Asianet Suvarna News Asianet Suvarna News

ಶಿವಮೊಗ್ಗ-ಯಶವಂತಪುರ ನಡುವೆ ಮತ್ತೊಂದು ಹೊಸ ರೈಲು

ಈಗಾಗಲೇ ಜನಶತಾಬ್ದಿ ಸೇರಿದಂತೆ ಹಲವು ರೈಲುಗಳು ಬೆಂಗಳೂರು ಹಾಗೂ ಶಿವಮೊಗ್ಗ ನಡುವೆ ಸಂಚರಿಸುತ್ತಿದ್ದು ಈ ಸಾಲಿಗೆ ಇದೀಗ ಮತ್ತೊಂದು ಸೇರ್ಪಡೆಯಾಗಿದೆ. ಜನವರಿ 23 ರಿಂದ ಮತ್ತೊಂದು ಸಂಚಾರ ಆರಂಭವಾಗಲಿದೆ.

Tatkal Special Express Train Between Yesvantpur Shivamogga timings Days Details
Author
Bengaluru, First Published Jan 22, 2020, 1:52 PM IST

ಶಿವಮೊಗ್ಗ [ಜ.22]:  ಜ. 23ರಿಂದ ಶಿವಮೊಗ್ಗ-ಯಶವಂತಪುರ ನಡುವೆ ತತ್ಕಾಲ್‌ ಎಕ್ಸ್‌ಪ್ರೆಸ್‌ ಹೊಸ ರೈಲು(ರೈಲು ಸಂಖ್ಯೆ-06539-06540) ವಾರದಲ್ಲಿ ನಾಲ್ಕು ದಿನಗಳ ಕಾಲ ಸಂಚರಿಸಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ತಿಳಿಸಿದ್ದಾರೆ.

ಈ ಸಂಬಂಧ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು, ಬಿ.ಎಸ್‌. ಯಡಿಯೂರಪ್ಪರವರು ಈ ಹಿಂದೆ ಶಿವಮೊಗ್ಗ ಸಂಸದರಾಗಿದ್ದ ಸಂಧರ್ಭದಲ್ಲಿ ಆರಂಭಿಸಲಾಗಿದ್ದ ರೈಲು ಗಾಡಿ ಸಂಖ್ಯೆ: 16579/16580 ಯಶವಂತಪುರ-ಶಿವಮೊಗ್ಗ-ಯಶವಂತಪುರ ಎಕ್ಸ್‌ಪ್ರೆಸ್‌ ರೈಲಿಗೆ ಪೂರಕವಾಗಿ ಇದೀಗ ವಾರದಲ್ಲಿ ನಾಲ್ಕು ದಿನಗಳ ಯಶವಂತಪುರ-ಶಿವಮೊಗ್ಗ-ಯಶವಂತಪುರ ತತ್ಕಾಲ್‌ ವಿಶೇಷ ರೈಲು ಮಂಜೂರಾಗಿದೆ. ಜ.23ರ ಗುರುವಾರದಂದು ಈ ರೈಲ್ವೆ ಸೇವೆಗೆ ಚಾಲನೆ ನೀಡಲಾಗುವುದು ಎಂದು ತಿಳಿ​ಸಿ​ದರು.

ಶಿವಮೊಗ್ಗ-ಯಶವಂತಪುರ ಇಂಟರ್‌ಸಿಟಿ ರೈಲು ಮುಂದಿನ ದಿನಗಳಲ್ಲಿ ವಾರದ ಏಳು ದಿನ ಸಂಚಾರಕ್ಕೆ ಲಭ್ಯವಾದಂತಾಗಲಿದೆ. ವಾರದಲ್ಲಿ 3 ದಿನ ಅಂದರೆ ಶನಿವಾರ, ಭಾನುವಾರ ಮತ್ತು ಸೋಮವಾರ ಮಾತ್ರ ಸಂಚರಿಸುತ್ತಿದ್ದ ರೈಲು ಸಂಖ್ಯೆ: 16579/16580 ರೈಲು ವಾರದ ಎಲ್ಲ ದಿನಗಳು ಸಹ ಸಂಚಾರಕ್ಕೆ ಸಿಗಬೇಕು ಎಂಬ ಬೇಡಿಕೆ ಸಾರ್ವಜನಿಕ ವಲಯದಿಂದ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ವಾರದ ಎಲ್ಲ ದಿನಗಳಲ್ಲಿ ರೈಲು ಸೇವೆಯನ್ನು ಆರಂಭಿಸಲು ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. 

