Asianet Suvarna News Asianet Suvarna News

ಬೆಂಗಳೂರು ಕಸ ರಾಮನಗರಕ್ಕೆ ವಿಲೇವಾರಿಯಾಗುವ ಆತಂಕ: ಕಸದಿಂದ ವಿದ್ಯುತ್ ಉತ್ಪಾದನೆ?

ಗೊರೂರು ಮತ್ತು ಕೋಡಿಯಾಲ ಕರೇನಹಳ್ಳಿಯಲ್ಲಿ ಬೆಂಗಳೂರು ಕಸ ವಿಲೇವಾರಿ ಮಾಡುವ ಯೋಜನೆ ಸ್ಥಳೀಯರ ತೀವ್ರ ವಿರೋಧದಿಂದ ರದ್ದಾದ ನಂತರವೂ ಎಚ್ಚೆತ್ತುಕೊಳ್ಳದ ರಾಜ್ಯಸರ್ಕಾರ ಮತ್ತೆ ರಾಮನಗರ ಜಿಲ್ಲೆಯಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಲು ಉದ್ದೇಶಿಸಿರುವುದು, ವ್ಯಾಪಕ ಟೀಕೆಗೆ ಗುರಿಯಾಗಿದೆ. 

There is concern that Bengaluru garbage will be disposed of in Ramanagara gvd
Author
First Published Oct 15, 2023, 8:43 PM IST

ರಾಮನಗರ (ಅ.15): ಗೊರೂರು ಮತ್ತು ಕೋಡಿಯಾಲ ಕರೇನಹಳ್ಳಿಯಲ್ಲಿ ಬೆಂಗಳೂರು ಕಸ ವಿಲೇವಾರಿ ಮಾಡುವ ಯೋಜನೆ ಸ್ಥಳೀಯರ ತೀವ್ರ ವಿರೋಧದಿಂದ ರದ್ದಾದ ನಂತರವೂ ಎಚ್ಚೆತ್ತುಕೊಳ್ಳದ ರಾಜ್ಯಸರ್ಕಾರ ಮತ್ತೆ ರಾಮನಗರ ಜಿಲ್ಲೆಯಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಲು ಉದ್ದೇಶಿಸಿರುವುದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ಬೆಂಗಳೂರು ನಗರಕ್ಕೆ ರಾಮನಗರ ಜಿಲ್ಲೆ ಜೊತೆಗೆ ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳು ಹೊಂದಿಕೊಂಡಿವೆ. ಅದರಲ್ಲೂ ರಾಮನಗರ ಜಿಲ್ಲೆಯ ರಾಮನಗರ, ಮಾಗಡಿ, ಕನಕಪುರ ತಾಲೂಕುಗಳು ಗಡಿ ಹಂಚಿಕೊಳ್ಳುತ್ತವೆ. ಈ ಕಾರಣದಿಂದಾಗಿ ಬೆಂಗಳೂರಿನ ಕಸ ವಿಲೇವಾರಿಗೆ ರಾಮನಗರ ಜಿಲ್ಲೆ ಮತ್ತೊಮ್ಮೆ ಡಂಪಿಂಗ್‌ ಯಾರ್ಡ್‌ ಆಗಲಿದಿಯೇ ಎಂಬ ಭೀತಿ ಶುರುವಾಗಿದೆ.

ಇಂತಹದೊಂದು ಆತಂಕ ಸೃಷ್ಟಿಯಾಗಲು ಕಾರಣವಾಗಿರುವುದು ಜಿಲ್ಲೆಯವರೇ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ರವರು ಬೆಂಗಳೂರಿನ ಹೊರವಲಯದ 4 ದಿಕ್ಕುಗಳಿಗೆ ಕಸ ವಿಲೇವಾರಿ ಘಟಕಗಳನ್ನು ಸ್ಥಳಾಂತರ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೇಳಿರುವುದು. ಕಳೆದ ಬುಧವಾರ ಜಲಸಂಪನ್ಮೂಲ, ಅರಣ್ಯ ಇಲಾಖೆ ಮತ್ತು ಬೆಂಗಳೂರು ನಗರಾಭಿವೃದ್ಧಿ ಇಲಾಖೆಗಳ ಸಮನ್ವಯ ಸಭೆ ನಡೆಸಿದ ತರುವಾಯ ಡಿ.ಕೆ.ಶಿವಕುಮಾರ್ ರವರು ಬೆಂಗಳೂರಿನ ಕಸ ವಿಲೇವಾರಿ ಸಮಸ್ಯೆಗೆ ಮುಕ್ತಿ ಕಲ್ಪಿಸುವ ಮಾತುಗಳನ್ನಾಡಿದ್ದಾರೆ.

