಡಿದ್ದರು ಎಂದು ತಿಳಿದು ಬಂದಿದೆ.

ರಾಕೇಶ್‌ ಕಿರುತೆರೆ ಧಾರವಾಹಿಗಳಲ್ಲಿ ನಟಿಸುತ್ತಿದ್ದಾನೆ. ಆತನ ಸ್ನೇಹಿತರಲ್ಲಿ ಸೂರ್ಯ, ಹೋಟೆಲ್‌ವೊಂದರಲ್ಲಿ ಅಡುಗೆ ಕೆಲಸಗಾರನಾಗಿದ್ದಾನೆ. ಮಣಿಕಂಠ ಕ್ಯಾಬ್‌ ಚಾಲಕನಾಗಿದ್ದಾನೆ. ಈ ಕೃತ್ಯ ಎಸಗಿದ ಬಳಿಕ ತಪ್ಪಿಸಿಕೊಂಡಿದ್ದ ಅವರನ್ನು ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ಕೋರಮಂಗಲದಲ್ಲಿ ಸೆರೆ ಹಿಡಿಯಲಾಯಿತು ಎಂದೂ ಪೊಲೀಸರು ಹೇಳಿದ್ದಾರೆ.