ಕಲಬುರಗಿ: ಜಿಲ್ಲಾಸ್ಪತ್ರೆಯಲ್ಲಿ ಕೊರೋನಾ ಸೋಂಕಿತರಿಗೆ ಹಾಸಿಗೆಗಳೇ ಇಲ್ಲ..!
ಕೋವಿಡ್ ರೋಗಿಗಳ ದಾಖಲಿಸಿಕೊಳ್ಳಲು ಹಿಂಜರಿಯುತ್ತಿರುವ ಖಾಸಗಿ ಆಸ್ಪತ್ರೆಗಳು| ಬಸವೇಶ್ವರ ಹಾಗೂ ಧನ್ವಂತರಿ ಆಸ್ಪತ್ರೆಗಳನ್ನ ಕೋವಿಡ್ ಆಸ್ಪತ್ರೆಗಳನ್ನಾಗಿ ಘೋಷಣೆ ಮಾಡಿದ್ದರಿಂದ ಬರುವ ದಿನಗಳಲ್ಲಿ ಹಾಸಿಗೆ ಕೊರತೆ ನೀಗುವ ನಿರೀಕ್ಷೆ| ಆಡಳಿತದ ಈ ಸೂಚನೆಗೆ ಇವೆರಡೂ ಆಸ್ಪತ್ರೆಗಳು ಅದ್ಹೇಗೆ ಸ್ಪಂದಿಸುತ್ತವೆಯೋ ಕಾದು ನೋಡಬೇಕಷ್ಟೆ|
ಶೇಷಮೂರ್ತಿ ಅವಧಾನಿ
ಕಲಬುರಗಿ(ಜು.25): ಕೊರೋನಾ ಸೋಂಕು, ಸಾವಿನಲ್ಲಿ ರಾಜಧಾನಿ ಬೆಂಗಳೂರಿನ ನಂತರ ತೊಗರಿ ಕಣಜ ಕಲಬುರಗಿಯಲ್ಲಿ ಹೆಮ್ಮಾರಿ ಅಬ್ಬರ ಮಿತಿಮೀರುತ್ತಿದೆ.
ಕಳೆದೊಂದು ವಾರದಿಂದ ಸೋಂಕಿನ ಶತಕ, ದ್ವಿಶತಕ ಬಾರಿಸುತ್ತ ಹೊರಟಿರೋ ಹೆಮ್ಮಾರಿಯನ್ನು ಕಟ್ಟಿಹಾಕುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ ನಡೆಸುತ್ತಿರುವ ಕಸರತ್ತು ಸಾಲದಾಗಿದೆ. ಸೋಂಕಿನ ತೀವ್ರತೆ ಅಧಿಕವಾಗಿರುವವರಿಗೆ ಕೋವಿಡ್ ಆಸ್ಪತ್ರೆಯಲ್ಲೇ ಐಸಿಯು, ವೆಂಟಿಲೇಟರ್ ಸವಲತ್ತಿರೋ ಬೆಡ್ ದೊರಕುತ್ತಿಲ್ಲ. ನಿತ್ಯ ನೂರಾರು ಸೋಂಕಿತರನ್ನು ಪ್ರತ್ಯೇಕಿಸಿಡುವ ಸಂದರ್ಭ ಕಾಡುತ್ತಿದ್ದರೂ ಆಸ್ಪತ್ರೆಗಳಲ್ಲಿ ಹಾಸಿಗೆ ಬರ. ಹೀಗಾಗಿ ಚಿಕಿತ್ಸೆ, ಪ್ರತ್ಯೇಕಿಸುವಿಕೆಯಂತಹ ಕೋವಿಡ್ ಶಿಷ್ಠಾಚಾರದಂತೆ ಚಿಕಿತ್ಸೆ ಮುಂದುವರಿಸೋದೇ ದುಸ್ತರವಾಗಿದೆ.
