Asianet Suvarna News Asianet Suvarna News

ಹುಕ್ಕೇರಿ: ಗಲಾಟೆ ಮಾಡಿದ ವಿದ್ಯಾರ್ಥಿಗಳಿಗೆ ಯದ್ವಾತದ್ವಾ ಥಳಿಸಿದ ಶಿಕ್ಷಕಿ

ವಿದ್ಯಾರ್ಥಿಗಳಿಗೆ ಬಾಸುಂಡೆ ಬರುವ ಹಾಗೆ ಥಳಿಸಿದ ಶಿಕ್ಷಕಿ| ಮಕ್ಕಳ ಪಾಲಕರು ಶಾಲೆಗೆ ಆಗಮಿಸಿ ಶಿಕ್ಷಕಿಗೆ ತೀವ್ರ ತರಾಟೆ | ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ಡಿಡಿಪಿಐ|ಹುಕ್ಕೇರಿ ತಾಲೂಕಿನ ಅರ್ಜುನವಾಡ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಘಟನೆ|

Teacher Beat on Students in Hukkeri in Belagavi District
Author
Bengaluru, First Published Dec 14, 2019, 12:12 PM IST

ಹುಕ್ಕೇರಿ[ಡಿ.14]:  ಸಹ ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳನ್ನು ಬಾಸುಂಡೆ ಬರುವಂತೆ ಥಳಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅರ್ಜುನವಾಡ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಶಾಲೆಗೆ ದೌಡಾಯಿಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಜತೆಗೆ ಈ ಸಂಬಂಧ ಸಹ ಶಿಕ್ಷಕಿಯನ್ನು ಡಿಡಿಪಿಐ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. 

ಅರ್ಜುನವಾಡ ಗ್ರಾಮದ ಸರ್ಕಾರಿ ಪ್ರೌಢಶಾಲಾ ಶಿಕ್ಷಕಿ ಅರ್ಚನಾ ಸಾಗರ್ ಎಂಬುವವರು ವಿದ್ಯಾರ್ಥಿಗಳನ್ನು ಮನಬಂದಂತೆ ಥಳಿಸಿದ್ದು, ಪಾಲಕರು ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಎರಡ್ಮೂರು ದಿನಗಳ ಹಿಂದೆ 9ನೇ ತರಗತಿ ವಿದ್ಯಾರ್ಥಿಗಳು ಗಲಾಟೆ ಮಾಡುತ್ತಿದ್ದಾರೆ ಎಂದು ಶಿಕ್ಷಕಿ ಅರ್ಚನಾ ಅವರು ಬಾಸುಂಡೆ ಬರುವ ಹಾಗೆ ಹೊಡೆದಿದ್ದಾರೆ. ಈ ದೃಶ್ಯ ಸದ್ಯ ಸಿಸಿಟಿವಿ ಕ್ಯಾಮೆರಾದಲ್ಲೂ ಸೆರೆಯಾಗಿದೆ. ಶಾಲಾ ಕೊಠಡಿಯಲ್ಲಿ ಸಿಸಿಟಿವಿ ಇದೆ ಎಂದು ಮಕ್ಕಳನ್ನು ಹೊರಗಡೆ ಕರೆತಂದು ಕೋಲಿನಿಂದ ಯದ್ವಾತದ್ವಾ ಹೊಡೆಯುವ ಮೂಲಕ ತಮ್ಮ ದಾರ್ಷ್ಟ್ಯ ಪ್ರದರ್ಶಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಘಟನೆ ಬಳಿಕ ಮಕ್ಕಳ ಪಾಲಕರು ಶಾಲೆಗೆ ಆಗಮಿಸಿ ಶಿಕ್ಷಕಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಶಾಲೆಯ ಎಸ್‌ಡಿಎಂಸಿಯವರು, ಶಿಕ್ಷಕಿಯ ಕೃತ್ಯ ಖಂಡಿಸಿ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ವಿಜ್ಞಾನ ವಿಷಯ ಬೋಧನೆ ಮಾಡುವ ಈ ಶಿಕ್ಷಕಿ ಕಳೆದ ಎರಡು ವರ್ಷಗಳಿಂದ ಇದೆ ರೀತಿ ಮಕ್ಕಳಿಗೆ ಶಿಕ್ಷೆ ನೀಡುತ್ತಿದ್ದರು. ಅಲ್ಲದೆ, ಮೊಬೈಲ್ ಫೋನ್‌ನಲ್ಲಿಯೇ ಹೆಚ್ಚು ಕಾಲ ಕಳೆಯುತ್ತಾರೆ ಎಂದು ಮಕ್ಕಳು ಆರೋಪಿಸಿದ್ದಾರೆ. ಮಕ್ಕಳು ತಪ್ಪು ಮಾಡಿದರೆ ಅವರಿಗೆ ತಿದ್ದಿ ಬುದ್ಧಿ ಹೇಳುವುದು ಶಿಕ್ಷಕರ ಕರ್ತವ್ಯ. ಆದರೆ, ಶಿಕ್ಷಕರು ಮಕ್ಕಳ ಜೊತೆ ಈ ರೀತಿ ವರ್ತಿಸಬಾರದು. ಬಹಳಷ್ಟು ಪ್ರೀತಿ ವಿಶ್ವಾಸದಿಂದ ಪಾಠ ಮಾಡಬೇಕು ಆದ್ರೆ ಈ ರೀತಿ ರಾಕ್ಷಸರಂತೆ ಶಿಕ್ಷಕಿ ವರ್ತಿಸಿರುವುದು ಅಪರಾಧ ಇನ್ಮುಂದೆ ಆದರೂ ಇಂತಹ ಘಟನೆಗಳು ಮರುಕಳಿಸಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ನಿಗಾ ವಹಿಸಬೇಕಾಗಿದೆ. 

ಈ ಬಗ್ಗೆ ಮಾತನಾಡಿದ ಡಿಡಿಪಿಐ ಮೋಹನಕುಮಾರ ಹಂಚಾಟೆ  ಅವರು, ಶಿಕ್ಷಕಿ ಈ ರೀತಿ ಮಕ್ಕಳ ಜೊತೆಗೆ ವರ್ತಿಸುವುದು ಅತ್ಯಂತ ಖಂಡನೀಯವಾಗಿದೆ. ಎಸ್‌ಡಿಎಂಸಿ ಅವರು ದೂರು ನೀಡಿದ ಹಿನ್ನೆಲೆ ಸದ್ಯ ಶಿಕ್ಷಕಿಯನ್ನು ಬೇರೆ ಕಡೆ ವರ್ಗಾವಣೆ ಮಾಡಲಾಗಿದೆ. ಅಮಾನತು ಮಾಡುವ ಕುರಿತು ವರದಿ ತರಿಸಿಕೊಂಡು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
 

Follow Us:
Download App:
  • android
  • ios