ಶಿವಮೊಗ್ಗ : ವಿವಿಧ ಸಂಚಾರಿ ಮಾರ್ಗ ಬದಲಾವಣೆ...

ಈಗ ಮಂಗಳವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ ರೈಲು ಸಂಖ್ಯೆ: 06539/06540 ಯಶವಂತಪುರ-ಶಿವಮೊಗ್ಗ-ಯಶವಂತಪುರ ತತ್ಕಾಲ್‌ ಸ್ಪೆಷಲ್‌ ಆಗಿ ಸಂಚರಿಸಲಿದೆ. ಈ ರೈಲು ಬೆಳಗ್ಗೆ 9 ಗಂಟೆಗೆ ಯಶವಂತಪುರದಿಂದ ಹೊರಟು ಮಧ್ಯಾಹ್ನ 2.45 ಗಂಟೆಗೆ ಶಿವಮೊಗ್ಗ ತಲುಪಿ ಶಿವಮೊಗ್ಗದಿಂದ ಮಧ್ಯಾಹ್ನ 3.30 ಕ್ಕೆ ಹೊರಟು ರಾತ್ರಿ 9 ಕ್ಕೆ ಗಂಟೆಗೆ ಯಶವಂತಪುರ ತಲುಪಲಿದೆ. ಮಾರ್ಗ ಮಧ್ಯೆ ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಬಿರೂರು, ತರೀಕೆರೆ ಹಾಗೂ ಭದ್ರಾವತಿಗಳಲ್ಲಿ ಈ ರೈಲು ನಿಲುಗಡೆ ಹೊಂದಿರುತ್ತದೆ ಎಂದವರು ತಿಳಿಸಿದ್ದಾರೆ.

ಈ ರೈಲು ಸೇವೆಗೆ ಜ. 23ರ ಗುರುವಾರ ಮಧ್ಯಾಹ್ನ 3 ಗಂಟೆಗೆ ಶಿವಮೊಗ್ಗ ನಗರ ರೈಲ್ವೆ ನಿಲ್ದಾಣದಲ್ಲಿ ಚಾಲನೆ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿರಲಿದ್ದಾರೆ ಎಂದವರು ತಿಳಿಸಿದ್ದಾರೆ.

ಮಲೆನಾಡಿಗರಿಗೆ ಮತ್ತೊಂದು ಸಿಹಿ ಸುದ್ದಿ: ಜನಶತಾಬ್ಧಿ ಸಂಚಾರ ವಿಸ್ತರಣೆ...

ಈ ನೂತನ ರೈಲು ಸೇವೆಗಳ ಆರಂಭಕ್ಕೆ ಸಹಕರಿಸಿದ ಪ್ರಧಾನಿ ನರೇಂದ್ರ ಮೋದಿ, ಮುಖ್ಯ ಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ರೈಲ್ವೆ ಸಚಿವ ಪಿಯುಶ್‌ ಗೋಯಲ್‌, ಕೇಂದ್ರ ರಾಜ್ಯ ರೈಲ್ವೆ ಸಚಿವ ಸುರೇಶ್‌ ಅಂಗಡಿ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದವರು ತಿಳಿಸಿದ್ದಾರೆ.

 

ಈಗಾಗಲೇ ಶಿವಮೊಗ್ಗ ಹಾಗೂ ಬೆಂಗಳೂರು ನಡುವೆ ಜನಶತಾಬ್ದಿ ಸೇರಿದಂತೆ ಹಲವು ರೈಲು ಸಂಚಾರ ಇದ್ದು, ಈ ಸಾಲಿಗೆ ಇದೀಗ ಮತ್ತೊಂದು ರೈಲು ಸೇರ್ಪಡೆಯಾಗುತ್ತಿದೆ. 

Follow Us:
Download App:
  • android
  • ios