ಕೋವಿಡ್ ರೋಗಿಗಳಿಗೆ ಹಾಸಿಗೆ ಕೊರತೆ:
ಕೋವಿಡ್ ರೋಗಿಗಳಿಗಾಗಿ ಸರ್ಕಾರಿ ಆಸ್ಪತ್ರೆ(ಜಿಮ್ಸ್) ಹಾಗೂ ಇಎಸ್‌ಐಸಿ ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಇಎಸ್‌ಐಸಿಯನ್ನು ಯಾದಗಿರಿಯವರಿಗೆ, ಜಿಮ್ಸ್ ಕಲಬುರಗಿ ಸೋಂಕಿತರಿಗೆ ಮೀಸಲಿಡಲಾಗಿದೆ. ಜಿಮ್ಸ್ ಹಾಗೂ ಇಎಸ್‌ಐಸಿಯಲ್ಲಿ ಕ್ರಮವಾಗಿ 28 ಹಾಗೂ 29 ಐಸಿಯು, ವೆಂಟಿಲೇಟರ್, 57 ಬೆಡ್‌ಗಳಿದ್ದು ಸೋಂಕಿನ ಸ್ಫೋಟದಿಂದ ಎಲ್ಲ ಭರ್ತಿಯಾಗಿವೆ. ಹೆಚ್ಚಿನ ಬೆಡ್ ಪೂರೈಸಲು ತೆರೆಯಲಾಗಿರುವ ಹೈ ಡಿಪೆಂಡೆನ್ಸಿ ಯೂನಿಟ್‌ನಲ್ಲೂ ಲಭ್ಯವಿರುವ 47 ಬೆಡ್ ಭರ್ತಿಯಾಗಿವೆ. 3 ಪಾಳಿಯಲ್ಲಿ ನಿತ್ಯ 55 ವೈದ್ಯರು ಕೋವಿಡ್ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದು, ಸೋಂಕಿತರು ಹೆಚ್ಚಾದಲ್ಲಿ ಗುಣಮಟ್ಟದ ಚಿಕಿತ್ಸೆಯೇ ಮರೀಚಿಕೆಯಾಗುವ ಭೀತಿ ತಲೆದೋರಿದೆ.
'ಸಂಬಳವಿಲ್ಲದೇ KSRTC ಸಿಬ್ಬಂದಿ ಪರದಾಟ'
ಖಾಸಗಿ ಆಸ್ಪತ್ರೆಗಳ ನಿರ್ಲಕ್ಷ್ಯ:
ಕೋವಿಡ್ ರೋಗಿಗಳ ದಾಖಲಿಸಿಕೊಳ್ಳಲು ಹಿಂಜರಿಯುತ್ತಿರುವ ಖಾಸಗಿ ಆಸ್ಪತ್ರೆಯವರು ತಮ್ಮಲ್ಲಿನ ಸಿಬ್ಬಂದಿಗಳಲ್ಲಿ ಶೇ.50 ನೀಡೋದಾಗಿ ಹೇಳುತ್ತಿದ್ದಾರೆ. ಇದೀಗ ಬಸವೇಶ್ವರ ಹಾಗೂ ಧನ್ವಂತರಿ ಆಸ್ಪತ್ರೆಗಳನ್ನ ಕೋವಿಡ್ ಆಸ್ಪತ್ರೆಗಳನ್ನಾಗಿ ಘೋಷಣೆ ಮಾಡಿದ್ದರಿಂದ ಬರುವ ದಿನಗಳಲ್ಲಿ ಹಾಸಿಗೆ ಕೊರತೆ ನೀಗುವ ನಿರೀಕ್ಷೆ ಜಿಲ್ಲಾಡಳಿತದ್ದಾಗಿದೆ. ಆದರೆ ಆಡಳಿತದ ಈ ಸೂಚನೆಗೆ ಇವೆರಡೂ ಆಸ್ಪತ್ರೆಗಳು ಅದ್ಹೇಗೆ ಸ್ಪಂದಿಸುತ್ತವೆಯೋ ಕಾದು ನೋಡಬೇಕಷ್ಟೆ.
ಸರ್ಕಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಕಲಬುರಗಿಯ 25ಕ್ಕೂ ಹೆಚ್ಚು ಆಸ್ಪತ್ರೆಗಳ ಹೆಸರುಗಳಿದ್ದರೂ ಇಂದಿಗೂ ಒಂದೇ ಒಂದು ಖಾಸಗಿ ಆಸ್ಪತ್ರೆಯೂ ಸುತ್ತೋಲೆಯಂತೆ ಕೊರೋನಾ ರೋಗಿಗಳನ್ನು ದಾಖಲಿಸಿಕೊಂಡು ಚಿಕಿತ್ಸೆಗೆ ಮುಂದಾಗಿಲ್ಲ. ಹೀಗ್ಯಾಕೆಂದು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಖಾಸಗಿಯವರಿಗೆ ಪ್ರಶ್ನಿಸಿಲ್ಲ. ಅಲ್ಲದೆ ಜಿಲ್ಲಾಡಳಿತ ಚಿಕಿತ್ಸಾ ಸವಲತ್ತು ವಿಸ್ತರಿಸಿಕೊಳ್ಳುವ ಮನಸ್ಸು ಮಾಡಲಿಲ್ಲವೋ? ಎಂಬುದು ಉತ್ತರ ಸಿಗದ ಪ್ರಶ್ನೆ.