ಮುತ್ತತ್ತಿಯಿಂದ ಬನ್ನೇರುಘಟ್ಟದವರೆಗೆ ಬ್ಯಾರಿಕೇಡ್ ನಿರ್ಮಾಣ: ಸಂಸದ ಡಿ.ಕೆ.ಸುರೇಶ್

ಕಸ ವಿಲೇವಾರಿ ಘಟಕ ಸ್ಥಳಾಂತರ: ಬೆಂಗಳೂರು ಬೃಹತ್‌ ಪ್ರಮಾಣದಲ್ಲಿ ಬೆಳೆದ ಪರಿಣಾಮ ಕಸ ವಿಲೇವಾರಿ ಘಟಕಗಳು ನಗರದ ಹೃದಯ ಭಾಗಕ್ಕೆ ಬಂದಿವೆ. ಈ ಘಟಕಗಳ ಸುತ್ತಮುತ್ತಲಿನ 4–5 ಕಿ.ಮೀ. ವ್ಯಾಪ್ತಿಯ ನಾಗರಿಕರು ನರಕ ಯಾತನೆ ಅನುಭವಿಸುತ್ತಿದ್ದಾರೆ. ಬ್ಯಾಟರಾಯನಪುರ ಶಾಸಕರೂ ಆಗಿರುವ ಸಚಿವ ಕೃಷ್ಣ ಬೈರೇಗೌಡ, ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಮತ್ತಿತರರು ಕಸ ವಿಲೇವಾರಿ ಘಟಕ ಸ್ಥಳಾಂತರಿಸುವಂತೆ ಮನವಿ ಸಲ್ಲಿಸಿದ್ದರು. 

ಕಸ ವಿಲೇವಾರಿ ಘಟಕಕ್ಕಾಗಿ ನಗರದ ನಾಲ್ಕೂ ಮೂಲೆಗಳಲ್ಲಿ ಅರಣ್ಯ ಪ್ರದೇಶದ ಗಡಿಭಾಗಗಳಲ್ಲಿ 100 ಎಕರೆ ಜಾಗ ನೀಡುವಂತೆ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಗೆ ಮನವಿ ಮಾಡಲಾಗಿದೆ. ಸರ್ವೇ ಮಾಡಿದ ಬಳಿಕ ಜಾಗ ಸಿಗಲಿದೆ. ಅದಕ್ಕೆ ಪ್ರತಿಯಾಗಿ ಅರಣ್ಯ ಇಲಾಖೆಗೆ ಪರ್ಯಾಯ ಜಾಗ ನೀಡಲಾಗುವುದು ಅಥವಾ ಖರೀದಿ ಮಾಡಲಾಗುವುದು ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಬೆಂಗಳೂರಿನ ಹೊರ ವಲಯದ ನಾಲ್ಕು ದಿಕ್ಕುಗಳಲ್ಲಿ ರಾಮನಗರ ಜಿಲ್ಲೆಯೂ ಬರುತ್ತದೆ. ಅದರಲ್ಲೂ ಅರಣ್ಯ, ಕಲ್ಲು ಬಂಡೆಗಳ ಪ್ರದೇಶ ಹೆಚ್ಚಿನ ಪ್ರಮಾಣದಲ್ಲಿವೆ. ಇದರಿಂದ ಬೆಂಗಳೂರಿನ ಕಸ ರಾಮನಗರ ಜಿಲ್ಲೆಗೆ ಬಂದು ಬೀಳಲಿದೆ ಎಂಬ ಆಂತಕ ಎದುರಾಗಿದೆ.

ತೀವ್ರ ಸ್ವರೂಪದ ಹೋರಾಟಗಳೇ ನಡೆದಿವೆ: 2012ರಲ್ಲಿ ರಾಮನಗರ ತಾಲೂಕಿನ ಕೋಡಿಯಾಲ ಕರೇನಹಳ್ಳಿಯಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿತ್ತು. ಇದಕ್ಕಾಗಿ 40 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಯೂ ನಡೆದಿತ್ತು. ಆದರೆ, ಸ್ಥಳೀಯರ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಘಟಕ ಸ್ಥಾಪನೆ ಕೈ ಬಿಡಲಾಗಿತ್ತು. ಇದಾದ ನಂತರ ಮಾಗಡಿ ತಾಲೂಕಿನ ಗೊರೂರಿನಲ್ಲಿ 45 ಎಕರೆ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾರ್ಯಕ್ಕೆ ಬಿಬಿಎಂಪಿ ಮುಂದಾಗಿತ್ತು. ಆಗ ಗ್ರಾಮಸ್ಥರ ಜೊತೆಗೆ ಅಂದಿನ ಜೆಡಿಎಸ್‌ ಶಾಸಕರಾಗಿದ್ದ ಶ್ರೀನಿವಾಸಮೂರ್ತಿ (ನೆಲಮಂಗಲ ಕ್ಷೇತ್ರ) ಮತ್ತು ಬಾಲಕೃಷ್ಣ (ಮಾಗಡಿ ಕ್ಷೇತ್ರ) ಕೈ ಜೋಡಿಸಿದ್ದರಿಂದ ಪ್ರತಿಭಟನೆ ತೀರ್ವ ಸ್ವರೂಪ ಪಡೆಯಿತು. 

ಆಗಲೂ ಸರ್ಕಾರ ಕಸ ವಿಲೇವಾರಿ ಘಟಕ ಸ್ಥಾಪಿಸುವ ನಿರ್ಧಾರದಿಂದ ಹಿಂದಕ್ಕೆ ಸರಿಯಿತು. ಇಷ್ಟೇ ಅಲ್ಲದೆ, ಬೆಂಗಳೂರಿನ ಕೊಳಚೆ ನೀರು ವೃಷಭಾವತಿ ನದಿ ನೀರು ರಾಮನಗರ ಮತ್ತು ಕನಕಪುರಕ್ಕೆ ಹರಿಯುತ್ತಿದ್ದರಿಂದ ಈ ಭಾಗದ ಜನರು ತೊಂದರೆ ಪಡುತ್ತಿದ್ದಾರೆ. ಇಷ್ಟೆಲ್ಲ ಗೊತ್ತಿದ್ದರು ರಾಜ್ಯ ಸರ್ಕಾರ ರಾಮನಗರ ಜಿಲ್ಲೆಯಲ್ಲಿಯೇ ಬೆಂಗಳೂರಿನ ಕಸ ವಿಲೇವಾರಿಗೆ ನಿರ್ಧರಿಸಿ ಅದಕ್ಕಾಗಿ ಜಾಗ ಗುರುತಿಸಲು ಮುಂದಾಗಿದೆ. ಮೂಲಗಳ ಪ್ರಕಾರ ಕೈಗಾರಿಕಾ ಪ್ರದೇಶವಾದ ಬಿಡದಿ ಬಳಿಯೇ 100 ಎಕರೆ ಪ್ರದೇಶವನ್ನು ಕಸ ವಿಲೇವಾರಿ ಘಟಕ ಸ್ಥಾಪನೆಗೆ ಗುರುತಿಸಲಾಗಿದೆ ಎಂಬ ಮಾಹಿತಿಯಿದ್ದು, ಇದು ನಿಜವಾದಲ್ಲಿ ವ್ಯಾಪಕ ಪ್ರತಿರೋಧ ವ್ಯಕ್ತವಾಗುವುದರಲ್ಲಿ ಅನುಮಾನ ಇಲ್ಲ.

Ramanagara: ನೃತ್ಯಗಾರರನ್ನೂ ನಾಚಿಸಿದ ಶಾಸಕ ಬಾಲಕೃಷ್ಣರ ಡ್ಯಾನ್ಸ್!

ಕಸದಿಂದ ವಿದ್ಯುತ್ ಉತ್ಪಾದನೆ: ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಕಸದಿಂದ ವಿದ್ಯುತ್‌ ಉತ್ಪಾದಿಸುವ ಘಟಕ ನಿರ್ಮಾಣವಾಗುತ್ತಿದೆ. ಕೆಪಿಟಿಸಿಎಲ್ ಮತ್ತು ಬಿಬಿಎಂಪಿ ಸಹಯೋಗದಲ್ಲಿ ಪವರ್‌ ಕಾರ್ಪೋರೇಷನ್‌ ಲಿಮಿಟೆಡ್ ಕಂಪನಿಯು ಬಿಡದಿಯ 15 ಎಕರೆಯಲ್ಲಿ 280 ಕೋಟಿ ರುಪಾಯಿ ವೆಚ್ಚದಲ್ಲಿ ತ್ಯಾಜ್ಯ ಇಂಧನ ಘಟಕ ಸ್ಥಾಪಿಸುತ್ತಿದ್ದು, ಇಲ್ಲಿ ಕಸದಿಂದಲೇ ಪ್ರತಿ ನಿತ್ಯ 2.76 ಲಕ್ಷ ಯೂನಿಟ್‌ ವಿದ್ಯುತ್‌ ಉತ್ಪಾದನೆಯಾಗಲಿದೆ. ಬೆಂಗಳೂರು ನಗರದಲ್ಲಿ ಪ್ರತಿ ದಿನ 6 ಸಾವಿರ ಟನ್‌ ಕಸ ಉತ್ಪತ್ತಿಯಾಗುತ್ತಿದೆ. ಆ ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಘಟಕಕ್ಕೆ ಭೇಟಿ ನೀಡಿದ್ದಾಗ ಹೇಳಿದ್ದರು. ಇದೀಗ ಬೆಂಗಳೂರಿನ ಕಸ ವಿಲೇವಾರಿ ಘಟಕಗಳ ಸ್ಥಳಾಂತರ ಆಗಲಿರುವ ಜಾಗ ಕೇವಲ ವಿಲೇವಾರಿಗೆ ಸೀಮಿತವಾಗಿರುತ್ತದೆಯೋ ಅಥವಾ ಅಲ್ಲಿ ತ್ಯಾಜ್ಯ ಇಂಧನ ಘಟಕಗಳೂ ನಿರ್ಮಾಣಗೊಳ್ಳಲಿವೆಯೇ ಎಂಬ ಪ್ರಶ್ನೆ ಎದುರಾಗಿದೆ.

Follow Us:
Download App:
  • android
  • ios