ಸೋಂಕಿತರಿಗೆ ಸ್ಪಂದಿಸದ ಜಿಮ್ಸ್:
ಸೋಂಕಿನಿಂದ ಬಳಲುವವರು, ಐಎಲ್‌ಐ ತೊಂದರೆ ಇರೋರು ಜಿಮ್ಸ್, ಇಎಸ್‌ಐಸಿಗೆ ಹೋದರೆ ತೀವ್ರ ತೊಂದರಯಾಗಿದ್ದು, ಅವರಿಗೆ ದಾಖಲೆ ದೊರಕೋದು ದುರ್ಲಭವಾಗಿದೆ. ಕಳೆದ 2 ದಿನಗಳ ಹಿಂದಷ್ಟೆ ಆಸ್ಪತ್ರೆ ಪ್ರವೇಶ ಅವಕಾಶ ದೊರಕದೆ ರೋಗಿಯೋರ್ವ ಉಸಿರಾಟ ತೊಂದರೆಯಿಂದ ಬಳಲುತ್ತ ಆ್ಯಂಬಲೆನ್ಸ್‌ನಲ್ಲೇ ಮೃತಪಟ್ಟಿದ್ದು, ಕಲಬುರಗಿ ಕೋವಿಡ್ ಆಸ್ಪತ್ರೆಗಳಲ್ಲಿ ಕಾಣಿಸಿಕೊಂಡಿರುವ ಹಾಸಿಗೆ ಬರಕ್ಕೆ ಕನ್ನಡಿ ಹಿಡಿದರೂ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣದಂತಾಗಿದೆ.
ಕೊರೋನಾ ಸೋಂಕು ತಗುಲಿ ಜಿಮ್ಸ್ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಲು ಗುರುವಾರ ಒಂದೇ ದಿನ ಬರೋಬ್ಬರಿ 60 ದೂರವಾಣಿ ಕರೆ ಮಾಡಿದೆ. ಅದರಲ್ಲೂ ಎಂಎಲ್‌ಎ ಸೇರಿ ಅನೇಕ ಪ್ರಭಾವಿಗಳ ಕರೆಗಳು ಇದ್ದರೂ ಜಿಮ್ಸ್‌ನಲ್ಲಿ ಕ್ಯಾರೆ ಎನ್ನೋರಿಲ್ಲ. ಆಸ್ಪತ್ರೆಗೆ ಹೋದರೆ ಒಳಗೆ ಕಾಲಿಡಲಿಕ್ಕೂ ಅವಕಾಶ ನೀಡುತ್ತಿಲ್ಲ. ಹಾಸಿಗೆಗಳೇ ಅಲ್ಲಿಲ್ಲ, ಇನ್ನೆಲ್ಲಿ ಕೋವಿಡ್ ಹೊಸ ರೋಗಿಗೆ ಪ್ರವೇಶ ನೀಡುತ್ತಾರೆ? ಜಿಲ್ಲಾಡಳಿತ ತಕ್ಷಣ ಹೆಚ್ಚುವರಿ ಹಾಸಿಗೆ ಸವಲತ್ತು ಮಾಡಬೇಕಿದೆ ಎಂದು ಹೆಸರು ಹೇಳಲಿಚ್ಚಿಸದ ಸೋಂಕಿತ ತಿಳಿಸಿದ್ದಾರೆ.
ಇಲ್ಲಿಯವರೆಗೆ ಸೋಂಕಿತರು
ಒಟ್ಟು ಸೋಂಕಿತರು 3370
ಸಕ್ರಿಯ ಪ್ರಕರಣಗಳು 1426
ವರದಿ ಬರಬೇಕಾಗಿರುವುದು 3614
ಸಕ್ರಿಯ ಸೋಂಕಿನ ವಲಯಗಳು 776
ಆರೋಗ್ಯ ಸಮೀಕ್ಷೆಗೊಳಗಾದ ಕುಟುಂಬಗಳು 64896